ಶನಿವಾರ, ಅಕ್ಟೋಬರ್ 19, 2019
22 °C

ನೆರೆ ಪರಿಹಾರದಲ್ಲಿ ಕೇಂದ್ರ ತಾರತಮ್ಯ ಮಾಡಲ್ಲ: ಸಿ.ಟಿ. ರವಿ

Published:
Updated:

ರಾಮನಗರ: ಪ್ರಧಾನಿ ನರೇಂದ್ರ ಮೋದಿ ಅವರು ನೆರೆ ಪರಿಹಾರದ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡುವುದಿಲ್ಲ. ವಿರೋಧ ಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಪ್ರವಾಸೋದ್ಯಮ‌ ಸಚಿವ ಸಿ.ಟಿ. ರವಿ ಹೇಳಿದರು.

ಬಿಡದಿಯಲ್ಲಿ ಗುರುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ನೆರೆ ಪರಿಹಾರ ಕೋರಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ಕೆಲವು ಜಿಲ್ಲೆಗಳ ಪ್ರಸ್ತಾವಗಳು ತಿರಸ್ಕೃತಗೊಂಡಿದ್ದವು. ಬುಧವಾರ ಪರಿಷ್ಕೃತ ಪ್ರಸ್ತಾವ ಸಲ್ಲಿಸಲಾಗಿದೆ. ವಾರದೊಳಗೆ ಅನುದಾನ ಬಿಡುಗಡೆ ಆಗುವ ನಿರೀಕ್ಷೆ ಇದೆ. ಒಬ್ಬನೇ ಒಬ್ಬ‌ ಬಿಜೆಪಿ ಸಂಸದರನ್ನು ಆಯ್ಕೆ ಮಾಡದ ತಮಿಳುನಾಡು, ಕೇರಳಕ್ಕೂ ಮೋದಿ ಸರ್ಕಾರ ಪರಿಹಾರ ನೀಡುತ್ತಿದೆ. ಹೀಗಿರುವಾಗ ಕರ್ನಾಟಕಕ್ಕೆ‌ ಅನ್ಯಾಯ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ನೆರೆ ಸಂತ್ರಸ್ತರ ವಿಚಾರದಲ್ಲಿ ರಾಜಕೀಯ‌ ಮಾಡುವ ಬದಲು ಜೆಡಿಎಸ್ , ಕಾಂಗ್ರೆಸ್ ಉತ್ತರ ಕರ್ನಾಟಕದ ತಲಾ 15 ಹಳ್ಳಿಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಲಿ ಎಂದು ಅವರು ಸಲಹೆ ನೀಡಿದರು.

‘ಕಾಂಗ್ರೆಸ್ಸಿಗರಿಗೆ ಖುಷಿ’: ಡಿ.ಕೆ. ಶಿವಕುಮಾರ್ ಜೈಲು ಸೇರಿದ್ದಕ್ಕೆ ಕಾಂಗ್ರೆಸ್‌ನ ಕೆಲವರಿಗೆ ಒಳಗೊಳಗೇ ಖುಷಿ ಆಗಿದೆ. ಕೇವಲ ತೋರ್ಪಡಿಕೆಗೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ರವಿ ಲೇವಡಿ ಮಾಡಿದರು.

ಪ್ರವಾಸೋದ್ಯಮ‌ ಚಟುವಟಿಕೆಗಳ ಅಭಿವೃದ್ಧಿಗೆ ಸುಧಾ ಮೂರ್ತಿ ಅವರ ನೇತೃತ್ವದಲ್ಲಿ ‌ಟಾಸ್ಕ್‌ಫೋರ್ಸ್ ರಚಿಸಲಾಗಿದೆ ಎಂದೂ ಅವರು ಹೇಳಿದರು.

‘ರಾಮನಗರಕ್ಕಷ್ಟೇ ನಾಯಕರಲ್ಲ’: ಎಚ್.ಡಿ. ಕುಮಾರಸ್ವಾಮಿ ಅವರು ಕೇವಲ ರಾಮನಗರ ತಾಲ್ಲೂಕಿಗೆ ನಾಯಕರಲ್ಲ. ಅವರು ಒಟ್ಟಾರೆ ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡಬೇಕು ಎಂದು ರವಿ ಸಲಹೆ ನೀಡಿದರು.

ರೋರಿಚ್ ಎಸ್ಟೇಟ್ ಆಸ್ತಿ‌ ರಕ್ಷಣೆಗೆ ಸರ್ಕಾರ ಸದ್ಯ ಗಮನ ನೀಡಿದೆ. ಫಿಲ್ಮ್ ಸಿಟಿ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಅಲ್ಲಿ‌ ಫಿಲ್ಮ್ ಸಿಟಿ ನಿರ್ಮಾಣ ಆದರೂ ರಾಮನಗರಕ್ಕೆ ಅನುಕೂಲ ಆಗಲಿದೆ ಎಂದು ರವಿ ಪ್ರತಿಪಾದಿಸಿದರು.

Post Comments (+)