ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ನಿವಾರಣೆಗೆ ಹೊಸ ಯೋಜನೆ: ಸರ್ಕಾರದ ಗುಣಗಾನ

ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಭಾಷಣ
Last Updated 17 ಫೆಬ್ರುವರಿ 2020, 19:09 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ 100 ಬರಪೀಡಿತ ತಾಲ್ಲೂಕುಗಳಲ್ಲಿ ‘ಬರ ನಿಯಂತ್ರಣ ಜಲಾನಯನ ಅಭಿವೃದ್ಧಿ’ ಎಂಬ ಹೊಸ ಯೋಜನೆ ಜಾರಿಗೆ ತರಲು ಉದ್ದೇಶಿಸಲಾಗಿದೆ’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.

ಸೋಮವಾರ ನಡೆದ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಸಂಯೋಜಿಸಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ’ ಎಂದರು.

ಎಲ್ಲ ನ್ಯಾಯಾಲಯಗಳಲ್ಲಿ ಮಹಿಳಾ ವಕೀಲರ ಅನುಕೂಲಕ್ಕಾಗಿ ಅಗತ್ಯ ಸೌಲಭ್ಯಗಳೊಂದಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳನ್ನು ಆರಂಭಿಸಲಾಗುತ್ತದೆ ಎಂದ ಅವರು, ‘ಪೊಲೀಸ್‌ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ 25ರಷ್ಟು ಮೀಸಲಾತಿ ಕಲ್ಪಿಸಲು ಅನುಮೋದನೆ ನೀಡಿದೆ’ ಎಂದರು.

‘ಬೆಂಗಳೂರು ನಗರದಲ್ಲಿ ಉತ್ಪತ್ತಿಯಾಗುವ ಒಳಚರಂಡಿ ನೀರನ್ನು ಸಂಸ್ಕರಿಸಿ ಬರಪೀಡಿತ ಜಿಲ್ಲೆಗಳಾದ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಕೆರೆಗಳ ತುಂಬಿಸಲಾಗುತ್ತಿದೆ. ಈ ಯೋಜನೆಯನ್ನು ಇತರ ಪ್ರಮುಖ ನಗರಗಳಿಗೂ ವಿಸ್ತರಿಸಲು ಉದ್ದೇಶಿಸಲಾಗಿದೆ’ ಎಂದು ಅವರು ಹೇಳಿದರು.

ಭಾಷಣದ ಪ್ರಮುಖ ಸಾರ
*ಪೋಡಿ ಅಭಿಯಾನ ಯೋಜನೆಯಡಿ 2,452 ಗ್ರಾಮಗಳಲ್ಲಿ ಪೋಡಿ ಅಭಿಯಾನ ಪೂರ್ಣಗೊಳಿಸಲಾಗಿದೆ. ಉಳಿದ ಗ್ರಾಮಗಳಲ್ಲಿ
ಚುರುಕುಗತಿಯಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುವುದು.

*ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣದ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಹಾಸನ, ವಿಜಯಪುರ ಹಾಗೂ ಕಾರವಾರ ವಿಮಾನ ನಿಲ್ದಾಣಗಳ ಅಭಿವೃದ್ಧಿಗಾಗಿ ವಿಸ್ತೃತ ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗುತ್ತಿದೆ.

*ಸ್ವತಂತ್ರವಾದ ಹಾಗೂ ಗ್ರಿಡ್‌–ಸಂಪರ್ಕ ಹೊಂದಿದ ಸೌರಶಕ್ತಿ ಚಾಲಿತ ಕೃಷಿ ಪಂಪ್‌ಸೆಟ್‌ಗಳನ್ನು ಉತ್ತೇಜಿ
ಸುವ ನೀತಿ ರೂಪಿಸಲಾಗುತ್ತದೆ.

*ಅಪರಾಧಿಗಳು ಹಾಗೂ ಭಯೋತ್ಪಾದಕರನ್ನು ಬಂಧಿಸಿಡಲು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಅತಿ ಭದ್ರತಾ ಕಾರಾಗ್ರಹ ನಿರ್ಮಿಸಲಾಗುತ್ತಿದೆ. ವಿಜಯಪುರ ಹಾಗೂ ಬೀದರ್‌ನಲ್ಲೂ ಕೇಂದ್ರ ಕಾರಾಗೃಹಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಆರ್ಥಿಕ ಸ್ಥಿತಿ ಉತ್ತಮ
‘ದೂರದೃಷ್ಟಿಯ ಆರ್ಥಿಕ ನಿರ್ವಹಣೆಗೆ ರಾಜ್ಯ ಪ್ರಖ್ಯಾತ. ನಿಗದಿಪಡಿಸಲಾದ ಆರ್ಥಿಕ ಹಾಗೂ ಸಾಲ ಕ್ರೋಡೀಕರಣ ಗುರಿಯನ್ನು ನಿರ್ದಿಷ್ಟಪಡಿಸಿದ ಕಾಲಾವಧಿಯ ಮುನ್ನವೇ ಸಾಧಿಸಿದೆ’ ಎಂದು ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದರು.

ದೇಶದ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ರಾಜ್ಯದ ಕೊಡುಗೆ ಗಣನೀಯ. ರಾಜ್ಯದ ಎರಡನೇ ಹಂತದ ನಗರಗಳೂ ರಾಜ್ಯದ ಪ್ರಗತಿಗೆ ಕೊಡುಗೆ ನೀಡುವ ಅಪಾರ ಸಾಮರ್ಥ್ಯ ಹೊಂದಿದ್ದು, ಅವುಗಳ ಬಗ್ಗೆ ಗಮನ ಕೇಂದ್ರೀಕರಿಸಿ ಸಜ್ಜುಗೊಳಿಸಬೇಕು ಎಂದರು.

ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ತರ ನೆರವಿಗೆ ಸಮರೋಪಾದಿಯಲ್ಲಿ ರಕ್ಷಣಾ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಂಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT