ಭಾನುವಾರ, ಮಾರ್ಚ್ 29, 2020
19 °C

ರಾಜ್ಯಪಾಲರ ನಿರ್ಗಮನದ ಬಳಿಕ ಒಂಟಿಯಾದ ಸಿಎಂ, ಸಿದ್ದರಾಮಯ್ಯ ಸುತ್ತ ಸಚಿವರ ಗಿರಕಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಮಾತನಾಡಿ ನಿರ್ಗಮಿಸಿದ ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಒಂಟಿಯಾಗಿ ಕುಳಿತಿದ್ದರೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಸುತ್ತುವರಿದ ಹಲವು ಸಚಿವರು ಕೆಲಹೊತ್ತು ಚರ್ಚೆ ನಡೆಸಿದ್ದು ಗಮನ ಸೆಳೆಯುವಂತಿತ್ತು.

ಸ್ವಲ್ಪ ಹೊತ್ತು ಮೌನವಾಗಿ ಕುಳಿತಿದ್ದ ಯಡಿಯೂರಪ್ಪ ಅವರು ಸಿದ್ದರಾಮಯ್ಯ ಬಳಿ ಬಂದು ಮಾತನಾಡಿ ಹೋದರು. ಬಳಿಕ ಸಚಿವರ ಮೆರವಣಿಗೆ ವಿರೋಧ ಪಕ್ಷದ ನಾಯಕರತ್ತ ಸಾಗಿತು. ಮೊದಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಬಂದು ಮಾತನಾಡಿದರು. ಈ ವೇಳೆ ಬಿಜೆಪಿ ಶಾಸಕ ಮಹೇಶ ಕುಮಠಳ್ಳಿ ಕೈ ಮುಗಿಯುತ್ತಲೇ ಬಂದು, ‘ನೀವು ನನಗೆ ಎಷ್ಟು ಬೇಕಾದರೆ ಬೈಯಿರಿ’ ಎಂದರು.

ಸಿದ್ದರಾಮಯ್ಯ ನಕ್ಕು ಸುಮ್ಮನಾದರು. ಈ ವೇಳೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಇತರ ಕಾಂಗ್ರೆಸ್‌ ಸದಸ್ಯರು, ‘ಈ ಸಲ ಮಂತ್ರಿ ಮಾಡಲಿಲ್ಲ. ಮುಂದಿನ ಸಲ ನೀವೇ ಉಪಮುಖ್ಯಮಂತ್ರಿ’ ಎಂದು ಕಿಚಾಯಿಸಿದರು. ‘ಬೊಮ್ಮಾಯಿಯವರೇ ಮಾಡ್ತಿರಲ್ಲ’ ಎಂದು ಪ್ರಶ್ನಿಸಿದರು. ‘ನಾವೇ ಅತಂತ್ರ ಸ್ಥಿತಿಯಲ್ಲಿ’ ಎಂದು ಬೊಮ್ಮಾಯಿ ನಕ್ಕರು.

ಸಿದ್ದರಾಮಯ್ಯ ಅವರ ಹಿಂದಿನಿಂದ ಬಂದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಕಾಂಗ್ರೆಸ್‌ ಸದಸ್ಯರನ್ನು ಮಾತನಾಡಿಸಿದರು. ಆಗ ಸಿದ್ದರಾಮಯ್ಯ, ‘ಏಯ್‌ ಹೆಬ್ಬಾರ್‌’ ಎಂದು ಕರೆದರು. ಹೆಬ್ಬಾರ್ ಅವರು ಸಿದ್ದರಾಮಯ್ಯ ಅವರನ್ನು ಮಾತನಾಡಿಸಿದರು. ಈ ಸಂದರ್ಭದಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಬಂದರು. ಅವರ ಕಾಲು ಮುಟ್ಟಿ ಹೆಬ್ಬಾರ್‌ ನಮಸ್ಕರಿಸಿದರು.

ನಂತರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ, ತೋಟಗಾರಿಕಾ ಸಚಿವ ನಾರಾಯಣ ಗೌಡ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಕೃಷಿ ಸಚಿವ ಬಿ.ಸಿ.ಪಾಟೀಲ ಕೈ ಮುಗಿದು ತೆರಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು