ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ತಾರತಮ್ಯ: ಶಾಸಕರು ವ್ಯಗ್ರ

ಜೆಡಿಎಸ್‌ ಕ್ಷೇತ್ರಕ್ಕೆ ಹೆಚ್ಚು ಅನುದಾನ ಸಮರ್ಥಿಸಿಕೊಂಡ ಎಚ್‌ಡಿಕೆ
Last Updated 20 ಫೆಬ್ರುವರಿ 2020, 21:17 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರ ಕ್ಷೇತ್ರಗಳಿಗೆ ಬಿಜೆಪಿ ಸರ್ಕಾರ ಅನುದಾನ ಕಡಿತ ಮಾಡಿರುವ ವಿಚಾರವು ವಿಧಾನಸಭೆಯಲ್ಲಿ ಗುರುವಾರ ಪ್ರತಿಧ್ವನಿಸಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಷಯ ಪ್ರಸ್ತಾಪಿಸಿ, ‘ಅನುದಾನ ಕಡಿತ ಮಾಡಿ ಬಿಜೆಪಿ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ’ ಎಂದು ಕಿಡಿಕಾರಿದರು. ಕಾಂಗ್ರೆಸ್‌ನ ರಾಮಲಿಂಗಾ ರೆಡ್ಡಿ, ಪ್ರಿಯಾಂಕ್‌ ಖರ್ಗೆ, ಟಿ.ಡಿ.ರಾಜೇಗೌಡ, ಲಕ್ಷ್ಮಿ ಹೆಬ್ಬಾಳಕರ, ರೂಪಾ ಶಶಿಧರ್‌, ಭೀಮಾ ನಾಯ್ಕ, ಡಾ.ರಂಗನಾಥ್‌, ಜೆಡಿಎಸ್‌ನ ವೆಂಕಟರಾವ್‌ ನಾಡಗೌಡ, ಎಂ.ಕೆ.ಶಿವಲಿಂಗೇಗೌಡ, ಆರ್‌.ಮಂಜುನಾಥ್‌ ಮತ್ತಿತರರು ಧ್ವನಿಗೂಡಿಸಿದರು.

‘ನಾವು ಆರು ವರ್ಷಗಳಿಂದ ಅನುಭವಿಸಿದ ನೋವು ನಿಮಗೆ ಈಗ ಅರಿವಾಗುತ್ತಿದೆಯಲ್ಲ. ಆಗ ಚಿಕ್ಕಾಸು ನೀಡಲಿಲ್ಲ’ ಎಂದು ಸಚಿವ ಸಿ.ಸಿ.ಪಾಟೀಲ ತಿರುಗೇಟು ನೀಡಿದರು.

ಲೋಕೋಪಯೋಗಿ ಇಲಾಖೆಯಲ್ಲಿ ಲಭ್ಯವಿರುವ ಅನುದಾನಕ್ಕಿಂತ ಆರು ಪಟ್ಟು ಹೆಚ್ಚು ಮೊತ್ತದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಅದಕ್ಕೆ ಹಣಕಾಸು ಇಲಾಖೆಯ ಅನುಮೋದನೆ ಪಡೆದಿರಲಿಲ್ಲ. ಹೀಗಾಗಿ, ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ, ಗುತ್ತಿಗೆದಾರರು ವಿಷ ಸೇವಿಸುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಲೋಕೋ‍ಪಯೋಗಿ ಸಚಿವ ಗೋವಿಂದ ಕಾರಜೋಳ ಹೇಳಿದರು.

‘ಅನುದಾನ ಲಭ್ಯ ಇಲ್ಲದಿದ್ದರೆ ಉಪಚುನಾವಣೆಯ ವೇಳೆ ಪ್ರತಿಕ್ಷೇತ್ರಕ್ಕೆ ₹500 ಕೋಟಿ ಎಲ್ಲಿಂದ ಕೊಟ್ಟಿರಿ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ‘ನೀವು ಪ್ರತಿನಿಧಿಸುವ ಬಾದಾಮಿ ಕ್ಷೇತ್ರಕ್ಕೆ ₹600 ಕೋಟಿ ನೀಡಲಾಗಿದೆ’ ಎಂದು ಬಿಜೆಪಿಯ ವಿ.ಸುನೀಲ್‌ ಕುಮಾರ್‌ ಜೋರಾಗಿ ಹೇಳಿದರು. ಇದರಿಂದ ಆಕ್ರೋಶಗೊಂಡ ಸಿದ್ದರಾಮಯ್ಯ, ‘ಹೌದು ನೀಡಿದ್ದಾರೆ. ಏನೀಗ. ನಾನೂ ಒಬ್ಬ ಶಾಸಕನೇ. ಅದು ನನ್ನ ಹಕ್ಕು. ಬೇಕಿದ್ದರೆ ಅದನ್ನು ಹಿಂಪಡೆದುಕೊಳ್ಳಿ’ ಎಂದು ಏರುದನಿಯಲ್ಲಿ ಸವಾಲು ಹಾಕಿದರು.

ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ‘ಮೈತ್ರಿ ಸರ್ಕಾರದ ಅವಧಿಯಲ್ಲಿ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ₹2,986 ಕೋಟಿ, ಕಾಂಗ್ರೆಸ್ ಕ್ಷೇತ್ರಗಳಿಗೆ ₹3,834 ಕೋಟಿ ಹಾಗೂ ಜೆಡಿಎಸ್‌ ಕ್ಷೇತ್ರಗಳಿಗೆ ₹2,974 ಅನುದಾನ ನೀಡಲಾಗಿತ್ತು’ ಎಂದರು.

ರಾಜೀನಾಮೆಗೆ ಸಿದ್ಧ: ‘ಹಣಕಾಸು ಇಲಾಖೆ ಅನುಮೋದನೆ ಪಡೆಯದೇ ಟೆಂಡರ್‌ ನೀಡಿದ್ದೇವೆ ಎನ್ನುವುದು ಸಾಬೀತಾದರೆ, ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ನಿಮ್ಮಂತ ಹಿರಿಯರು(ಕಾರಜೋಳ) ಸುಳ್ಳು ಹೇಳಬಾರದು’ ಎಂದು ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಕೊನೆಯಲ್ಲಿ ಚುನಾವಣೆ ಬರುತ್ತದೆ ₹1,760 ಕೋಟಿ ಕಾಮಗಾರಿಗಳ ಟೆಂಡರ್‌ ನೀಡಿದ್ದರು. ಮೈತ್ರಿ ಸರ್ಕಾರ ಬಂದ ಮೇಲೆ ಕಾಂಗ್ರೆಸ್‌, ಜೆಡಿಎಸ್‌ ಶಾಸಕರ ಕ್ಷೇತ್ರದಲ್ಲಿ ಕಾಮಗಾರಿ ಮಾಡಿಸಿದೆವು. ಕ್ರಮ ತೆಗೆದು
ಕೊಳ್ಳಲು ಹೋಗಿದ್ದರೆ ಅಧಿಕಾರಿಗಳು ಜೈಲಿಗೆ ಹೋಗುತ್ತಿದ್ದರು ಎಂದು ತಿಳಿಸಿದರು.

ರೇವಣ್ಣ ಅವರ ಮೇಲೆ ಬಿಜೆಪಿ ಸದಸ್ಯರು ಮುಗಿಬಿದ್ದಾಗ ಎಚ್‌.ಡಿ.ಕುಮಾರಸ್ವಾಮಿ ಸಹೋದರನ ನೆರವಿಗೆ ಧಾವಿಸಿದರು. ‘ನಮ್ಮ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡಿದ್ದು ನಿಜ. 10 ವರ್ಷಗಳಿಂದ ನಮ್ಮ ಸರ್ಕಾರ ಇರಲಿಲ್ಲ. ಈ ಕ್ಷೇತ್ರಗಳಲ್ಲಿ ಅಭಿವೃದ್ಧಿಗಾಗಿ ಅನುದಾನ ನೀಡಲಾಗಿದೆ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

ಹಣದ ಕೊರತೆಯಿಂದ ತಡೆ ಹಿಡಿಯಲಾಗಿತ್ತು
ರಾಜ್ಯದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದಾಗಿ ಪರಿಹಾರ ಕಾರ್ಯ ಕೈಗೊಳ್ಳಲು ಹಣದ ಕೊರತೆ ಇತ್ತು. ಆದ್ದರಿಂದ ಅದನ್ನು ತಡೆ ಹಿಡಿದ್ದೇವೆಯೇ ಹೊರತು ಅನುದಾನ ರದ್ದು ಮಾಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹೇಳಿದರು.

ಮುಂದಿನ ಬಜೆಟ್‌ ಸಂದರ್ಭದಲ್ಲಿ ಎಲ್ಲ ಶಾಸಕರಿಗೂ ನ್ಯಾಯ ಸಿಗುವಂತೆ ಅನುದಾನ ಹಂಚಿಕೆ ಮಾಡಲಾಗುವುದು. ಯಾವುದೇ ಶಾಸಕರಿಗೂ ತಾರತಮ್ಯ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

ದೇವೇಗೌಡರ ಹುಟ್ಟೂರಿನಲ್ಲಿ ಇರುವ ಎಂಜಿನಿಯರಿಂಗ್‌ ಕಾಲೇಜು ಮುಂದುವರಿಯುತ್ತದೆ ಮತ್ತು ಹಾಸನಕ್ಕೆ ವಿಮಾನನಿಲ್ದಾಣವೂ ಸಿಗಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT