ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಖಾಂತ್ಯಗೊಂಡ ‘ಹಕ್ಕುಚ್ಯುತಿ’ ಪ್ರಸ್ತಾವ

ವಿಧಾನಸಭೆಯಲ್ಲಿ ವಿಷಾದ ವ್ಯಕ್ತಪಡಿಸಿದ ರಮೇಶ್‌ಕುಮಾರ್‌, ಸುಧಾಕರ್‌
Last Updated 13 ಮಾರ್ಚ್ 2020, 4:18 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಕಾಂಗ್ರೆಸ್‌ ಕೆ.ಆರ್‌.ರಮೇಶ್‌ ಕುಮಾರ್‌ ಮತ್ತು ಸಭಾಧ್ಯಕ್ಷ ಪೀಠಕ್ಕೆ ಅಗೌರವ ತೋರಿದರೆಂಬ ಟೀಕೆಗೆ ಒಳಗಾದ ವೈದ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು ಸದನದಲ್ಲಿ ಪರಸ್ಪರ ವಿಷಾದ ವ್ಯಕ್ತಪಡಿಸುವ ಮೂಲಕ ಹಕ್ಕುಚ್ಯುತಿ ಪ್ರಕರಣಕ್ಕೆ ತೆರೆ ಎಳೆದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಡಿಸಿದ ಹಕ್ಕುಚ್ಯುತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಲು ಡಾ.ಸುಧಾಕರ್‌ ಅವರಿಗೆ ಅವಕಾಶ ನೀಡಲಾಯಿತು. ‘ನಾನು ಮಾತನಾಡುವಾಗ ಸಭಾಪೀಠಕ್ಕೆ ಅಗೌರವ ಮಾಡಿಲ್ಲ. ನನ್ನ ಹೇಳಿಕೆ ಪೂರ್ಣಗೊಳಿಸುವ ಮೊದಲೇ ಅಡ್ಡಿಪಡಿಸಿದ್ದರಿಂದ, ವಿಚಾರ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಪದಗಳ ಬಳಕೆಯಲ್ಲಿ ವ್ಯತ್ಯಾಸವಾಗಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಅವರು ತಿಳಿಸಿದರು.

ಬಳಿಕ ಮಾತನಾಡಿದ ಕೆ.ಆರ್‌.ರಮೇಶ್‌ಕುಮಾರ್‌, ‘ನಾನು ಆಕ್ಷೇಪಾರ್ಹ ಪದವನ್ನು ಬಳಸಲಿಲ್ಲ. ಯಾರಿಗಾದರೂ ಆ ರೀತಿ ಕೇಳಿಸಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಹೇಳಿದರು.

ಸದನದಲ್ಲಿ ವಿಷಾದ ವ್ಯಕ್ತಪಡಿಸಿದ್ದರಿಂದ ಡಾ.ಸುಧಾಕರ್‌ ಮತ್ತು ಬಿಜೆಪಿಯ ಇತರರು ರಮೇಶ್‌ ಕುಮಾರ್‌ ವಿರುದ್ಧ ನೀಡಿದ್ದ ಎರಡು ಹಕ್ಕುಚ್ಯುತಿ ನೋಟಿಸ್‌ಗಳನ್ನು ಹಿಂದಕ್ಕೆ ಪಡೆದರು. ಇದರಿಂದ ಸಿದ್ದರಾಮಯ್ಯ ಅವರ ಹಕ್ಕುಚ್ಯುತಿ ನೋಟಿಸ್‌ ಸೇರಿ ಮೂರು ನೋಟಿಸ್‌ಗಳನ್ನು ಕೈಬಿಟ್ಟು, ಪ್ರಕರಣ ಇತ್ಯರ್ಥಗೊಳಿಸಿದ್ದಾಗಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಬೆಳಿಗ್ಗೆ ಹಕ್ಕುಚ್ಯುತಿ ಪ್ರಸ್ತಾವ ಮಂಡಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಸಭಾಧ್ಯಕ್ಷರ ಪೀಠದ ಘನತೆಗೆ ಕುತ್ತು ಬರುವಂತಹ ಹೇಳಿಕೆ ನೀಡಿರುವ ಸಚಿವ ಡಾ.ಕೆ. ಸುಧಾಕರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

‘ಸುಧಾಕರ್‌ಗೆ ಛೀಮಾರಿ ಹಾಕಬೇಕು. ಇಲ್ಲದಿದ್ದರೆ ಸದನದಿಂದ ಅಮಾನತು ಮಾಡಬೇಕು ಅಥವಾ ಈ ಪ್ರಕರಣವನ್ನು ಹಕ್ಕುಬಾಧ್ಯತಾ ಸಮಿತಿಗೆ ಶಿಫಾರಸು ಮಾಡಬೇಕು’ ಎಂದು ಒತ್ತಾಯಿಸಿದರು.

‘ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕರ ವಿರುದ್ಧ ಸಭಾಧ್ಯಕ್ಷರ ಪೀಠ ಕ್ರಮ ಕೈಗೊಂಡಿದೆ. ಈ ಪೀಠದಿಂದ ಅನ್ಯಾಯವಾಗಿದೆ ಎಂದು ಸುಧಾಕರ್ ಹೇಳಿದ್ದಾರೆ. ಈ ಆದೇಶದಿಂದ ನಮ್ಮ ರಾಜಕೀಯ ಭವಿಷ್ಯವೇ ಹಾಳಾಗುವ ಸ್ಥಿತಿ ಎದುರಾಗಿತ್ತು ಎಂದಿದ್ದಾರೆ. ಸಭಾಧ್ಯಕ್ಷರ ಪೀಠ ಅರೆನ್ಯಾಯಿಕ ಪೀಠ. ಸುಧಾಕರ್‌ ಸದನದ ಹಕ್ಕುಚ್ಯುತಿ ಮಾಡಿದ್ದಾರೆ’ ಎಂದು ಸಿದ್ದರಾಮಯ್ಯ ಪ್ರತಿ‍ಪಾದಿಸಿದರು.

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ‘ಸಭಾಧ್ಯಕ್ಷರ ಪೀಠದ ಮೇಲೆ ನಮಗೆ ಗೌರವ ಇದೆ. ಆದರೆ, ಹಿಂದಿನ ಸಭಾಧ್ಯಕ್ಷರು ಪೀಠದಲ್ಲಿ ಕುಳಿತು ಏನೇನೂ ಮಾತನಾಡಿದ್ದಾರೆ. ಆ ಜಾಗದಲ್ಲಿ ಕುಳಿತು ರಾಜಕಾರಣ ಮಾಡಬಾರದು. ಅದಕ್ಕೆ ನಮ್ಮ ಬಳಿ ದಾಖಲೆಗಳಿವೆ. ಈ ವಿಷಯದ ಬಗ್ಗೆ ನಮಗೂ ಚರ್ಚೆಗೆ ಅವಕಾಶ ನೀಡಬೇಕು’ ಎಂದರು. ಇದಕ್ಕೆ ಸಚಿವರಾದ ರಮೇಶ ಜಾರಕಿಹೊಳಿ, ಶಿವರಾಮ ಹೆಬ್ಬಾರ್, ಬೈರತಿ ಬಸವರಾಜ್‌, ನಾರಾಯಣಗೌಡ ಧ್ವನಿಗೂಡಿಸಿದರು.

‘ಪಕ್ಷಪಾತಿಯಾಗಿದ್ದ ರಮೇಶ್‌ ಕುಮಾರ್‌’
‘ಹಿಂದಿನ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್ ಅವರು 17 ಶಾಸಕರನ್ನು ಅನರ್ಹಗೊಳಿಸಿದ ತೀರ್ಮಾನ ಪೂರ್ವಗ್ರಹ ಪೀಡಿತ, ಪೂರ್ವ ನಿರ್ಧರಿತ ಮತ್ತು ಪಕ್ಷಪಾತದಿಂದ ಕೂಡಿತ್ತು’ ಎಂದು ವೈದ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ವಿಧಾನಸಭೆಯಲ್ಲಿ ಟೀಕಾ ಪ್ರಹಾರ ನಡೆಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹಕ್ಕುಚ್ಯುತಿ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿದ ಅವರು, ‘ಸಭಾಧ್ಯಕ್ಷ ಹುದ್ದೆ ಅರೆನ್ಯಾಯಿಕ ಸ್ಥಾನಮಾನ ಹೊಂದಿದೆ. ಆದರೆ, ರಮೇಶ್‌ ಕುಮಾರ್‌ ಪೀಠದಲ್ಲಿ ಕುಳಿತು ಕಾಂಗ್ರೆಸ್‌ ಪಕ್ಷದ ನಾಯಕತ್ವಕ್ಕೆ ನಿಷ್ಠೆ ತೋರಿದರು. ಅವರ ನಡವಳಿಕೆ ನಿಷ್ಪಕ್ಷವಾಗಿ ಇರಲಿಲ್ಲ’ ಎಂದು ಅವರು ಹೇಳಿದರು.

‘ಎಚ್‌.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ರಮೇಶ್‌ಕುಮಾರ್‌ ಆಡಿರುವ ಪ್ರತಿಯೊಂದು ಮಾತೂ ಕೂಡ ಅವರ ಪಕ್ಷಪಾತ ವರ್ತನೆಗೆ ಪುಷ್ಟಿ ನೀಡುವಂತಿದ್ದವು. ಒಂದು ಸಂದರ್ಭದಲ್ಲಿ ಅವರು, ಸಭಾಧ್ಯಕ್ಷ ಸ್ಥಾನದಲ್ಲಿ ಕೂರಲು ಕಾಂಗ್ರೆಸ್‌ ನಾಯಕಿ ಸೋನಿಯಾಗಾಂಧಿ, ರಾಹುಲ್‌ ಗಾಂಧಿ ಮತ್ತು ಸಿದ್ದರಾಮಯ್ಯ ಅವರೇ ಕಾರಣ ಎಂದು ಹೇಳಿದರು. ಅಂದರೆ, ಅವರಿಗೆ ಕಾಂಗ್ರೆಸ್‌ ಪಕ್ಷಕ್ಕೆ ನಿಷ್ಠೆ ವ್ಯಕ್ತಪಡಿಸುವುದೇ ಮುಖ್ಯವಾಗಿತ್ತು’ ಎಂದರು.

‘ರಮೇಶ್‌ಕುಮಾರ್‌ ಅವರ ಬಗ್ಗೆ ಅಪಾರ ಗೌರವ ಇತ್ತು. ಹಿರಿತನ ಮತ್ತು ಮೇಧಾವಿತನದ ಬಗ್ಗೆ ಹೆಮ್ಮೆ ಇತ್ತು. ಸರ್‌ ಎಂದು ಕರೆಯುತ್ತಿರಲಿಲ್ಲ. ಸ್ವಾಮಿ ಎಂದೇ ಕರೆಯುತ್ತಿದ್ದೆವು. ಆದರೆ, ಅವರು ತೆಗೆದುಕೊಂಡ ನಿರ್ಧಾರದ ಬಗ್ಗೆ ಸುಪ್ರೀಂಕೋರ್ಟ್‌ ಕೂಡ ಶಾಸಕರು ರಾಜೀನಾಮೆ ನೀಡಿದಾಗ ಸಭಾಧ್ಯಕ್ಷರ ಇತಿಮಿತಿ ಏನು ಎಂಬುದರ ಬಗ್ಗೆ ವ್ಯಾಖ್ಯಾನ ಮಾಡಿದೆ’ ಎಂದು ಸುಧಾಕರ್‌ ಹೇಳಿದರು.

‘ಇವರ ನಿರ್ಧಾರದಿಂದ ನಮ್ಮ ರಾಜಕೀಯ ಭವಿಷ್ಯವೇ ಅಳಿಸಿ ಹೋಗುವಂತಾಗಿತ್ತು. ನಮಗೆ ಮಾಧ್ಯಮಗಳು ಅನರ್ಹರು ಎಂಬ ಹಣೆ ಪಟ್ಟಿಯನ್ನೂ ಕಟ್ಟಿದ್ದವು. ಇದರಿಂದ 17 ಜನ ಮಾನಸಿಕವಾಗಿ ಬಹಳ ನೋವು ಅನುಭವಿಸಿದ್ದೆವು’ ಎಂದು ತಿಳಿಸಿದರು.

ನನ್ನ ಹೇಳಿಕೆ ಬದ್ಧನಿದ್ದೇನೆ: ವಿಧಾನಸಭಾಧ್ಯಕ್ಷನಾಗಿ ನಾನು ತೆಗೆದುಕೊಂಡ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ರಮೇಶ್‌ ಕುಮಾರ್‌ ತಿಳಿಸಿದರು.

‘ನನ್ನ ಆತ್ಮ ಸಾಕ್ಷಿಗೆ ಅನುಗುಣವಾಗಿಯೇ ತೀರ್ಪು ನೀಡಿದ್ದೇನೆ. ಪೂರ್ವಾಶ್ರಮದ ವಾಸನೆ ಇರುವುದಿಲ್ಲ ಎಂದು ಹೇಳುವುದಿಲ್ಲ. ನಾವೇನು ಆಕಾಶದಿಂದ ಉದುರಿ ಬಂದಿಲ್ಲ’ ಎಂದೂ ಹೇಳಿದರು.

ಆಗ ಸಚಿವ ಶಿವರಾಮ್‌ ಹೆಬ್ಬಾರ್‌ ಅವರು, ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂದರು. ವ್ಯಾಪಾರ ಬಲ್ಲವನಿಗೆನಷ್ಟವಿಲ್ಲ ಎಂದು ಹೇಳುವ ಮೂಲಕ ರಮೇಶ್‌ ಕುಮಾರ್‌ ಸದನದಲ್ಲಿ ನಗೆಯ ಅಲೆ ಉಕ್ಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT