ಕರ್ನಾಟಕ ಬಜೆಟ್‌: ‘ದೋಸ್ತಿ’ಗಳಿಂದಲೇ ಟೀಕೆ

7
ಅಪಸ್ವರ ಎತ್ತಿದ ಜಮೀರ್, ಖಾದರ್, ಸೇಠ್; ಎಚ್‌.ಕೆ. ಪಾಟೀಲ

ಕರ್ನಾಟಕ ಬಜೆಟ್‌: ‘ದೋಸ್ತಿ’ಗಳಿಂದಲೇ ಟೀಕೆ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿದ ಬಜೆಟ್‌ಗೆ ‘ದೋಸ್ತಿ’ಗಳಿಂದಲೇ ಅಸಮಾಧಾನ ವ್ಯಕ್ತವಾಗಿದೆ. ಆ ಮೂಲಕ, ಮೈತ್ರಿ ಕೂಟದಲ್ಲಿರುವ ‘ಸಮನ್ವಯ’ ಕೊರತೆ ಮತ್ತೊಮ್ಮೆ ಬಯಲಾಗಿದೆ.

‘ಬಜೆಟ್‌ನಲ್ಲಿ ನಮ್ಮ ಕ್ಷೇತ್ರಕ್ಕೆ, ಜಿಲ್ಲೆಗೆ ಅನ್ಯಾಯವಾಗಿದೆ' ಎಂದು ಮಿತ್ರಪಕ್ಷ ಕಾಂಗ್ರೆಸ್ಸಿನ ಕೆಲವು ಸಚಿವರು ಅಪಸ್ವರ ಎತ್ತಿದ್ದಾರೆ. ತಮ್ಮ ಬೇಡಿಕೆಗಳಿಗೆ ಮನ್ನಣೆ ಸಿಕ್ಕಿಲ್ಲ ಎಂದು ಕೆಲವರು ಬಹಿರಂಗವಾಗಿ, ಇನ್ನೂ ಕೆಲವರು ಆಪ್ತರ ಬಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿದೆ ಎಂದು ಸಚಿವರಾದ ಜಮೀರ್ ಅಹ್ಮದ್‌ ಖಾನ್‌, ಯು.ಟಿ. ಖಾದರ್, ಶಾಸಕ ತನ್ವೀರ್ ಸೇಠ್ ಬೇಸರ ತೋಡಿಕೊಂಡಿದ್ದಾರೆ. ತಮ್ಮ ಸಮುದಾಯಕ್ಕೆ ಆದ್ಯತೆ ನೀಡಿಲ್ಲ’ ಎಂದು ಅತೃಪ್ತಿ ಹೊರ ಹಾಕಿದ್ದಾರೆ.‌

‘ನಮ್ಮ ಸಮುದಾಯದವರಿಗೆ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ಹೀಗಾಗಿ, ನಮ್ಮ ಸಮಾಜದವರಿಗೆ, ಸಚಿವರಾಗಿ ಏನೆಂದು ಉತ್ತರಿಸಲಿ’ ಎಂದು ಸಿ.ಎಂ ಬಳಿ ನೇರವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ.

‘ಹಿಂದಿನ‌ ಸರ್ಕಾರದ ಯೋಜನೆ ಗಳನ್ನು ಮುಂದುವರಿಸಿದ್ದೇನೆ ಅದರಲ್ಲಿ ಅಲ್ಪಸಂಖ್ಯಾತರಿಗಾಗಿ ಅನೇಕ ಯೋಜನೆ ಗಳಿವೆ. ಇನ್ನೇನಾದರೂ ಆಗಬೇಕಿದ್ದರೆ ತಿಳಿಸಿ’ ಎಂದು ಸಚಿವರನ್ನು ಮುಖ್ಯ ಮಂತ್ರಿ ಸಮಾಧಾನಪಡಿಸಲು ಯತ್ನಿಸಿದ್ದರು ಎಂದು ಗೊತ್ತಾಗಿದೆ.

ಉತ್ತರ ಕರ್ನಾಟಕಕ್ಕೆ ಯಾವುದೇ ಹೊಸ ಯೋಜನೆ ಘೋಷಿ ಸಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಎಚ್.ಕೆ. ಪಾಟೀಲ ಸಿಟ್ಟು ಹೊರಹಾಕಿದ್ದಾರೆ.

‘ಇದು ಹಾಸನ ಜಿಲ್ಲೆಯ ಬಜೆಟ್‌. ಸಂಪೂರ್ಣ ರೇವಣ್ಣನ ಬಜೆಟ್‌ನಂತಿದೆ’ ಎಂದೂ ಕಾಂಗ್ರೆಸ್‌ನ ಕೆಲವು ಶಾಸಕರು ನೇರವಾಗಿ ದೂರಿದ್ದಾರೆ. ವಿಧಾನಸಭೆಯ ಕಾರಿಡಾರ್‌ನಲ್ಲಿ‌ ಸಚಿವ ಎಚ್‌.ಡಿ. ರೇವಣ್ಣ ಎದುರಲ್ಲೇ ಬಸವ ಕಲ್ಯಾಣ ಶಾಸಕ ನಾರಾಯಣ ರಾವ್ ಜೋರು ಧ್ವನಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನು ಗಮನಿಸಿದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೈ ಸನ್ನೆ ಮೂಲಕ ನಾರಾಯಣ ರಾವ್‌ ಅವರಿಗೆ ಸುಮ್ಮನಿರುವಂತೆ ಸೂಚಿಸಿದರು.

**

ಸಿದ್ದರಾಮಯ್ಯ ಪತ್ರಕ್ಕೆ ಸಿಗದ ಮನ್ನಣೆ?

ತಾನು ಪ್ರತಿನಿಧಿಸುವ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಚಟುವಟಿಕೆಯನ್ನು ಉಲ್ಲೇಖಿಸಿ ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಐದು ಪತ್ರಗಳನ್ನು ಬರೆದಿದ್ದರು. ಆದರೆ, ಆ ಪತ್ರದಲ್ಲಿದ್ದ ಯಾವುದೇ ಪ್ರಸ್ತಾವಗಳಿಗೆ ಬಜೆಟ್‌ನಲ್ಲಿ ಮನ್ನಣೆ ಸಿಕ್ಕಿಲ್ಲ.

ಕೈಗಾರಿಕೆ, ಕೆರೆ ತುಂಬುವ ಯೋಜನೆ ಹೊರತುಪಡಿಸಿ ಬೇರೆ ಯಾವುದೇ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

**

‘ಹೆಬ್ಬೆಟ್ಟು ರಾಮಕ್ಕ’ ವೀಕ್ಷಿಸಿದ ಸಿದ್ದರಾಮಯ್ಯ

ಬಜೆಟ್‌ ಮಂಡಿಸಿದ ಬೆನ್ನಲ್ಲೆ ಇತ್ತ ಕುಮಾರಸ್ವಾಮಿ ಆ ಬಗ್ಗೆ ಮಾಧ್ಯಮ ಗೋಷ್ಠಿ ನಡೆಸಿದರೆ, ಅತ್ತ, ‘ದೋಸ್ತಿ’ ಸರ್ಕಾರ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾರಾಮ್ಯ ‘ಹೆಬ್ಬೆಟ್ಟು ರಾಮಕ್ಕ’ ಸಿನಿಮಾ ವೀಕ್ಷಿಸಿದರು.

ರಾಷ್ಟ್ರ ಪ್ರಶಸ್ತಿ ವಿಜೇತ ಈ ಸಿನಿಮಾದಲ್ಲಿ ತಾರಾ ಅನೂರಾಧಾ ನಟಿಸಿದ್ದಾರೆ. ಶಾಸಕರಿಗಾಗಿ ಚಾಮುಂಡೇಶ್ವರಿ ಸ್ಟುಡಿಯೋಗೆ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !