ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ: ಬಿಜೆಪಿ–ಕಾಂಗ್ರೆಸ್‌ನಲ್ಲಿ ಆರದ ಬಂಡಾಯ

ಮುಗಿದಿಲ್ಲ ತಲೆನೋವು: ನಾಮಪತ್ರ ವಾಪಸ್‌ ತೆಗೆಸಲು ಶತಪ್ರಯತ್ನ
Last Updated 20 ನವೆಂಬರ್ 2019, 1:57 IST
ಅಕ್ಷರ ಗಾತ್ರ

ಬೆಂಗಳೂರು: ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಎದುರಾಗಿ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿರುವವರ ಮನವೊಲಿಸಿ ಗೆಲುವಿನ ದಾರಿ ಸುಗಮಗೊಳಿಸಲು ಬಿಜೆಪಿ, ಕಾಂಗ್ರೆಸ್ ನಾಯಕರು ಶತಪ್ರಯತ್ನ ಮುಂದುವರಿಸಿದ್ದಾರೆ.

ನಾಯಕರ ಪ್ರಯತ್ನಕ್ಕೆ ಕೆಲವು ಕ್ಷೇತ್ರಗಳಲ್ಲಿ ಭಾಗಶಃ ಯಶಸ್ಸು ಲಭಿಸಿದ್ದರೆ, ಮತ್ತೆ ಕೆಲವು ಕ್ಷೇತ್ರಗಳಲ್ಲಿ ಬಂಡಾಯಗಾರರು ಹಿಂದೆ ಸರಿಯಲು ನಿರಾಕರಿಸಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಇನ್ನು ಎರಡು ದಿನ ಬಾಕಿಯಿದ್ದು, ಪಕ್ಷದ ಅಭ್ಯರ್ಥಿಯ ಗೆಲುವಿಗೆ ಮುಳುವಾಗಲಿರುವ ಅಭ್ಯರ್ಥಿಗಳನ್ನು ಸ್ಪರ್ಧೆಯಿಂದ ಹಿಂದೆ ಸರಿಸಲು ಮುಂದಾಗಿರುವ ನಾಯಕರು ನಾನಾ ವಿಧವಾದ ದಾರಿಗಳನ್ನು ಹುಡುಕುತ್ತಿದ್ದಾರೆ.

ವಿಜಯನಗರ (ಹೊಸಪೇಟೆ) ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಎದುರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕವಿರಾಜ ಅರಸ್ ಅವರನ್ನು ಸ್ಪರ್ಧೆಯಿಂದ ಹಿಂದೆ ಸರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ರಂಗ ಪ್ರವೇಶ ಮಾಡಿದ್ದಾರೆ. ಕವಿರಾಜರಿಗೆ ನಿಗಮ–ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಆಸೆ ತೋರಿಸಲಾಗಿದೆ. ಅದನ್ನು ಒಪ್ಪದ ಕವಿರಾಜ, ‘ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.

ಹೊಸಕೋಟೆಯಲ್ಲಿ ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಪುತ್ರ ಶರತ್ ಅವರು ಉಚ್ಛಾಟನೆಯ ಬೆದರಿಕೆಗೆ ಬಗ್ಗದೇ ಸ್ಪರ್ಧಿಸಿಯೇ ತೀರುವುದಾಗಿ ಘೋಷಿಸಿದ್ದಾರೆ.

ಯಲ್ಲಾಪುರದಲ್ಲಿ ಬಿಜೆಪಿಯ ಶಿವರಾಮ ಹೆಬ್ಬಾರ್‌ ಅವರಿಗೆ ಅನುಕೂಲ ಮಾಡಿಕೊಡಲು ಹಿಂದಿನ ಬಾರಿ ಅವರೆದುರು ಸೋತಿದ್ದ ವಿ.ಎಸ್. ಪಾಟೀಲರಿಗೆವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹುದ್ದೆ ನೀಡಲಾಗಿದೆ. ಪಾಟೀಲರು ಹೆಬ್ಬಾರ್‌ಗೆ ಬೆಂಬಲ ಘೋಷಿಸಿದ್ದಾರೆ. ಆದರೆ, ಅವರ ಪುತ್ರ ಬಾಪುಗೌಡ ಪಾಟೀಲ ಇದೇ 22ರಂದು ಕಾಂಗ್ರೆಸ್ ಸೇರುವುದಾಗಿ ಪ್ರಕಟಿಸಿದ್ದು, ಬಿಜೆಪಿ ನಾಯಕರ ತಲೆನೋವಿಗೆ ಕಾರಣವಾಗಿದೆ.

ಹಿರೇಕೆರೂರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇದು ಬಿಜೆಪಿಗೆ ಸಮಸ್ಯೆಯಾಗಿ ಕಾಡಿತ್ತು. ಮಠಾಧೀಶರ ಮಧ್ಯ ಪ್ರವೇಶದ ಬಳಿಕ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಸ್ವಾಮೀಜಿ ಹೇಳಿದ್ದಾರೆ. ಇದರಿಂದಾಗಿ ಬಿಜೆಪಿ ನಾಯಕರು ನಿರಾಳರಾಗಿದ್ದಾರೆ.

ಅಥಣಿಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮೂವರು ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದು, ಒಕ್ಕೂಟ ರಚನೆ ಮಾಡಿಕೊಂಡಿದ್ದಾರೆ. ಈ ಪೈಕಿ ಇಬ್ಬರು ವಾಪಸ್ ಪಡೆದು ಒಬ್ಬರು ಮಾತ್ರ ಕಣದಲ್ಲಿ ಉಳಿಯಲು ನಿರ್ಧರಿಸಿದ್ದಾರೆ. ಬಂಡಾಯ ಅಭ್ಯರ್ಥಿಗಳನ್ನು ಭೇಟಿ ಮಾಡಿದ ಚುನಾವಣಾ ಉಸ್ತುವಾರಿಯಾಗಿರುವ ಕಾಂಗ್ರೆಸ್ ಶಾಸಕ ಎಂ.ಬಿ. ಪಾಟೀಲ ಅವರು ಬಂಡಾಯಗಾರರ ಮನವೊಲಿಸುವ ಯತ್ನ ಮಾಡಿದರು. ಆದರೆ ಅದು ಫಲ ನೀಡಿಲ್ಲ.

54 ನಾಮಪತ್ರ ತಿರಸ್ಕೃತ

ಗೋಕಾಕದಲ್ಲಿ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ, ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್‌ನ ಕೆ.ಪಿ. ಬಚ್ಚೇಗೌಡ ಅವರ ನಾಮಪತ್ರ ಸೇರಿದಂತೆ 54 ನಾಮಪತ್ರಗಳು ತಿರಸ್ಕೃತವಾಗಿವೆ. ಸಲ್ಲಿಕೆಯಾದ 355 ನಾಮಪತ್ರಗಳ ಪೈಕಿ 301 ಕ್ರಮಬದ್ಧವಾಗಿವೆ. ಗೋಕಾಕದಲ್ಲಿ ಕಾಂಗ್ರೆಸ್‌ನ ಲಖನ್‌ ಜಾರಕಿಹೊಳಿ, ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್‌ನ ರಾಧಾಕೃಷ್ಣ ಅವರು ಅಧಿಕೃತ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದಾರೆ.

ಸಿದ್ದು–ಬಿಎಸ್‌ವೈ ಮಾತಿನ ಸಮರ

ಉಪಚುನಾವಣೆಯಲ್ಲೂ ನಾವೇ ಗೆಲ್ಲಲಿದ್ದೇವೆ. ಮುಂದಿನ ಮೂರೂವರೆ ವರ್ಷದವರೆಗೆನನ್ನನ್ನೇಮುಖ್ಯಮಂತ್ರಿಯನ್ನಾಗಿ ಮುಂದುವರಿಸಲು ರಾಜ್ಯದ ಜನರುಈಗಾಗಲೇ ತೀರ್ಮಾನಿಸಿದ್ದಾರೆ ಎಂದುಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ದುಡ್ಡಿನ ಮೂಲಕ ಚುನಾವಣೆ ಗೆಲ್ಲಲು ಮುಂದಾಗಿವೆ. ಸರ್ಕಾರದಲ್ಲಿ ಇದ್ದುಕೊಂಡು ಅಕ್ರಮ ಮಾಡುವವರಿಗೆ ಅಧಿಕಾರದಲ್ಲಿ ಮುಂದುವರೆಯುವ ಯಾವ ನೈತಿಕತೆ ಇದೆ? ಎಂದುವಿರೋಧ ಪಕ್ಷದ ನಾಯಕಸಿದ್ದರಾಮಯ್ಯ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT