ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಳಂಬದಿಂದ ಅಸಮಾಧಾನ; ಸಂಪುಟ ವಿಸ್ತರಣೆಗೆ ನೂತನ ಶಾಸಕರ ಗಡುವು

Last Updated 12 ಜನವರಿ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಉಪ ಚುನಾವಣೆ ಫಲಿತಾಂಶ ಬಂದು ತಿಂಗಳು ಕಳೆದರೂ ಇನ್ನೂ ಸಚಿವ ಸಂಪುಟ ವಿಸ್ತರಣೆ ಮಾಡದಿರುವ ಬಗ್ಗೆ ನೂತನ ಶಾಸಕರು ತೀವ್ರ ಅಸಮಾಧಾನಗೊಂಡಿದ್ದು, ಇದೇ 18 ಅಥವಾ 20 ರೊಳಗೆ ಸಂಪುಟ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಗಡುವು ನೀಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಕ್ರಾಂತಿ ಹಬ್ಬದ ಬಳಿಕ ಒಂದೆರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡುವುದಾಗಿ ತಿಳಿಸಿದ್ದರೂ, ಆ ಲಕ್ಷಣಗಳು ಕಂಡು ಬರುತ್ತಿಲ್ಲ. ಈ ರೀತಿ ಸತಾಯಿಸುವುದು ಸರಿಯಲ್ಲ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದಕ್ಕೆ 17 ಶಾಸಕರ ತ್ಯಾಗವೇ ಕಾರಣ. ಆಗ ಕೊಟ್ಟ ಮಾತು ಏನಾಯಿತು ಎಂದು ನೂತನವಾಗಿ ಆಯ್ಕೆಯಾದ ಶಾಸಕರೊಬ್ಬರು ಪ್ರಶ್ನಿಸಿದ್ದಾರೆ.

ಕೆಲವು ಶಾಸಕರು ಸಂಪುಟ ವಿಸ್ತರಣೆಯ ವಿಳಂಬದ ಬಗ್ಗೆ ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಈಗಾಗಲೇ ಎರಡು ಮೂರು ಬಾರಿ ಚರ್ಚೆ ನಡೆಸಿದ್ದಾರೆ. ಮುಖ್ಯಮಂತ್ರಿ ಮೇಲೆ ಒತ್ತಡ ಹೇರಲು ತೀರ್ಮಾನಿಸಿದ್ದಾರೆ. ಯಡಿಯೂರಪ್ಪ ಅವರಿಗೆ ಒಂದು ವೇಳೆ ದೆಹಲಿಗೆ ಹೋಗಲು ಸಾಧ್ಯವಾಗದಿದ್ದರೆ, ಇದೇ 18ಕ್ಕೆ ಬೆಂಗಳೂರಿಗೆ ಭೇಟಿ ನೀಡುವ ಪಕ್ಷದ ಅಧ್ಯಕ್ಷ ಅಮಿತ್‌ ಶಾ ಜತೆ ಚರ್ಚಿಸಿ ಒಪ್ಪಿಗೆ ಪಡೆಯುವಂತೆಯೂ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮಿತ್‌ ಶಾ ಅವರ ಭೇಟಿಗೆ ಸಮಯ ಕೇಳಿದ್ದೇವೆ. ಸಮಯ ಕೊಟ್ಟರೆ ಶನಿವಾರ ಅಥವಾ ಭಾನುವಾರ ದೆಹಲಿಗೆ ತೆರಳುವುದಾಗಿ ಇತ್ತೀಚೆಗೆ ಯಡಿಯೂರಪ್ಪ ಹೇಳಿದ್ದರು. ಸಮಯ ನೀಡದ ಕಾರಣ, ಅವರು ದೆಹಲಿಗೆ ಹೋಗಿಲ್ಲ. ಶಾ ಅವರು ಇದೇ 18ಕ್ಕೆ ಹುಬ್ಬಳ್ಳಿ ಮತ್ತು ಬೆಂಗಳೂರಿಗೆ ಬರುವುದರಿಂದ ಅದೇ ಸಂದರ್ಭದಲ್ಲಿ ಮಾತುಕತೆ ನಡೆಸಲು ಮುಖ್ಯಮಂತ್ರಿ ತೀರ್ಮಾನಿಸಿದ್ದಾರೆ.

ದಾವೋಸ್‌ ಪ್ರವಾಸ ಖಚಿತ

ದಾವೋಸ್‌ನಲ್ಲಿ ಜ. 20ರಿಂದ ಆರಂಭವಾಗಲಿರುವ ವಿಶ್ವ ಆರ್ಥಿಕ ವೇದಿಕೆ ಸಮ್ಮೇಳನದಲ್ಲಿ ಭಾಗವಹಿಸಲೇಬೇಕು ಎಂದು ಪ್ರಧಾನಿ ಮತ್ತೊಮ್ಮೆ ತಾಕೀತು ಮಾಡಿರುವುದರಿಂದ, ಅದರಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ತೀರ್ಮಾನಿದ್ದಾರೆ ಎಂದು ಮೂಲಗಳು ಹೇಳಿವೆ.

ವಿವಿಧ ದೇಶಗಳ ಉದ್ಯಮಿಗಳ ಜತೆ ಮಾತುಕತೆ ನಿಗದಿ ಮಾಡಲಾಗಿದೆ. ಆ ಸಂದರ್ಭದಲ್ಲಿ ತಾವು ಇರುವುದು ಸೂಕ್ತ ಎಂದು ಮುಖ್ಯಮಂತ್ರಿ ಭಾವಿಸಿದಂತಿದೆ. ಹೀಗಾಗಿ ಅವರು ದಾವೋಸ್‌ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ದಾವೋಸ್‌ಗೆ ತೆರಳಿದರೆ, ಸಂಪುಟ ವಿಸ್ತರಣೆ ತಿಂಗಳ ಕೊನೆಗೆ ಮುಂದೂಡುವ ಸಾಧ್ಯತೆಗಳಿವೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ವರಿಷ್ಠರ ಬುಲಾವ್; ದೆಹಲಿಗೆ ಸಿದ್ದರಾಮಯ್ಯ

ಕೆಪಿಸಿಸಿ ಅಧ್ಯಕ್ಷ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕನ ನೇಮಕ ವಿಚಾರವನ್ನು ಶೀಘ್ರ ಇತ್ಯರ್ಥಪಡಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.

ವಿಧಾನಸಭೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿದ್ದರಾಮಯ್ಯ ಅವರು ವರಿಷ್ಠರ ಸೂಚನೆ ಮೇರೆಗೆ ಸೋಮವಾರ ದೆಹಲಿಗೆ ತೆರಳುತ್ತಿದ್ದಾರೆ. ಕೆಪಿಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಮಾತುಕತೆ ನಡೆಸಲಿದ್ದಾರೆ.

ಸಿದ್ದರಾಮಯ್ಯ ನೀಡಿದ್ದ ರಾಜೀನಾಮೆಯನ್ನು ಹೈಕಮಾಂಡ್ ಒಪ್ಪಿಕೊಂಡಿಲ್ಲ. ಬಹುತೇಕ ಅವರನ್ನೇ ಮುಂದುವರಿಸುವ ಸಾಧ್ಯತೆಗಳು ಇವೆ. ಇನ್ನೂ ಕೆಪಿಸಿಸಿ ಅಧ್ಯಕ್ಷರನ್ನು ಬದಲಿಸುವ ಸಂಬಂಧ ಚರ್ಚೆ ನಡೆಯಲಿದೆ. ಅವರ ಅಭಿಪ್ರಾಯವನ್ನು ಆಧರಿಸಿ ಅಧ್ಯಕ್ಷರನ್ನು ನೇಮಕ ಮಾಡುವ ಸಾಧ್ಯತೆಗಳಿವೆ. ಮಾತುಕತೆ ಫಲಪ್ರದವಾದರೆ ಮಂಗಳವಾರವೇ ಕೆಪಿಸಿಸಿಗೆ ನೂತನ ಸಾರಥಿ ನೇಮಕವಾ
ಗಬಹುದು. ಇಲ್ಲವಾದರೆ ಮತ್ತಷ್ಟು ವಿಳಂಬವಾಗಬಹುದು ಎಂದು ಮೂಲಗಳು ತಿಳಿಸಿವೆ.

ನಿಲ್ಲದ ಕಸರತ್ತು: ನಗರಕ್ಕೆ ಬಂದಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಸ್ತ್ರಿ ಅವರು ಹಿರಿಯರ ಅಭಿಪ್ರಾಯ ಸಂಗ್ರಹಿಸಿ, ವರಿಷ್ಠರಿಗೆ ವರದಿ ಸಲ್ಲಿಸಿದ್ದರು. ಹಿರಿಯರ ನಡುವೆ ಒಮ್ಮತ ಮೂಡದಿರುವ ವಿಚಾರವನ್ನು ವರದಿಯಲ್ಲಿ ಪ್ರಸ್ತಾಪಿಸಿದ್ದರು. ನಂತರ ಎಲ್ಲಾ ಹಿರಿಯ ಜತೆಗೆ ಸಭೆ ನಡೆಸಿ, ಒಮ್ಮತ ಮೂಡಿಸುವ ಜವಾಬ್ದಾರಿಯನ್ನು ಶಾಸಕ ಜಿ.ಪರಮೇಶ್ವರ ಅವರಿಗೆ ನೀಡಲಾಗಿತ್ತು. ಅವರೂ ಸಭೆ ನಡೆಸಿ, ವರದಿ ಸಲ್ಲಿಸಿದ್ದು, ಎಲ್ಲರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿಯಾಗಿ ತಿಂಗಳು ಕಳೆದಿದ್ದು, ಮತ್ತಷ್ಟು ದಿನಗಳು ಖಾಲಿ ಬಿಡದೆಅಂತಿಮ ನಿರ್ಧಾರ ಕೈಗೊಳ್ಳಲು ಹೈಕಮಾಂಡ್ ಬಯಸಿದೆ.

ಮುಂದಿನ ವರ್ಷಗಳಲ್ಲಿ ಎಲ್ಲಾ ರೀತಿಯಲ್ಲೂ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವಂತಹ ಸೂಕ್ತ ನಾಯಕನಿಗಾಗಿ ವರಿಷ್ಠರು ಹುಡುಕಾಟನಡೆಸಿದ್ದು, ಶಾಸಕ ಡಿ.ಕೆ.ಶಿವಕುಮಾರ್ ಹೆಸರು ಮುಂಚೂಣಿಯಲ್ಲಿದೆ. ಅವರ ಹೆಸರು ಮುನ್ನೆಲೆಗೆ ಬರುತ್ತಿದ್ದಂತೆ ಕೆಲವರು ತಮಗೂ ಅವಕಾಶ ಕೊಡಿ ಎಂಬ ಬೇಡಿಕೆ ಸಲ್ಲಿಸಿದ್ದಾರೆ. ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್ಸಹ ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ. ಸಿದ್ದರಾಮಯ್ಯ ಅವರು ಎಂ.ಬಿ.ಪಾಟೀಲ, ಈಶ್ವರ ಖಂಡ್ರೆ, ಕೃಷ್ಣ ಬೈರೇಗೌಡ ಹೆಸರನ್ನೂ ಮುನ್ನೆಲೆಗೆ ತಂದಿದ್ದಾರೆ.

ನಾಯಕರ ವರ್ಚಸ್ಸು, ಎಲ್ಲರ ಜತೆಗೆ ಸಮನ್ವಯ ಸಾಧಿಸಿ ಪಕ್ಷ ಮುನ್ನಡೆಸುವುದು, ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳುವುದು, ಜಾತಿ– ಈ ನಾಲ್ಕು ಪ್ರಮುಖ ಮಾನದಂಡಗಳನ್ನು ಮುಂದಿಟ್ಟುಕೊಂಡು ಅಧ್ಯಕ್ಷರನ್ನು ನೇಮಕ ಮಾಡಲು ವರಿಷ್ಠರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT