ಮಂಗಳವಾರ, ಜುಲೈ 5, 2022
27 °C
ಯಡಿಯೂರಪ್ಪ ಜತೆ ಸಂತೋಷ್‌ ಸಮಾಲೋಚನೆ

ಬಿಜೆಪಿ ಸಂಘಟನೆಗೆ ದುಡಿದ ಹಿರಿಯರಿಗೂ ಸಚಿವ ಸ್ಥಾನ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

B.L.Santhosh and B.S.Yediyurappa

ಬೆಂಗಳೂರು: ಉಪಚುನಾವಣೆಯಲ್ಲಿ ಗೆದ್ದ 11 ‘ಅರ್ಹ’ ಶಾಸಕರ ಜತೆಯಲ್ಲಿ ಬಿಜೆಪಿಯ ಮೂವರು ಹಿರಿಯ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಪಕ್ಷದ ವಲಯದಲ್ಲಿ ಗಂಭೀರ ಚರ್ಚೆ ಆರಂಭವಾಗಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಸೋಮವಾರ ಭೇಟಿ ಮಾಡಿದ್ದ ಪಕ್ಷದ ರಾಷ್ಟ್ರೀಯ (ಸಂಘಟನೆ) ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಈ ಕುರಿತು ಪ್ರಸ್ತಾಪಿಸಿದ್ದಾಗಿ ಮೂಲಗಳು ಹೇಳಿವೆ.

ಉಭಯ ನಾಯಕರ ಮಧ್ಯೆ 20 ನಿಮಿಷ ಚರ್ಚೆ ನಡೆದಿದ್ದು, ಪೌರತ್ವ (ತಿದ್ದುಪಡಿ) ಕಾಯ್ದೆ ಪರ ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕಾದ ನಿಲುವು ಹಾಗೂ ಸಚಿವರು ಈ ಬಗ್ಗೆ ಏನು ಮಾಡಬೇಕು ಎಂಬ ಬಗ್ಗೆಯೇ ಇಬ್ಬರ ಮಧ್ಯದ ಮಾತುಕತೆಯ ಆದ್ಯತೆಯಾಗಿತ್ತು. ಈ ವೇಳೆ, ಸಂಪುಟ ವಿಸ್ತರಣೆ ಬಗ್ಗೆಯೂ ಚರ್ಚೆ ನಡೆದಿದೆ.

‘ಮೈತ್ರಿ ಸರ್ಕಾರ ಪತನಕ್ಕೆ ಮುನ್ನ ರಾಜೀನಾಮೆ ಕೊಟ್ಟವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು. ಈ ಪೈಕಿ ಇಬ್ಬರು ಸೋತಿದ್ದಾರೆ. ಅವರಿಗೂ ಸಚಿವ ಸ್ಥಾನ ನೀಡಬೇಕು ಎಂದು ಅರ್ಹ ಶಾಸಕರ ಗುಂಪು ಬೇಡಿಕೆ ಮಂಡಿಸುತ್ತಿದೆ. ಚುನಾವಣೆಯಲ್ಲಿ ಟಿಕೆಟ್ ಕೊಡದ ಆರ್. ಶಂಕರ್‌ಗೂ ಭರವಸೆ ನೀಡಲಾಗಿದೆ. ಹೀಗಿರುವಾಗ ಪಕ್ಷದ ಹಿರಿಯರಿಗೆ ಅವಕಾಶ ಕೊಡುವುದು ಹೇಗೆ ಎಂದು ಯಡಿಯೂರಪ್ಪ ತಮ್ಮ ಸಂಕಷ್ಟ ತೋಡಿಕೊಂಡರು’ ಎಂದು ಮೂಲಗಳು ಹೇಳಿವೆ.

‘ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಜತೆಗೆ ಪಕ್ಷದ ಸಂಘಟನೆಯನ್ನೂ ಉಳಿಸಿಕೊಳ್ಳಬೇಕಿದೆ. ಅರ್ಹ ಶಾಸಕರ ಜತೆಯಲ್ಲಿ ಪಕ್ಷಕ್ಕಾಗಿ ದುಡಿದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ರಾಜ್ಯ ಮಟ್ಟದ ನಾಯಕರ ಜತೆ ಚರ್ಚಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ದೆಹಲಿಗೆ ಬನ್ನಿ. ಅಮಿತ್ ಶಾ ಜತೆ ಚರ್ಚಿಸಿ ತೀರ್ಮಾನಕ್ಕೆ ಬರೋಣ ಎಂದು ಸಂತೋಷ್ ಸಲಹೆ ನೀಡಿದರು’ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು