ಶುಕ್ರವಾರ, ನವೆಂಬರ್ 15, 2019
23 °C
ತುಂಗಭದ್ರಾ ಹರಿವು ಇಳಿಮುಖ; ನದಿಪಾತ್ರದ ಗ್ರಾಮಸ್ಥರ ನಿಟ್ಟುಸಿರು

ಕೃಷ್ಣೆ ಆರ್ಭಟ ಹೆಚ್ಚಳ; ತ್ರಿವೇಣಿ ಸಂಗಮ ಮತ್ತೆ ಜಲಾವೃತ, ತಗ್ಗಿದ ‘ಪ್ರಭಾ’ವಳಿ

Published:
Updated:
Prajavani

ಹುಬ್ಬಳ್ಳಿ: ನೆರೆಯ ದಕ್ಷಿಣ ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸೋಮವಾರ ಮಳೆ ಕಡಿಮೆಯಾಗಿದ್ದು ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಹರಿವು ಇಳಿಮುಖವಾಗಿದೆ. ಆದಾಗ್ಯೂ ಮಹಾರಾಷ್ಟ್ರದಿಂದ ಹರಿದುಬರುತ್ತಿರುವ ನೀರಿನ ಪ್ರಮಾಣ ಏರಿಕೆಯಲ್ಲಿಯೇ ಇದ್ದು ಕೃಷ್ಣಾನದಿ ಪಾತ್ರದಲ್ಲಿನ ಸ್ಥಿತಿ ಸುಧಾರಿಸಿಲ್ಲ.

ಚಿಕ್ಕೋಡಿ ಬಳಿ ಕೃಷ್ಣಾ ನದಿಗೆ 1.88 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದ್ದು ನದಿ ತೀರದ ಚಿಕ್ಕೋಡಿ ತಾಲ್ಲೂಕಿನ ಯಡೂರವಾಡಿ ಡೋಣಿತೋಟ ಹಾಗೂ ಇಂಗಳಿ ಮಾಳಬಾಗ ಹಳ್ಳಿಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ ಸೋಮವಾರವೂ ಪ್ರವಾಹದ ಪರಿಸ್ಥಿತಿ ಮುಂದುವರೆದಿದೆ. ಆದರೆ ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಮುನಿಸು ಕೊಂಚ ತಗ್ಗಿದೆ. ಮುಧೋಳ, ಬಾದಾಮಿ, ಹುನಗುಂದ ತಾಲ್ಲೂಕಿನ ನದಿ ಪಾತ್ರದ ಜನರು ನಿಟ್ಟುಸಿರುಬಿಟ್ಟಿದ್ದಾರೆ.

ಕೃಷ್ಣೆ ಮಾತ್ರ ಆರ್ಭಟಿಸುತ್ತಿದ್ದು, ಜಮಖಂಡಿ ತಾಲ್ಲೂಕು ಅಕ್ಷರಶಃ ನೀರಿನ ಬಟ್ಟಲಾಗಿ ಬದಲಾಗಿದೆ. ಸೇತುವೆಗಳು ಮುಳುಗಿ ಬಹುತೇಕ ಗ್ರಾಮೀಣ ಭಾಗ ತಾಲ್ಲೂಕು ಕೇಂದ್ರದೊಂದಿಗೆ ಸಂಪರ್ಕ ಕಳೆದುಕೊಂಡಿದೆ. ಮಲಪ್ರಭಾ ನದಿ ಪ್ರವಾಹದ ನೀರು ಗೋವಿನಕೊಪ್ಪ– ಕೊಣ್ಣೂರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಹುಬ್ಬಳ್ಳಿ– ಸೊಲ್ಲಾಪುರ ನಡುವಿನ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಸಂಚಾರ ಇನ್ನೂ ಆರಂಭವಾಗಿಲ್ಲ. ಹುನಗುಂದ ತಾಲ್ಲೂಕಿನ ರಾಮಥಾಳ ಹಳೆಯ ಸೇತುವೆ ಮುಳುಗಿದೆ.

ಗದಗ ಜಿಲ್ಲೆಯ ನರಗುಂದ ಮತ್ತು ರೋಣ ತಾಲ್ಲೂಕಿನಲ್ಲಿ ಸೋಮವಾರ ಮಲಪ್ರಭಾ ನದಿ ತೀರದಲ್ಲಿ ಪ್ರವಾಹ ಯಥಾಸ್ಥಿತಿಯಲ್ಲಿತ್ತು. ನೆರೆಯಿಂದ ನಡುಗಡ್ಡೆಯಾಗಿರುವ ಕುರುವಿನಕೊಪ್ಪ ಮತ್ತು ಲಕಮಾಪುರ, ಬೂದಿಹಾಳ ಗ್ರಾಮಗಳಲ್ಲಿ ಮಾತ್ರ ನೀರು ಇನ್ನೂ ತಗ್ಗಿಲ್ಲ.

50 ಎಕರೆ ಜಮೀನಿಗೆ ನೀರು: ಸೋಮವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಆಲಮಟ್ಟಿ ಜಲಾಶಯದಿಂದ 2.50 ಲಕ್ಷ ಕ್ಯುಸೆಕ್‌ ನೀರು ಬಿಟ್ಟ ಕಾರಣ ಯಲಗೂರ, ಕಾಶೀನಕುಂಟಿ, ಯಲ್ಲಮ್ಮನ ಬೂದಿಹಾಳ ಗ್ರಾಮಗಳ 50ಕ್ಕೂ ಹೆಚ್ಚು ಎಕರೆ ಜಮೀನಿಗೆ ಮತ್ತೆ ನೀರು ನುಗ್ಗಿದೆ.

ಹೊಸಪೇಟೆಯ ತುಂಗಭದ್ರಾ ಜಲಾಶಯದ ಒಳಹರಿವು, ಹೊರಹರಿವು ಸೋಮವಾರ ಮತ್ತಷ್ಟು ತಗ್ಗಿದ್ದು, ತಾಲ್ಲೂಕಿನ ಕೆಲ ಗ್ರಾಮಗಳು ಮುಳುಗಡೆ ಭೀತಿಯಿಂದ ದೂರವಾಗಿವೆ.

ಆದರೆ ಹಂಪಿಯ ಪುರಂದರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ, ಚಕ್ರತೀರ್ಥ ಈಗಲೂ ಸಂಪೂರ್ಣವಾಗಿ ನೀರಿನಲ್ಲಿಯೇ ಇವೆ.

ಉತ್ತರ ಕನ್ನಡದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕಾರವಾರ ಸೇರಿದಂತೆ ಕರಾವಳಿಯ ಕೆಲವು ತಾಲ್ಲೂಕುಗಳಲ್ಲಿ ಬಿಸಿಲಿನ ವಾತಾವರಣವಿತ್ತು. ಕಾರವಾರದ ಕದ್ರಾ ಭಾಗದಲ್ಲಿ ನೆರೆ ಇಳಿದಿದೆ.


 ಜಮಖಂಡಿ ತಾಲ್ಲೂಕಿನ ಮುತ್ತೂರು ಗ್ರಾಮ ಕೃಷ್ಣೆಯ ಪ್ರವಾಹದ ನೀರಿನಿಂದ ನಡುಗಡ್ಡೆಯಾಗಿ ಬದಲಾಗಿದ್ದು, ಗ್ರಾಮಸ್ಥರು ಸಂಚಾರಕ್ಕೆ ದೋಣಿ ಅವಲಂಬಿಸಿದ್ದಾರೆ

ಮಡಿಕೇರಿ (ವರದಿ): ಕೊಡಗು ಜಿಲ್ಲೆಯಲ್ಲಿ ಭಾನುವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದಾಗಿ, ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತಗೊಂಡಿದೆ.

ಭಾಗಮಂಡಲ-ನಾಪೋಕ್ಲು ರಸ್ತೆ
ಯಲ್ಲಿ ಪ್ರವಾಹ ಹೆಚ್ಚಿದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ. ಭಾಗಮಂಡಲದಲ್ಲಿ ಸಂಚಾರಕ್ಕೆ ಸ್ಥಳೀಯರು ಬೋಟ್ ಅವಲಂಬಿಸಿದ್ದಾರೆ.

ಭಾನುವಾರದಿಂದಲೂ ಎಡೆಬಿಡದೇ ಸುರಿದ ಮಳೆಯಿಂದ ನಾಪೋಕ್ಲು- ಮೂರ್ನಾಡು ರಸ್ತೆಯೂ ಸಂಪರ್ಕ ಕಡಿತಗೊಂಡಿದೆ.

ಬೆಟ್ಟಶ್ರೇಣಿಗಳಲ್ಲಿ ಬಿರುಸಿನ ಮಳೆಯಾಗಿದ್ದು ಕಾವೇರಿ ನದಿಯು ಮತ್ತೆ ತುಂಬಿ ಹರಿಯುತ್ತಿದೆ.

ತಿಂಗಳಲ್ಲಿ ಎರಡು ಬಾರಿ ದೇಗುಲಕ್ಕೆ ನುಗ್ಗಿದ ನೀರು!

ಆಲಮಟ್ಟಿ ಹಾಗೂ ನವಿಲುತೀರ್ಥ ಜಲಾಶಯಗಳಿಂದ ಹೆಚ್ಚಿನ ನೀರು ಬಿಟ್ಟಪರಿಣಾಮ ನಾರಾಯಣಪುರ ಜಲಾಶಯ ಹಿನ್ನೀರಿನ ಕೃಷ್ಣಾ, ಮಲಪ್ರಭಾ ನದಿಗಳ ಸಂಗಮ, ಕೂಡಲಸಂಗಮದ ಸಂಗಮನಾಥನ ದೇವಾಲಯಕ್ಕೆ ನೀರು ನುಗ್ಗಿದೆ. ತಿಂಗಳ ಅವಧಿಯಲ್ಲಿ ಎರಡನೇ ಬಾರಿ ಈ ರೀತಿ ನೀರು ನುಗ್ಗಿರುವುದು ಇದೇ ಮೊದಲು.


ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಗ್ರಾಮದ ಹರಿತಕ್ರಾಂತಿನಗರದ ಮಕ್ಕಳು ಕೃಷ್ಣಾ ನದಿ ಹಿನ್ನಿರಿನಲ್ಲೇ ನಡೆದುಕೊಂಡು ಶಾಲೆಗೆ ಹೋದರು

ಕರಾವಳಿಯಲ್ಲೂ ಮಳೆ

ಮಂಗಳೂರು: ಕರಾವಳಿಯಲ್ಲಿ ಮಳೆಯ ಅಬ್ಬರ ಸೋಮವಾರವೂ ಮುಂದುವರಿದಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರವೂ ಧಾರಾಕಾರ ಮಳೆ ಸುರಿಯುತ್ತಿದೆ. ಬಂಟ್ವಾಳದಲ್ಲಿ 7.6, ಪುತ್ತೂರಿನಲ್ಲಿ 7.2 ಹಾಗೂ ಸುಳ್ಯ ತಾಲ್ಲೂಕಿನಲ್ಲಿ 7 ಸೆಂ.ಮೀ. ಮಳೆ ಸುರಿದಿದೆ. ಜಿಲ್ಲೆಯಲ್ಲಿ ಸರಾಸರಿ 6.7 ಸೆಂ.ಮೀ. ಮಳೆಯಾಗಿದೆ. ನೇತ್ರಾವತಿ ಮತ್ತು ಕುಮಾರಧಾರಾ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದರೂ, ಅಪಾಯದ ಸ್ಥಿತಿ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಸೋಮವಾರ ಸಾಧಾರಣ ಮಳೆಯಾಗಿದೆ. ಕೊಪ್ಪ ತಾಲ್ಲೂಕಿನ ಗಡಿಯ ಗಡಿಕಲ್ಲು ಗ್ರಾಮದ ಪ್ರೌಢಶಾಲೆ ಬಳಿಯ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌–169) ಪಕ್ಕದ ತೆಂಗಿನ ತೋಟದ ಮೂಲೆಯಲ್ಲಿ ಧರೆ ಕುಸಿದಿದೆ. ಎನ್‌.ಆರ್‌.ಪುರ, ಮೂಡಿಗೆರೆ, ಶೃಂಗೇರಿ, ಕಳಸ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

ಶಿವಮೊಗ್ಗ: ಸಾಧಾರಣ ಮಳೆ

ಶಿವಮೊಗ್ಗ: ಜಿಲ್ಲೆಯ ಕೆಲವೆಡೆ ಸೋಮವಾರ ಸಾಧಾರಣ ಮಳೆಯಾಗಿದ್ದು, ಮತ್ತೆ ಕೆಲವೆಡೆ ತುಂತುರು ಮಳೆಯಾಗಿದೆ.

ಆಗುಂಬೆ, ಮಾಸ್ತಿಕಟ್ಟೆ, ಹೊಸನಗರ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ತೀರ್ಥಹಳ್ಳಿ, ರಿಪ್ಪನಪೇಟೆ, ಜೋಗ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಸಾಗರ, ಶಿಕಾರಿಪುರ, ಶಿವಮೊಗ್ಗ, ಭದ್ರಾವತಿ, ಸೊರಬದಲ್ಲಿ ತುಂತುರು ಮಳೆಯಾಗಿದೆ. ಜಿಲ್ಲೆಯಲ್ಲಿ 24 ಗಂಟೆಗಳಲ್ಲಿ ಒಟ್ಟು 174.60 ಮಿ.ಮೀ. ಮಳೆಯಾಗಿದ್ದು, ಸರಾಸರಿ 24.94 ಮಿ.ಮೀ. ಮಳೆ ದಾಖಲಾಗಿದೆ.

ಪ್ರತಿಕ್ರಿಯಿಸಿ (+)