ಸೋಮವಾರ, ಜೂಲೈ 6, 2020
24 °C
ಸಚಿವ ಸಂಪುಟ ಉಪಸಮಿತಿ ಸಭೆ * ₹2,000 ಕೋಟಿ ಉಳಿತಾಯಕ್ಕೆ ಕ್ರಮ

ಇಲಾಖೆಗಳ ವಿಲೀನ, ಹುದ್ದೆಗಳ ಕತ್ತರಿಗೆ ಚಿಂತನೆ

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿವಿಧ ಇಲಾಖೆಗಳು, ನಿಗಮ–ಮಂಡಳಿಗಳಲ್ಲಿರುವ ಹೆಚ್ಚುವರಿ ಹುದ್ದೆಗಳಿಗೆ ಕತ್ತರಿ ಹಾಕುವುದು ಮತ್ತು ಕೆಲವು ಇಲಾಖೆಗಳನ್ನು ವಿಲೀನಗೊಳಿಸುವ ಮೂಲಕ ಆಡಳಿತಕ್ಕೆ ಸರ್ಜರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಕ್ರಮದಿಂದಾಗಿ ಸರ್ಕಾರಕ್ಕೆ ವಾರ್ಷಿಕ ಸುಮಾರು ₹2,000 ಕೋಟಿ ಉಳಿತಾಯವಾಗಲಿದೆ. ಆರ್ಥಿಕವಾಗಿ ಸಂಕಷ್ಟಕ್ಕೆ ತುತ್ತಾಗಿರುವ ಸರ್ಕಾರ ಎಲ್ಲ ರೀತಿಯಿಂದಲೂ ಖರ್ಚು ವೆಚ್ಚಕ್ಕೆ ಕಡಿವಾಣ ಹಾಕಲು ದಿಟ್ಟ ಕ್ರಮ ತೆಗೆದುಕೊಂಡಿದೆ.

ಈ ವಿಷಯವಾಗಿ ಕಂದಾಯ ಸಚಿವ ಆರ್‌.ಅಶೋಕ ಅವರ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿತ್ತು. ಈ ಸಮಿತಿ ಮೊದಲ ಸಭೆ ಗುರುವಾರ ನಡೆಯಿತು.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಸಚಿವ ಆರ್‌.ಅಶೋಕ, ‘ಹಲವು ಇಲಾಖೆಗಳು ಬಿಳಿ ಆನೆಗಳಾಗಿವೆ. ಸರ್ಕಾರಕ್ಕೆ ಇದರಿಂದ ಆರ್ಥಿಕ ಹೊರೆ ಆಗಿದೆ. ಅಗತ್ಯಕ್ಕಿಂತ ಹಲವು ಪಟ್ಟು ಹೆಚ್ಚು ಸಿಬ್ಬಂದಿ ಇದ್ದಾರೆ. ಆದರೆ, ಅವರಿಗೆ ಮಾಡಲು ಕೆಲಸವೇ ಇಲ್ಲ. ಸಂಬಳ, ಸಾರಿಗೆ ಮತ್ತು ಭತ್ಯೆಗೇ ವರ್ಷಕ್ಕೆ ₹2,000 ಕೋಟಿ ಖರ್ಚಾಗುತ್ತಿದೆ. ಈ ಹಣವನ್ನು ಅಭಿವೃದ್ಧಿಗೆ ಬಳಸಬಹುದು’ ಎಂದು ತಿಳಿಸಿದರು.

‘ವಿವಿಧ ಇಲಾಖೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿರುವ ಹುದ್ದೆಗಳು ಮತ್ತು ಸಿಬ್ಬಂದಿ ಸಂಖ್ಯೆ, ಯಾವ ಯಾವ ಇಲಾಖೆಗಳನ್ನು ವಿಲೀನ ಮಾಡಬಹುದು ಎಂಬುದರ ವಿವರಗಳನ್ನು ಅಧಿಕಾರಿಗಳಿಂದ ಕೇಳಿದ್ದೇವೆ. ಕೆಲವು ಇಲಾಖೆಗಳಲ್ಲಿ ಒಬ್ಬರು ಅಥವಾ ಇಬ್ಬರು ಜಂಟಿ ಕಾರ್ಯದರ್ಶಿಗಳಿದ್ದರೆ ಸಾಕು. ಐದಾರು ಜನ ಜಂಟಿ ಕಾರ್ಯದರ್ಶಿಗಳಿದ್ದಾರೆ. ಇವರಿಗೆ ಗುಮಾಸ್ತರು, ಜವಾನರು ಮತ್ತಿತರ ಸಿಬ್ಬಂದಿಯೂ ಇರುತ್ತಾರೆ’ ಎಂದು ಹೇಳಿದರು. 

‘ಅಧಿಕಾರಿಗಳು ತಮ್ಮ ಬಡ್ತಿಗಾಗಿ ಹುದ್ದೆಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ನಿಗಮ–ಮಂಡಳಿಗಳಿಗೆ ಅಧ್ಯಕ್ಷರು, ಸದಸ್ಯರು ಇಲ್ಲದಿದ್ದರೂ ಸಿಬ್ಬಂದಿ ಇರುತ್ತಾರೆ. ಕೆಲವು ನಿಗಮ ಮಂಡಳಿಗಳಿಗೆ ₹20 ರಿಂದ ₹50 ಲಕ್ಷ ಅನುದಾನ ನೀಡಲಾಗುತ್ತದೆ. ಅದು ಸಿಬ್ಬಂದಿ ವೇತನಕ್ಕೆ ಮಾತ್ರ ಬಳಕೆಯಾಗುತ್ತಿದೆ’ ಎಂದರು.

‘ಹಿಂದೆ 18 ಇಲಾಖೆಗಳು ಇದ್ದವು, ಈಗ 50ಕ್ಕೇರಿದೆ. ಕಂದಾಯ ಇಲಾಖೆಯಲ್ಲಿ ವಿಭಾಗಾಧಿಕಾರಿಗಳು ಇದ್ದಾರೆ. ಕಮಿಷನರೇಟ್‌ ಮಾಡಿರುವುದರಿಂದ ವಿಭಾಗಾಧಿಕಾರಿಗಳ ಅಗತ್ಯವೇ ಇಲ್ಲ’ ಎಂದು ಅಶೋಕ ಹೇಳಿದರು. 

ಆಡಳಿತ ಸುಧಾರಣೆಗೆ ಎರಡು ವರದಿಗಳಿವೆ: ‘ಆಡಳಿತ ಸುಧಾರಣೆಗಾಗಿ ಈ ಹಿಂದೆ ವೀರಪ್ಪ ಮೊಯಿಲಿ ಮತ್ತು ಹಾರನಹಳ್ಳಿ
ರಾಮಸ್ವಾಮಿ ಅಧ್ಯಕ್ಷತೆಯ ಆಯೋಗಗಳು ಪ್ರತ್ಯೇಕ ಸಮಗ್ರ ವರದಿ ನೀಡಿದ್ದವು. ರಾಮಸ್ವಾಮಿ ವರದಿ ಅತ್ಯುತ್ತಮ ಎನ್ನಲಾಗುತ್ತದೆ. ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಕೇಳಿದ್ದೇವೆ’ ಎಂದು ಉಪಸಮಿತಿ ಸದಸ್ಯರೂ ಆಗಿರುವ ಸಚಿವ ಎಸ್‌.ಸುರೇಶ್‌ ಕುಮಾರ್‌ ತಿಳಿಸಿದರು.

‘ಸರ್ಕಾರದ ಮೇಲಿನ ಹೊರೆ ತಗ್ಗಿಸುವುದರ ಜತೆಗೆ ವಿವಿಧ ಇಲಾಖೆಗಳಲ್ಲಿ ಕಡತಗಳ ವಿಲೇವಾರಿ ಹಂತಗಳನ್ನೂ ಕಡಿಮೆ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ. ಒಂದು ಆಸ್ಪತ್ರೆ ಆರಂಭಿಸಲು 17 ಪರವಾನಗಿ ತೆಗೆದುಕೊಳ್ಳಬೇಕು. ಇದು ಬಂಡವಾಳ ಹೂಡಿಕೆ ಸ್ನೇಹಿ ಹೆಜ್ಜೆ ಅಲ್ಲ. ಇಲಾಖೆಗಳಲ್ಲಿರುವ ಟಪ್ಪಾಲ್‌ ವ್ಯವಸ್ಥೆಗೆ ಕೊನೆ ಹಾಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ’ ಎಂದರು.

25 ಸಾವಿರ ಹುದ್ದೆ ಕಡಿತಕ್ಕೆ ಸಲಹೆ ನೀಡಿದ್ದ ಆಯೋಗ
ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಹಾರನಹಳ್ಳಿ ರಾಮಸ್ವಾಮಿ ಅಧ್ಯಕ್ಷತೆಯಲ್ಲಿ ಆಡಳಿತ ಸುಧಾರಣಾ ಆಯೋಗ ರಚಿಸಲಾಗಿತ್ತು. ಆಯೋಗ 25,000 ಹುದ್ದೆಗಳನ್ನು ವಿಆರ್‌ಎಸ್‌ ಮೂಲಕ ಕಡಿತಗೊಳಿಸಲು ಶಿಫಾರಸು ಮಾಡಿತ್ತು.

ಸರ್ಕಾರದ ಬೊಕ್ಕಸದ ದೃಷ್ಟಿಯಿಂದ ಆಡಳಿತ ಸಿಬ್ಬಂದಿ ಕಡಿಮೆ ಮಾಡಬೇಕು, ಕೆಲವು ನಿಗಮ,ಮಂಡಳಿ ಮತ್ತು ಸರ್ಕಾರದ ಉದ್ದಿಮೆಗಳನ್ನು ಕೈಬಿಡಬೇಕು. 10 ವರ್ಷಗಳಿಗೊಮ್ಮೆ ವೇತನ ಆಯೋಗ ರಚಿಸಬೇಕು ಎಂಬ ಶಿಫಾರಸು ಮಾಡಿದ್ದರು.

15 ವರ್ಷ ಸೇವಾವಧಿ ಪೂರ್ಣಗೊಳಿಸಿದ ನೌಕರರ ಸಾಮರ್ಥ್ಯ ಸಾಬೀತುಪಡಿಸುವ ಪರೀಕ್ಷೆ ನಡೆಸಬೇಕು ಎಂಬ ಶಿಫಾರಸು ಮಾಡಿದ್ದರು. ಆದರೆ, ಆಯೋಗದ ವರದಿ ಜಾರಿಗೆ ಬರಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.