ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಷನ್ ಬೇಗ್ ಅಪಸ್ವರಕ್ಕೆ ರಾಮಲಿಂಗಾರೆಡ್ಡಿ ಸಾಥ್‌: ಸಿದ್ದರಾಮಯ್ಯ ವಿರುದ್ಧ ಕಿಡಿ

Last Updated 4 ಜೂನ್ 2019, 20:20 IST
ಅಕ್ಷರ ಗಾತ್ರ

ಬೆಂಗಳೂರು: ‘ಅತೃಪ್ತ’ ಶಾಸಕರ ಬೇಡಿಕೆಯನ್ನು ಶಮನಗೊಳಿಸಿ ಸರ್ಕಾರ ಉಳಿಸಿಕೊಳ್ಳಲು ಹೆಣಗುತ್ತಿರುವ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟದ ನಾಯಕರ ವಿರುದ್ಧ ಆ ಪಕ್ಷಗಳ ಹಿರಿಯ ನಾಯಕರೇ ಚಾಟಿ ಬೀಸಲು ಆರಂಭಿಸಿದ್ದಾರೆ.

ಸಮ್ಮಿಶ್ರ ಸರ್ಕಾರ ಹಳಿ ತಪ್ಪಲು, ನಿರೀಕ್ಷಿತ ಆಡಳಿತ ನೀಡದೇ ಇರಲು ಹಾಗೂ ಕಾಂಗ್ರೆಸ್ ಪಕ್ಷ ಮೇಲಿಂದ ಮೇಲೆ ಸೋಲಿನ ಹಾದಿ ಹಿಡಿಯಲು ನಾಯಕರೇ ಕಾರಣ ಎಂದು ಏರುಧ್ವನಿಯಲ್ಲಿ ಹೇಳುತ್ತಿರುವ ಹಿರಿಯ ಶಾಸಕರು, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನೇ ಗುರಿ ಮಾಡಿಕೊಂಡು ಹರಿಹಾಯಲು ಆರಂಭಿಸಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಎಂಬುದು ಕೆಂಡದಂತೆ ನಿಗಿನಿಗಿಸತೊಡಗಿದೆ.

‘ಅತೃಪ್ತ’ರು ತೃಪ್ತರಾದಂತೆ ಕಾಣುತ್ತಿರುವ ಹೊತ್ತಿಗೆ ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ, ಆರ್. ರೋಷನ್‌ಬೇಗ್ ಅವರು ನಾಯಕರ ವಿರುದ್ಧ ಸಿಡಿದೆದ್ದಿದ್ದಾರೆ. ರಾಮಲಿಂಗಾರೆಡ್ಡಿ ಅವರು ಯಾರ ಹೆಸರನ್ನೂ ಹೇಳದೇ ಎಲ್ಲರನ್ನೂ ಟೀಕಿಸಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಹಿರಿಯರು ಪಕ್ಷದಲ್ಲಿ ಉಳಿಯುವುದು ಕಷ್ಟ ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ. ರಾಮಲಿಂಗಾ ರೆಡ್ಡಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಅವರ ಬೆಂಬಲಿಗರು ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅತ್ತ ಜೆಡಿಎಸ್‌ ರಾಜ್ಯ ಘಟಕಕ್ಕೆ ರಾಜೀನಾಮೆ ಕೊಟ್ಟಿರುವ ಹುಣಸೂರು ಶಾಸಕ ಎಚ್.ವಿಶ್ವನಾಥ್, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹಿರಿಯರ ನಿರ್ಲಕ್ಷ್ಯ’

‘ಕಾಂಗ್ರೆಸ್‌ನ ಕೆಲವು ಸಚಿವರು ಪಕ್ಷ ಸಂಘಟನೆ ಮಾಡದಿರುವುದು, ದೂರದೃಷ್ಟಿಯ ಕೊರತೆ, ಮೈತ್ರಿ ಸರ್ಕಾರದಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋಲು ಕಂಡಿದೆ. ಹಿರಿಯರು ನೀಡಿದ ಸಲಹೆಗಳನ್ನು ಪರಿಗಣಿಸಿಲ್ಲ. ಕೆಲವು ಸಚಿವರ ಕಾರ್ಯಕ್ಷಮತೆಯೂ ಚುನಾವಣೆ ಮೇಲೆ ಪರಿಣಾಮ ಬೀರಿದೆ’

‘ಸರಿಯಾದ ಜ್ಞಾನ ಇಲ್ಲದವರು, ಕಾಂಗ್ರೆಸ್ ಪಕ್ಷ, ಸರ್ಕಾರ, ಆಡಳಿತದ ಬಗ್ಗೆ ಏನೇನೂ ಅರಿವಿಲ್ಲದವರು, ಹೊಸಬರು, ವಲಸಿಗರಿಗೆ ಮಣೆ ಹಾಕಿದ್ದೇ ಪಕ್ಷದ ಈ ಸ್ಥಿತಿಗೆ ಕಾರಣವಾಗಿದೆ’

ಮುಂಚೂಣಿ ನಾಯಕರು, ಉಸ್ತುವಾರಿ ಹೊಂದಿದ್ದವರು ಪಕ್ಷದ ಆಂತರಿಕ ಸಮಸ್ಯೆ ನಿರ್ವಹಿಸುವಲ್ಲಿ ಎಡವಿದ್ದಾರೆ. ಚುನಾವಣೆ ಸಮಯದಲ್ಲಿ ಕಾರ್ಯಕರ್ತರು ಉತ್ಸಾಹ ಕಳೆದುಕೊಂಡಿದ್ದರು. ಸಚಿವರು, ಕಾರ್ಯಕರ್ತರ ಮಧ್ಯೆ ಉತ್ತಮ ಬಾಂಧವ್ಯ ಇಲ್ಲವಾಗಿದೆ. ಇದೆಲ್ಲವನ್ನೂ ಸರಿದೂಗಿಸಲುಸರ್ಕಾರದಲ್ಲಿ ಹಿರಿಯರಿಗೆ ಪ್ರಾತಿನಿಧ್ಯ ನೀಡಬೇಕು. ಹಿರಿಯರು ಒಂದೆಡೆ ಸೇರಿ ಸಮಾಲೋಚನೆ ನಡೆಸಬೇಕು. ಚುನಾವಣೆ ಸೋಲಿಗೆ ಕಾರಣರಾದ ಸಚಿವರಿಗೆ ಪಕ್ಷ ಸಂಘಟಿಸುವ ಜವಾಬ್ದಾರಿ ನೀಡಬೇಕು.

‘ಹಿರಿಯರಿಗೆ, ಹಿಂದೆ ಸಚಿವರಾಗಿದ್ದವರಿಗೆ ಸಚಿವ ಸ್ಥಾನ ಕೊಡುವುದಿಲ್ಲವೆಂದರು. ದೇಶಪಾಂಡೆ, ಜಾರ್ಜ್ ಅವರೆಲ್ಲ ಸಚಿವರಾಗಿರಲಿಲ್ಲವೇ?’

ಮೈತ್ರಿ ಸರ್ಕಾರ ಥೂ. . ಥೂ’

‘ಮೈತ್ರಿ ಸರ್ಕಾರವೇ ಥೂ.. ಥೂ.. ಈ ಸರ್ಕಾರದಲ್ಲಿ ಮಂತ್ರಿ ಆಗಲ್ಲ. ಮಂತ್ರಿ ಮಾಡುತ್ತೇವೆ ಎಂದು ಹೇಳಿ ಕಳುಹಿಸಿದ್ದರೂ ನಾನು ಒಪ್ಪಿಕೊಂಡಿಲ್ಲ. ಬೇಕಿದ್ದರೆ ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ ಅವರನ್ನು ಮಂತ್ರಿ ಮಾಡಲಿ’

‘ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸಿಪಾಯಿ. ನನಗೆ ಯಾವ ನೊಟೀಸ್? ಕೋಲಾರ, ತುಮಕೂರು, ಮಂಡ್ಯದಲ್ಲಿ ಪಕ್ಷ ಹಾಗೂ ಮೈತ್ರಿ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದವರಿಗೆ ನೋಟಿಸ್ ಕೊಡುವುದು ಬಿಟ್ಟು, ಸತ್ಯ ಶೋಧನಾ ಸಮಿತಿ ರಚಿಸಿದ್ದಾರೆ. ಇದೊಂದು ದೊಡ್ಡ ಜೋಕ್. ನೋಟಿಸ್‌ಗೆ ಉತ್ತರವನ್ನೂ ಕೊಡುವುದಿಲ್ಲ, ಪಕ್ಷ ಬಿಡುವುದೂ ಇಲ್ಲ’.

‘ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದವರಿಗೆ ಈಗ ಇಳಿದು ಬಾ.. ಇಳಿದು ಬಾ.. ಎಂದು ಹೇಳಬೇಕಿದೆ’ ಎಂದು ಸಿದ್ದರಾಮಯ್ಯ ಧಾಟಿಯಲ್ಲೇ ಅವರನ್ನು ಕುಟುಕಿದ ಬೇಗ್‌, ‘ಸಿದ್ದರಾಮಯ್ಯ ಅವರಿಗೆ ನನ್ನದೇ ನಡೆಯಬೇಕು, ನಾನು ಹೇಳಿದ್ದೇ ಆಗಬೇಕು ಅನ್ನೊ ಅಹಂ ಇದೆ. ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದಿರಿ, ವಿಧಾನಸಭೆ ಫಲಿತಾಂಶ ಏನಾಯಿತು’ ಎಂದು ವ್ಯಂಗ್ಯವಾಡಿದರು.

ದೇವೇಗೌಡರಿಗೆಖೆಡ್ಡಾ ತೋಡಿ ದ್ರೋಹ: ವಿಶ್ವನಾಥ್‌

ದೇವೇಗೌಡರನ್ನು ಮೈಸೂರಿನಲ್ಲಿ ಕಣಕ್ಕೆ ಇಳಿಸಿದ್ದರೆ ಗೆಲ್ಲುವ ಅವಕಾಶ ಇತ್ತು. ನಾಯಕರೊಬ್ಬರು ಅವರನ್ನು ತುಮಕೂರಿಗೆ ಕಳುಹಿಸುವ ತಂತ್ರ ಹೆಣೆದು ಖೆಡ್ಡಾಕ್ಕೆ ಹಾಕಿದರು. ರಾಜ್ಯಕ್ಕೆ, ರಾಷ್ಟ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ನಾಯಕರೊಬ್ಬರನ್ನು ನಂಬಿಸಿ ಮೋಸ ಮಾಡಲಾಗಿದೆ. ಇದಕ್ಕಿಂತ ಬೇರೇನಾದರೂ ಬೇಕಾ?’ಎಂದು ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸದೇ ಎಚ್‌.ವಿಶ್ವನಾಥ್ ತಮ್ಮ ಹಳೆಯ ಸ್ನೇಹಿತನ ವಿರುದ್ಧ ಕಿಡಿಕಾರಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜಕಾರಣದಲ್ಲಿ ನಂಬಿಕೆ ಬಹಳ ಮುಖ್ಯ. ಆದರೆ ನಂಬಿಕೆಗೇ ದ್ರೋಹ ಬಗೆಯಲಾಗಿದೆ. ಸಮನ್ವಯ ಸಮಿತಿಯಲ್ಲಿ ಜೆಡಿಎಸ್‌ ಅಧ್ಯಕ್ಷರನ್ನೂ ಸೇರಿಸಿಕೊಳ್ಳಬೇಕು ಎಂಬ ನನ್ನ ಒತ್ತಾಯಕ್ಕೆ ಬೆಲೆಯನ್ನೇ ಕೊಟ್ಟಿಲ್ಲ. ಸರ್ಕಾರ ರಚನೆಯಾಗಿ ಒಂದು ವರ್ಷವಾದರೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿಲ್ಲ’ ಎಂದು ಟೀಕಿಸಿದರು.

‘ಸಾಲಮನ್ನಾದಂತಹ ಬೃಹತ್‌ ಯೋಜನೆಗಳನ್ನು ಹೆಗಲ ಮೇಲೆ ಹೊತ್ತ ಮುಖ್ಯಮಂತ್ರಿಗಳು ಆಡಳಿತದ ಆಭದ್ರತೆಯ ಸಂಕಷ್ಟದಲ್ಲೂ ಜನರ ನಡುವೆ ನಮ್ಮ ಕುಮಾರಣ್ಣನೆಂಬ ಭಾವನಾತ್ಮಕ ಪ್ರೀತಿಯಲ್ಲಿದ್ದರು. ಒಂದೆರಡು ಇಲಾಖೆಗಳನ್ನು ಬಿಟ್ಟರೆ ನಿರೀಕ್ಷಿತ ಸಾಧನೆ ಸಾಧ್ಯವಾಗಿಲ್ಲ. ಕುಮಾರಸ್ವಾಮಿ ಅವರು ತಮ್ಮ ಅನಾರೋಗ್ಯ ಮತ್ತು ಮಿತ್ರರ ಕಿರುಕುಳದ ನಡುವೆಯೂಶಕ್ತಿ ಮೀರಿ ಸರ್ಕಾರ ನಡೆಸುತ್ತಿದ್ದಾರೆ’ ಎಂದರು.

‘ಪ್ರಭುತ್ವ ಮತ್ತು ಪಕ್ಷ ಜೋಡೆತ್ತಿನಂತೆ ಇರಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ. ಕರ್ನಾಟಕಕ್ಕೆ ಸದೃಢವಾದ ಜಾತ್ಯತೀತ ಪಕ್ಷದ ಅಗತ್ಯವಿದೆ. ಪ್ರಜೆಗಳ ಮನಸ್ಸನ್ನು ಅರಿತು ನಡೆದಾಗ ಅವರು ಕೂಡಾ ಪಕ್ಷವನ್ನು ಮುಂದಿನ ದಿನಗಳಲ್ಲಿ ಪುರಸ್ಕರಿಸುತ್ತಾರೆ. ಅವರ ಆಶೋತ್ತರಗಳನ್ನು ಅರಿತು ಹೆಜ್ಜೆ ಇಡುವ ಸರ್ಕಾರಗಳನ್ನು ಜನ ಬಯಸುತ್ತಾರೆ. ಇಂತಹ ಸರ್ಕಾರಗಳು ಉದಿಸಲು ಅನುಭವಿಗಳ ಮಾರ್ಗದರ್ಶನ ಅಗತ್ಯ. ಎಲ್ಲ ಸಂಪನ್ಮೂಲಗಳಿಗಿಂತ ಮಿಗಿಲು ಮಾನವ ಸಂಪನ್ಮೂಲ. ಪ್ರತಿಭಾವಂತ ವ್ಯಕ್ತಿಗಳಿಂದ ಪಕ್ಷಕ್ಕೆ ಮೆರುಗು ಬರುತ್ತದೆ. ಹಾಗಾಗಿ ಪಕ್ಷದಲ್ಲಿನ ಪ್ರತಿ ವ್ಯಕ್ತಿಯ ಅಗೋಚರ ವ್ಯಕ್ತಿತ್ವಕ್ಕೂ ಪುರಸ್ಕಾರ, ಸ್ವತಂತ್ರ ಬೇಕು’ ಎಂದು ಹೇಳುವ ಮೂಲಕ ಜೆಡಿಎಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT