ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಅನುದಾನದಲ್ಲೂ ರಾಜ್ಯಕ್ಕೆ ಅನ್ಯಾಯ: ವಿರೋಧ ಪಕ್ಷಗಳ ಆಕ್ರೋಶ

ಕೋವಿಡ್‌–19: ಕೇಂದ್ರ ಸರ್ಕಾರದ ಧೋರಣೆಗೆ ವಿರೋಧ ಪಕ್ಷಗಳ ಆಕ್ರೋಶ
Last Updated 12 ಮೇ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರ ಎರಡನೇ ಹಂತದ ಅನುದಾನ ಬಿಡುಗಡೆ ಮಾಡಿದ್ದು, ಕರ್ನಾಟಕಕ್ಕೆ ಬಿಡಿಗಾಸೂ ನೀಡದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಕೇಂದ್ರ ಸರ್ಕಾರ ಸೋಮವಾರ ರಾತ್ರಿ 14 ರಾಜ್ಯಗಳಿಗೆ ಒಟ್ಟು ₹6,195 ಕೋಟಿ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ ಹಣ ನೀಡದೇ ಇರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ವಿವಿಧ ಸಂಘಟನೆಗಳು ರಾಜಕೀಯ ಪಕ್ಷಗಳು ಕೇಂದ್ರದ ಧೋರಣೆಯನ್ನು ಕಟುವಾಗಿ ಟೀಕಿಸಿವೆ.

ಏಪ್ರಿಲ್‌ನಲ್ಲಿ ಮೊದಲ ಹಂತವಾಗಿ ಕೋವಿಡ್‌ ನಿಭಾಯಿಸಲು ಎಸ್‌ಡಿಆರ್‌ಎಂಎಫ್‌ ಅಡಿ ₹11,000 ಕೋಟಿ ಬಿಡುಗಡೆ ಮಾಡಿತ್ತು. ಅದರಲ್ಲಿ ಕರ್ನಾಟಕಕ್ಕೆ ಸಿಕ್ಕ ಮೊತ್ತ ಅತ್ಯಲ್ಪ. ಮಹಾರಾಷ್ಟ್ರಕ್ಕೆ ₹1611 ಕೋಟಿ, ರಾಜಸ್ಥಾನಕ್ಕೆ ₹704 ಕೋಟಿ, ಬಿಹಾರ ₹700 ಕೋಟಿ, ಗುಜರಾತ್‌ ₹600 ಕೋಟಿ, ಆಂಧ್ರ ₹559 ಕೋಟಿ, ತಮಿಳುನಾಡಿಗೆ ₹510 ಕೋಟಿ ಸಿಕ್ಕಿದ್ದರೆ, ರಾಜ್ಯದ ಪಾಲಿಗೆ ಸಿಕ್ಕಿದ್ದು ಕೇವಲ ₹396 ಕೋಟಿ.

ಎರಡನೇ ಹಂತದಲ್ಲಿ 14 ರಾಜ್ಯಗಳಿಗೆ ಬಿಡುಗಡೆ ಮಾಡಿರುವುದು ನಿಜ. ಇನ್ನು ಎರಡು ಮೂರು ದಿನಗಳಲ್ಲಿ ಕರ್ನಾಟಕ ಸೇರಿ ಉಳಿದ ರಾಜ್ಯಗಳಿಗೂ ಸಿಗುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ರಾಜ್ಯಕ್ಕೆ ಇದೇ ಮೊದಲ ಬಾರಿಯಲ್ಲ, ನಿರಂತರವಾಗಿ ಅನ್ಯಾಯವಾಗುತ್ತಲೇ ಬಂದಿದೆ. ಕಳೆದ ವರ್ಷದ ಮಹಾ ಪ್ರವಾಹದ ಸಂದರ್ಭದಲ್ಲಿ ಸುಮಾರು ₹35,000 ಕೋಟಿಗೂ ಅಧಿಕ ನಷ್ಟವಾಗಿದ್ದರೆ, ಪರಿಹಾರ ಎಂದು ಮಂಜೂರಾಗಿದ್ದು ₹1,869 ಕೋಟಿ. ರಾಜ್ಯಕ್ಕೆ ಸಿಕ್ಕಿದ್ದು, ₹1,652 ಕೋಟಿ ಮಾತ್ರ.

ಕರ್ನಾಟಕ ನೇರ ಮತ್ತು ಪರೋಕ್ಷ ತೆರಿಗೆ ಮೂಲಕ ಕೇಂದ್ರಕ್ಕೆ ₹1.61 ಲಕ್ಷ ಕೋಟಿ ನೀಡುತ್ತಿದ್ದರೂ, ಅನುದಾನ ಹಂಚಿಕೆಯಲ್ಲಿ ರಾಜ್ಯವನ್ನು ಕಡೆಗಣಿಸಲಾಗಿದೆ. ಜಿಎಸ್‌ಟಿಯಲ್ಲಿ ರಾಜ್ಯದ ಪಾಲಿನ ಹಣದಲ್ಲಿ ₹4,000 ಕೋಟಿ ಕಡಿತ ಆಗಿದೆ. 15 ನೇ ಹಣಕಾಸು ಆಯೋಗ ಶಿಫಾರಸಿನಲ್ಲಿ ರಾಜ್ಯಕ್ಕೆ ₹5,495 ಕೋಟಿ ನಿಗದಿ ಆಗಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಡೆ ಒಡ್ಡಿದರು ಎಂಬ ಆರೋಪ ಕೇಳಿ ಬಂದಿದೆ.

ಗೊಡ್ಡು ದನಗಳು: ಈ ಕರ್ನಾಟಕಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಅನುದಾನಗಳ ಬಗ್ಗೆ ದನಿ ಎತ್ತಬೇಕಿದ್ದ ಸಂಸದರು ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಕೂತಿದ್ದಾರೆ. ಬಿಜೆಪಿಯ 25 ಸಂಸದರು ಗೊಡ್ಡು ದನಗಳಂತಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್‌ ದಾಸರಿ ಟೀಕಿಸಿದ್ದಾರೆ.

ಕಾರ್ಮಿಕ ಕಾಯ್ದೆ ತಿದ್ದುಪಡಿಗೂ ಸುಗ್ರೀವಾಜ್ಞೆ

ಕಾರ್ಮಿಕರ ದುಡಿಮೆಯ ಅವಧಿಯನ್ನು 12 ಗಂಟೆಗೆ ಹೆಚ್ಚಿಸುವುದೂ ಸೇರಿದಂತೆ ಹಲವು ಮಾರ್ಪಾಡುಗಳನ್ನು ಒಳಗೊಂಡಿರುವ ಕಾರ್ಮಿಕ ಕಾಯ್ದೆಗೆ ತಿದ್ದುಪಡಿಗಾಗಿ ಸುಗ್ರೀವಾಜ್ಞೆ ತರಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಕಾರ್ಮಿಕರ ಹಿತಕಾಯುವ ಕಾಯ್ದೆಗೆ ತರಾತುರಿಯಲ್ಲಿ ತಿದ್ದುಪಡಿ ತರುವ ಅವಶ್ಯಕತೆ ಏನಿದೆ ಎಂದು ಕಾರ್ಮಿಕ ಸಂಘಟನೆಗಳು, ವಿರೋಧ ಪಕ್ಷದ ನಾಯಕರು ಪ್ರಶ್ನಿಸಿದ್ದಾರೆ.

‘ಉದ್ಯಮಿಗಳನ್ನು ಕಾಪಾಡಲು ಹೊಸ ಕಾನೂನು ತರುವ ಅಗತ್ಯವಿಲ್ಲ’ ಎಂದು ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ.

‘ಕಾರ್ಮಿಕರ ಕಾನೂನುಗಳನ್ನು ಅಮಾನತು ಮಾಡಿ ಕೈಗಾರಿಕೆಗಳ ಆಡಳಿತ ವರ್ಗಕ್ಕೆ ಸಹಾಯ ಮಾಡಲು ಸರ್ಕಾರ ಹೊರಟಿದೆ’ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.


‘ಕೇಂದ್ರದಿಂದ ಮಲತಾಯಿ ಧೋರಣೆ’

ಕೊರೋನಾ ಬಿಕ್ಕಟ್ಟಿನ ವೇಳೆ ನೆರವಾಗಲು 14 ರಾಜ್ಯಗಳಿಗೆ ಕೇಂದ್ರ ಸರ್ಕಾರ ₹ 6,195 ಕೋಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕಕ್ಕೆ ನಯಾಪೈಸೆ ಬಿಡುಗಡೆ ಮಾಡದೇ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಟೀಕಿಸಿದ್ದಾರೆ.

ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರು ರಾಜ್ಯದ ಪರವಾಗಿ ಕೆಲಸ ಮಾಡಲು ವಿಫಲರಾಗಿದ್ದಾರೆ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT