ಭಾನುವಾರ, ಫೆಬ್ರವರಿ 28, 2021
23 °C

ಮೋಜಿಗಾಗಿ ಮಸಾಜ್; ಶೋಕಿಗಾಗಿ ರೇಬಾನ್ ಕನ್ನಡಕ!

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೋಜಿಗಾಗಿ ಮಸಾಜ್, ಮಣ್ಣಿನ ಥೆರಪಿ ಮಾಡಿಸಿಕೊಂಡು, ಶೋಕಿಗಾಗಿ ರೇಬಾನ್ ಕನ್ನಡಕ ಖರೀದಿಸಿದ್ದ ಶಾಸಕರು ‘ವೈದ್ಯಕೀಯ ವೆಚ್ಚ’ದಡಿ ಲಕ್ಷಾಂತರ ಮೊತ್ತವನ್ನು ಸರ್ಕಾರದ ಬೊಕ್ಕಸದಿಂದ ಮರುಪಾವತಿಸಿ ಕೊಂಡಿದ್ದಾರೆ!

ಶಾಸಕರು ಎಲ್ಲಿ ಬೇಕಾದರೂ ವೈದ್ಯಕೀಯ ಚಿಕಿತ್ಸೆ ಪಡೆಯಲು, ವೆಚ್ಚ ಭರಿಸಿಕೊಳ್ಳಲು ನಿಯಮಗಳಲ್ಲಿ ಅವಕಾಶವಿದೆ.

ಆದರೆ, ಕೆಲವರು ಈ ‘ನಿಯಮ’ದ ಲಾಭ ಪಡೆದುಕೊಂಡು ಆಸ್ಪತ್ರೆಗಳ ಪ್ಲಾಟಿನಂ, ರಾಯಲ್ ಸೂಟ್ ಸೇರಿದಂತೆ ಹೈಟೆಕ್ ಕೊಠಡಿಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹಲ್ಲು ಕಟ್ಟಿಸಲೂ ಭಾರಿ ಮೊತ್ತ ಕ್ಲೈಮ್ ಮಾಡಿಕೊಂಡಿದ್ದಾರೆ.

ಐದೂವರೆ ವರ್ಷಗಳ (2013ರ ಏಪ್ರಿಲ್‌ನಿಂದ–2018ರ ಅಕ್ಟೋಬರ್‌) ಅವಧಿಯಲ್ಲಿ ವಿಧಾನಸಭೆ ಸದಸ್ಯರ ವೈದ್ಯಕೀಯ ವೆಚ್ಚಕ್ಕೆ ಬರೋಬ್ಬರಿ ₹6.11 ಕೋಟಿ ಭರಿಸಲಾಗಿದೆ. ಈ ಪೈಕಿ, ಜೆಡಿಎಸ್‌ ಶಾಸಕರಾಗಿದ್ದ ಎಸ್. ಚಿಕ್ಕಮಾದು (₹ 73.36 ಲಕ್ಷ) ಮತ್ತು ಎಚ್‌.ಎಸ್‌. ಪ್ರಕಾಶ್‌ (₹ 37.89ಲಕ್ಷ) ಅತಿ ಹೆಚ್ಚು ಮೊತ್ತ ಕ್ಲೈಮ್‌ ಮಾಡಿಕೊಂಡಿದ್ದಾರೆ. ಆದರೆ, ಈ ಇಬ್ಬರೂ ಈಗ ನೆನಪು ಮಾತ್ರ.

‘ಶಾಸಕರ ವೈದ್ಯಕೀಯ ವೆಚ್ಚ ಭರಿಸಲು ಕರ್ನಾಟಕ ವಿಧಾನಮಂಡಲ (ಸದಸ್ಯರ ವೈದ್ಯಕೀಯ ಹಾಜರಾತಿ) ನಿಯಮ 1968 ಇದೆ. ಆದರೆ, ಕನ್ನಡಕ ಖರೀದಿ, ಮಸಾಜ್‌ ಮಾಡಿಸಿಕೊಂಡು ಬಿಲ್‌ ಮರುಪಾವತಿಸಿಕೊಳ್ಳಲು ಅವಕಾಶ ಇಲ್ಲ’ ಎಂದು ವಿಧಾನಸಭೆ ಸಚಿವಾಲಯದ ಲೆಕ್ಕಪತ್ರ ವಿಭಾಗದ ಅಧೀನ ಕಾರ್ಯದರ್ಶಿ ಮೊಹಮ್ಮದ್‌ ಗೌಸ್‌ ಸ್ಪಷ್ಟಪಡಿಸಿದರು.

‘ವೈದ್ಯಕೀಯ ಬಿಲ್‌ಗಳ ನೈಜತೆ ಮತ್ತು ವಿಮೆ ಕ್ಲೈಮ್‌ ಆಗಿದೆಯೇ ಎಂದು ಪರಿಶೀಲಿಸುವ ವ್ಯವಸ್ಥೆಯನ್ನು 2016ರಿಂದ ಅಳವಡಿಸಿಕೊಂಡಿದ್ದೇವೆ. ಶಾಸಕರ ಭವನದ ಆಡಳಿತ ವೈದ್ಯಾಧಿಕಾರಿ ಬಿಲ್‌ಗಳನ್ನು ದೃಢೀಕರಿಸುತ್ತಾರೆ. ಆಯುರ್ವೇದ ಚಿಕಿತ್ಸೆ ಪಡೆದಿದ್ದರೆ ಅಂಥ ಬಿಲ್‌ಗಳನ್ನು ಆಯುಷ್‌ ಇಲಾಖೆಯ ಆಯುಕ್ತರು ಪರಿಶೀಲಿಸುತ್ತಾರೆ. ಅನೇಕ ಬಿಲ್‌ಗಳಲ್ಲಿ ಕ್ಲೈಮ್‌ ಮಾಡಿದ ಮೊತ್ತ ಕಡಿತಗೊಳಿಸಿದ್ದೇವೆ. ಬಿಲ್‌ಗಳನ್ನು ತಡೆಹಿಡಿದ ಪ್ರಕರ
ಣಗಳೂ ಇವೆ’ ಎಂದು ವಿವರಿಸಿದರು.

ಕಿಮ್ಮತ್ತಿಲ್ಲ: ಸರ್ಕಾರಿ ಆಸ್ಪತ್ರೆಯಲ್ಲಿಯೇ ಜನಪ್ರತಿನಿಧಿಗಳೂ ಚಿಕಿತ್ಸೆ ಪಡೆಯಬೇಕೆಂದು ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದ ‘ಆರೋಗ್ಯ ಕರ್ನಾಟಕ’ ಯೋಜನೆಗೆ ಯಾವುದೇ ಕಿಮ್ಮತ್ತು ಸಿಕ್ಕಿಲ್ಲ!

ರಮೇಶ್‌ ಕುಮಾರ್‌ ಆರೋಗ್ಯ ಸಚಿವರಾಗಿದ್ದಾಗ ಎಲ್ಲ ಆರೋಗ್ಯ ಯೋಜನೆಗಳನ್ನು ಒಂದೇ ಸೂರಿನಡಿ ತಂದು ‘ಆರೋಗ್ಯ ಕರ್ನಾಟಕ’ಕ್ಕೆ ರೂಪು ನೀಡಿದ್ದರು. ಈ ಯೋಜನೆ ಮಾ.1ರಿಂದ ಜಾರಿಗೆ ಬಂದಿದೆ.

‘ಶಾಸಕರು, ಮಾಜಿ ಶಾಸಕರು ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ವೆಚ್ಚ ಮರುಪಾವತಿ ಮಾಡುವುದಿಲ್ಲ’ ಎಂದು ಸಭಾಧ್ಯಕ್ಷರ ಸೂಚನೆಯಂತೆ ಇದೇ ಜುಲೈ 13ರಂದು ವಿಧಾನಸಭೆ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.

‘ಮುಖ್ಯಮಂತ್ರಿ, ಸಚಿವರು, ಶಾಸಕರು ಒಳಗೊಂಡು ಸಾರ್ವಜನಿಕ ಸೇವೆಯಲ್ಲಿರುವ ಎಲ್ಲರೂ ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆಗೆ ಮೊದಲ ಆದ್ಯತೆ ನೀಡಬೇಕು. ಆದರೆ, ಅಪಘಾತ, ಹೃದಯಾಘಾತದಂಥ ತುರ್ತು ಸಂದರ್ಭಗಳಲ್ಲಿ ವಿನಾಯಿತಿ ಇದೆ. ಸರ್ಕಾರಿ ಆಸ್ಪತ್ರೆಯಲ್ಲಿ ಅವಶ್ಯಕ ಚಿಕಿತ್ಸೆ ಲಭ್ಯವಿಲ್ಲ ಎಂದು ಸರ್ಕಾರಿ ಆಸ್ಪತ್ರೆ ವೈದ್ಯರು ಸೂಚಿಸಿದರೆ ಮಾತ್ರ ಅಧಿಕೃತ ಶಿಫಾರಸು ಪತ್ರದೊಂದಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು’ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

‘ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬೇಕೆಂಬ ನಿಯಮ ಇಲ್ಲ’ ಎನ್ನುವುದು ಶಾಸಕರ ವಾದ. ಈ ಸುತ್ತೋಲೆಗೆ ಆಕ್ಷೇಪ ವ್ಯಕ್ತಪಡಿಸಿರುವ ಶಾಸಕರು, ತಮಗೆ ಈ ಯೋಜನೆ ಅನ್ವಯ ಆಗುವುದಿಲ್ಲ ಎಂದು ಖಾಸಗಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದುಕೊಂಡು ವೆಚ್ಚ ಮರು ಪಾವತಿ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವಾಲಯದ ಮೂಲಗಳು ಹೇಳಿವೆ.

******

ವೈದ್ಯಕೀಯ ವೆಚ್ಚ ಮರುಪಾವತಿಸಿಕೊಳ್ಳುವ ನಿಯಮ ದುರ್ಬಳಕೆ ಮಾಡಿಕೊಂಡು ಶಾಸಕರು ಸರ್ಕಾರದ ಬೊಕ್ಕಸ ಲೂಟಿ ಹೊಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಅಗತ್ಯ

- ಬಿ.ಎಸ್. ಗೌಡ, ಸಾಮಾಜಿಕ ಕಾರ್ಯಕರ್ತ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು