ಶನಿವಾರ, ಮೇ 21, 2022
23 °C

ಒಳನೋಟ| ಭೂ ಸೇನೆ ಅಲ್ಲ; 4ಜಿ ನಿಗಮ!

ಮಂಜುನಾಥ ಹೆಬ್ಬಾರ್‌ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಈ ನಿಗಮಕ್ಕೆ ಇ–ಪ್ರೊಕ್ಯೂರ್‌ಮೆಂಟ್‌ ನಿಯಮಾವಳಿಗಳು ಅನ್ವಯ ಆಗುವುದಿಲ್ಲ. ಕಾಮಗಾರಿಗಳನ್ನು ನಡೆಸಲು ಟೆಂಡರ್‌ ಕರೆಯುವ ಅಗತ್ಯ ಸಹ ಅದಕ್ಕಿಲ್ಲ. 4ಜಿ ವಿನಾಯಿತಿ ಎಂಬ ‘ಒಳ’ಮಾರ್ಗ ಇರುವ ಕಾರಣ ಕಾಮಗಾರಿಗಳ ‘ಅಪಾಯಕಾರಿ ವೇಗ’ಕ್ಕೆ ಯಾವುದೇ ತಡೆಯೂ ಇಲ್ಲ. ಹೀಗಾಗಿ ‘ಕಳಪೆ ಕೆಲಸ ನಡೆಸುತ್ತದೆ’ ಎಂದು ಟೀಕಾಪ್ರಹಾರ ಮಾಡುವವರೇ ಈ ನಿಗಮಕ್ಕೆ ಕಾಮಗಾರಿಯನ್ನು ವಹಿಸಲು ದುಂಬಾಲು ಬೀಳುವುದನ್ನು ಬಿಡುವುದಿಲ್ಲ!

ಇದು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ಪ್ರವರ. ನಿಗಮಕ್ಕೆ ‘4ಜಿ ನಿಗಮ’ ಎಂಬ ಅಡ್ಡ ಹೆಸರೂ ಇದೆ. ದುಬಾರಿ ವೆಚ್ಚಕ್ಕೆ ಕಡಿವಾಣ ಹಾಕುವುದು ಮತ್ತು ಗುತ್ತಿಗೆದಾರರು ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ನಿಯಂತ್ರಿಸುವ ಉದ್ದೇಶದಿಂದ 1971ರಲ್ಲಿ ಕರ್ನಾಟಕ ಭೂಸೇನಾ ನಿಗಮವನ್ನು ಸ್ಥಾಪಿಸಲಾಯಿತು. 2008ರಲ್ಲಿ ಅದರ ಹೆಸರನ್ನು ಕೆಆರ್‌ಐಡಿಎಲ್‌ ಎಂದು ಬದಲಿಸಲಾಯಿತು. ಕಳೆದ 12 ವರ್ಷಗಳಲ್ಲಿ ಅಕ್ರಮದ ಕಾರಣಗಳಿಗೇ ನಿಗಮ ಸುದ್ದಿಯಾಗಿದ್ದು ಹೆಚ್ಚು.

ನಿಗಮವು ಕಸ ಎತ್ತುವುದರಿಂದ, ಮೋರಿ ಮುಚ್ಚುವುದರಿಂದ ಹಿಡಿದು ಕುಡಿಯುವ ನೀರು ಘಟಕಗಳ ಸ್ಥಾ‍ಪನೆ, ರಸ್ತೆಗಳ ಹಾಗೂ ಕಟ್ಟಡಗಳ ನಿರ್ಮಾಣ ಸೇರಿದಂತೆ ಎಲ್ಲ ಬಗೆಯ ಕಾಮಗಾರಿಗಳನ್ನು ನಡೆಸುತ್ತದೆ. ಹಾಗಂತ ಎಲ್ಲ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಸಂಸ್ಥೆಯಿದು ಎಂದು ಭಾವಿಸಿದರೆ ಅದು ತಪ್ಪು. ಸಾವಿರಾರು ಕೋಟಿ ಮೊತ್ತದ ಕಾಮಗಾರಿ ನಡೆಸುವಷ್ಟು ತಜ್ಞ ಸಿಬ್ಬಂದಿ ನಿಗಮದ ಬಳಿ ಇಲ್ಲವೇ ಇಲ್ಲ. ತಾನು ಗುತ್ತಿಗೆ ಪಡೆದ ಕಾಮಗಾರಿಗಳನ್ನು ಅದು ಬೇಕಾದವರಿಗೆ ಉಪಗುತ್ತಿಗೆ ನೀಡುತ್ತದೆ.

ನಿಗಮಕ್ಕೆ ಪ್ರತಿವರ್ಷ ಸರಿಸುಮಾರು ₹4 ಸಾವಿರ ಕೋಟಿ ಯೋಜನಾ ಗಾತ್ರದ ಕಾಮಗಾರಿ ಹಂಚಿಕೆಯಾಗುತ್ತಿದೆ. ಅಭಿವೃದ್ಧಿ ಕೆಲಸಗಳಿಗೆ ಹಂಚಿಕೆಯಾಗಿದ್ದ ಕೋಟ್ಯಂತರ ರೂಪಾಯಿ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡುವಷ್ಟು ಪ್ರಚಂಡರು ನಿಗಮದ ಅಧಿಕಾರಿಗಳು.

4ಜಿ ಮಾಯೆ: ಆಡಳಿತ ನಡೆಸುವವರಿಗೆ ತುರ್ತು ಕಾಮಗಾರಿ ನಡೆಸಬೇಕು ಎಂದಾಗ ನೆನಪಾಗುವುದು ಕೆಆರ್‌ಐಡಿಎಲ್‌. ತುರ್ತು ಕಾಮಗಾರಿಗಳಿಗೆ ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಟಿಪಿ) ಕಾಯ್ದೆ’ಯ 4ಜಿ ನಿಯಮದ ಪ್ರಕಾರ ಟೆಂಡರ್‌ ಪ್ರಕ್ರಿಯೆಯಿಂದ ವಿನಾಯಿತಿ ಇದೆ. ಅಧಿಕಾರಸ್ಥರ ಪಾಲಿಗೆ ಈ ವಿನಾಯಿತಿಯೇ ಅಸ್ತ್ರವಾಗಿ ಸಿಕ್ಕಿದೆ. 4ಜಿ ವಿನಾಯಿತಿ ಹೆಸರಿನಲ್ಲಿ ನಿಗಮಕ್ಕೆ ಕಾಮಗಾರಿಗಳನ್ನು ವಹಿಸಲಾಗುತ್ತಿದೆ. ಕೆಆರ್‌ಐಡಿಎಲ್‌ಗೆ ವಹಿಸುವ ಅನೇಕ ಕಾಮಗಾರಿಗಳಲ್ಲಿ ದುರ್ಬೀನು ಹಾಕಿ ಹುಡುಕಿದರೂ ಯಾವುದೇ ‘ತುರ್ತು’ ಕಾಣಸಿಗದು.

ಕಾಮಗಾರಿಯನ್ನು ನಿಗಮಕ್ಕೆ ವಹಿಸುವುದಕ್ಕೆ ಹೆಚ್ಚಿನ ತುಡಿತ ಇರುವುದು ಶಾಸಕರಿಗೆ ಹಾಗೂ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ. ನೆಪಮಾತ್ರಕ್ಕೆ ನಿಗಮದ ಮೂಲಕ ಕೆಲಸ ನಡೆಸುವುದಾಗಿ ತೋರಿಸಿ, ತಮಗೆ ಬೇಕಾಗಿರುವ ಗುತ್ತಿಗೆದಾರರ ಮೂಲಕ ಅದನ್ನು ಅನುಷ್ಠಾನಗೊಳಿಸುವ ಜನಪ್ರತಿನಿಧಿಗಳ ಹುನ್ನಾರ ಗುಟ್ಟಾಗಿಯೇನೂ ಉಳಿದಿಲ್ಲ.

ಗುತ್ತಿಗೆದಾರರಿಗೆ ಲಾಭ ದುರ್ಲಭ: ‘ಕೆಆರ್‌ಐಡಿಎಲ್‌ ಅಧಿಕೃತವಾಗಿ ಗುತ್ತಿಗೆ ಮೊತ್ತದಲ್ಲಿ ಶೇ 15ರಷ್ಟು ಮೊತ್ತವನ್ನು ಕಡಿತ ಮಾಡುತ್ತದೆ. ಇನ್ನು ನಾವು ನಿಗಮದ ಎಂಜಿನಿಯರ್‌ಗಳ ಜೊತೆಗೆ ಸ್ಥಳೀಯ ಸಂಸ್ಥೆಗಳ ಎಂಜಿನಿಯರ್‌ಗಳಿಗೂ ಪಾಲು ನೀಡಬೇಕು. ಜನಪ್ರತಿನಿಧಿಗಳನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ ನಮಗೆ ಕಾಮಗಾರಿಯ ಗುತ್ತಿಗೆ ಸಿಗುವುದಿಲ್ಲ. ಇದೆಲ್ಲವನ್ನು ಸಂಭಾಳಿಸುವಷ್ಟರಲ್ಲಿ ಗುತ್ತಿಗೆ ಮೊತ್ತದ ಶೇ 46ರಷ್ಟು ಕೈಜಾರಿರುತ್ತದೆ. ಇನ್ನುಳಿದ ಹಣದಲ್ಲಿ  ಗುಣಮಟ್ಟದ ಕಾಮಗಾರಿ ನಿರ್ವಹಿಸಲು ಸಾಧ್ಯವೇ? ಬಂಡವಾಳ ಹೂಡುವ ನಮಗೂ ಲಾಭ ಬೇಡವೇ’ ಎಂದು ಗುತ್ತಿಗೆದಾರರೊಬ್ಬರು ಪ್ರಶ್ನಿಸಿದರು. 

ನಿಯಮಾವಳಿ ಪ್ರಕಾರ, ಕೆಆರ್‌ಐಡಿಎಲ್‌ ಕಾಲುವೆ ದುರಸ್ತಿ ಹಾಗೂ ಕಟ್ಟಡ ನಿರ್ಮಾಣದಂತಹ ಕಾಮಗಾರಿಗಳನ್ನು ಮಾತ್ರ ನಿರ್ವಹಿಸಬಹುದು. ಉದ್ಯಾನ ಅಭಿವೃದ್ಧಿ, ಪಾದಚಾರಿ ಮಾರ್ಗ ನಿರ್ಮಾಣ, ರಸ್ತೆ ಡಾಂಬರೀಕರಣ ಕಾಮಗಾರಿಗಳನ್ನು ನಿಗಮಕ್ಕೆ ವಹಿಸುವಂತಿಲ್ಲ. ಆದರೆ, ನಿಯಮಾವಳಿ ಉಲ್ಲಂಘಿಸಿ ಎಲ್ಲ ಕಾಮಗಾರಿಗಳನ್ನೂ ಕೆಆರ್‌ಐಡಿಎಲ್‌ಗೆ ವಹಿಸಲಾಗುತ್ತಿದೆ.

ಕೆಆರ್‌ಡಿಐಎಲ್ ಮೂಲಕ ನಡೆಸುವ ಕೆಲಸಗಳ ಗುತ್ತಿಗೆ ಹಣ ಪಾವತಿಗೆ ಜ್ಯೇಷ್ಠತೆ ಅನ್ವಯವಾಗದು. 14ನೇ ಹಣಕಾಸು ಆಯೋಗ ಹಾಗೂ ಎಸ್‌ಎಫ್‌ಸಿ ಅನುದಾನಗಳ ಕಾಮಗಾರಿಗಳು ಪೂರ್ಣಗೊಂಡ ಎರಡು ತಿಂಗಳಲ್ಲೇ ಬಿಲ್‌ ಪಾವತಿಯಾಗುತ್ತದೆ. ಇದರ ಲಾಭ ಪಡೆಯಲು ಕೆಲವು ಜನಪ್ರತಿನಿಧಿಗಳು ಬೇನಾಮಿ ಹೆಸರಿನಲ್ಲೇ ತಾವೇ ಕಾಮಗಾರಿಯ ಗುತ್ತಿಗೆ ಪಡೆಯುತ್ತಾರೆ ಎಂಬ ಮಾತುಗಳೂ ‌‌ಜೋರಾಗಿಯೇ ಕೇಳಿ ಬರುತ್ತವೆ.

ಸೇವಾ ಶುಲ್ಕದ ಹೊರೆ

ಯಾವುದೇ ಕಾಮಗಾರಿಗೆ ಟೆಂಡರ್‌ ಕರೆದರೆ ಗುತ್ತಿಗೆದಾರರು ದರಪಟ್ಟಿಗಿಂತ (ಎಸ್‌.ಆರ್‌) ಶೇ 10ರಿಂದ ಶೇ 15ರಷ್ಟು ಕಡಿಮೆ ದರವನ್ನು ನಮೂದು ಮಾಡುತ್ತಾರೆ. ಸ್ಪರ್ಧೆ ಹೆಚ್ಚಿದ್ದರೆ ಈ ದರ ಇನ್ನೂ ಕಡಿತಗೊಳ್ಳಲಿದೆ. ಆದರೆ, ಕೆಆರ್‌ಐಡಿಎಲ್‌ಗೆ ಕಾಮಗಾರಿ ವಹಿಸಿಕೊಟ್ಟಾಗ ನಿಗದಿತ ದರವನ್ನೇ ನೀಡಬೇಕು. ಅಲ್ಲದೆ, ಸೇವಾ ಶುಲ್ಕ ಪಾವತಿಸಬೇಕು.

ಜಿಎಸ್‌ಟಿ ಜಾರಿಗೆ ಮುನ್ನ ನಿಗಮವು ಶೇ 11ರಷ್ಟು ಸೇವಾ ಶುಲ್ಕವನ್ನು ಪಡೆಯುತ್ತಿತ್ತು. ಈಗ ಶೇ 3ರಷ್ಟು ಸೇವಾ ಶುಲ್ಕ ಹಾಗೂ ಶೇ 12ರಷ್ಟು ಜಿಎಸ್‌ಟಿ ಸೇರಿಸಿ ಒಟ್ಟು ಶೇ 15ರಷ್ಟು ಮೊತ್ತವನ್ನು ನಿಗಮ ಅಧಿಕೃತವಾಗಿ ಕಡಿತ ಮಾಡುತ್ತದೆ. ಯೋಜನೆಗಳ ಆರ್ಥಿಕ ಹೊರೆ ಇದರಿಂದ ಮತ್ತಷ್ಟು ಹೆಚ್ಚುತ್ತಿದೆ.

ಕೆಆರ್‌ಡಿಎಲ್‌ಗೆ ಏನೆಲ್ಲ ಕಾಮಗಾರಿ?

ಸುವರ್ಣ ಗ್ರಾಮ ಯೋಜನೆ; ₹650 ಕೋಟಿ

ಸಮಾಜ ಕಲ್ಯಾಣ ಇಲಾಖೆ ಕಾಮಗಾರಿ; ₹400 ಕೋಟಿ

ಪ‍ಶು ಸಂಗೋಪನೆ: ₹101 ಕೋಟಿ

ಗ್ರಾಮೀಣಾಭಿವೃದ್ಧಿ ಕಾಮಗಾರಿಗಳು; ₹131 ಕೋಟಿ

ನೀರು ಶುದ್ಧೀಕರಣ ಘಟಕಗಳು; ₹319 ಕೋಟಿ

ಶಿಕ್ಷಣ ಇಲಾಖೆ; ₹650 ಕೋಟಿ

ರಾಜ್ಯ ‍ಪಾನೀಯ ನಿಗಮ; ₹178 ಕೋಟಿ

ಬಿಬಿಎಂಪಿ ಕಾಮಗಾರಿ; ₹1064 ಕೋಟಿ

ಇತರ ಕಾಮಗಾರಿಗಳು; ₹923 ಕೋಟಿ

*ಮಾಹಿತಿ: ನಿಗಮದ ವಾರ್ಷಿಕ ವರದಿ (2018–19)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು