ಶನಿವಾರ, ಮೇ 21, 2022
23 °C

ನಿಗಮದ ಬೆನ್ನಿಗಂಟಿದ ಅಕ್ರಮಗಳ ಕಳಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆಆರ್‌ಐಡಿಎಲ್‌ನಲ್ಲಿ ಖರ್ಚು ಮಾಡಿರುವ ₹3,008 ಕೋಟಿಯ ಲೆಕ್ಕಪತ್ರ ಹೊಂದಾಣಿಕೆ ಆಗುತ್ತಿಲ್ಲ. ಒಂದೊಂದು ಯೋಜನೆಗೂ ಒಂದೊಂದೇ ಬ್ಯಾಂಕ್ ಖಾತೆ ಇರಬೇಕು ಎಂಬುದು ನಿಯಮ. ಆದರೆ, ಇಲ್ಲಿ ಪ್ರತಿ ಯೋಜನೆಗೂ ನೂರಾರು ಪ್ರತ್ಯೇಕ ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದೆ. ಕೆಆರ್‌ಐಡಿಎಲ್‌ನ ₹3,690 ಕೋಟಿಯನ್ನು ಕಾಮಗಾರಿಗಳಿಗಾಗಿ ಎಂಜಿನಿಯರ್‌ಗಳಿಗೆ ಮುಂಗಡವಾಗಿ ಕೊಡಲಾಗಿದೆ. ಆದರೆ, ಅವರು ಅದರ ಲೆಕ್ಕ ನೀಡಿಲ್ಲ.

–ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯ ವಿವಿಧ ಯೋಜನೆಗಳ ಸಲುವಾಗಿ ಬಿಡುಗಡೆಯಾಗಿದ್ದ ₹1,335 ಕೋಟಿ ಹಣವನ್ನು ಸದ್ಬಳಕೆ ಮಾಡದೆ ವಿವಿಧ ಬ್ಯಾಂಕ್‌ ಖಾತೆಗಳಲ್ಲಿ ಅಕ್ರಮವಾಗಿ ಠೇವಣಿ ಇಟ್ಟಿದ್ದನ್ನು ಅಧ್ಯಯನ ನಡೆಸಲು ಐಎಫ್‌ಎಸ್‌ ಅಧಿಕಾರಿ ‍ಪುನಟಿ ಶ್ರೀಧರ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ಕೆಆರ್‌ಐಡಿಎಲ್‌ನ ಮತ್ತೊಂದು ಮುಖವನ್ನು ಅನಾವರಣ ಮಾಡಿದ ಬಗೆಯಿದು.

ಕೆಆರ್‌ಐಡಿಎಲ್‌ ತನ್ನ ಹಣವನ್ನು 2013ರ ಜುಲೈವರೆಗೆ ಮ್ಯುಚುವಲ್‌ ಫಂಡ್‌ನಲ್ಲಿ ತೊಡಗಿಸಿದ್ದು ಆ ಬಗ್ಗೆಯೂ ತನಿಖೆ ಆಗಬೇಕು. ಬ್ಯಾಂಕ್‌ ಖಾತೆಗಳಲ್ಲಿನ ಹಣವನ್ನು ಮನಸೋಇಚ್ಛೆ ನಿರ್ವಹಿಸಲಾಗಿದೆ. ಬೃಹತ್‌ ಮೊತ್ತ ಗಳನ್ನು ಮುಖ್ಯ ವಾಹಿನಿಗಳಲ್ಲಿ ತರದೇ ಇರುವುದು, ಯೋಜನೆಗೆ ಬಿಡುಗಡೆಯಾದ ಅನುದಾನವನ್ನು ಬಿಡುಗಡೆಯಾದ ವರ್ಷ ಅಥವಾ ನಿಗದಿತ ಸಮಯದೊಳಗೆ ಖರ್ಚು ಮಾಡದಿರುವುದು ಬೆಳಕಿಗೆ ಬಂದಿದೆ. ನಗದು ಪುಸ್ತಕ, ಅನುದಾನ ಪುಸ್ತಕ, ಬ್ಯಾಂಕ್‌ ಪಾಸ್‌ ಪುಸ್ತಕ ಮತ್ತು ಮಾದರಿ ಸಹಿ ಕಡತಗಳನ್ನು ಸಮರ್ಪಕವಾಗಿ ಇಟ್ಟಿಲ್ಲ ಎಂದೂ ಸಮಿತಿ ಹೇಳಿತ್ತು.  

ನಕಲಿ ಖಾತೆಗೆ ₹55 ಕೋಟಿ: ಕೆಆರ್‌ಐಡಿಎಲ್‌ನ ₹55 ಕೋಟಿಯನ್ನು ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಿ ವಂಚಿಸಿರುವ ಪ್ರಕರಣ ಮಂಗಳೂರಿನ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನಲ್ಲಿ ಎರಡು ವರ್ಷಗಳ ಹಿಂದೆ ಬೆಳಕಿಗೆ ಬಂದಿತ್ತು. ಕೆಆರ್‌ಐಡಿಎಲ್‌ ಎರಡು ಖಾತೆಗಳಲ್ಲಿ ನಿಶ್ಚಿತ ಠೇವಣಿ ಇರಿಸಿದ್ದ ₹ 55 ಕೋಟಿಯನ್ನು ಅಕ್ರಮವಾಗಿ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ ವಂಚಿಸಲಾಗಿತ್ತು. ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು.

ರಾಯಚೂರು ಜಿಲ್ಲೆಯಲ್ಲಿ 2012ರಿಂದ 2015ರವರೆಗೆ ಕಾರ್ಯಗತಗೊಳಿಸಿದ ಕಾಮಗಾರಿಗಳಲ್ಲಿ 56.59 ಕೋಟಿ ಅಕ್ರಮ ನಡೆದಿತ್ತು. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಬಿಬಿಎಂಪಿಯಲ್ಲಿ ₹ 9 ಕೋಟಿ ಮೊತ್ತದ ನಕಲಿ ಬಿಲ್‌ ಹಗರಣ ವರದಿಯಾಗಿತ್ತು. ಕೆಲ ಗುತ್ತಿಗೆದಾರರು, ಕೆಆರ್‌ಐಡಿಎಲ್ ಹಾಗೂ ಬಿಬಿಎಂಪಿ ಅಧಿಕಾರಿಗಳು ಈ ಹಗರಣದಲ್ಲಿ ಭಾಗಿಯಾದ ದೂರುಗಳು ಇವೆ. ಇದರ ತನಿಖೆಯೂ ನಡೆಯುತ್ತಿದೆ.

₹ 400 ಕೋಟಿ ಕಾಮಗಾರಿ ವಾಪಸ್: ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ಯಾವುದೇ ಕಾಮಗಾರಿಗಳನ್ನು ನೀಡದಂತೆ ಸಮಾಜ ಕಲ್ಯಾಣ ಸಚಿವರಾಗಿದ್ದ ಪ್ರಿಯಾಂಕ್‌ ಖರ್ಗೆ ನಿರ್ದೇಶನ ನೀಡಿದ್ದರು.

ಇಲಾಖೆಯು ವಾರ್ಷಿಕ ₹400 ಕೋಟಿ ವೆಚ್ಚದ ಕಾಮಗಾರಿಗಳನ್ನು ನಿಗಮದ ವಹಿಸುತ್ತಿತ್ತು. ಆದೇಶದ ಬಳಿಕ ಕಾಮಗಾರಿ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು.

₹ 400 ಕೋಟಿ ಕಾಮಗಾರಿ ವಾಪಸ್ ಪಡೆದ ಸಮಾಜ ಕಲ್ಯಾಣ ಇಲಾಖೆ

ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ಯಾವುದೇ ಕಾಮಗಾರಿಗಳನ್ನು ನೀಡದಂತೆ ಸಮಾಜ ಕಲ್ಯಾಣ ಸಚಿವರಾಗಿದ್ದ ಪ್ರಿಯಾಂಕ್‌ ಖರ್ಗೆ ನಿರ್ದೇಶನ ನೀಡಿದ್ದರು.

ಇಲಾಖೆಯು ವಾರ್ಷಿಕ ₹400 ಕೋಟಿ ವೆಚ್ಚದ ಕಾಮಗಾರಿಗಳನ್ನು ನಿಗಮದ ವಹಿಸುತ್ತಿತ್ತು. ಆದೇಶದ ಬಳಿಕ ಕಾಮಗಾರಿ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು.

‘ನಿಗಮವು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ), ಕಾರ್ಮಿಕರ ಶುಲ್ಕ, ಮೂರನೇ ವ್ಯಕ್ತಿ ಪರಿವೀಕ್ಷಣೆ ಹಾಗೂ ಆಡಳಿತ ವೆಚ್ಚಗಳಿಗಾಗಿ ಒಟ್ಟು ಕಾಮಗಾರಿ ವೆಚ್ಚದ ಶೇ 18.5 ವಿಧಿಸುತ್ತಿದೆ. ಜತೆಗೆ, ಕಾಮಗಾರಿಗಳನ್ನು ಗುಣಾತ್ಮಕವಾಗಿ ನಿರ್ವಹಿಸುತ್ತಿಲ್ಲ’ ಎಂಬುದು ಸಮಾಜ ಕಲ್ಯಾಣ ಇಲಾಖೆಯ ವಾದ.

ಕಳಪೆ ಕೆಲಸ ತೋರಿಸಲಿ’

‘ಯಾವುದೇ ಸಂಸ್ಥೆ ಶೇ 100ರಷ್ಟು ಪರಿಪೂರ್ಣ ಕೆಲಸ ಮಾಡುವುದು ಕಷ್ಟ. ಶೇ 2ರಿಂದ ಶೇ 3 ಲೋಪ ಆಗಿಯೇ ಆಗುತ್ತದೆ. ಟೀಕೆ ಮಾಡುವ ಬದಲು ಲೋಪ ಎಲ್ಲಾಗಿದೆ ಎಂದು ತೋರಿಸಲಿ. ಅದನ್ನು ಸರಿಪಡಿಸಿಕೊಳ್ಳುತ್ತೇವೆ. ನಿಗಮಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ. ಸಿಬ್ಬಂದಿ ವೇತನ, ಆಡಳಿತಾತ್ಮಕ ಚಟುವಟಿಕೆಗೆ ವರ್ಷಕ್ಕೆ ₹130 ಕೋಟಿ ಬೇಕು. ಸೇವಾ ಶುಲ್ಕ ವಿಧಿಸುವ ಮೂಲಕ ಈ ಮೊತ್ತ ಸರಿದೂಗಿಸಲಾಗುತ್ತಿದೆ. ನಿಗಮದಲ್ಲಿ ಸಿಬ್ಬಂದಿ ಕೊರತೆ ಇಲ್ಲ’ 

–ಓ.ಪಾಲಯ್ಯ, ಕೆಆರ್‌ಐಡಿಎಲ್‌ ವ್ಯವಸ್ಥಾಪಕ ನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು