‘ಕಸ್ತೂರಿರಂಗನ್‌ ಶಿಫಾರಸಿಗೆ ಒಪ್ಪಿಗೆ ಇಲ್ಲ’

7
ಪಶ್ಚಿಮಘಟ್ಟ ರಕ್ಷಣೆ: ಸಮಿತಿ ರಚಿಸಿದರೆ ರಾಜ್ಯದ ಸಹಕಾರ

‘ಕಸ್ತೂರಿರಂಗನ್‌ ಶಿಫಾರಸಿಗೆ ಒಪ್ಪಿಗೆ ಇಲ್ಲ’

Published:
Updated:

ಬೆಂಗಳೂರು: ‘ಸೂಕ್ಷ್ಮ ಪರಿಸರ ಹಾಗೂ ಜೀವವೈವಿಧ್ಯ ತಾಣವಾದ ಪಶ್ಚಿಮಘಟ್ಟ ಸಂರಕ್ಷಣೆ ಕುರಿತು ಡಾ. ಕಸ್ತೂರಿರಂಗನ್ ಸಮಿತಿ ನೀಡಿದ ಶಿಫಾರಸುಗಳಿಗೆ ನಮ್ಮ ಒಪ್ಪಿಗೆ ಇಲ್ಲ’ ಎಂದು ರಾಜ್ಯ ಸರ್ಕಾರ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಸ್ಪಷ್ಟಪಡಿಸಿದೆ.

ಈ ಕುರಿತು ರಾಜ್ಯ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಸಂದೀಪ್‌ ದವೆ ಗುರುವಾರ (ಆ. 16) ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿ ಸಿ.ಕೆ. ಮಿಶ್ರಾ ಅವರಿಗೆ ಪತ್ರ ಬರೆದಿದ್ದಾರೆ.

ಸಮಿತಿಯ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿದ ಮೂರನೇ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಇದೇ 25 ಕೊನೆಯ ದಿನ. ಈ ಹಿನ್ನೆಲೆಯಲ್ಲಿ ಈ ಪತ್ರ ಮಹತ್ವ ಪಡೆದಿದೆ.

‘ವರದಿಯಲ್ಲಿರುವ ಶಿಫಾರಸುಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಜೊತೆ ಚರ್ಚೆ ನಡೆಸಿದ ಬಳಿಕ ರಾಜ್ಯ ಸರ್ಕಾರ ಈ ಹಿಂದೆಯೇ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದೂ ದವೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯ ಸರ್ಕಾರ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಎ.ಕೆ. ಮೆಹ್ತಾ ಅಧ್ಯಕ್ಷತೆಯಲ್ಲಿ ಇದೇ ಏಪ್ರಿಲ್‌ 18ರಂದು ಸಭೆ ನಡೆದಿತ್ತು.

ವರದಿ ಅನುಷ್ಠಾನ ವಿಚಾರದಲ್ಲಿ ರಾಜ್ಯ ಸರ್ಕಾರದ ಕಾಳಜಿ ಮತ್ತು ಅಭಿಪ್ರಾಯಗಳ ಕುರಿತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಸಮಿತಿ ರಚಿಸುವ ಪ್ರಸ್ತಾವವಿದೆ ಎಂದು ಆ ಸಭೆಯ ನಡಾವಳಿಯಲ್ಲಿ ಉಲ್ಲೇಖಿಸಲಾಗಿತ್ತು.

‘ಪಶ್ಚಿಮಘಟ್ಟ ಪ್ರದೇಶವನ್ನು ಸೂಕ್ಷ್ಮ ಪರಿಸರ ಹಾಗೂ ಜೀವ ವೈವಿಧ್ಯ ತಾಣವೆಂದು ಘೋಷಿಸುವ ಬಗ್ಗೆ ರಾಜ್ಯ ಸರ್ಕಾರದ ಅಭಿಪ್ರಾಯದ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚಿಸುವಂತೆ ರಾಜ್ಯ ಸರ್ಕಾರ ಕೋರಿದೆ ಎಂದು ಸಭೆಯ ನಡಾವಳಿಯಲ್ಲಿದೆ. ಆದರೆ, ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿರುವಾಗ ಸಮಿತಿ ರಚಿಸುವಂತೆ ಕೋರುವ ಪ್ರಮೇಯವೇ ಇಲ್ಲ. ನಡಾವಳಿಯಲ್ಲಿ ಉಲ್ಲೇಖಿಸಿರುವ ಅಂಶ ತಪ್ಪು. ಒಂದೊಮ್ಮೆ ಅಧ್ಯಯನಕ್ಕೆ ಕೇಂದ್ರವು ಸಮಿತಿ ರಚಿಸುವುದಾರೆ, ಅದಕ್ಕೆ ರಾಜ್ಯ ಸರ್ಕಾರ ಸಹಕಾರ ನೀಡಲಿದೆ’ ಎಂದೂ ದವೆ ಸ್ಪಷ್ಟಪಡಿಸಿದ್ದಾರೆ.

ಕಸ್ತೂರಿ ರಂಗನ್‌ ವರದಿಗೆ ಸಂಬಂಧಿಸಿದಂತೆ 2014ರ ಮಾರ್ಚ್‌ 10ರಂದು ಕೇಂದ್ರ ಸರ್ಕಾರ ಮೊದಲ ಕರಡು ಅಧಿಸೂಚನೆ ಹೊರಡಿಸಿತ್ತು. ಪಶ್ಚಿಮಘಟ್ಟ ವ್ಯಾಪ್ತಿಯ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ, ವರದಿಗೆ ಆಕ್ಷೇಪಣೆ ಸಲ್ಲಿಸುವ ಬದಲು ವರದಿಯನ್ನೇ ತಿರಸ್ಕರಿಸುವಂತೆ ಕೇಂದ್ರಕ್ಕೆ ರಾಜ್ಯವು ಶಿಫಾರಸು ಮಾಡಿತ್ತು. 2015ರ ಸೆ. 4 ಮತ್ತು 2017ರ ಫೆ. 27ರಂದು ಕೇಂದ್ರ ಸರ್ಕಾರ ಮತ್ತೆ ಕರಡು ಅಧಿಸೂಚನೆ ಹೊರಡಿಸಿತ್ತು.

2017ರ ಅಧಿಸೂಚನೆ ಕುರಿತು ಈ ಹಿಂದಿನ ಕಾಂಗ್ರೆಸ್‌ ಸರ್ಕಾರ, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿತ್ತು. ವರದಿಯ ವ್ಯಾಪ್ತಿಗೆ ಬರುವ ರಾಜ್ಯದ 1,553 ಗ್ರಾಮಗಳಿಗೆ ಇದು ಮಾರಕವಾಗಿರುವುದರಿಂದ ತಿರಸ್ಕರಿಸುವುದಾಗಿ ಕೇಂದ್ರಕ್ಕೆ ಪತ್ರ ಬರೆದಿತ್ತು.

ಆದರೆ, ಕೇಂದ್ರವು ರಾಜ್ಯದ ಮನವಿ ಸ್ಪಂದಿಸಿಲ್ಲ. ರಾಜ್ಯ ಸರ್ಕಾರ ತನ್ನ ನಿಲುವು ಪುನರುಚ್ಚರಿಸಿದೆ. ಹೀಗಾಗಿ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸಲ್ಲಿಸಿರುವ ಪ್ರಮಾಣಪತ್ರದಂತೆ ವರದಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರದ ಮುಂದಿನ ನಡೆ ಕುತೂಹಲ ಮೂಡಿಸಿದೆ.

**

ಭೂಪರಿವರ್ತನೆ ಸ್ಥಗಿತಕ್ಕೆ ಸಿ.ಎಂ ಸೂಚನೆ

‘ಅತಿವೃಷ್ಟಿಯಿಂದ ಆಗುತ್ತಿರುವ ಸಮಸ್ಯೆಗಳಿಗೆ ಪ್ರಕೃತಿ ವಿಕೋಪದ ಜತೆಗೆ ಮಾನವ ನಿರ್ಮಿತ ಲೋಪದೋಷಗಳೂ ಕಾರಣವಾಗುತ್ತಿವೆ. ಹೀಗಾಗಿ, ಪಶ್ಚಿಮಘಟ್ಟದ ಪ್ರದೇಶಗಳಲ್ಲಿ ಭೂಪರಿವರ್ತನೆ ಕಾರ್ಯಸ್ಥಗಿತಗೊಳಿಸಲು ಸೂಚಿಸಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

‘ಭೂಪರಿವರ್ತನೆಯಲ್ಲಿ ಆಗಿರುವ ಲೋಪಗಳ ಬಗ್ಗೆ ರಕ್ಷಣಾ ಇಲಾಖೆಯ ಎಂಜಿನಿಯರ್‌ಗಳ ಜತೆ ಚರ್ಚೆ ನಡೆಸುತ್ತೇನೆ. ಅಲ್ಲಿಯವರೆಗೆ ಭೂಪರಿವರ್ತನೆ ಹಾಗೂ ರಸ್ತೆ ವಿಸ್ತರಣೆಗೆ ಗುಡ್ಡಗಳನ್ನು ಕಡಿಯುವುದನ್ನು ನಿಷೇಧಿಸಲಾಗುವುದು’ ಎಂದರು.

**

ಪರಿಸರ ಸೂಕ್ಷ್ಮ ವಲಯಕ್ಕೆ

ಕಸ್ತೂರಿ ರಂಗನ್‌ ವರದಿ ಪ್ರಕಾರ ಉತ್ತರ ಕನ್ನಡ ಜಿಲ್ಲೆಯ– 607, ಶಿವಮೊಗ್ಗ-470, ಚಿಕ್ಕಮಗಳೂರು-143, ಬೆಳಗಾವಿ-72, ಮೈಸೂರು-56, ಕೊಡಗು-55, ದಕ್ಷಿಣಕನ್ನಡ-48, ಉಡುಪಿ-40, ಹಾಸನ-38 ಹಾಗೂ ಚಾಮರಾಜನಗರ ಜಿಲ್ಲೆಯ 24 ಹಳ್ಳಿಗಳು ಪರಿಸರ ಸೂಕ್ಷ್ಮವಲಯ ವ್ಯಾಪ್ತಿಗೆ ಸೇರುತ್ತವೆ.

ಬರಹ ಇಷ್ಟವಾಯಿತೆ?

 • 10

  Happy
 • 4

  Amused
 • 1

  Sad
 • 1

  Frustrated
 • 10

  Angry

Comments:

0 comments

Write the first review for this !