ಸೋಮವಾರ, ಜನವರಿ 27, 2020
21 °C

ಸಚಿವ ಸ್ಥಾನ: ವರಿಷ್ಠರಭೇಟಿಗೆ ಶಾಸಕ ಕತ್ತಿ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹುಕ್ಕೇರಿ ಶಾಸಕ ಉಮೇಶ್‌ ಕತ್ತಿ ವರಿಷ್ಠರನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದಾರೆ.

‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡುವಂತೆ ಮನವಿ ಸಲ್ಲಿಸುವೆ’ ಎಂದು ಗುರುವಾರ ತಿಳಿಸಿದರು.

‘ಎಂಟು ಬಾರಿ ಶಾಸಕನಾಗಿದ್ದೇನೆ. 13 ವರ್ಷ ಸಚಿವನಾಗಿ ಸೇವೆ ಸಲ್ಲಿಸಿರುವ ನಾನು ಮುಖ್ಯಮಂತ್ರಿ ಸ್ಥಾನಕ್ಕೂ ಅರ್ಹನಾಗಿದ್ದೇನೆ. ಆದರೆ, ಯಡಿಯೂರಪ್ಪ ಅವರ ಸ್ಥಾನಕ್ಕೆ ಸ್ಪರ್ಧಿಯಲ್ಲ. ಡಿಸೆಂಬರ್ ಅಂತ್ಯಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಸಚಿವ ಸ್ಥಾನ ಕೋರಿದ್ದೇನೆ. ನಾನೂ ಮನುಷ್ಯ. ನನ್ನ ವಿರುದ್ಧ ಯಾವುದೇ ಆರೋಪಗಳಿಲ್ಲ. ನನಗೀಗ 59 ವರ್ಷ. ಇನ್ನೂ 20 ವರ್ಷ ಆಯುಷ್ಯ ಇದೆ. ಕೈ–ಕಾಲುಗಳು ಗಟ್ಟಿಯಾಗಿದ್ದರೆ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ’ ಎಂದು ಹೇಳಿದರು.

‘ಕೇಂದ್ರದ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ಗುರುವಾರ ಭೇಟಿ ಮಾಡಿದ್ದೇನೆ. ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿರುವ 40ಕ್ಕೂ ಅಧಿಕ ಸಕ್ಕರೆ ಕಾರ್ಖಾನೆಗಳಲ್ಲಿ ತಯಾರಾಗುವ ಎಥೆನಾಲ್‌ನ ಸಮರ್ಪಕ ಬಳಕೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ’ ಎಂದರು.

‘ಧಾಬೋಲ್‌ನಿಂದ ಬೆಂಗಳೂರಿನವರೆಗೆ ಸಿಎನ್‌ಜಿ ಪೈಪ್‌ಲೈನ್ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ಬೆಳಗಾವಿ ಜೊತೆ ಸಂಪರ್ಕ ಕಲ್ಪಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ’ ಎಂದು ಅವರು
ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು