ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾತ್ಮ ಗಾಂಧಿ ಹೆಸರಿನಲ್ಲೂ ಪ್ರಶಸ್ತಿ ನೀಡಿ: ಡಿಸಿಎಂ ಕಾರಜೋಳ

ಪತ್ರಕರ್ತರ ರಾಜ್ಯ ಸಮ್ಮೇಳನದ ಸಮಾರೋಪ
Last Updated 8 ಮಾರ್ಚ್ 2020, 21:49 IST
ಅಕ್ಷರ ಗಾತ್ರ

ಮಂಗಳೂರು: ಮಹಾತ್ಮ ಗಾಂಧೀಜಿಯವರ ಹೆಸರಿನಲ್ಲೂ ಪತ್ರಕರ್ತರ ಸಂಘದ ವತಿಯಿಂದ ಪ್ರಶಸ್ತಿ ನೀಡುವ ಕೆಲಸ ಆಗಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯುಜೆ) ನೇತೃತ್ವದಲ್ಲಿ ನಗರದ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಭಾನುವಾರ ನಡೆದ ಪತ್ರಕರ್ತರ 35ನೇ ರಾಜ್ಯಮಟ್ಟದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಸಂಗ್ರಾಮ ಆರಂಭಿಸುವ ವೇಳೆ ಬ್ರಿಟಿಷರ ದಬ್ಬಾಳಿಕೆಯನ್ನು ಜನರಿಗೆ ಮನವರಿಕೆ ಮಾಡುವಲ್ಲಿ ‘ಯಂಗ್ ಇಂಡಿಯಾ’ ಪತ್ರಿಕೆ ಹುಟ್ಟು ಹಾಕಿ, ಪ್ರಾದೇಶಿಕ ಭಾಷೆಗಳಲ್ಲಿ ಆರಂಭಿಸಿದವರು ಮಹಾತ್ಮ ಗಾಂಧೀಜಿ. ಹಾಗಾಗಿ ಅವರು ಈ ದೇಶದ
ಮೊದಲ ಪತ್ರಕರ್ತ ಎಂದು ತಿಳಿಸಿದರು.

ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ₹20 ಕೋಟಿ ನೀಡುವಂತೆ ಮನವಿ ಮಾಡಲಾಗಿತ್ತು. ಈ ಬಾರಿಯ ಬಜೆಟ್‌ನಲ್ಲಿ ₹5 ಕೋಟಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು. ಬೆಂಗಳೂರಿನಲ್ಲಿ ಪತ್ರಕರ್ತರ ಭವನಕ್ಕೆ ₹5 ಕೋಟಿ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗುವುದು. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಪತ್ರಕರ್ತರ ಭವನಕ್ಕೆ ನೀಡಲಾಗುವ ಅನುದಾನವನ್ನು ₹25 ಲಕ್ಷ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಸಂಸದ ನಳಿನ್ ಕುಮಾರ್ ಕಟೀಲ್‌ ಮಾತನಾಡಿ, ‘ವ್ಯಕ್ತಿಗಳನ್ನು ಸೃಷ್ಟಿಸುವ ಶಕ್ತಿ ಪತ್ರಕರ್ತರಿಗೆ ಇದೆ. ರಾಜಕಾರಣಿಗಳೂ ಸೇರಿದಂತೆ
ಸಮಾಜದಲ್ಲಿ ನಡೆಯುವ ಪ್ರತಿಯೊಂದು ತಪ್ಪುಗಳನ್ನು ಎತ್ತಿ ತೋರಿಸುವ ಮೂಲಕ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ತರವಾಗಿದೆ’ ಎಂದು ಹೇಳಿದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ‘ಸ್ವಾತಂತ್ರ್ಯ ಹೋರಾಟಗಾರರ ಅಪಮಾನ, ಗಾಂಧೀಜಿ ಹಂತಕರ ವೈಭವೀಕರಣ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪತ್ರಕರ್ತರು ನಿರ್ಭೀತರಾಗಿ ವರದಿ ಮಾಡುವ ಅನಿವಾರ್ಯತೆ ಹೆಚ್ಚಾಗಿದೆ’ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ‘ಪ್ರಜಾವಾಣಿ’ ಪತ್ರಿಕೆಯ ಮುಖಪುಟ ವಿನ್ಯಾಸಕ್ಕೆ ನೀಡಿದ ‘ಆರ್. ಶಾಮಣ್ಣ ಪ್ರಶಸ್ತಿ’ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು. ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಐವನ್‌ ಡಿಸೋಜ, ಮಾಜಿ ಸಚಿವ ಜೆ. ಕೃಷ್ಣ ಪಾಲೇಮಾರ್‌, ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.
ಮಲ್ಲಿಕಾರ್ಜುನಯ್ಯ, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ಕಾರ್ಯನಿರತರ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಮತ್ತಿಕೆರೆ ಜಯರಾಂ, ಪುಂಡಲೀಕ ಬಾಳೋಜಿ, ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್‌, ಕಾರ್ಯದರ್ಶಿಗಳಾದ ಸಂಜೀವರಾವ ಕುಲಕರ್ಣಿ ವೇದಿಕೆಯಲ್ಲಿ ಇದ್ದರು.

ಮುಂದಿನ ಸಮ್ಮೇಳನ ಕಲಬುರ್ಗಿಯಲ್ಲಿ
ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆಸಲಾಗುವುದು ರಾಜ್ಯಮಟ್ಟದ 36ನೇ ಪತ್ರಕರ್ತರ ಸಮ್ಮೇಳನವನ್ನು ಕಲಬುರ್ಗಿಯಲ್ಲಿ ಬರುವ ಡಿಸೆಂಬರ್‌ನಲ್ಲಿ ನಡೆಸಲು ನಿರ್ಧಾರ ಕೈಗೊಳ್ಳಲಾಯಿತು.

ಮುಖ್ಯಮಂತ್ರಿಯ ತವರು ಜಿಲ್ಲೆಯಾದ ಶಿವಮೊಗ್ಗದಲ್ಲೂ ಸಮ್ಮೇಳನ ನಡೆಸಲು ಆಹ್ವಾನ ಬಂದಿದೆ. ಆದರೆ, ಕಳೆದ ಬಾರಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಸಮ್ಮೇಳನದಲ್ಲಿ ಕಲಬುರ್ಗಿಯಲ್ಲಿ ನಡೆಸುವುದಾಗಿ ತಿಳಿಸಲಾಗಿತ್ತು. ಅದರಂತೆ ಕಲಬುರ್ಗಿಯಲ್ಲಿ ಸಮ್ಮೇಳನ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರತಿನಿಧಿಗಳ ಸಮಾವೇಶದಲ್ಲಿ ಪ್ರಕಟಿಸಲಾಯಿತು.

*
ಗಾಂಧೀಜಿಯವರೂ ಪತ್ರಕರ್ತರಾಗಿ ಕೆಲಸ ಮಾಡಿದವರು. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕ ಅವರ ಚಿಂತನೆಗಳನ್ನು ಸಮಾಜದಲ್ಲಿ ಇನ್ನಷ್ಟು ಬೆಳೆಸಬೇಕು.
-ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ

*
ಸಾಮಾಜಿಕ ನ್ಯಾಯದಿಂದ ವಂಚಿತರಾದ ಜನರ ಧ್ವನಿಯನ್ನು ಸಮಾಜಕ್ಕೆ ಮುಟ್ಟಿಸುವ ಕೆಲಸವನ್ನು ವರದಿಗಾರರು ಮಾಡಬೇಕು. ಆ ನಿಟ್ಟಿನಲ್ಲಿ ವರದಿಗಳು ಮೂಡಿಬರಬೇಕು.
-ಬಿ.ರಮಾನಾಥ ರೈ, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT