ಅಪಾಯದ ಎಚ್ಚರಿಕೆ ಕೊಟ್ಟಿದ್ದ ‘ಪ್ರಕೃತಿ’

7
ಪೆರುಂಬಾಡಿ – ಮಾಕುಟ್ಟ ಹೆದ್ದಾರಿಯಲ್ಲಿ ಮೊದಲ ಭೂಕುಸಿತ, ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ

ಅಪಾಯದ ಎಚ್ಚರಿಕೆ ಕೊಟ್ಟಿದ್ದ ‘ಪ್ರಕೃತಿ’

Published:
Updated:
Deccan Herald

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಹಾಮಳೆಯ ಮುನ್ಸೂಚನೆಯಿದ್ದರೂ ಜಿಲ್ಲಾಡಳಿತ, ಭೂವಿಜ್ಞಾನ ಇಲಾಖೆ ಎಚ್ಚರಿಕೆ ವಹಿಸಲಿಲ್ಲ ಎಂಬ ಆರೋಪಗಳು ಈಗ ಕೇಳಿಬರುತ್ತಿವೆ. ಜಿಲ್ಲೆಯ ಕೆಲವು ಗ್ರಾಮಗಳು ಅಪಾಯದಲ್ಲಿರುವ ಸೂಚನೆಯೂ ಸಿಕ್ಕಿತ್ತು. ಆದರೂ, ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿರಲಿಲ್ಲ.  

‘ಮೊದಲ ಭೂಕುಸಿತ ವಿರಾಜಪೇಟೆ ತಾಲ್ಲೂಕಿನಲ್ಲಿ ಸಂಭವಿಸಿತ್ತು. ಕಳೆದ ಜೂನ್‌ 14 ಹಾಗೂ 15ರಂದು ರಾತ್ರಿ ಸುರಿದ ಭಾರೀ ಮಳೆಗೆ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಕೊಣನೂರು– ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲಿ 60 ಕಡೆ ಭೂಕುಸಿತವಾಗಿತ್ತು. ಆ ಮಾರ್ಗದಲ್ಲಿ ಹೆದ್ದಾರಿ ಬಂದ್ ಮಾಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದನ್ನು ಬಿಟ್ಟರೆ ಭೂಕುಸಿತದ ಗಂಭೀರತೆ, ಕಾರಣ ಹುಡುಕುವ ಪ್ರಯತ್ನಕ್ಕೆ ಜಿಲ್ಲಾಡಳಿತ ಮುಂದಾಗಿರಲಿಲ್ಲ’ ಎಂದು ಜಿಲ್ಲೆಯ ಸಾರ್ವಜನಿಕರು ದೂರುತ್ತಿದ್ದಾರೆ. 

ಅದಾದ ಬಳಿಕ ಅಲ್ಲಲ್ಲಿ ಬೆಟ್ಟಗಳು ಕರಗುತ್ತಲೇ ಸಾಗಿದವು. ‘ಎಲ್ಲಿ ನಮ್ಮನ್ನು ಸ್ಥಳಾಂತರ ಮಾಡುತ್ತಾರೆಯೋ’ ಎಂಬ ಆತಂಕದಿಂದ ಬೆಟ್ಟದಲ್ಲಿ ಬದುಕು ಕಟ್ಟಿಕೊಂಡವರು ಅಧಿಕಾರಿಗಳ ಗಮನಕ್ಕೂ ತಂದಿರಲಿಲ್ಲ. ಅದರ ನಡುವೆಯೇ ಜೀವನ ಮುಂದುವರೆಸಿದ್ದರು.

ಜುಲೈನಲ್ಲಿ ಮಳೆ ತೀವ್ರ ಸ್ವರೂಪ ಪಡೆಯಿತು. ಜುಲೈ 7ರಂದು ತಾಲ್ಲೂಕಿನ 1ನೇ ಮೊಣ್ಣಂಗೇರಿಯಲ್ಲಿ 4 ಕಿ.ಮೀ. ರಸ್ತೆ ಬಿರುಕು ಬಿಟ್ಟಿತ್ತು. ನಂತರ, ಗ್ರಾಮದಲ್ಲಿ ಅಂತರ್ಜಲ ಉಕ್ಕಲು ಆರಂಭಿಸಿತು. ರಸ್ತೆಗಳಲ್ಲಿ ಪ್ರವಾಹ ಉಕ್ಕೇರಿತು. ಜನರೂ ಭಯಭೀತರಾಗಿದ್ದರು.‌ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಕಲ್ಪಿಸಿದೇ ಕೆಲವರು ಊರನ್ನೇ ತೊರೆದಿದ್ದರು.  

ಒಂದೇ ಬೆಟ್ಟ, ಹಲವು ದುರಂತ: ಕೊಡಗು ಜಿಲ್ಲೆಯಲ್ಲಿ ಆ.15 ಹಾಗೂ 16ರಂದು ದೊಡ್ಡ ಭೂಕುಸಿತ ಉಂಟಾಗಿದ್ದು ಒಂದೇ ಬೆಟ್ಟದ ಸಾಲಿನಲ್ಲಿ. ಈ ಬೆಟ್ಟದ ಬಹುತೇಕ ಭಾಗಗಳಲ್ಲಿ ಜನವಸತಿಯಿದೆ. ಮಡಿಕೇರಿ, ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜುಲೈ 9ರಂದು 300 ಅಡಿಗಳಷ್ಟು ಹೆದ್ದಾರಿ ಕುಸಿಯಿತು. ನಂತರ, ಆ.13ರಂದು ಮದೆನಾಡು ಬಳಿ ಬೆಟ್ಟ ಕುಸಿಯಲು ಆರಂಭಿಸಿತು. ಅದು ಜೋಡುಪಾಲ ಆಸುಪಾಸಿನ ಗ್ರಾಮಗಳನ್ನೇ ಕೊಚ್ಚಿಹೋಗುವಂತೆ ಮಾಡಿದೆ.

ಅದೇ ಬೆಟ್ಟದ ಸಾಲಿನಲ್ಲಿ ಮಡಿಕೇರಿಯ ಚಾಮುಂಡೇಶ್ವರಿ ನಗರ, ಇಂದಿರಾ ನಗರ, ಕಾಲೂರು, ಗಾಳಿಬೀಡು, ಮಾಂದಲ್‌ಪಟ್ಟಿ, ಮಕ್ಕಂದೂರು, ಮುಕ್ಕೊಡ್ಲು, ತಂತಿಪಾಲ, ಹೆಮ್ಮತ್ತಾಳ, ಮೇಘತ್ತಾಳ್‌ ಗ್ರಾಮಗಳೂ ಹಬ್ಬಿಕೊಂಡಿದ್ದು ಅಲ್ಲಲ್ಲಿ ಭೂಕುಸಿತವಾಗಿದೆ. ಆ.15ರ ಮಧ್ಯರಾತ್ರಿ ಹೆಚ್ಚುಕಮ್ಮಿ ಒಂದೇ ಸಮಯದಲ್ಲಿ ಈ ಎಲ್ಲ ಗ್ರಾಮಗಳಲ್ಲೂ ಭೂಕುಸಿತವಾಗಿದೆ ಎಂದು ಮಕ್ಕಂದೂರು ಗ್ರಾಮದ ಸಂತ್ರಸ್ತರು ಹೇಳುತ್ತಾರೆ. 

ಜುಲೈ 9ರಂದು ಮಧ್ಯಾಹ್ನ 12.54ರ ಸುಮಾರಿಗೆ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಈ ಎಲ್ಲ ಗ್ರಾಮಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿತ್ತು. ಜನರು ಮನೆಯಿಂದ ಹೊರಗೆ ಓಡಿಬಂದಿದ್ದರು ಎಂಬುದನ್ನು ಸಂತ್ರಸ್ತರು ನೆನಪಿಸಿಕೊಳ್ಳುತ್ತಾರೆ. 

ಜಾರಿದ ಮನೆ, ಉಳಿದ ಕಣ್ಣೀರು

ಮಡಿಕೇರಿಯ ಮುತ್ತಪ್ಪ ದೇವಾಲಯ ಸಮೀಪ ಬಸ್‌ನಂತೆ ಜಾರಿ ಕುಸಿದಿದ್ದ ಮನೆಯ ವಿಡಿಯೊ ವೈರಲ್‌ ಆಗಿತ್ತು. ಅದರ ಮಾಲೀಕರಾದ ಫೌಜಿಯಾ ಬಾನು ಅವರು ಗುರುವಾರ ಮನೆಯ ಸ್ಥಿತಿ ಕಂಡು ಕಣ್ಣೀರು ಸುರಿಸಿದರು. ಫೌಜಿಯಾ ದುಬೈನಲ್ಲಿ ನೆಲೆಸಿದ್ದರು. ಅವರ ಸಹೋದರಿ ಮೆಹರುನ್ನೀಸಾ ಮಾತ್ರ ಈ ಮನೆಯಲ್ಲಿ ವಾಸಿಸುತ್ತಿದ್ದರು. ಇನ್ನೆರಡು ಮನೆಗಳನ್ನು ₹ 6 ಲಕ್ಷದಂತೆ ಭೋಗ್ಯಕ್ಕೆ ನೀಡಿದ್ದರು. ಭಾರೀ ಮಳೆಯಿಂದ ಅಪಾಯದ ಮುನ್ಸೂಚನೆ ಅರಿತು ಮನೆಯಲ್ಲಿದ್ದವರು ಹೊರಬಂದಿದ್ದ ಕಾರಣ ಅನಾಹುತ ಸಂಭವಿಸಿಲ್ಲ. ಮನೆಯ ಸಾಮಗ್ರಿಗಳು ಮಾತ್ರ ಮಣ್ಣು ಪಾಲಾಗಿವೆ.

‘ಭೋಗ್ಯದ ಹಣವನ್ನೂ ಮರು ಪಾವತಿಸಬೇಕು. ಮನೆ ಕಟ್ಟಲು ಬ್ಯಾಂಕ್‌ನಲ್ಲಿ ಪಡೆದಿದ್ದ ಸಾಲವನ್ನೂ ಕಟ್ಟಬೇಕು. ಈಗ ದಿಕ್ಕು ತೋಚುತ್ತಿಲ್ಲ’ ಎಂದು ಫೌಜಿಯಾ ಬಾನು ನೋವು ತೋಡಿಕೊಂಡರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !