ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಾತಂತ್ರ್ಯ ಹೋರಾಟದಲ್ಲಿ ಕೊಡವರ ಪಾತ್ರ ಹಿರಿದು :ಪ್ರೊ.ಇಟ್ಟೀರ ಬಿದ್ದಪ್ಪ

ಕಾಕೋಟುಪರಂಬುವಿನಲ್ಲಿ ನಡೆದ 6ನೇ ವರ್ಷದ 'ಕೊಡವ ಮಂದ್ ನಮ್ಮೆ -2019'
Last Updated 26 ಡಿಸೆಂಬರ್ 2019, 14:15 IST
ಅಕ್ಷರ ಗಾತ್ರ

ವಿರಾಜಪೇಟೆ: ‘ಕೊಡವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೆಚ್ಚೆದೆಯಿಂದ ಹೋರಾಟ ಮಾಡಿದ್ದಾರೆ. ಈ ಕುರಿತು ಯಾವುದೇ ಸಂಶಯ ಬೇಡ’ ಎಂದು ಪ್ರೊ.ಇಟ್ಟೀರ ಬಿದ್ದಪ್ಪ ಹೇಳಿದರು.

ಸಮೀಪದ ಕಾಕೋಟುಪರಂಬುವಿನ ಶಾಲಾ ಮೈದಾನದಲ್ಲಿ ಯುಕೊ ಸಂಘಟನೆ ವತಿಯಿಂದ ಬುಧವಾರ ನಡೆದ 6ನೇ ವರ್ಷದ ‘ಕೊಡವ ಮಂದ್ ನಮ್ಮೆ -2019’ಯ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಕೊಡವರು ಹೋರಾಟ ನಡೆಸಿದ್ದಾರೆ. ಆದರೆ ಇತಿಹಾಸಕಾರರು ಅಲ್ಪಸಂಖ್ಯಾತರಾದ ಕೊಡವರ ತ್ಯಾಗ, ಬಲಿದಾನ ಮತ್ತು ದೇಶಪ್ರೇಮವನ್ನು ಉಲ್ಲೇಖಿಸದೆ ಬಹುಸಂಖ್ಯಾತರ ಹೋರಾಟದ ಕುರಿತು ಮಾತ್ರ ಬೆಳಕು ಚೆಲ್ಲಿದ್ದಾರೆ. ಮಲ್ಲೇಂಗಡ ಚಂಗಪ್ಪ, ಮಂಡೇಪಂಡ ಕಾರ್ಯಪ್ಪ ಹಾಗೂ ಬಿ.ಜಿ.ಗಣಪಯ್ಯ ಅವರು ಮಡಿಕೇರಿ ಕೋಟೆಯಲ್ಲಿನ ಬ್ರಿಟೀಷ್ ಧ್ವಜವನ್ನು ಕೆಳಗಿಳಿಸಿದವರು. ಕೊಡವ ಮಹಿಳೆಯರು ಕೂಡ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರು ಎಂದರು.

ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಮಾತನಾಡಿ, ಕೊಡವ ಸಂಸ್ಕೃತಿಯಲ್ಲಿ ಕೊಡವ ಮಹಿಳೆಯರ ಪಾತ್ರ ಹಿರಿಯದಾಗಿದೆ ಎಂದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಳ್ಳಿಯಡ ಡಾ.ಪೂವಯ್ಯ ಅವರು ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಚೇನಂಡ ಸುರೇಶ್ ನಾಣಯ್ಯ, ಉಪನ್ಯಾಸಕಿ ಚೋಕಿರ ಅನಿತಾ ದೇವಯ್ಯ, ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿದರು.

6ನೇ ವರ್ಷದ ಮಂದ್ ನಮ್ಮೆಯ ಸಂಕೇತವಾಗಿ 6 ಬಾರಿ ಗುಂಡು ಸಿಡಿಸಿ ನಮ್ಮೆಗೆ ಚಾಲನೆ ನೀಡಲಾಯಿತು.

ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ ಪುರುಷರು ಹಾಗೂ ಮಹಿಳೆಯರು ಗಮನಸೆಳೆದರು. ಹುತ್ತರಿಯ ವಿಶೇಷ ಖಾದ್ಯಗಳು ಸೇರಿದಂತೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ನಂತರ ಕೋಲಾಟ್, ಉಮ್ಮತ್ತಾಟ್, ಬೊಳಕಾಟ್, ಕಪ್ಪೆಯಾಟ್, ಪರೆಯಕಳಿ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.

ಕಾಕೋಟುಪರಂಬು ದೇವತಕ್ಕರಾದ ಅಮ್ಮಂಡಿರ ಚೇತನ್, ಬೇರೆರ ಬೆಳ್ಯಪ್ಪ, ಕೊಂಡಿರ ಪೃಥ್ವಿ ಮುತ್ತಣ್ಣ, ಸಾಹಿತಿ ಮಾಣಿಯಪಂಡ ಸಂತೋಷ್ ತಮ್ಮಯ್ಯ, ಕ್ರೀಡಾಪಟು ತೀತಮಾಡ ಅರ್ಜುನ್ ದೇವಯ್ಯ, ವಿಧಾನ ಪರಿಷತ್ತಿನ ಸದಸ್ಯ ಸುನೀಲ್ ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಕುಞರ ಮೋಹನ್ ಮುದ್ದಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಕುಯ್ಯಮಂಡ ಕಾಳಯ್ಯ, ಹಿರಿಯರಾದ ಚಕ್ಕೇರ ಕಾಳಯ್ಯ, ಕಾಕೋಟುಪರಂಬು ರಿಕ್ರಿಯೇಷನ್ ಕ್ಲಬ್‌ನ ಅಧ್ಯಕ್ಷ ಮೇವಡ ಚಿಣ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT