ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಜಿಲ್ಲೆಯಲ್ಲೂ ಕೋವಿಡ್‌ ಕಳವಳ

ಕೊಡಗಿನ ವ್ಯಕ್ತಿಗೆ ಕೋವಿಡ್‌ ದೃಢ, ತುರ್ತು ಸೇವೆ ಹೊರತು ‍ಪಡಿಸಿ ಎಲ್ಲವೂ ಬಂದ್‌
Last Updated 19 ಮಾರ್ಚ್ 2020, 15:27 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ವ್ಯಕ್ತಿಗೂ ಕೋವಿಡ್‌ 19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಜಿಲ್ಲೆಯಲ್ಲೂ ಕಳವಳ ವ್ಯಕ್ತವಾಗಿದೆ.

ದುಬೈನಿಂದ ಜಿಲ್ಲೆಗೆ ಬಂದಿದ್ದ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಹೋಬಳಿ ಕೊಂಡಗೇರಿಯ 35 ವರ್ಷದ ವ್ಯಕ್ತಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ತುರ್ತು ಸೇವೆ ಹೊರತು ಪಡಿಸಿ ಎಲ್ಲವನ್ನೂ ಬಂದ್‌ ಮಾಡಿ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಕೋರಿದರು.

ದುಬೈನಿಂದ ಬೆಂಗಳೂರಿಗೆ ಮಾರ್ಚ್ 15ರಂದು ಇಂಡಿಗೊ ವಿಮಾನದಲ್ಲಿ ಆ ವ್ಯಕ್ತಿ ಬೆಂಗಳೂರಿಗೆ ಸಂಜೆ 4.30ಕ್ಕೆ ಆಗಮಿಸಿದ್ದಾರೆ. ನಂತರ, ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ರಾಜಹಂಸ ಬಸ್ ಮೂಲಕ ವಿರಾಜಪೇಟೆ ಮೂಲಕ ಮೂರ್ನಾಡಿಗೆ ಬಂದಿದ್ದಾರೆ. ಅಲ್ಲಿಂದ ಆಟೋ ಮೂಲಕ ಮನೆ ತಲುಪಿದ್ದಾರೆ. ನಂತರ, ಕೆಮ್ಮು, ನೆಗಡಿ ಲಕ್ಷಣ ಕಂಡುಬಂದಿದ್ದು, ಮಾರ್ಚ್ 17ರಂದು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಸಂದರ್ಭದಲ್ಲಿ ಶಂಕಿತರ ರಕ್ತ ಪರೀಕ್ಷೆಯನ್ನು ಮೈಸೂರಿಗೆ ಕಳುಹಿಸಿ ಕೊಡಲಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಇದೆ ಎಂದು ಮಾರ್ಚ್ 19ರಂದು ದೃಡಪಟ್ಟಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.

ಸಹ ಪ್ರಯಾಣಿಕರ ಗಮನಕ್ಕೆ: ಮಾರ್ಚ್ 15ರಂದು ದುಬೈನಿಂದ ಬೆಂಗಳೂರಿಗೆ ಇಂಡಿಗೊ ವಿಮಾನ ಸಂಖ್ಯೆ 6ಇ96 ಮೂಲಕ ಸಂಜೆ 4.15ಕ್ಕೆ ಬಂದಿದ್ದು ಅದೇ ದಿನ ರಾತ್ರಿ 11.33ಕ್ಕೆ ರಾಜಹಂಸ ಬಸ್ ಸಂಖ್ಯೆ ಕೆಎ19 ಎಫ್‌3170 ಮೂಲಕ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮಡಿಕೇರಿಗೆ (ವಿರಾಜಪೇಟೆ-ಮೂರ್ನಾಡು) ಮಾರ್ಗವಾಗಿ ಸಂಚರಿಸುವ ಬಸ್ಸಿನಲ್ಲಿ ಬಂದಿದ್ದಾರೆ. ಇಂಡಿಗೊ ವಿಮಾನದಲ್ಲಿ ಪ್ರಯಾಣಿಸಿದ ಎಲ್ಲಾ ಪ್ರಯಾಣಿಕರು ತುರ್ತಾಗಿ ತಮ್ಮ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಲು (ವರದಿ ಮಾಡಿಕೊಳ್ಳಲು) ಕೊಡಗು ಜಿಲ್ಲಾಡಳಿತ ಮನವಿ ಮಾಡಿದೆ.

ವಿಶೇಷ ತಂಡ:ಕೊರೊನಾ ತಡೆಗೆ ಜಿಲ್ಲಾ ಮಟ್ಟದ ವಿಶೇಷ ತಂಡ ರಚನೆ ಮಾಡಲಾಗಿದೆ. ಉಪ ವಿಭಾಗಾಧಿಕಾರಿ, ಐಟಿಡಿಪಿ ಇಲಾಖೆ ಅಧಿಕಾರಿ, ಕೃಷಿ ಇಲಾಖೆ ಉಪ ನಿರ್ದೇಶಕರನ್ನು ಮೇಲ್ವಿಚಾರಣೆಗಾಗಿ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಧಾರ್ಮಿಕ ಸ್ಥಳಗಳಲ್ಲಿ ದಿನ ನಿತ್ಯದ ಪೂಜಾ ಕೈಂಕರ್ಯಗಳಿಗೆ ಯಾವುದೇ ರೀತಿಯ ನಿರ್ಬಂಧ ಇರುವುದಿಲ್ಲ. ಆದರೆ, ದೊಡ್ಡಮಟ್ಟದ ಜಾತ್ರೆ, ಧಾರ್ಮಿಕ ಚಟುವಟಿಕೆಗಳು, ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಶಾಲಾ-ಕಾಲೇಜು ಅಂಗನವಾಡಿ, ಜಿಮ್, ಈಜುಕೊಳ, ಮೈದಾನ, ಮನೆಪಾಠ ಕೇಂದ್ರಗಳು ಮಾರ್ಚ್ 31ರ ವರೆಗೆ ಮುಚ್ಚಿರುತ್ತದೆ. ಎಲ್ಲ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಅನಗತ್ಯ ಭೇಟಿಯನ್ನು ನಿರ್ಬಂಧಿಸಿದ್ದು ಸಾರ್ವಜನಿಕರ ಅಗತ್ಯ ಕೆಲಸಗಳಿಗೆ ದೂರವಾಣಿ, ಇ-ಮೇಲ್, ವಾಟ್ಸ್‌ಆ್ಯಪ್‌, ಅಂಚೆ ಮೂಲಕ ಪತ್ರ ವ್ಯವಹಾರಕ್ಕೆ ಯಾವುದೇ ನಿರ್ಬಂಧ ಇಲ್ಲ ಎಂದರು.

ಸಂತೆ, ಜಾತ್ರೆ ಸೇರಿದಂತೆ ಜನರು ಸೇರುವುದನ್ನು ನಿಷೇಧಿಸಲಾಗಿದೆ. ಜಿಲ್ಲೆಯ ಗಡಿಗಳಲ್ಲಿ ಚೆಕ್‌ಫೋಸ್ಟ್ ತೆರೆದು ಪರಿಶೀಲನೆ ಮಾಡಲಾಗುತ್ತಿದೆ. ಔಷಧಿ, ದಿನಸಿ ತರಕಾರಿ ಹಾಗೂ ಇತರೆ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಬೇರೆ ಎಲ್ಲ ರೀತಿಯ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸಹಕರಿಸುವುದು. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು ಸಾರ್ವಜನಿಕರಿಗೆ ಎಲ್ಲ ರೀತಿಯ ಅಗತ್ಯ ನೆರವು ನೀಡುವುದಾಗಿ ಜಿಲ್ಲಾಧಿಕಾರಿ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT