ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2011ರ ನೇಮಕ: ‘ಸಕ್ರಮ’ಕ್ಕೆ ಹೆಜ್ಜೆ?

ಕೆಪಿಎಸ್‌ಸಿ: 362 ಹುದ್ದೆಗಳಿಗೆ ನೇಮಕ ರದ್ದು ಪ್ರಕರಣ l 10 ತಿಂಗಳ ಬಳಿಕ ‘ಸುಪ್ರೀಂ’ ಅಂಗಳಕ್ಕೆ!
Last Updated 5 ಜೂನ್ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) 1998, 99, 2004ನೇ ಸಾಲುಗಳಲ್ಲಿ ನಡೆಸಿದ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ‘ಅಕ್ರಮ’ವನ್ನು ಸಕ್ರಮ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ, 2011ನೇ ಸಾಲಿನ 362 ಅಭ್ಯರ್ಥಿಗಳ ನೇಮಕಾತಿ ರದ್ದುಗೊಳಿಸಿ ಹೈಕೋರ್ಟ್‌ ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ತೀರ್ಮಾನಿಸಿದೆ.

ಹೈಕೋರ್ಟ್‌ ತೀರ್ಪು ಪ್ರಕಟವಾದ 10 ತಿಂಗಳ ಬಳಿಕ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ (ಎಸ್‌ಎಲ್‌ಪಿ) ಸಲ್ಲಿಸಲು ಸರ್ಕಾರ ನಿರ್ಧರಿಸಿದೆ. ಕಾನೂನು ಇಲಾಖೆ ಮತ್ತು ಅಡ್ವೊಕೇಟ್‌ ಜನರಲ್‌ ಅಭಿಪ್ರಾಯದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಸಲ್ಲಿಸಿದ ಈ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅನುಮೋದನೆ ನೀಡಿದ್ದಾರೆ. ಮುಖ್ಯ ಕಾರ್ಯದರ್ಶಿ ಕೂಡಾ ಸಹಮತ ಸೂಚಿಸಿದ್ದಾರೆ. ಸದ್ಯದಲ್ಲೇ ಎಸ್‌ಎಲ್‌ಪಿ ಸಲ್ಲಿಕೆಯಾಗಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಭಾರಿ ಅಕ್ರಮ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ನಡೆದಿದೆ ಎಂಬ ಕಾರಣಕ್ಕೆ 2011ನೇ ಸಾಲಿನ ನೇಮಕಾತಿಯನ್ನು 2017 ಮಾರ್ಚ್‌ 9ರಂದು ಹೈಕೋರ್ಟ್‌ ರದ್ದುಪಡಿಸಿತ್ತು. ಆಯ್ಕೆಯಾದ ಕೆಲವು ಅಭ್ಯರ್ಥಿಗಳು ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆದರೆ, ಹೈಕೋರ್ಟ್‌ ನೀಡಿದ್ದ ತೀರ್ಪನ್ನೇ ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್‌, ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆಯೇ ಎಂಬ ಬಗ್ಗೆ ಪರಿಶೀಲಿಸಿ ತೀರ್ಪು ನೀಡುವಂತೆ ಆದೇಶಿಸಿತ್ತು.

‘ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿ 8 ವರ್ಷಗಳು ಕಳೆದಿವೆ. ಪರೀಕ್ಷೆ ಮುಗಿದು ಐದೂವರೆ ವರ್ಷಗಳಾಗಿವೆ. ಇಷ್ಟು ವರ್ಷಗಳ ನಂತರ ಉತ್ತರಪತ್ರಿಕೆಗಳನ್ನು ಮರು ಮೌಲ್ಯಮಾಪನಕ್ಕೆ ಒಳಪಡಿಸಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟು, ಈ ಸಂಬಂಧ ಸಲ್ಲಿಕೆಯಾಗಿದ್ದ ಮಧ್ಯಂತರ ಅರ್ಜಿಗಳು ವಿಚಾರಣೆಗೆ ಅರ್ಹವಲ್ಲವೆಂದು 2017ರ ಜುಲೈ 13ರಂದು ಹೈಕೋರ್ಟ್‌ ವಜಾಗೊಳಿಸಿತ್ತು.

ಆಯ್ಕೆ ಪಟ್ಟಿ ರದ್ದಾದ ಪರಿಣಾಮ ಹುದ್ದೆ ಕಳೆದುಕೊಂಡ ಕೆಲವು ಅಭ್ಯರ್ಥಿಗಳು, ಪರ್ಯಾಯ ವ್ಯವಸ್ಥೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರು. ಈ ಹಿನ್ನೆಲೆಯಲ್ಲಿ ‘ಉತ್ತರಪತ್ರಿಕೆಗಳನ್ನು ಮರು ಮೌಲ್ಯಮಾಪನಕ್ಕೆ ಒಳಪಡಿಸಲು ಸಾಧ್ಯ ಇಲ್ಲ’ ಎಂಬ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಎಸ್‌ಎಲ್‌ಪಿ ಸಲ್ಲಿಸಲು ಸರ್ಕಾರ ತೀರ್ಮಾನಿಸಿದೆ ಎನ್ನಲಾಗುತ್ತಿದೆ.

ಏನಿದು ಪ್ರಕರಣ?: ಕೆಪಿಎಸ್‌ಸಿ 2011 ನ. 3ರಂದು 362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿತ್ತು. 2014ರ ಮಾ. 21ರಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿ ಸರ್ಕಾರಕ್ಕೆ ಕಳುಹಿಸಿತ್ತು. ನಂತರ ಡಾ.ಎಚ್‌.ಪಿ.ಎಸ್‌. ಮೈತ್ರಿ ಎಂಬುವರು ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಅಡ್ವೋಕೇಟ್‌ ಜನರಲ್‌ಗೆ (ಎಜಿ) ಪತ್ರ ಬರೆದಿದ್ದರು.

ಎಜಿ ಅಭಿಪ್ರಾಯದ ಮೇರೆಗೆ ಡಿಪಿಎಆರ್‌, ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು ನೀಡಿತ್ತು. ಬಳಿಕ ತನಿಖೆಯನ್ನು 2014ರ ಜೂ.27ರಂದು ಸರ್ಕಾರ ಸಿಐಡಿಗೆ ವಹಿಸಿತ್ತು. ನೇಮಕಾತಿಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಸಿಐಡಿ ವರದಿ ನೀಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ 2014ರ ಆ. 8ರಂದು ನೇಮಕಾತಿ ಅಧಿಸೂಚನೆಯನ್ನೇ ರದ್ದುಪಡಿಸಿತ್ತು.

ಸರ್ಕಾರದ ಈ ನಡೆ ಪ್ರಶ್ನಿಸಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೊರೆ ಹೋಗಿದ್ದರು. ಅಧಿಸೂಚನೆ ರದ್ದುಗೊಳಿಸಿದ್ದ ಸರ್ಕಾರದ ಆದೇಶವನ್ನು 2016ರ ಅ. 19ರಂದು ವಜಾಗೊಳಿಸಿದ್ದ ಕೆಎಟಿ, ಆಯ್ಕೆಯಾದವರಿಗೆ ನೇಮಕಾತಿ ಆದೇಶ ನೀಡುವಂತೆ ನಿರ್ದೇಶಿಸಿತ್ತು. ಇದನ್ನು ವಂಚಿತರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ನೇಮಕಾತಿಯನ್ನೇ ರದ್ದುಪಡಿಸಿತ್ತು.

ಸುಗ್ರೀವಾಜ್ಞೆಗೆ ಹೆಚ್ಚಿದ ವಿರೋಧ

ಅಕ್ರಮ ನೇಮಕಾತಿಯನ್ನು ಸಕ್ರಮಗೊಳಿಸಲು ಸುಗ್ರೀವಾಜ್ಞೆ ಹೊರಡಿಸುವ ಸರ್ಕಾರದ ಪ್ರಯತ್ನಕ್ಕೆ ಪಕ್ಷಾತೀತವಾಗಿ ಶಾಸಕರಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗುವ ಸಾಧ್ಯತೆ ಇದೆ.

ಈ ಸಂಬಂಧ 10 ಕ್ಕೂ ಹೆಚ್ಚು ಶಾಸಕರು ಮತ್ತು ವಿಧಾನಪರಿಷತ್‌ ಸದಸ್ಯರು ಸ್ಪೀಕರ್‌, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರಿಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕರಾದ ಎಸ್‌.ಎನ್‌.ನಾರಾಯಣಸ್ವಾಮಿ, ವಿ.ಮುನಿಯಪ್ಪ, ಎಚ್‌.ನಾಗೇಶ್‌, ನಂಜೇಗೌಡ, ಶ್ರೀನಿವಾಸಗೌಡ, ಮಹಾಂತೇಶ್‌ ಎಸ್‌ ಕೌಜಲಗಿ, ಧುರ್ಯೋದನ ಎಂ ಐಹೊಳೆ, ಸುನಿಲ್‌ ಕುಮಾರ್‌, ಎಂಎಲ್‌ಸಿಗಳಾದ ನಸೀರ್‌ ಅಹಮದ್‌, ಚೌಡರೆಡ್ಡಿ ತೂಪಲ್ಲಿ ಪತ್ರ ಬರೆದಿರುವ ಪ್ರಮುಖರು.

ಬೆರಳೆಣಿಕೆಯಷ್ಟು ಅಧಿಕಾರಿಗಳನ್ನು ರಕ್ಷಿಸಲು ಈ ಸುಗ್ರೀವಾಜ್ಞೆ ತರಲು ಹೊರಟಿದ್ದು, ಇದರಿಂದ ನಿರಪರಾಧಿಗಳಿಗೆ ತೊಂದರೆ ಆಗುತ್ತದೆ. ಕೆಎಎಸ್‌ ವೃಂದದ ಹಲವು ಅಧಿಕಾರಿಗಳ ಸೇವಾ ಹಿರಿತನಕ್ಕೆ ಧಕ್ಕೆ ಬರುವುದಷ್ಟೇ ಅಲ್ಲದೆ, ಬಡ್ತಿಯೂ ತಪ್ಪಿ ಹೋಗುತ್ತದೆ ಎಂದು ಶಾಸಕರು ಹೇಳಿದ್ದಾರೆ.

***

362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಆಯ್ಕೆ ಪಟ್ಟಿ ರದ್ದುಪಡಿಸಿ ಹೈಕೋರ್ಟ್‌ ನೀಡಿರುವ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ
-ಟಿ.ಎಂ. ವಿಜಯಭಾಸ್ಕರ್, ಮುಖ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT