ಕೆಪಿಎಸ್‌ಸಿ: ‘ಅನರ್ಹ’ರಿಗೆ ಸರ್ಕಾರದಿಂದ ‘ಸೇವಾ ಭದ್ರತೆ’

ಗುರುವಾರ , ಮಾರ್ಚ್ 21, 2019
26 °C
‘ಅರ್ಹ’ 28 ಅಭ್ಯರ್ಥಿಗಳಿಗೆ 13 ವರ್ಷಗಳ ಬಳಿಕ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆ

ಕೆಪಿಎಸ್‌ಸಿ: ‘ಅನರ್ಹ’ರಿಗೆ ಸರ್ಕಾರದಿಂದ ‘ಸೇವಾ ಭದ್ರತೆ’

Published:
Updated:

ಬೆಂಗಳೂರು: 1998ನೇ ಸಾಲಿನ 383 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ನೇಮಕಾತಿಯಲ್ಲಿ ಅಕ್ರಮವಾಗಿ ಹುದ್ದೆ ಗಿಟ್ಟಿಸಿಕೊಂಡ 28 ಅಭ್ಯರ್ಥಿಗಳನ್ನು ಕೈಬಿಡುವಂತೆ ಹೈಕೋರ್ಟ್‌ ನೀಡಿದ್ದ ತೀರ್ಪು ಅನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದ್ದರೂ, ಅವರೆಲ್ಲರಿಗೂ ‘ಸೇವಾ ಭದ್ರತೆ’ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಆ ಬೆನ್ನಲ್ಲೆ, ಕೆಪಿಎಸ್‌ಸಿಯ ತಪ್ಪು ನಡೆಯಿಂದ ಹುದ್ದೆ ವಂಚಿತರಾಗಿ 13 ವರ್ಷಗಳನ್ನು ನ್ಯಾಯಾಲಯ ಹೋರಾಟದಲ್ಲೇ ಕಳೆದ, ಉದ್ಯೋಗ ಪಡೆಯಲು ಅರ್ಹರಾಗಿದ್ದ 28 ಅಭ್ಯರ್ಥಿಗಳಿಗೆ ಇದೀಗ, ‘ನ್ಯಾಯಾಂಗ ನಿಂದನೆ’ಯ ಚಾಟಿಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ‘ಉದ್ಯೋಗ ಭಾಗ್ಯ’ ಕಲ್ಪಿಸಲು ಕೂಡಾ ಮುಂದಾಗಿದೆ.

ವಿಪರ್ಯಾಸವೆಂದರೆ, ಅರ್ಹರ ಪೈಕಿ ಒಬ್ಬ ಅಭ್ಯರ್ಥಿ ಉದ್ಯೋಗ ಸಿಗದ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿ ನಾಲ್ಕು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಅಭ್ಯರ್ಥಿ ಉದ್ಯೋಗದ ಆದೇಶ ಕೈಸೇರುವ ಮೊದಲೇ ನಿವೃತ್ತಿ ವಯಸ್ಸು ದಾಟಿದ್ದಾರೆ!

ಮೃತ ಅಭ್ಯರ್ಥಿಗೆ ಸಂಬಂಧಿಸಿದ ಮಾಹಿತಿ ಲಭ್ಯ ಇಲ್ಲ. ಹೀಗಾಗಿ, ಆ ಅಭ್ಯರ್ಥಿಯನ್ನೂ ಸೇರಿಸಿ ಒಟ್ಟು 27 ಅಭ್ಯರ್ಥಿಗಳಿಗೆ ನೇಮಕಾತಿ ಕ್ರಮ ತೆಗೆದುಕೊಳ್ಳಲಾಗಿದೆ. ಆಯಾ ಇಲಾಖೆಗಳು ನೇಮಕಾತಿ ಆದೇಶ ಹೊರಡಿಸಲಿವೆ. ಈ ಅಭ್ಯರ್ಥಿಗಳ ನೇಮಕಾತಿಗೂ ಮೊದಲೇ ಹುದ್ದೆ ಕಳೆದುಕೊಳ್ಳುವವರಿಗೆ ಸೇವಾ ಭದ್ರತೆ ನೀಡಲಾಗುವುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಡಿಪಿಎಆರ್‌) ಮೂಲಗಳು ತಿಳಿಸಿವೆ.

ಅಕ್ರಮವಾಗಿ ನೇಮಕಗೊಂಡಿರುವ ಅಧಿಕಾರಿಗಳನ್ನು ಸದ್ಯ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಗಳಲ್ಲೇ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ. ಅಷ್ಟೇ ಅಲ್ಲ, ಈ ಅಧಿಕಾರಿಗಳು ನಿವೃತ್ತಿವರೆಗೂ ಸದ್ಯ ನಿಭಾಯಿಸುತ್ತಿರುವ ಹುದ್ದೆ ಮತ್ತು ವೇತನ ಪಡೆಯಲಿದ್ದಾರೆ. ಆದರೆ, ಅವರಿಗೆ ಸೇವಾ ಜ್ಯೇಷ್ಠತೆ ಇಲ್ಲ. ಹುದ್ದೆ ಇಲ್ಲದೇ ಇದ್ದರೆ ಸೂಪರ್‌ ನ್ಯೂಮರರಿ ಹುದ್ದೆಗಳನ್ನು ಸೃಜಿಸಲು ನೇಮಕಾತಿ ನಿಯಮದಲ್ಲೇ ತಿದ್ದುಪಡಿ ಮಾಡಲು ಮತ್ತು ಆ ತಿದ್ದುಪಡಿ ಮೂರು ವರ್ಷಗಳವರೆಗೆ ಊರ್ಜಿತದಲ್ಲಿ ಇರಿಸುವಂತೆ ಕಾನೂನು ಇಲಾಖೆ ಅಭಿಪ್ರಾಯ ನೀಡಿದೆ. ಅದರಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ.

ಏನಿದು ಪ್ರಕರಣ: 1998, 1999, 2004ನೇ ಸಾಲಿನ ಗೆಜೆಟೆಟ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಅಸಂವಿಧಾನಿಕವಾಗಿದ್ದು, ಸರ್ಕಾರದ ಆದೇಶ ಮತ್ತು ನಿಯಮಗಳನ್ನು ಉಲ್ಲಂಘಿಸಲಾಗಿದೆ. ಅನರ್ಹರನ್ನು ಕೈಬಿಟ್ಟು ಅರ್ಹರನ್ನು ನೇಮಿಸುವಂತೆ 2016ರ ಜೂನ್‌ 21ರಂದು ಹೈಕೋರ್ಟ್‌ ತೀರ್ಪು ನೀಡಿತ್ತು. ಅದೇ ತೀರ್ಪನ್ನು ಸುಪ್ರೀಂ ಕೋರ್ಟ್ 2018ರ ಏ. 11ರಂದು ಎತ್ತಿ ಹಿಡಿದಿತ್ತು.

ಆದರೆ, ಈ ತೀರ್ಪು ಜಾರಿಗೆ ಸರ್ಕಾರದ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿ ಕೆಲವು ಅಭ್ಯರ್ಥಿಗಳು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ತೀರ್ಪು ಜಾರಿ ಕುರಿತು ಅನುಪಾಲನಾ ವರದಿ ಸಲ್ಲಿಸುವಂತೆ ಇದೇ ಜ. 18ರಂದು ಹೈಕೋರ್ಟ್‌ ತಾಕೀತು ಮಾಡುತ್ತಿದ್ದಂತೆ, ಫೆ. 25ರಂದು 1998ನೇ ಸಾಲಿನ ಹುದ್ದೆಗಳಿಗೆ ಆಯ್ಕೆಯಾದವರ ಪರಿಷ್ಕೃತ ಪಟ್ಟಿಯನ್ನು ಕೆಪಿಎಸ್‌ಸಿ ರಾಜ್ಯಪತ್ರದಲ್ಲಿ ಪ್ರಕಟಿಸಿತ್ತು. ಆ ಪಟ್ಟಿ ಪ್ರಕಾರ, 28 ಅಧಿಕಾರಿಗಳು ಅನರ್ಹರಾಗಿದ್ದು, ಅವರ ಬದಲು 28 ಅಭ್ಯರ್ಥಿಗಳು ಹೊಸತಾಗಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.

ಈ ಪರಿಷ್ಕೃತ ಪಟ್ಟಿ ಪ್ರಕಾರ, 140 ಅಧಿಕಾರಿಗಳ ಹುದ್ದೆಗಳಲ್ಲಿ ಸ್ಥಾನಪಲ್ಲಟ ಆಗಲಿದೆ. ಹೀಗೆ ಸ್ಥಾನ ಪಲ್ಲಟಗೊಳ್ಳುವವರಲ್ಲಿ ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ಹೊಂದಿದ ಏಳು ಅಧಿಕಾರಿಗಳೂ ಇದ್ದಾರೆ.

ಈ ಬಗ್ಗೆ, ಕಾನೂನು ಇಲಾಖೆಯಿಂದ ಅಭಿಪ್ರಾಯ ಕೇಳಲಾಗಿದೆ ಎಂದು ಡಿಪಿಎಆರ್‌ ಮೂಲಗಳು ತಿಳಿಸಿವೆ.

ಉದ್ಯೋಗ ವಂಚಿತ ನತದೃಷ್ಟರು!

ಕೋರ್ಟ್‌ ತೀರ್ಪು ಪರಿಣಾಮ ಉದ್ಯೋಗ ಪಡೆಯಲು ಅರ್ಹರಾದರೂ ಆ ಭಾಗ್ಯದಿಂದ ಇಬ್ಬರು ವಂಚಿತರಾಗಿದ್ದಾರೆ. ಎಡಿಎಲ್‌ಆರ್‌ (ಸಹಾಯಕ ನಿರ್ದೇಶಕ ಭೂದಾಖಲೆ) ಹುದ್ದೆಗೆ ಆಯ್ಕೆಯಾಗಿರುವ ಪಾಟೀಲ ಶಿವನಗೌಡ ನಾಗನಗೌಡ ಮತ್ತು ಡಿಎಂಒ (ಜಿಲ್ಲಾ ಮಾರುಕಟ್ಟೆ ಅಧಿಕಾರಿ) ಹುದ್ದೆಗೆ ಆಯ್ಕೆಯಾಗಿರುವ ರಾಜಾರಾಮ ರಾವ್‌ ಆ ನತದೃಷ್ಟರು.

ಕೆಪಿಎಸ್‌ಸಿ 2006ರಲ್ಲಿ ಪ್ರಕಟಿಸಿದ ಆಯ್ಕೆ ಪಟ್ಟಿಯಲ್ಲಿ  ಇವರಿಬ್ಬರ ಹೆಸರು ಇರಲಿಲ್ಲ. ಅಕ್ರಮವಾಗಿ ನೇಮಕಗೊಂಡವರನ್ನು ಹೊರಗಿಡುವಂತೆ ಹೈಕೋರ್ಟ್ ತೀರ್ಪು ನೀಡಿದ ಬಳಿಕ ಕೆಪಿಎಸ್‌ಸಿ ಸಿದ್ಧಪಡಿಸಿದ ಪಟ್ಟಿಯಲ್ಲಿ ಹೆಸರು ಕಾಣಿಸಿಕೊಂಡಿದೆ.

ಉದ್ಯೋಗ ಸಿಕ್ಕಿಲ್ಲ ಎಂಬ ಕೊರಗಿನಲ್ಲೇ ಪಾಟೀಲ ಶಿವನಗೌಡ ಮೃತಪಟ್ಟರೆ, ಸೈನ್ಯದಲ್ಲಿ ಸೇವೆ ಸಲ್ಲಿಸಿದವರಿಗೆ ಮೀಸಲಿಟ್ಟ ಹುದ್ದೆಯಲ್ಲಿ ಅರ್ಹರಾಗಿದ್ದ ರಾಜಾರಾಮ ಹುಟ್ಟಿದ್ದು 1958ರಲ್ಲಿ. ಈಗ ನಿವೃತ್ತಿ ವಯಸ್ಸು ದಾಟಿರುವುದರಿಂದ ಅವರಿಗೆ ಉದ್ಯೋಗ ಕೊಡಲು ಅವಕಾಶ ಇಲ್ಲ ಎಂದು ಡಿಪಿಎಆರ್‌ ಮೂಲಗಳು ಹೇಳಿವೆ.

ಪರಿಷ್ಕೃತ ಪಟ್ಟಿಯಿಂದ ‘ಉದ್ಯೋಗ’ಕ್ಕೆ ಅರ್ಹರಾದವರು

ಹೆಸರು; ಹುದ್ದೆ (ಇಲಾಖೆ)

ಶಂಕರ; ಸಹಾಯಕ ರಿಜಿಸ್ಟ್ರಾರ್‌ (ಸಹಕಾರ)

ಶ್ರೀನಿವಾಸ ಎಸ್‌.; ಮುಖ್ಯಾಧಿಕಾರಿ (ನಗರಾಭಿವೃದ್ಧಿ)

ಅಜ್ಮುಲ್ಲಾ ಖಾನ್‌; ಡಿವೈಎಸ್‌ಪಿ (ಅಬಕಾರಿ)

ಮೊಹಮ್ಮದ್‌ ಯೂಸುಫ್‌; ಅಸಿಸ್ಟೆಂಟ್ ಚೀಫ್‌ ಆಡಿಟ್‌ (ಅಕೌಂಟಿಂಗ್‌ ಅಂಡ್‌ ಆಡಿಟ್‌)

ವೇಣು ಡಿ.ವಿ; ಅಸಿಸ್ಟೆಂಟ್ ಚೀಫ್‌ ಆಡಿಟ್‌ (ಅಕೌಂಟಿಂಗ್‌ ಅಂಡ್‌ ಆಡಿಟ್‌)

ಗಿರೀಶ ಓ; ಅಸಿಸ್ಟೆಂಟ್ ಚೀಫ್‌ ಆಡಿಟ್‌ (ಅಕೌಂಟಿಂಗ್‌ ಅಂಡ್‌ ಆಡಿಟ್‌)

ಶಂಕರೇಗೌಡ; ಅಸಿಸ್ಟೆಂಟ್ ಚೀಫ್‌ ಆಡಿಟ್‌ (ಅಕೌಂಟಿಂಗ್‌ ಅಂಡ್‌ ಆಡಿಟ್‌)

ಮೊಹ್ಮದ್‌ ಅಖಾರ್‌; ಉದ್ಯೋಗಾಧಿಕಾರಿ (ಕಾರ್ಮಿಕ)

ಸೇಸುನಾಥನ್; ಸಹಾಯಕ ಖಜಾನೆ ಅಧಿಕಾರಿ (ಆರ್ಥಿಕ)

ಪಾಟೀಲ ಶಿವನಗೌಡ ನಾಗನಗೌಡ; ಸಹಾಯಕ ನಿರ್ದೇಶಕ ಭೂಮಾಪನ (ಕಂದಾಯ)

ಭಾಸ್ಕರ ನಾಯ್ಕ; ಸಹಾಯಕ ನಿರ್ದೇಶಕ ಯೂಥ್‌ ಸರ್ವೀಸ್‌ (ಕಂದಾಯ) 

ಪಾಂಡುರಂಗಯ್ಯ ಸಿ.ಪಿ; ಸಹಾಯಕ ಖಜಾನೆ ಅಧಿಕಾರಿ (ಆರ್ಥಿಕ)

ಮಲ್ಲಿಕಾರ್ಜುನ ಬಿರಾದಾರ; ಅಸಿಸ್ಟೆಂಟ್ ಚೀಫ್‌ ಆಡಿಟ್‌ (ಅಕೌಂಟಿಂಗ್‌ ಅಂಡ್‌ ಆಡಿಟ್‌)

ತಾರನಾಥ; ಅಸಿಸ್ಟೆಂಟ್ ಚೀಫ್‌ ಆಡಿಟ್‌ (ಅಕೌಂಟಿಂಗ್‌ ಅಂಡ್‌ ಆಡಿಟ್‌)

ಮಹದೇವಪ್ಪ ಆರ್‌; ಅಸಿಸ್ಟೆಂಟ್ ಚೀಫ್‌ ಆಡಿಟ್‌ (ಅಕೌಂಟಿಂಗ್‌ ಅಂಡ್‌ ಆಡಿಟ್‌)

ಅಶ್ವಿನಿ ವೈ.ಟಿ; ಸಹಾಯಕ ರಿಜಿಸ್ಟ್ರರ್‌ (ಸಹಕಾರ)

ರವಿಚಂದ್ರ ಎಂ,; ಜಿಲ್ಲಾ ಮಾರುಕಟ್ಟೆ ಅಧಿಕಾರಿ (ಕೃಷಿ)

ಸಂಗೀತಾ ಎಸ್‌; ಜಿಲ್ಲಾ ಮಾರುಕಟ್ಟೆ ಅಧಿಕಾರಿ (ಕೃಷಿ)

ಮಂಜುನಾಥ ವೈ; ಸಹಾಯಕ ರಿಜಿಸ್ಟ್ರರ್‌ (ಸಹಕಾರ)

ವಿದ್ಯಾ ಹೊನಶೆಟ್ಟಿ; ಅಸಿಸ್ಟೆಂಟ್ ಚೀಫ್‌ ಆಡಿಟ್‌ (ಅಕೌಂಟಿಂಗ್‌ ಅಂಡ್‌ ಆಡಿಟ್‌)

ಪರಶುರಾಮ್ ಎಸ್‌. ವಾಲೀಕಾರ; ಉದ್ಯೋಗಾಧಿಕಾರಿ (ಕಾರ್ಮಿಕ)

ಮಹೇಶ ಕೆ.; ಸಹಾಯಕ ನಿರ್ದೇಶಕ ಯೂಥ್‌ ಸರ್ವೀಸ್‌ (ಕಂದಾಯ) 

ನಿವೇದಿತಾ ಟಿ.ಎಂ; ಸಹಾಯಕ ರಿಜಿಸ್ಟ್ರರ್‌ (ಸಹಕಾರ)

ವನಮಾಲಾ ಕೆ.; ಸಹಾಯಕ ಖಜಾನೆ ಅಧಿಕಾರಿ (ಆರ್ಥಿಕ)

ರಾಜಾರಾಮ ರಾವ್‌ ಬಿ.; ಜಿಲ್ಲಾ ಮಾರುಕಟ್ಟೆ ಅಧಿಕಾರಿ (ಕೃಷಿ)

ಶಂಶುನ್ನಿಸಾ ಸಿ.ಬಿ; ಅಸಿಸ್ಟೆಂಟ್ ಚೀಫ್‌ ಆಡಿಟ್‌ (ಅಕೌಂಟಿಂಗ್‌ ಅಂಡ್‌ ಆಡಿಟ್‌)

ಹೀರಾವತಿ; ಅಸಿಸ್ಟೆಂಟ್ ಚೀಫ್‌ ಆಡಿಟ್‌ (ಅಕೌಂಟಿಂಗ್‌ ಅಂಡ್‌ ಆಡಿಟ್‌)

ಶಶಿರೇಖಾ ಎಸ್‌.ಎಂ.; ಅಸಿಸ್ಟೆಂಟ್ ಚೀಫ್‌ ಆಡಿಟ್‌ (ಅಕೌಂಟಿಂಗ್‌ ಅಂಡ್‌ ಆಡಿಟ್‌)

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 2

  Frustrated
 • 5

  Angry

Comments:

0 comments

Write the first review for this !