ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ

ಮುಖ್ಯಮಂತ್ರಿಗೆ ಪತ್ರ: ಅಭ್ಯರ್ಥಿಗಳಿಗೆ ಉತ್ತರ ಪತ್ರಿಕೆಗಳ ಪ್ರತಿ ನೀಡಲು ಒತ್ತಾಯ
Last Updated 9 ಜುಲೈ 2020, 14:01 IST
ಅಕ್ಷರ ಗಾತ್ರ

ಬೆಂಗಳೂರು: 2015ರ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮುಖ್ಯ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ಉತ್ತರ ಪತ್ರಿಕೆಗಳ ದೃಢೀಕೃತ ಪ್ರತಿ ನೀಡಲು ನಿರಾಕರಿಸುತ್ತಿರುವ ಕೆಪಿಎಸ್‌ಸಿ (ಕರ್ನಾಟಕ ಲೋಕಸೇವಾ ಆಯೋಗ) ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಗುರುವಾರ ಪತ್ರ ಬರೆದಿರುವ ಅವರು, ‘ಮೌಲ್ಯಮಾಪನ ಆಗಿರುವ ಉತ್ತರ ಪತ್ರಿಕೆ ಪ್ರತಿ ಪಡೆದುಕೊಳ್ಳುವುದು ಅಭ್ಯರ್ಥಿಗಳ ಹಕ್ಕು’ ಎಂದು ಹೇಳಿದ್ದಾರೆ.

ಅಂಗೇಶ್‌ಕುಮಾರ್ ಎಂಬುವರು ಯುಪಿಎಸ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಉತ್ತರ ಪತ್ರಿಕೆ ಕೇಳಿದ್ದ ಪ್ರಕರಣದ ಸುಪ್ರೀಂ ಕೋರ್ಟ್‌ ಆದೇಶವನ್ನೇ ಮುಂದಿಟ್ಟುಕೊಂಡು ಕೆಪಿಎಸ್‌ಸಿ ಹಿಂಬರಹ ನೀಡುತ್ತಿದೆ. ಆ ನಂತರ ಅದೇ ಸುಪ್ರೀಂ ಕೋರ್ಟ್‌ ಮೃದುಲಾ ಮಿಶ್ರ ಪ್ರಕರಣದಲ್ಲಿ ಉತ್ತರ ಪತ್ರಿಕೆಗಳ ಪ್ರತಿ ನೀಡಬೇಕು ಎಂದು ಆದೇಶಿಸಿದೆ.

‘ಉತ್ತರ ಪತ್ರಿಕೆ ಪ್ರತಿ ನೀಡಲೇಬೇಕು ಎಂದು ಕರ್ನಾಟಕ ಮಾಹಿತಿ ಆಯೋಗ ಕೂಡ ಆದೇಶಗಳನ್ನು ನೀಡುತ್ತಿದೆ. ಮಾಹಿತಿ ಹಕ್ಕು ಕಾಯ್ದೆಯನ್ನೂ ಕೆಪಿಎಸ್‌ಸಿ ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿಲ್ಲ ಎಂದೂ ಆಯೋಗ ಆಕ್ಷೇಪ ವ್ಯಕ್ತಪಡಿಸಿದೆ. ಆದರೂ, ಅಭ್ಯರ್ಥಿಗಳನ್ನು ಕೆಪಿಎಸ್‌ಸಿ ಅಲೆದಾಡಿಸಲಾಗುತ್ತಿದೆ’ಎಂದು ವಿವರಿಸಿದ್ದಾರೆ.

‘ನನ್ನನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿರುವ ಅಭ್ಯರ್ಥಿಗಳು, ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ. ಸುಪ್ರೀಂ ಕೋರ್ಟ್‌ ಆದೇಶ ಪಾಲಿಸಲು ಮತ್ತು ಮಾಹಿತಿ ಹಕ್ಕು ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಆದೇಶ ನೀಡಬೇಕು’ ಎಂದು ಕೋರಿದ್ದಾರೆ.

ಉತ್ತರ ಪತ್ರಿಕೆಗಳ ಪ್ರತಿ ನೀಡಲು ನಿರಾಕರಿಸಿದ್ದ ಕೆಪಿಸಿಸ್‌ ವಿರುದ್ಧ ಗರಂ ಆಗಿದ್ದ ರಾಜ್ಯ ಮಾಹಿತಿ ಆಯುಕ್ತ ಎನ್.ಪಿ. ರಮೇಶ್‌ ಅವರು, ‘ಕೆಪಿಎಸ್‌ಸಿ ಸಂವಿಧಾನ ಬಾಹಿರವಾಗಿ ನಡೆದುಕೊಳ್ಳುತ್ತಿದ್ದು, ಈ ನಡೆ ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಮತ್ತೊಬ್ಬ ಆಯುಕ್ತ ಕೆ.ಇ.ಕುಮಾರಸ್ವಾಮಿ ಅವರು ಕೆಪಿಎಸ್‌ಸಿ ನಡೆ ತಿದ್ದಿಕೊಳ್ಳಲು ನಿರ್ದೇಶನ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಶಿಫಾರಸು ಮಾಡಿದ್ದರು.

ಐಎಎಸ್‌ ಅಧಿಕಾರಿಗೆ ಶೋಕಾಸ್ ನೋಟಿಸ್

ಉತ್ತರ ಪತ್ರಿಕೆಗಳ ಪ್ರತಿ ನೀಡಲು ನಿರಾಕರಿಸುತ್ತಿರುವ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕಿ(ಐಎಎಸ್‌ ಅಧಿಕಾರಿ) ದಿವ್ಯಪ್ರಭು ಅವರಿಗೆ ಮಾಹಿತಿ ಆಯೋಗ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

‘ಮಾಹಿತಿ ಹಕ್ಕು ಕಾಯ್ದೆ ಅನುಷ್ಠಾನಗೊಳಿಸಲು ವಿಫಲವಾಗುತ್ತಿರುವ ನಿಮ್ಮ ವಿರುದ್ಧ ಶಿಸ್ತು ಕ್ರಮಕ್ಕೆಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ(ಡಿಒಪಿಟಿ) ಶಿಫಾರಸು ಮಾಡಲಾಗುವುದು’ ಎಂದು ರಾಜ್ಯ ಮಾಹಿತಿ ಆಯುಕ್ತ ಎನ್‌.ಪಿ.ರಮೇಶ್ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT