’ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಸತ್ತು ಹೋಗಿದೆ’

ಬುಧವಾರ, ಜೂನ್ 26, 2019
25 °C
ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ಕೆ ಆರ್ ರಮೇಶ್ ಕುಮಾರ್ ಅಭಿಪ್ರಾಯ

’ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಸತ್ತು ಹೋಗಿದೆ’

Published:
Updated:

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಸತ್ತು ಹೋಗಿದೆ ಎಂದು ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ಕೆ ಆರ್ ರಮೇಶ್ ಕುಮಾರ್ ಅವರು ಅಭಿಪ್ರಾಯಪಟ್ಟರು. 

ಹಿರಿಯ ಪತ್ರಕರ್ತ ಸಿ ಎಂ ರಾಮಚಂದ್ರ ಅವರ ಕಾಕ್‍ಪಿಟ್ ಆಫ್ ಇಂಡಿಯಾಸ್ ಪೊಲಿಟಿಕಲ್ ಬ್ಯಾಟಲ್ಸ್ - ಕರ್ನಾಟಕ ಆಂಗ್ಲ ಭಾಷೆಯ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಒಂದೆಡೆ ಹೊಗಳುಭಟ್ಟರು ಮತ್ತೊಂದೆಡೆ ಭ್ರಷ್ಟರು ನಾಯಕರನ್ನು ಓಲೈಸಿ ಒಲಿಸಿಕೊಳ್ಳಲು ಎಲ್ಲಕ್ಕೂ ಸೈ ಎನ್ನುವ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವುದರಿಂದ ಪ್ರಜಾಪ್ರಭುತ್ವಕ್ಕೇ ಸಂಚಕಾರ ಬಂದೊದಗುವ ಪರಿಸ್ಥಿತಿಗೆ ನಾವು ಜಾರಿದ್ದೇವೆ ಎಂದು ಅವರು ವಿವರಿಸಿದರು. 

ಪ್ರಶ್ನಿಸುವ ಗುಣವನ್ನೇ ಮರೆತ ಮಾಧ್ಯಮದವರು ?

ಓರ್ವ ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು ಮಂತ್ರಿ-ಮುಖ್ಯಮಂತ್ರಿಯವರೆಗೆ ಎಲ್ಲಾ ಪರವಾನಗಿಗಳೂ ತನಗೇ ಬೇಕು, ತನ್ನವರಿಗೇ ಬೇಕು ಎಂಬ ಮನೋಭಾವ ಮನೋಧರ್ಮ ತಾಳುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಅಂತೆಯೇ, ಚುನಾವಣೆಗಳಲ್ಲಿ ಸ್ಪರ್ಧಿಸುವವರು ತಮ್ಮ ಮಕ್ಕಳು, ಮೊಮ್ಮಕ್ಕಳೇ ಆಗಬೇಕು ಎಂಬ ಧೋರಣೆಯನ್ನೂ ಪ್ರಜಾಪ್ರಭುತ್ವದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಚುನಾವಣೆಗಳಲ್ಲಿ ಸ್ಪರ್ಧಿಸಲು ಕೇವಲ ರಾಜಕಾರಣಿಗಳ ಮಕ್ಕಳಿಗೇ ಟಿಕೇಟ್ ಹಂಚುವುದಾದರೆ ಸಮಾಜದಲ್ಲಿ ಇತರೇ ವರ್ಗದವರ ಪಾಡೇನು ? ಎಂಬುದನ್ನು ಪ್ರಶ್ನಿಸುವವರೂ ಇದೀಗ ಮಾಧ್ಯಮ ಕ್ಷೇತ್ರದಲ್ಲಿ ಇಲ್ಲವಾಗಿದ್ದಾರೆ. ಪ್ರಶ್ನಿಸುವ ತಮ್ಮ ಮೂಲ ಗುಣ ಲಕ್ಷಣವನ್ನೇ ಮಾಧ್ಯಮದವರು ಮರೆತಿದ್ದಾರೆ ಎಂದು ರಮೇಶ್ ಕುಮಾರ್ ಅವರು ಮಾಧ್ಯಮದವರ ಜವಾಬ್ದಾರಿಯ ಬಗ್ಗೆಯೂ ಕುಟುಕಿದರು. 

ತತ್ವ-ಸಿದ್ಧಾಂತಗಳ ಕಣ್ಮರೆ

ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಕ್ಷದ ಅಧಿಕೃತ ಅಭ್ಯರ್ಥಿ ನೀಲಂ ಸಂಜೀವ ರೆಡ್ಡಿ ಅವರನ್ನು ಬೆಂಬಲಿಸದೆ, ಆತ್ಮ ಸಾಕ್ಷಿ ಮತ ನೀಡಿ ಎಂದು ಕರೆಕೊಟ್ಟು ಪಕ್ಷೇತರ ಅಭ್ಯರ್ಥಿ ವರಾಹಗಿರಿ ವೆಂಕಟಗಿರಿ ಅವರಿಗೆ ಬೆಂಬಲಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಎಸ್ ನಿಜಲಿಂಗಪ್ಪ ಅವರು ಬ್ಯಾಂಕ್‍ಗಳ ರಾಷ್ಟ್ರೀಕರಣ ಒಳಗೊಂಡಂತೆ ಹಲವು ಉತ್ತಮ ಕಾರ್ಯಗಳನ್ನು ನಿರ್ವಹಿಸಿದ್ದರೂ ಇಂದಿರಾ ಗಾಂಧಿ ಅವರನ್ನು ಉಚ್ಛಾಟಿಸಿದರು ಎಂಬ ಘಟನೆಯನ್ನು ಸ್ಮರಿಸಿದ ರಮೇಶ್ ಕುಮಾರ್ ಅವರು ಅಂದಿನ ಕಾಲದಲ್ಲಿ ತತ್ವ-ಸಿದ್ಧಾಂತಗಳ ಆಧಾರದ ಮೇರೆಗೆ ಪಕ್ಷಗಳು ಒಡೆಯುತ್ತಿದ್ದವು. ಆದರೆ, ಇದೀಗ ತತ್ವ-ಸಿದ್ಧಾಂತಗಳೇ ಕಣ್ಮರೆಯಾಗಿವೆ ಎಂದು ನೊಂದು ನುಡಿದರು.

ಸ್ವಾಭಿಮಾನಿ ಅರಸು ತನ್ನ ದೊಡ್ಡ ದೇಹವನ್ನು ಬಗ್ಗಿಸಲಾಗಲಿಲ್ಲ

ರಾಜ್ಯದ ಮುಖ್ಯಮಂತ್ರಿಯಾಗಿದ್ದ ಡಿ ದೇವರಾಜ ಅರಸು ಅವರು ಸ್ವಾಭಿಮಾನಿ. ಅರಸು ಅವರು ತಮ್ಮ ದೊಡ್ಡ ದೇಹವನ್ನು ಹೆಚ್ಚು ಬಗ್ಗಿಸಲು ಸಾಧ್ಯವಾಗಲಿಲ್ಲ. ಮಂತ್ರಿ ಸ್ಥಾನ ವಂಚಿತರಾಗಿದ್ದ ಕೆಲವರ ಷಡ್ಯಂತ್ರಕ್ಕೆ ಬಲಿಯಾದರು.   ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯಲು ಸಾಧ್ಯವಾಗಲಿಲ್ಲ ಎಂದರು. 

ಪ್ಯಾಕೇಟ್ ಟು ಪೇಮೆಂಟ್ !

ಬೆಂಗಳೂರಿನ ಸುಭಾಷ್ ನಗರ ಮೈದಾನದಲ್ಲಿ ಚಕ್ರವರ್ತಿ ರಾಜಗೋಪಾಲಾಚಾರಿ, ಎನ್ ಜಿ ರಂಗಾ, ಕೃಷ್ಣ ಮೆನನ್, ಅಟಲ್ ಬಿಹಾರಿ ವಾಜಪೇಯಿ ಅವರಂತಹ ಮೇರು ನಾಯಕರ ಸಾರ್ವಜನಿಕ ಸಭೆಗಳಿಗೆ ಜನ ಸಾಗರವೇ ಹರಿದು ಬರುತ್ತಿತ್ತು. ಇದೀಗ ಸಾರ್ವಜನಿಕ ಸಭೆಗಳಿಗೆ ಜನರನ್ನು ಕರೆತರಲು ಸಾರಿಗೆ ಸೌಲಭ್ಯ ಕಲ್ಪಿಸುವುದರ ಜೊತೆಗೆ ಪ್ಯಾಕೇಟ್ ಟು ಪೇಮೆಂಟ್ ಅಂದರೆ ಊಟದ ಬುತ್ತಿಯಿಂದ  ಹಿಡಿದು ಸಂಭಾವನೆಯವರೆಗೆ ಎಲ್ಲವನ್ನೂ ವ್ಯವಸ್ಥೆ ಮಾಡಬೇಕಾಗಿದೆ.  ಇವೆಲ್ಲವನ್ನೂ ಅವಲೋಕಿಸಿದರೆ ನಾವು ಎತ್ತ ಸಾಗುತ್ತಿದ್ದೇವೆ ಎಂಬ ಬಗ್ಗೆ ಆತಂಕ ಮೂಡುತ್ತದೆ ಎಂದು ಸಭಾಧ್ಯಕ್ಷರು ಕಳವಳ ವ್ಯಕ್ತಪಡಿಸಿದರು. 

ಮತದಾನ ಮಾಡದೇ ಮಾತನಾಡುವ ವಿಶ್ವಾಸ ಘಾತುಕರು  

ಬೆಂಗಳೂರಿನಲ್ಲಿ ಅತ್ಯಂತ ಸುಶಿಕ್ಷಿತರು ಹಾಗೂ ಪ್ರಜ್ಞಾವಂತರೂ ಇದ್ದಾರೆ ಎಂದು ಹೇಳುತ್ತಾರೆ. ಆದರೆ, ಮತದಾನದ ಅಂಕಿ-ಅಂಶಗಳನ್ನು ಒಮ್ಮೆ ಅವಲೋಕಿಸಿದಾಗ, ಮತದಾನದ ತಮ್ಮ ಹಕ್ಕನೇ ತ್ಯಾಗ ಮಾಡಿದ ಮಹನೀಯರು ರಾಜ್ಯದ ರಾಜಧಾನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಗಮನಿಸಬಹುದಾಗಿದೆ. ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುವ ಗ್ರಾಮೀಣ ಪ್ರದೇಶದ ಅನಕ್ಷರಸ್ಥರಲ್ಲಿನ ಕಳಕಳಿ ಮತ್ತು ಕಾಳಜಿ ಈ ಜನರಲ್ಲಿ ಇಲ್ಲ. ಮತದಾನ ಮಾಡದ ಈ ಜನರು ನಂತರ ಹೀಗಿರಬೇಕಿತ್ತು-ಹಾಗಿರಬೇಕಿತ್ತು  ಎಂದು ಮಾತನಾಡುತ್ತಾರೆ. ಮತದಾನ ಮಾಡದ ಈ ಮಂದಿಗೆ ಅಭಿಪ್ರಾಯ ಪ್ರಕಟಿಸುವ ಯಾವುದೇ ನೈತಿಕ ಹಕ್ಕಿಲ್ಲ. ಇಂತಹವರು ನಿಜವಾಗಲೂ ವಿಶ್ವಾಸ ಘಾತುಕರು ಎಂದು ಸಭಾಧ್ಯಕ್ಷರು ಮತದಾನ ಮಾಡದ ಬೆಂಗಳೂರಿಗರ ಮೇಲೆ ಹರಿಹಾಯ್ದರು. 

ತೀರ್ಪು ಪ್ರಕಟಿಸುತ್ತಿವೆ ! ನ್ಯಾಯ ಕೊಡುತ್ತಿಲ್ಲ !!

ನ್ಯಾಯಾಲಯಗಳೂ ಕೂಡಾ ತೀರ್ಪುಗಳನ್ನು ಪ್ರಕಟಿಸುತ್ತಿವೆಯೇ ಹೊರತು ನ್ಯಾಯ ಕೊಡುತ್ತಿಲ್ಲ ಎಂಬ ಅಭಿಪ್ರಾಯಗಳು ಹೊರಹೊಮ್ಮುತ್ತಿವೆ. ನ್ಯಾಯಮೂರ್ತಿ ಹಾಗೂ ನ್ಯಾಯಾಧೀಶರಲ್ಲೇ ಒಳ ಜಗಳಗಳು, ಶಿಕ್ಷಣ ಕ್ಷೇತ್ರದಲ್ಲೇ ಅತ್ಯುನ್ನತ ಸ್ಥಾನ ಎಂದು ಪರಿಗಣಿಸಲ್ಪಡುವ ವಿಶ್ವ ವಿದ್ಯಾಲಯಗಳ ಕುಲಪತಿಗಳ ಮೇಲೆಯೇ ಸಿ ಐ ಡಿ ವಿಚಾರಣೆಗಳು, ಇನ್ನು ಮಾಧ್ಯಮದ ಬಗ್ಗೆ ಮಾತನಾಡುವ ಹಾಗೆಯೇ ಇಲ್ಲ ! ಅಂತಹ ಪರಿಸ್ಥತಿ ನಿರ್ಮಾಣವಾಗಿದೆ  ಸರ್ಕಾರಿ ಕಚೇರಿಗಳಲ್ಲಿ ಮರಣ ಪ್ರಮಾಣ ಪತ್ರ ಪಡೆಯಲೂ ಲಂಚ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.  ಇದಕ್ಕಿಂತಲೂ ತಲೆ ತಗ್ಗಿಸುವ ವಿಚಾರ ಇರಲು ಸಾಧ್ಯವೇ ? ಮೃತನ ಕುಟುಂಬದವರು ಹಾಗೂ ಸಂಬಂಧಿಗಳಲ್ಲಿ ಉಂಟಾಗುವ ದುಃಖ ಮತ್ತು ನೋವಿನ ಅರಿವು ಪರಿವಿನ ಸುಳಿವಾದರೂ ಈ ಜನರಲ್ಲಿ ಇದೆಯೇ ? ಎಂದು ಸಭಾಧ್ಯಕ್ಷರು ಖಾರವಾಗಿ ಪ್ರಶ್ನಿಸಿದರು.

ಮಾಧ್ಯಮ ಕ್ಷೇತ್ರದಲ್ಲಿ ಶ್ರೀಮಂತರು

ಒಂದು ಕಾಲದಲ್ಲಿ ವಿಧಾನ ಸಭೆಯ ಪಡಸಾಲೆಯಲ್ಲಿ ಹಿರಿಯ ಪತ್ರಕರ್ತರ ಮುಂದೆ ಕುಳಿತು ಕೊಳ್ಳಲು ನಮಗೆ ಭಯವಾಗುತ್ತಿತ್ತು. ಈಗಲೂ ಭಯವಾಗುತ್ತದೆ. ಆದರೆ, ಕಾರಣ ಬೇರೆ ! ಭ್ರಷ್ಟಾಚಾರವು ಇಂದು ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಮಾಧ್ಯಮ ಕ್ಷೇತ್ರವÀನ್ನೂ ವ್ಯಾಪಿಸಿದೆ. ರಾಜಕಾರಣಿಗಳಿಗಿಂತಲೂ ಮಾಧ್ಯಮ ಕ್ಷೇತ್ರದಲ್ಲಿ ಹೆಚ್ಚು ಶ್ರೀಮಂತರಿದ್ದಾರೆ ಎಂದು ಹೇಳಿದರು. 

ವೈರುಧ್ಯಗಳ ನಡುವೆ ನಾವು

ಅಟಲ್ ಬಿಹಾರಿ ವಾಜಪೇಯಿ ಅವರಂತಹ ಮೇರು ವ್ಯಕ್ತಿಯನ್ನು ಬದುಕಿದ್ದಾಗ ಮರೆತ ಜನ ನಂತರ ಅವರು ಕಾಲವಾದಾಗ ಕೊಂಡಾಡಿದರು. ವಿಶ್ವದ ಎಲ್ಲಾ ದೇಶಗಳೂ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದ್ದರೆ, ಸಂಕುಚಿತ ಭಾವದ ಸಂಕೋಲೆಗಳಿಂದ ನಾವು ಹಿನ್ನಡೆ ಅನುಭವಿಸುತ್ತಿದ್ದೇವೆ. ಸರ್ಕಾರಿ ಹಾಗೂ ಖಾಸಗೀ ಕ್ಷೇತ್ರ ಒಳಗೊಂಡಂತೆ ಅತೀ ಹೆಚ್ಚು ವೈದ್ಯಕೀಯ ಮಹಾವಿದ್ಯಾಲಯಗಳು ನಮ್ಮಲ್ಲಿವೆ. ಆದರೆ, ಗ್ರಾಮೀಣ ಪ್ರದೇಶಕ್ಕೆ ತೆರಳಿ ಸೇವೆ ಸಲ್ಲಿಸುವ ವೈದ್ಯರೂ ಮಾತ್ರ ನಮ್ಮಲ್ಲಿಲ್ಲ. ಇಂತಹ ವೈರುಧ್ಯಗಳ ನಡುವೆ ನಾವಿದ್ದೇವೆ. ನಾವೆಲ್ಲರೂ ಬದಲಾಗಬೇಕು. ಉತ್ತಮ ಸಮಾಜವನ್ನು ರೂಪಿಸುವತ್ತ ನಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಬೇಕು ಎಂದು ಅವರು ಆಶಿಸಿದರು.

ಲೇಖಕ ಸಿ ಎಂ ರಾಮಚಂದ್ರ, ಹಿರಿಯ ಪತ್ರಕರ್ತರಾದ ಎಸ್ ಕೆ ಶೇಷಚಂದ್ರಿಕ, ಅರಕೆರೆ ಜಯರಾಂ, ಟಿ ಎಸ್ ರಂಗಣ್ಣ ಅವರೂ ಸೇರಿದಂತೆ ಹಲವು ಗಣ್ಯರು ಈ ಸರಳ ಸಮಾರಂಭದಲ್ಲಿ ಹಾಜರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 24

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !