ರಾಜೀನಾಮೆ ಸಲ್ಲಿಸಿದ ಶಾಸಕರಿಗೆ ಬಿಜೆಪಿ ಸಂಪರ್ಕ: ಕೃಷ್ಣ ಬೈರೇಗೌಡ ಆರೋಪ

ಬೆಂಗಳೂರು: ‘ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಮತ್ತು ಬಿಜೆಪಿ ನಾಯಕರ ಜೊತೆಗೆ ನಡೆದಿದೆ ಎನ್ನಲಾದ ಸಂಭಾಷಣೆಗಳ ಆಡಿಯೊ ಮತ್ತು ವಿಡಿಯೊ ದಾಖಲೆಗಳು ಈ ಹಿಂದೆಯೇ ಮಾಧ್ಯಮಗಳಲ್ಲಿ ಬಿಡುಗಡೆಯಾಗಿತ್ತು. ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳನ್ನು ಆಧರಿಸಿ ಈ ಮಾತು ಆಡುತ್ತಿದ್ದೇನೆ’ ಎಂದು ಸಚಿವ ಕೃಷ್ಣಬೈರೇಗೌಡ ವಿಧಾನಸೌಧದಲ್ಲಿ ಹೇಳಿದರು.
‘ರಮೇಶ್ ಜಾರಕಿಹೊಳಿ ಏಳೆಂಟು ತಿಂಗಳಿಂದ ಬಿಜೆಪಿ ಸಂಪರ್ಕದಲ್ಲಿದ್ದಾರೆ. ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ ಅವರು ಕೆಲವು ನಾಯಕರೊಂದಿಗೆ ನಡೆಸಿದ ಫೋನ್ ಸಂಭಾಷಣೆಗಳು ಈ ಹಿಂದೆ ಬಹಿರಂಗಗೊಂಡಿದ್ದವು. ತಮಗೆ ₹25 ಕೋಟಿ ನೀಡುವ ಆಫರ್ ಇದೆ ಎಂದಿದ್ದರು. ಆದರೆ ಅವರಿಗೆ ಫೋನ್ ಕರೆ ಮಾಡಿದ್ದು ಯಾರು ಎಂದು ಹೆಸರು ಹೇಳಲಿಲ್ಲ’ ಎಂದು ಕೃಷ್ಣಬೈರೇಗೌಡ ಹೇಳಿದರು.
ಕೃಷ್ಣಬೈರೇಗೌಡರ ಮಾತಿಗೆ ಜಗದೀಶ್ ಶೆಟ್ಟರ್ ಆಕ್ಷೇಪ ವ್ಯಕ್ತಪಡಿಸಿದರು. ಆರೋಪಕ್ಕೆ ಸಂಬಂಧಿಸಿದಂತೆ ನನ್ನಲ್ಲಿರುವ ದಾಖಲೆಗಳನ್ನು ಸಂಜೆ ನಿಮಗೆ ನೀಡುವೆ ಸಭಾಧ್ಯಕ್ಷರಿಗೆ ಕೃಷ್ಣಬೈರೇಗೌಡರು ಭರವಸೆ ನೀಡಿದರು.
‘ಬಿಜೆಪಿಯವರೇ ಮುಂದೆ ನಿಂತು ರಾಜೀನಾಮೆ ಕೊಡಿಸಿದ್ದಾರೆ’ ಎನ್ನುವ ಮಾತಿಗೂ ಕೃಷ್ಣಬೈರೇಗೌಡರು ಸಾಕ್ಷಿ ನೀಡಬೇಕಾಗುತ್ತೆ ಎಂದು ಶಾಸಕ ಮಾಧುಸ್ವಾಮಿ ಒತ್ತಾಯಿಸಿದರು.
‘ಶಾಸಕರನ್ನು ಸೆಳೆಯುವ ಪ್ರಯತ್ನದಲ್ಲಿ ‘ನಿಮ್ಮ ಮೇಲಿರುವ ಕೇಸ್‌ಗಳ ವಿಚಾರ ನಾನು ತಗೊಳ್ತೀನಿ. ಮಂತ್ರಿ ಮಾಡ್ತೀನಿ’ ಅಂತೆಲ್ಲಾ ಬಿಜೆಪಿ ಆಮಿಷ ಒಡ್ಡಿದೆ’ ಎಂದು ಕೃಷ್ಣಬೈರೇಗೌಡ ಆರೋಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.