ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ನಲ್ಲಿ ಆರೋಗ್ಯ ಸೀಲ್

ಸೀಲ್ ಇಲ್ಲದ ಪ್ರಯಾಣಿಕರನ್ನು ಹತ್ತಿಸಿಕೊಂಡರೆ ನಿರ್ವಾಹಕರಿಗೆ ನೋಟಿಸ್
Last Updated 30 ಜೂನ್ 2020, 13:18 IST
ಅಕ್ಷರ ಗಾತ್ರ

ಬೆಂಗಳೂರು: ಸುರಕ್ಷತಾ ಪ್ರಯಾಣದ ಬಗ್ಗೆ ಜನರಲ್ಲಿ ಭರವಸೆ ಮೂಡಿಸುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಮತ್ತೊಂದು ಪ್ರಯತ್ನ ಆರಂಭಿಸಿದೆ. ಬಸ್ ನಿಲ್ದಾಣಕ್ಕೆ ಬರುವ ಎಲ್ಲಾ ಪ್ರಯಾಣಿಕರಿಗೆ ಆರೋಗ್ಯ ಪರೀಕ್ಷೆ ನಡೆಸಿ ಸೀಲ್ ಹಾಕಿದ ನಂತರೇ ಬಸ್ ಹತ್ತಲು ಅವಕಾಶ ನೀಡುತ್ತಿದೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಇಲ್ಲಿಂದ ಹೊರ ಊರುಗಳಿಗೆ ಹೋಗುವ ಪ್ರಯಾಣಿಕರ ಆರೋಗ್ಯ ತಪಾಸಣೆಯನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತಿದೆ.

ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಬರಲು ಒಂದೇ ಪ್ರವೇಶ ದ್ವಾರವನ್ನು ಉಳಿಸಿಕೊಳ್ಳಲಾಗಿದೆ. ಬಂದ ಕೂಡಲೇ ಸ್ಯಾನಿಟೈಸರ್ ಕೈಗೆ ಹಚ್ಚಿಕೊಂಡು ಮುಂದೆ ಸಾಗಿದರೆ ಸಿಬ್ಬಂದಿಯೇ ಥರ್ಮಲ್ ಸ್ಕ್ಯಾನರ್ ಮೂಲಕ ಆರೋಗ್ಯ ತಪಾಸಣೆ ನಡೆಸುತ್ತಾರೆ. ಅವರ ದೇಹದ ಉಷ್ಣಾಂಶ ಸಮತೋಲನದಲ್ಲಿ ಇದ್ದರೆ ಮಾತ್ರ ಪ್ರಯಾಣಿಸಬಹುದು ಎಂಬ ಸೀಲ್ ಅನ್ನು ಎಡಗೈಗೆ ಹಾಕುತ್ತಾರೆ.

‘ಎಡ ಅಂಗೈಗೆ ಸಣ್ಣ ವೃತ್ತಾಕಾರದ ಈ ಸೀಲ್‌ಗೂಹೋಮ್ ಕ್ವಾರಂಟೈನ್ ಸೀಲ್‌ಗೂ ಸಂಬಂಧ ಇಲ್ಲ. ಇದು ಮನೆಗೆ ಹೊಗುವಷ್ಟರಲ್ಲೇ ಅಳಿಸಿ ಹೋಗಲಿದೆ’ ಎಂದು ಪ್ರಯಾಣಿಕರಿಗೆ ಅಧಿಕಾರಿಗಳು ಮನವರಿಕೆ ಮಾಡುತ್ತಾರೆ.

ಸೀಲ್ ಹಾಕಿದವರನ್ನು ಮಾತ್ರ ಬಸ್ ಹತ್ತಿಸಿಕೊಳ್ಳುವ ನಿರ್ವಾಹಕರು, ಪ್ರಯಾಣಿರ ಹೆಸರು, ವಯಸ್ಸು ಮತ್ತು ಮೊಬೈಲ್ ದೂರವಾಣಿ ಸಂಖ್ಯೆ ನಮೂದಿಸಿಕೊಳ್ಳುತ್ತಾರೆ. ನಿಲ್ದಾಣದ ಹೊರ ಹೋಗುವ ದ್ವಾರದಲ್ಲಿ ಬಸ್ ಮತ್ತೊಮ್ಮೆ ತಪಾಸಣೆಗೆ ಒಳಪಡುತ್ತದೆ.

ಸಂಸ್ಥೆಯ ತನಿಖಾ ಮತ್ತು ಭದ್ರತಾ ವಿಭಾಗದ ಸಿಬ್ಬಂದಿ ಬಸ್ ಹತ್ತಿ ಎಡಗೈನಲ್ಲಿ ಸೀಲ್ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುತ್ತಾರೆ. ಸೀಲ್ ಇಲ್ಲದ ಪ್ರಯಾಣಿಕರನ್ನು ಬಸ್‌ನಲ್ಲಿ ಹತ್ತಿಸಿಕೊಂಡಿದ್ದರೆ ನಿರ್ವಾಹಕರಿಗೆ ನೋಟಿಸ್ ನೀಡುತ್ತಾರೆ.

ಪಿಕ್‌ಅಪ್ ಪಾಯಿಂಟ್‌ಗಳಲ್ಲಿ ಹತ್ತುವ ಪ್ರಯಾಣಿಕರ ಆರೋಗ್ಯ ಪರೀಕ್ಷೆಗೂ ಅಲ್ಲಲ್ಲಿ ತಪಾಸಣಾ ಕೇಂದ್ರಗಳಿವೆ. ನವರಂಗ್, ಯಶವಂತಪುರದಲ್ಲಿ ಬಸ್‌ ಹತ್ತುವ ಪ್ರಯಾಣಿಕರ ಆರೋಗ್ಯವನ್ನು ಗೊರಗೊಂಟೆ ಪಾಳ್ಯದಲ್ಲಿ ಪರೀಕ್ಷೆ ಮಾಡಲಾಗುತ್ತದೆ.

‘ಅಲ್ಲಲ್ಲಿ ಬಸ್ ಹತ್ತಿ ತಪಾಸಣೆ ನಡೆಸುವ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಸೀಲ್ ಇಲ್ಲದ ಪ್ರಯಾಣಿಕರನ್ನು ಕರೆದೊಯ್ದರೆ ನಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ’ ಎಂದು ತುಮಕೂರು ಮಾರ್ಗದ ಬಸ್‌ನ ನಿರ್ವಾಹಕರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT