ಶನಿವಾರ, ಆಗಸ್ಟ್ 15, 2020
26 °C
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ

ಕೆಎಸ್‌ಆರ್‌ಟಿಸಿ: ₹3,500 ಕೋಟಿಯ ಡೀಸೆಲ್‌ ಖರೀದಿ ರದ್ದತಿಗೆ ಒತ್ತಡ!

ಮಂಜುನಾಥ ಹೆಬ್ಬಾರ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (ಕೆಎಸ್‌ಆರ್‌ಟಿಸಿ) ₹3,500 ಕೋಟಿ ಮೊತ್ತದ ಡೀಸೆಲ್‌ ಖರೀದಿ ಟೆಂಡರ್ ಪ್ರಕ್ರಿಯೆಯನ್ನು ಕೈಬಿಟ್ಟು ಒಂದೇ ಸಂಸ್ಥೆಗೆ ಡೀಸೆಲ್‌ ಪೂರೈಸುವ ಜವಾಬ್ದಾರಿಯನ್ನು ವಹಿಸಲು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಆಪ್ತರು ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಕೆಎಸ್‌ಆರ್‌ಟಿಸಿಯಲ್ಲಿ 8 ಸಾವಿರ ಬಸ್‌ಗಳಿವೆ. ಈ ಬಸ್‌ಗಳಿಗೆ ಮೂರು ವರ್ಷಗಳ ಅವಧಿಗೆ ಡೀಸೆಲ್‌ ಪೂರೈಸಲು ಫೆಬ್ರುವರಿ 27ರಂದು ಟೆಂಡರ್‌ ಕರೆಯಲಾಗಿತ್ತು. ಟೆಂಡರ್ ಸಲ್ಲಿಸಲು ಮೇ 14ರಂದು ಕೊನೆಯ ದಿನಾಂಕ ಎಂದು ಪ್ರಕಟಿಸಲಾಗಿತ್ತು. ಆದರೆ, ಈ ಟೆಂಡರ್‌ ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದು ಸಚಿವರ ಆಪ್ತರು ಒತ್ತಡ ಹೇರಿದ್ದಾರೆ.

ಸೋಮವಾರ ನಡೆಯುವ ಆಡಳಿತ ಮಂಡಳಿಯ ಸಭೆಯಲ್ಲಿ ಟೆಂಡರ್‌ ಪ್ರಕ್ರಿಯೆ ಕೈಬಿಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ಹಿಂದೆ ಡೀಸೆಲ್‌ ಪೂರೈಸಿದ್ದ ಸಂಸ್ಥೆಗೆ ಈ ಹೊಣೆಯನ್ನು ವಹಿಸಲು ಸಿದ್ಧತೆ ನಡೆದಿದೆ ಎಂದು ಸಾರಿಗೆ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಡೀಸೆಲ್‌ ಸರಬರಾಜು ಮಾಡಲು 2015ರಲ್ಲಿ ಟೆಂಡರ್ ಕರೆಯಲಾಗಿತ್ತು. ಆಗ ಪ್ರಕ್ರಿಯೆಯಲ್ಲಿ ಬಿಪಿಸಿಎಲ್‌, ಎಚ್‌ಪಿಸಿಎಲ್‌ ಹಾಗೂ ಐಒಸಿಎಲ್‌ ಕಂಪನಿಗಳು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು. ಬಿಪಿಸಿಎಲ್‌ಗೆ ಮೂರು ವರ್ಷಗಳ ಅವಧಿಗೆ ಡೀಸೆಲ್‌ ಪೂರೈಕೆಯ ಹೊಣೆ ವಹಿಸಲಾಗಿತ್ತು. 2018ರಲ್ಲಿ ಅವಧಿ ಪೂರ್ಣಗೊಂಡಿತ್ತು. ಮತ್ತೆ ಒಂದು ವರ್ಷದ ಅವಧಿಗೆ ಡೀಸೆಲ್‌ ಪೂರೈಕೆಯ ಜವಾಬ್ದಾರಿಯನ್ನು ಬಿಪಿಸಿಎಲ್‌ಗೆ ವಹಿಸಲಾಗಿತ್ತು. ಈ ಅವಧಿ ಜೂನ್‌ 30ಕ್ಕೆ ಪೂರ್ಣಗೊಳ್ಳಲಿದೆ.

‘ಈ ಸಲ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಬಿಪಿಸಿಎಲ್‌, ಎಚ್‌ಪಿಸಿಎಲ್‌, ಐಒಸಿಎಲ್‌ ಹಾಗೂ ಎಂಆರ್‌ಪಿಎಲ್‌ ಕಂಪನಿಗಳು ಆಸಕ್ತಿ ತೋರಿವೆ. ಕಡಿಮೆ ಬಿಡ್‌ ಮಾಡಿದ ಸಂಸ್ಥೆಗೆ ಡೀಸೆಲ್‌ ಪೂರೈಕೆಗೆ ಹೊಣೆ ಸಿಗಲಿದೆ. ಪ್ರಕ್ರಿಯೆ ನಡೆಸಿದರೆ ತಮಗೆ ಬೇಕಾದ ಕಂಪನಿಗೆ ಟೆಂಡರ್‌ ನೀಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ರದ್ದುಪಡಿಸಲು ಒತ್ತಡ ಹೇರಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಸಂಸ್ಥೆಗೆ ನಿತ್ಯ ಲಕ್ಷಾಂತರ ಲೀಟರ್ ಡೀಸೆಲ್‌ ಬೇಕಿದೆ. ಸಗಟು ಪೂರೈಕೆ ಮಾಡುವಾಗ ಸಾಮಾನ್ಯವಾಗಿ ಮಾರುಕಟ್ಟೆ ದರಕ್ಕಿಂತ ಒಂದು ರೂಪಾಯಿ ಕಡಿಮೆ ಬೆಲೆಗೆ ನೀಡಲಾಗುತ್ತದೆ. ಆದರೆ, ಸಂಸ್ಥೆಗೆ ಮಾರುಕಟ್ಟೆ ಬೆಲೆಗೆ ನೀಡಿದ ಉದಾಹರಣೆ ಇದೆ. ಡೀಸೆಲ್‌ ಖರೀದಿ ಹೆಸರಿನಲ್ಲಿ ಅನುಕೂಲ ಮಾಡಿಕೊಂಡವರು ಸಾಕಷ್ಟು ಮಂದಿ. ನೆಪ ಮಾತ್ರಕ್ಕೆ ತನಿಖೆ ನಡೆಯುತ್ತದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

**

ಸಂಸ್ಥೆಯ ಆಡಳಿತ ಮಂಡಳಿ ಸಭೆ ಸೋಮವಾರ ಇದೆ. ಡೀಸೆಲ್‌ ಖರೀದಿ ಪ್ರಕ್ರಿಯೆ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ.

-ಶಿವಯೋಗಿ ಕಳಸದ್‌, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು