ಮಂಗಳವಾರ, ಜುಲೈ 27, 2021
28 °C

ಕುಕ್ಕೆಸುಬ್ರಹ್ಮಣ್ಯ ವಿವಾದ: ಸರ್ಕಾರ ಮಧ್ಯಸ್ಥಿಕೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಶ್ಲೇಷ ಬಲಿ, ಸರ್ಪಸಂಸ್ಕಾರ ಮತ್ತಿತರ ಪೂಜಾ ವಿಧಿವಿಧಾನ ನಡೆಸುವ ಬಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸಂಪುಟ ನರಸಿಂಹಸ್ವಾಮಿ ಮಠದ ನಡುವೆ ಉದ್ಭವಿಸಿರುವ ವಿವಾದವನ್ನು ಇತ್ಯರ್ಥಗೊಳಿಸಲು ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸಬೇಕು ಎಂದು ಕರ್ನಾಟಕ ವಿಪ್ರ ವೇದಿಕೆ ಆಗ್ರಹಿಸಿದೆ.

‘ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವರಿಗೆ ದೇವಸ್ಥಾನ ವ್ಯವಸ್ಥಾಪನ ಮಂಡಳಿ ಅಧ್ಯಕ್ಷ ನಿತ್ಯಾನಂದ, ಸದಸ್ಯರಾದ ಗುರುಪ್ರಸಾದ್, ಪ್ರಸನ್ನ ಅವರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಸ್ವಾಮೀಜಿ ಮತ್ತು ಮಠದ ಗೌರವಕ್ಕೆ ಧಕ್ಕೆ ತರುವ ಹಾಗೆ ನಡೆದುಕೊಳ್ಳುತ್ತಿದ್ದಾರೆ’ ಎಂದು ವೇದಿಕೆ ಅಧ್ಯಕ್ಷ ಜೆ.ಎಚ್‌.ಅನಿಲ್‌ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘800 ವರ್ಷಗಳಿಂದ ಒಂದೇ ಆವರಣದಲ್ಲಿರುವ ದೇವಸ್ಥಾನ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠ ಅನ್ಯೋನ್ಯತೆಯಿಂದ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದವು. ಆದರೆ, ಮಂಡಳಿಯ ಸದಸ್ಯರು ಮಠದಲ್ಲಿ ಪೂಜೆ  ಮಾಡಿಸಿದರೆ, ನಿಮಗೆ ಒಳ್ಳೆಯದಾಗುವುದಿಲ್ಲ ಎಂದು ಭಕ್ತ ವಲಯದಲ್ಲಿ ಉದ್ದೇಶ ಪೂರ್ವಕವಾಗಿಯೇ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಹೇಳಿದರು.

ವೇದಿಕೆ ಉಪಾಧ್ಯಕ್ಷ ರಾಘವೇಂದ್ರ ಗಂಗಾವತಿ, ‘ದೇವಾಲಯದ ಆಡಳಿತ ಮಂಡಳಿ ಹೇಳಿಕೆ ಮತ್ತು ಅವರ ನಿರ್ಧಾರಗಳಿಂದ ಕಿರಿಕಿರಿ ಉಂಟಾಗಿದೆ. ಮಠಕ್ಕೆ ಇಷ್ಟಪಟ್ಟು ಬರುವ ಭಕ್ತರನ್ನು ತಡೆಯುತ್ತಿದ್ದಾರೆ. ದೇವಸ್ಥಾನದಲ್ಲಿರುವ ಸಾಲಿಗ್ರಾಮಕ್ಕೆ ಸ್ವಾಮೀಜಿ ಅವರು ಸುದೀರ್ಘ ಕಾಲದಿಂದ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಈಗ ಅದಕ್ಕೂ ತಡೆಯೊಡ್ಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಿರುಕುಳ ತಾಳಲಾರದೆ ಸ್ವಾಮೀಜಿ ನಿರಶನ ಆರಂಭಿಸಿದ್ದರು. ವಿಷಯ ತಿಳಿದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ದಸರಾ ಹಬ್ಬ ಮುಗಿದ ಬಳಿಕ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ಕೊಟ್ಟಿದ್ದರು. ತದನಂತರ ಯಾರೂ ಇತ್ತ ಸುಳಿದಿಲ್ಲ. ಇತ್ತೀಚೆಗೆ ಆಡಳಿತ ಮಂಡಳಿಯವರು ಸ್ವಾಮೀಜಿ ಅವರಿಗೆ ಜೀವ ಬೆದರಿಕೆಯನ್ನೂ ಹಾಕಿದ್ದಾರೆ. ಹಿಂದೆ ಒದಗಿಸಿದ್ದ ಪೊಲೀಸ್‌ ಭದ್ರತೆಯನ್ನು ಈಗ ಹಿಂಪಡೆಯಲಾಗಿದೆ’ ಎಂದು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು