ಗುರುವಾರ , ಆಗಸ್ಟ್ 5, 2021
21 °C

ಒಳ್ಳೆ ಕೆಲಸ ಮಾಡಿದ್ರಿ ಮೇಷ್ಟ್ರೇ ಅಂದ್ರು ಸಚಿವ ಸುರೇಶ್‌ ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಂದಾಪುರ: ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ತಮ್ಮ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಶಿಕ್ಷಣಾಭ್ಯಾಸ ಮಾಡುತ್ತಿರುವ 43 ಮಕ್ಕಳ ಮನೆಗೆ ತೆರಳಿ ಅವರಿಗೆ ಪಾಠ ಹೇಳಿ, ತಿಳಿಯದ ಸಂಗತಿಗಳನ್ನು ಮನನ ಮಾಡಿಸಿ ಶಿಕ್ಷಣಕೈಂಕರ್ಯದಲ್ಲಿ ತೊಡಗಿಸಿ ತಾಲ್ಲೂಕಿನ ಹೆಸ್ಕೂತ್ತೂರಿನ ಪ್ರೌಢ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಬಾಬು ಶೆಟ್ಟಿಯವರನ್ನು ಉಡುಪಿಗೆ ಬಂದಿದ್ದ ಶಿಕ್ಷಣ ಸಚಿವ  ಸುರೇಶ್‌ ಕುಮಾರ್‌ ಫೂನ್‌ ಮಾಡಿ ಅಭಿನಂದಿಸಿದ್ದಾರೆ. ತಮ್ಮ  ಫೇಸ್‌ ಬುಕ್‌ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಮಂಗಳವಾರ ಜಿಲ್ಲೆಗೆ ಭೇಟಿ ನೀಡಿದ್ದ ರಾಜ್ಯ ಶಿಕ್ಷಣ ಖಾತೆ ಸಚಿವ ಸುರೇಶ್‌ಕುಮಾರ ಉಡುಪಿಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗಳ ಸಿದ್ಧತೆಯ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಕುಂದಾಪುರದ ವಲಯ ಶಿಕ್ಷಣಾಧಿಕಾರಿ ಅಶೋಕ ಕಾಮತ್‌ ಅವರ ಮುಖಾಂತರ ಮನೆ ಮನೆಗೆ ತೆರಳಿ ಮಕ್ಕಳಿಗೆ ಬೋಧನೆ ಮಾಡುತ್ತಿರುವ ಬಾಬುಶೆಟ್ಟಿ ಅವರ ಶಿಕ್ಷಣ ಕಾಯಕದ ಪರಿಚಯ ಸಚಿವರಿಗಾಗಿದೆ. ಬಾಬು ಶೆಟ್ಟಿಯವರ ಶಿಕ್ಷಣ ಕಾಳಜಿಯ ಬಗ್ಗೆ ಹೆಮ್ಮೆ ಪಟ್ಟುಕೊಂಡ ಸಚಿವರು ಸಭೆ ಮುಗಿಸಿದ ಬಳಿಕ ಅವರಿಗೆ ದೂರವಾಣಿ ಸಂಖ್ಯೆ ಪಡೆದುಕೊಂಡು ಕರೆ ಮಾಡಿ ಅಭಿನಂದಿಸಿದ್ದಾರೆ. ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿಯೂ ಮುಖ್ಯ ಶಿಕ್ಷಕರ ಕಾರ್ಯಕ್ಕೆ ಮೆಚ್ಚುಗೆಯ ಬರಹವನ್ನು ಪೋಸ್ಟ್‌ ಮಾಡಿದ್ದಾರೆ.

 ‘ಉಡುಪಿಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗಳ ಸಿದ್ಧತೆಯ ಪರಿಶೀಲನಾ ಸಭೆ ನಡೆಸುತ್ತಿದ್ದಾಗ ಈ ಮಹನೀಯರ ಪರಿಚಯವಾಯಿತು. ಇವರ ಹೆಸರು ಶ್ರೀ #ಬಾಬು_ಶೆಟ್ಟಿ. ಕುಂದಾಪುರ ವಲಯದ ಹೆಸ್ಕತ್ತೂರು ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ಶಾಲೆಯ ಎಸ್.ಎಸ್.ಎಲ್.ಸಿ. ತರಗತಿಯ ನಲವತ್ತಮೂರು ಮಕ್ಕಳ ಮನೆಗೆ ತಾನೇ ತೆರಳಿ ಅವರಿಗೆ ಪಾಠ ಹೇಳಿ, ತಿಳಿಯದ ಸಂಗತಿಗಳ ಕುರಿತು ಮತ್ತೆ ಮತ್ತೆ ತಿಳುವಳಿಕೆ ನೀಡುತ್ತಿರುವ ಮಹನೀಯ. ತನ್ನ ಶಾಲೆಯಲ್ಲಿ ಕಡುಬಡವ ವಿದ್ಯಾರ್ಥಿಗಳ ಮನೆಗೂ ಹೋಗಿ ತನ್ನ ಈ ಕಾಯಕ ಮಾಡುತ್ತಿರುವ ಈ ಪುಣ್ಯಾತ್ಮನಿಗೆ ಫೋನ್ ಮಾಡಿ ಅಭಿನಂದಿಸಿದೆ. ಕಳೆದ 23 ವರ್ಷಗಳಿಂದ ತನ್ನ ತರಗತಿಯ ಮಕ್ಕಳು ನೂರಕ್ಕೆ ನೂರು ತೇರ್ಗಡೆಯಾಗುತ್ತಿರುವ ಸಂಗತಿಯನ್ನು ಬಹಳ ಹೆಮ್ಮೆಯಿಂದ, ಆದರೆ ವಿನೀತನಾಗಿ ಹಂಚಿಕೊಂಡರು. ಬಾಬುಶೆಟ್ಟಿ ಯವರಂತಹ ಶಿಕ್ಷಕರೇ ನಮ್ಮ ಶಾಲೆಗಳ ವಿಶ್ವಾಸಾರ್ಹತೆ ಹೆಚ್ಚಿಸುತ್ತಿರುವವರು’ ಎಂದಿದ್ದಾರೆ.

ಲಾಕ್‌ ಡೌನ್‌ ಆಗಿದ್ದ ಸಂದರ್ಭದಲ್ಲಿ ಮಾಹಿತಿಗಾಗಿ ಶಾಲೆಗೆ ವಿದ್ಯಾರ್ಥಿಗಳು ಬರುತ್ತಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿ ಪೊಲೀಸರು ವಿದ್ಯಾರ್ಥಿಗಳು ಶಾಲೆಗೆ ಬಾರದಂತೆ ಎಚ್ಚರಿಕೆ ವಹಿಸಲು ಸೂಚಿಸಿದ್ದರು. ಅದಾದ ಬಳಿಕ ಬಾಬು ಶೆಟ್ಟಿಯವರು ಎಸ್‌ಎಸ್‌ಎಲ್‌ಸಿ  ಕಲಿಯುತ್ತಿರುವ 43 ಮಕ್ಕಳ ಮನೆಗೆ ತೆರಳಿ ಶಿಕ್ಷಣಾಭ್ಯಾಸ ಮಾಡಿದ್ದಾರೆ.  ಇದು ಶಿಕ್ಷಕ ಸಮುದಾಯಕ್ಕೆ ಅತ್ಯಂತ ಹೆಮ್ಮೆಯ ವಿಷಯ’ ಎಂದು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕಾಮತ್‌  ಮೆಚ್ಚುಗೆ ವ್ಯಕ್ತ ಪಡಿಸಿದರು.

‘ಸಚಿವರು ಪೋನ್‌ ಮಾಡಿ ಅಭಿನಂದಿಸಿದಾಗ ತುಂಬಾ ಖುಷಿಯಾಯಿತು. ಪ್ರಾಮಾಣಿಕತೆ ಕೆಲಸ ಮಾಡಿದವರಿಗೆ ಒಂದಲ್ಲ ಒಂದು ದಿನ ಗೌರವ ದೊರಕುತ್ತದೆ ಎನ್ನುವ ಭರವಸೆ ನನಗೆ ಇತ್ತು. ಕಳೆದ 23 ವರ್ಷಗಳ ವೃತ್ತಿ ಜೀವನದಲ್ಲಿ ಹಲವಾರು ಪ್ರಶಸ್ತಿ, ಸನ್ಮಾನಗಳು ಬಂದಿದ್ದರೂ ಇಂದಿನ ದಿನ ನನ್ನ ಜೀವನದ ಮಹತ್ವದ ದಿನವಾಗಿದೆ’ ಹೆಸ್ಕೂತ್ತೂರು ಪ್ರೌಢಶಾಲೆ ಪ್ರಭಾರ ಮುಖ್ಯ ಶಿಕ್ಷಕ  ಬಾಬು ಶೆಟ್ಟಿ ಧನ್ಯತೆ ವ್ಯಕ್ತಪಡಿಸಿದರು.

ನೆಟ್ಟಿಗರ ಅಭಿನಂದನೆ: ಸುರೇಶ್‌ಕುಮಾರ ಅವರ ಫೇಸ್‌ಬುಕ್‌ ಖಾತೆಯಲ್ಲಿ ಮೆಚ್ಚುಗೆಯ ಪೋಸ್ಟ್‌ ಪ್ರಕಟವಾಗುತ್ತಿದ್ದಂತೆ, ಮುಖ್ಯಶಿಕ್ಷಕ ಬಾಬು ಶೆಟ್ಟಿ ಅವರ ಶಿಕ್ಷಣ ಕಾಯಕಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಅಭಿನಂದನೇಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು