ಅನಂತಕುಮಾರ್ ನೆನಪು: ವಕೀಲನನ್ನು ರಾಜಕೀಯಕ್ಕೆ ಕರೆದವರು

7

ಅನಂತಕುಮಾರ್ ನೆನಪು: ವಕೀಲನನ್ನು ರಾಜಕೀಯಕ್ಕೆ ಕರೆದವರು

Published:
Updated:

ಬಹುಶಃ ಅವರು ಒತ್ತಾಯಿಸದೇ ಇರುತ್ತಿದ್ದರೆ ನಾನು ರಾಜಕೀಯಕ್ಕೆ ಬರುತ್ತಿರಲಿಲ್ಲ. ಹುಬ್ಬಳ್ಳಿಯಲ್ಲಿ ನಾನು ವಕೀಲ ವೃತ್ತಿ ಮಾಡಿಕೊಂಡಿದ್ದೆ. ನನ್ನ ಚಟುವಟಿಕೆ ಗುರುತಿಸಿದ ಅನಂತಕುಮಾರ್‌ ನೇರವಾಗಿ ರಾಜಕೀಯಕ್ಕೆ ಬರುವಂತೆ ಕೋರಿದರು. ಆರಂಭದಲ್ಲಿ ನಾನು ಒಪ್ಪಿರಲಿಲ್ಲ. ಕೊನೆಗೂ ನನ್ನನ್ನು ಸೆಳೆಯುವಲ್ಲಿ ಯಶಸ್ವಿಯಾದರು. ನನಗೂ ಈ ಕ್ಷೇತ್ರ ಬೆಳವಣಿಗೆ ಕೊಟ್ಟಿತು.

ಅದು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಕುರಿತ ಹೋರಾಟದ ದಿನಗಳು. ಹೋರಾಟ ತೀವ್ರಗೊಂಡಿತ್ತು. ಪ್ರತಿ ವರ್ಷ ಜನವರಿ 26 ಮತ್ತು ಆಗಸ್ಟ್‌ 15ರಂದು ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಲು ಸಿದ್ಧತೆ ನಡೆಯುತ್ತಿತ್ತು. ಆಗ ಪೊಲೀಸರು ಅನಂತಕುಮಾರ್‌ ಅವರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲು ಮುಂದಾಗಿದ್ದರು. ಆಗ ಭೂಗತರಾದ ಅನಂತ್‌, ಆದರ್ಶ ನಗರದಲ್ಲಿ ಗೆಳೆಯ ರಮೇಶ್‌ ಶೆಟ್ಟಿ ಅವರಿಗೆ ಸೇರಿದ ಅಪಾರ್ಟ್‌ಮೆಂಟ್‌ನಲ್ಲಿ ಐದಾರು ದಿನ ಉಳಿದುಕೊಂಡಿದ್ದರು.

ಕಾರ್ಯಕ್ರಮದ ವೇಳೆಯಲ್ಲಿ ದಿಢೀರ್‌ ಕಾಣಿಸಿಕೊಂಡು ಹೋರಾಟಕ್ಕೆ ಧುಮುಕಿದ್ದರು. ಪಕ್ಷಕ್ಕೆ ಯಾರನ್ನಾದರೂ ಸೇರಿಸಿಕೊಳ್ಳುವಾಗ ನನ್ನ ಸಲಹೆ ಪಡೆಯುತ್ತಿದ್ದರು. ಅವರ ಚಿಂತನೆಗಳ ಫಲವಾಗಿಯೇ ಉತ್ತರ ಕರ್ನಾಟಕದ ಹಲವಾರು ನಾಯಕರು ಬೇರೆ ಪಕ್ಷಗಳಿಂದ ಬಿಜೆಪಿಗೆ ಬಂದಿದ್ದಾರೆ. ಬಲವಾದ ಸಂಘಟನೆ ರೂಪುಗೊಂಡಿದೆ. ಭಿನ್ನಾಭಿಪ್ರಾಯ ಬಂದಾಗ ಪಕ್ಷದ ಹಿತದೃಷ್ಟಿಯಿಂದ ಚಿಂತನೆ ಮಾಡಿ ಸರ್ವಾನುಮತದ ನಿರ್ಧಾರಕ್ಕೆ ಬದ್ಧರಾಗುತ್ತಿದ್ದರು. ಅವರಿಗೆ ಕೇಳುವ ಗುಣ ಇತ್ತು.

ಹುಬ್ಬಳ್ಳಿಯಲ್ಲಿದ್ದಾಗಲೇ ಅವರು ಎಬಿವಿಪಿಯಲ್ಲಿ ಸಕ್ರಿಯರಾಗಿದ್ದರು. ನಾನೂ ಅವರ ಜತೆಗಿದ್ದೆ. ಹೀಗೆ ನಮ್ಮದು ಸುಮಾರು 40 ವರ್ಷಗಳ ಆತ್ಮೀಯ ಒಡನಾಟ. ಮಾತ್ರವಲ್ಲ ಅವರ ತಾಯಿ ಗಿರಿಜಾ ಶಾಸ್ತ್ರಿ ಅವರು ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯ ಉಪಮೇಯರ್‌ ಆಗಿದ್ದವರು. ಆ ವೇಳೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರೂ ಕೂಡಾ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಹೀಗೆ ನಾನು ಮತ್ತು ಅವರ ಕುಟುಂಬದ ಎಲ್ಲರೂ ಆತ್ಮೀಯರಾಗಿದ್ದೆವು.

ಅವರ ಆರೋಗ್ಯ ಚೆನ್ನಾಗಿತ್ತು. ಎಲ್ಲರ ಜತೆ ನಗುನಗುತ್ತಾ, ಜೋಕ್‌ ಹೇಳುತ್ತಾ ಇದ್ದ ವ್ಯಕ್ತಿತ್ವ ಅವರದ್ದು. ಕೇವಲ ಮೂರು ನಾಲ್ಕು ತಿಂಗಳ ಅವಧಿಯಲ್ಲಿ ಹೀಗಾಗಿಬಿಟ್ಟಿತು. ಅವರು ಇಲ್ಲ ಎನ್ನುವುದನ್ನೂ ಊಹಿಸಿಕೊಳ್ಳಲು ಆಗುತ್ತಿಲ್ಲ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !