ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಠರೋಗಿಗಳಿಂದ ಸ್ವಾವಲಂಬಿ ಬದುಕು

ಸಮಗ್ರ ಕೃಷಿ ಮೂಲಕ ಬದುಕಿಗೆ ಹೊಸ ಭಾಷ್ಯ ಬರೆದುಕೊಂಡರು
Last Updated 1 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಕೃಷಿಯಲ್ಲಿ ಬದುಕು ಕಟ್ಟಿಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿರುವ ಇಲ್ಲಿನ ಆಶ್ರಯ ಕಾಲೊನಿಯ ಕುಷ್ಠರೋಗಿಗಳು ಇತರರಿಗೆ ಮಾದರಿಯಾಗಿದ್ದಾರೆ.

ಅಂಗಾಂಗಳು ಊನವಾಗಿದ್ದರೂ ತಾವು ಯಾವುದರಲ್ಲಿ ಕಡಿಮೆ ಇಲ್ಲ. ಮನಸ್ಸು ಮಾಡಿದರೆ ಏನನ್ನೂ ಸಾಧಿಸಿ ತೋರಿಸಬಲ್ಲೆವು ಎನ್ನುವುದನ್ನು ತಮ್ಮ ಕಾಯಕದ ಮೂಲಕವೇ ಸಾಬೀತು ಮಾಡಿ ತೋರಿಸಿದ್ದಾರೆ. ತಮ್ಮ ಕೆಲಸದ ಮೂಲಕ ಬೇರೆಯವರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.

1970ರಲ್ಲಿ ಇಲ್ಲಿನ ನಗರಸಭೆಯು 25 ಕುಷ್ಠರೋಗಿಗಳನ್ನು ಗುರುತಿಸಿ, ಅವರಿಗಾಗಿಯೇ ಆಶ್ರಯ ಕಾಲೊನಿ ಅಭಿವೃದ್ಧಿ ಪಡಿಸಿ ಅವರ ವಾಸಕ್ಕೆ ಅನುವು ಮಾಡಿಕೊಟ್ಟಿತ್ತು. ಅವರ ಚಿಕಿತ್ಸೆ, ಉಪಚಾರದ ಜವಾಬ್ದಾರಿಯನ್ನು ಡಾನ್‌ ಬಾಸ್ಕೊ ಸಂಸ್ಥೆಗೆ ವಹಿಸಿತ್ತು. ಅಷ್ಟೇ ಅಲ್ಲ, ಬದುಕು ಕಟ್ಟಿಕೊಳ್ಳಲು 2.5 ಎಕರೆ ಕೃಷಿ ಭೂಮಿ ಕೂಡ ನೀಡಿತ್ತು. ಈಗ ಅದೇ ಭೂಮಿಯಲ್ಲಿ ಕಾಯಕ ಮುಂದುವರಿಸಿದ್ದಾರೆ.

ನಾಲ್ಕು ದಶಕಕ್ಕೂ ಹೆಚ್ಚಿನ ಕಾಲದಿಂದ ಸತತವಾಗಿ ಆರೈಕೆ ಮಾಡಿದ ಪರಿಣಾಮ ಅವರು ಚೇತರಿಸಿಕೊಂಡಿದ್ದಾರೆ. ಕೈ, ಕಾಲುಗಳು ಊನವಾಗಿದ್ದರೂ ಅದನ್ನು ಮೆಟ್ಟಿ ನಿಂತು ಉತ್ಸಾಹದಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಜಮೀನಿನಲ್ಲಿ ಬದನೆಕಾಯಿ, ಚೆಂಡು ಹೂ, ದನಗಳಿಗೆ ಹುಲ್ಲು, ಪುಂಡಿಪಲ್ಲೆ, ಪಾಲಕ್‌, ರಾಜಗಿರಿ, ಮೆಂತೆ, ಹಾಗಲಕಾಯಿ, ಸೌತೆಕಾಯಿ ಬೆಳೆಯುತ್ತಾರೆ. ಅಷ್ಟೇ ಅಲ್ಲ, ಬೆಳೆದ ಬೆಳೆಯನ್ನು ತಳ್ಳುಗಾಡಿಯಲ್ಲಿ ಹಾಕಿಕೊಂಡು, ಮನೆ ಮನೆಗೆ ಸುತ್ತಾಡಿ ಮಾರಾಟ ಮಾಡುತ್ತಾರೆ. ಅದರಿಂದ ಬರುವ ಆದಾಯವನ್ನು ಎಲ್ಲರೂ ಸಮನಾಗಿ ಹಂಚಿಕೊಂಡು, ನೆಮ್ಮದಿಯ ಬಾಳ್ವೆ ನಡೆಸುತ್ತಿದ್ದಾರೆ. ಜಮೀನಿನಲ್ಲಿ ಬೋರ್‌ ಇರುವುದರಿಂದ ನೀರಿಗೆ ಸಮಸ್ಯೆ ಇಲ್ಲ.

ಇರುವ ಜಮೀನಿನ ಒಂದು ಅಂಚಿನಲ್ಲಿ ಕೋಳಿ ಸಾಕಾಣಿಕೆ ಮಾಡಿ, ಅವುಗಳನ್ನು ಬೆಳೆಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಕೈತುಂಬ ಹಣ ಗಳಿಸುತ್ತಿದ್ದಾರೆ. 30ಕ್ಕೂ ಹೆಚ್ಚು ತೆಂಗಿನ ಮರಗಳನ್ನು ಬೆಳೆಸಿದ್ದು, ಫಲದ ನಿರೀಕ್ಷೆಯಲ್ಲಿದ್ದಾರೆ. ಕುಷ್ಠರೋಗಿಗಳಲ್ಲೇ ಕೆಲವರು ವಿವಾಹ ಮಾಡಿಕೊಂಡಿದ್ದು, ಅವರ ಮಕ್ಕಳಲ್ಲಿ ಕೆಲವರು ಆಟೊ ಓಡಿಸಿದರೆ, ಕೆಲವರು ಪೋಷಕರ ಕೆಲಸಕ್ಕೆ ನೆರವಾಗುತ್ತಿದ್ದಾರೆ.

‘ಕುಷ್ಠರೋಗವಾದಾಗ ದೇಹದಲ್ಲಿ ಶಕ್ತಿ ಇಲ್ಲದಂತಾಗಿತ್ತು. ಅನೇಕ ವರ್ಷಗಳ ಚಿಕಿತ್ಸೆ, ಉಪಚಾರದ ನಂತರ ಈಗ ಸಹಜವಾಗಿದ್ದೇವೆ. ಸುಮ್ಮನೆ ಎಷ್ಟು ದಿನ ಕೂರಬೇಕು. ಕಾಲೊನಿಯಲ್ಲೇ ನಗರಸಭೆ ಕೊಟ್ಟಿರುವ ಜಮೀನಿನಲ್ಲಿ ಒಂದಷ್ಟು ತರಕಾರಿ ಬೆಳೆದು, ಅದರಿಂದ ಸಂಪಾದಿಸಿದ ಹಣದಿಂದ ಜೀವನ ನಡೆಸುತ್ತಿದ್ದೇವೆ. ಇನ್ನೆಷ್ಟು ದಿನ ಬೇರೆಯವರಿಗೆ ಹೊರೆಯಾಗಿರಬೇಕು’ ಎನ್ನುತ್ತಾರೆ ಕಾಲೊನಿಯ ದೇವಮ್ಮ, ಮಂಜಮ್ಮ, ಪುಷ್ಪಾ.

ಮದುವೆಯಾದವರೂ ಇದ್ದಾರೆ: ಕುಷ್ಠರೋಗಿಗಳಲ್ಲೇ ಕೆಲವರು ಮದುವೆಯಾಗಿದ್ದಾರೆ. ಅವರ ಮಕ್ಕಳಲ್ಲಿ ಕೆಲವರು ಆಟೊ ಓಡಿಸಿದರೆ, ಕೆಲವರು ಪೋಷಕರ ಕೆಲಸಕ್ಕೆ ನೆರವಾಗುತ್ತಿದ್ದಾರೆ.

* ಒಂದು ಕಾಲದಲ್ಲಿ ಆಶ್ರಯ ಕಾಲೊನಿ ಎಂದರೆ ಜನರು ಮೂಗು ಮುರಿಯುತ್ತಿದ್ದರು. ಈಗ ಜನರ ಮನಸ್ಥಿತಿ ಬದಲಾಗಿದೆ

-ಹನುಮಂತಪ್ಪ, ಆಶ್ರಯ ಕಾಲೊನಿಯ ನಿವಾಸಿ

*ಕುಷ್ಠರೋಗದಿಂದ ಕೈ, ಕಾಲು ಊನವಾಗಿರಬಹುದು. ಆದರೆ, ಆತ್ಮವಿಶ್ವಾಸ ಕುಗ್ಗಿಲ್ಲ. ಆ ಬಲದಿಂದಲೇ ಕೆಲಸ ಮಾಡುತ್ತಿದ್ದೇವೆ

-ಅಂಬಿಕಾ, ಆಶ್ರಯ ಕಾಲೊನಿಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT