ಸೋಮವಾರ, ಮಾರ್ಚ್ 8, 2021
27 °C

ಸರ್ಕಾರ ಬೀಳಿಸುವಷ್ಟು ಸಂಖ್ಯಾಬಲ ರಮೇಶ್ ಬಳಿ ಇಲ್ಲ: ಸಚಿವ ಸತೀಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬೀಳಿಸುವಷ್ಟು ಸಂಖ್ಯಾಬಲ ಶಾಸಕ ರಮೇಶ ಜಾರಕಿಹೊಳಿ ಬಳಿ ಇಲ್ಲ’ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ತಿರುಗೇಟು ನೀಡಿದರು.

ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸರ್ಕಾರ ಕೆಡವಲು ಈಗಾಗಲೇ 3-4 ಬಾರಿ ಈ ಪ್ರಯತ್ನ ನಡೆಸಿದ್ದಾರೆ. ಆದರೆ, ಸಾಧ್ಯವಾಗಿಲ್ಲ. ಸರ್ಕಾರ ಉಳಿಸಿಕೊಳ್ಳಲು ಎರಡೂ ಪಕ್ಷದವರು ಸಮರ್ಥರಿದ್ದೇವೆ' ಎಂದು ಹೇಳಿದರು.

‘ಅವನಿಗೆ ಯಾವುದೇ ಬದ್ಧತೆ ಇಲ್ಲ. ಬೆಳಿಗ್ಗೆ ಒಂದು, ಸಂಜೆ ಇನ್ನೊಂದು ಹೇಳುತ್ತಾನೆ. ರಾಜೀನಾಮೆ ಕೊಡುತ್ತೇನೆ ಎಂದು ಬೆಳಗಾವಿಯಲ್ಲಿ ಹೇಳಿದ್ದ. ಆದರೆ ಬೆಂಗಳೂರಿಗೆ ಹೋಗಿ ಯೂಟರ್ನ್‌ ತೆಗೆದುಕೊಂಡಿದ್ದಾನೆ. ಇಲಾಖೆಗೆ ಸಂಬಂಧಿಸಿದವು, ಕ್ಷೇತ್ರದ ಕೆಲಸಗಳು ಹಾಗೂ ಹೆಚ್ಚುವರಿಯಾಗಿ ಗೋಕಾಕ ಕ್ಷೇತ್ರದ ಕಡೆಗೂ ನಾನು ಗಮನ ಕೊಡಬೇಕಾಗಿದೆ. ರಮೇಶ ಖಾಲಿ ಇದ್ದಾನೆ. ಅವನಿಗೆ ಕೆಲಸವಿಲ್ಲ. ಹೀಗಾಗಿ ಏನೇನೋ ಮಾತಾಡ್ತಾನೆ. ಅದಕ್ಕೆಲ್ಲ ಪ್ರತಿಕ್ರಿಯೆ ನೀಡಲು ನನಗೆ ಸಮಯವಿಲ್ಲ’ ಎಂದರು.

‘ಅವರಿಗಷ್ಟೇ ತೊಂದರೆ ಆಗಿರಬಹುದು. ಉಳಿದ ಶಾಸಕರಿಗೆ ಯಾವುದೇ ತೊಂದರೆ ಆಗಿಲ್ಲ’ ಎಂದರು.

‘ಅಥಣಿಯ ಶಾಸಕ ಮಹೇಶ ಕುಮಠಳ್ಳಿ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಪರ ಕೆಲಸ ಮಾಡಿದ್ದಾರೆ. ಮುಂದಿನ ನಿರ್ಧಾರ ತೆಗೆದುಕೊಳ್ಳುವುದು ಅವರವರಿಗೆ ಬಿಟ್ಟಿದ್ದು. ಮುಂದಿನ ಬೆಳವಣಿಗೆಗಳನ್ನು ಹೈಕಮಾಂಡ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಿದ್ದರಾಮಯ್ಯ ನೋಡಿಕೊಳ್ಳುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

‘ಸಮಸ್ಯೆ ಏನಾಗಿದೆ ಎನ್ನುವುದನ್ನು ರಮೇಶನನ್ನೇ ಕೇಳಬೇಕು. ಜನರಿಗೂ ಆ ಬಗ್ಗೆ ಕುತೂಹಲ ಇದೆ’ ಎಂದು ಮಾರ್ಮಿಕವಾಗಿ ಹೇಳಿದರು.

‘ಆತ ಬಿಜೆಪಿ ಸೇರಲು 10 ಕಾರಣಗಳಿವೆ. ಅಳಿಯ ಅಂಬಿರಾವ್ ಪಾಟೀಲಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಟಿಕೆಟ್ ಕೊಡಿಸಬೇಕು ಎನ್ನುವುದು ಕಾರಣಗಳಲ್ಲಿ ಒಂದು. ಉಳಿದ 9 ಕಾರಣಗಳನ್ನು ಅವರನ್ನೇ ಕೇಳಿ’ ಎಂದರು.

'ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳ ಪಕ್ಷದ ವೀಕ್ಷಕರು ರಮೇಶ ವಿರುದ್ಧ ವರದಿ‌ ನೀಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಉದಾಹರಣೆ ಇವೆ. ಲೋಕಸಭಾ ಚುನಾವಣೆ ಬಳಿಕ ಪಕ್ಷ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ’ ಎಂದು ಪ್ರತಿಕ್ರಿಯಿಸಿದರು.

ಈ ನಡುವೆ, ರಮೇಶ ಬೆಂಗಳೂರಿನಲ್ಲಿ ಕರೆದಿರುವ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಬಲಿಗ ಶಾಸಕರಾದ ಮಹೇಶ ಕುಮಠಳ್ಳಿ ಹಾಗೂ ಶ್ರೀಮಂತ ಪಾಟೀಲ ತೆರಳಿದ್ದಾರೆ ಎನ್ನಲಾಗುತ್ತಿದೆ.

ಬುಧವಾರ ಗೋಕಾಕದಲ್ಲಿ ಬೆಂಬಲಿಗರ ಸಭೆ ನಡೆಸಿದ ರಮೇಶ, ‘ನೀವು ನನ್ನೊಂದಿಗೆ ಇರುತ್ತೀರೋ, ಸತೀಶ ಅಥವಾ ಲಖನ್ ಜಾರಕಿಹೊಳಿ ಜೊತೆ ಹೋಗುತ್ತೀರೋ ನಿರ್ಧಾರ ಮಾಡಿಕೊಳ್ಳಿ ಎಂದು ಸೂಚನೆ ಕೊಟ್ಟಿದ್ದಾರೆ’ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಅಲ್ಲಿನ ಕಾರ್ಯಕರ್ತರು ಹಾಗೂ ಬೆಂಬಲಿಗರು ಗೊಂದಲಕ್ಕೆ ಒಳಗಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು