ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚುನಾವಣಾ ಫಲಿತಾಂಶ: ಕಾಂಗ್ರೆಸ್‌ಗೆ ಪುನಶ್ಚೇತನ’

Last Updated 12 ಮೇ 2018, 19:30 IST
ಅಕ್ಷರ ಗಾತ್ರ

ತುಮಕೂರು: ‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 120ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿ ಮತ್ತಷ್ಟು ಗಟ್ಟಿ ನಿಲುವುಗಳನ್ನು ತೆಗೆದುಕೊಳ್ಳಲು ಹಾಗೂ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪುನಶ್ಚೇತನಕ್ಕೆ ಈ ಫಲಿತಾಂಶ ಕಾರಣವಾಗಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘1978ರಲ್ಲಿ ಇಂದಿರಾ ಗಾಂಧಿ ಅವರು ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಅಲ್ಲಿಂದ ದೇಶದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಏರುಮುಖ ಬೆಳವಣಿಗೆ ಕಂಡಿತು. ಅದರಂತೆಯೇ ಈ ಚುನಾವಣೆಯೂ ರಾಜ್ಯ ಮತ್ತು ರಾಷ್ಟ್ರದಲ್ಲಿ ಮಹತ್ವದ ಬದಲಾವಣೆಗಳಿಗೆ ಮುನ್ನುಡಿಯಾಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘2013ರಲ್ಲಿ ನಾನು ಪಕ್ಷದ ಅಧ್ಯಕ್ಷನಾಗಿದ್ದೆ. ಆಗ ಪಕ್ಷ 122 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ನುಡಿದಿದ್ದೆ. ನಮಗೆ ಬಹುಮತ ಬಂದಿತು. ಈ ಬಾರಿ ಮಾಧ್ಯಮಗಳು ನಡೆಸಿರುವ ಬಹುತೇಕ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಪಕ್ಷ ಮೊದಲನೇ ಸ್ಥಾನದಲ್ಲಿದೆ. ನನಗೆ ಬಂದಿರುವ ಮಾಹಿತಿ ಮತ್ತು ನನ್ನ ಸಮೀಕ್ಷೆಯ ಪ್ರಕಾರ ಪಕ್ಷ ಬಹುಮತ ಪಡೆಯುವುದು ಖಚಿತ’ ಎಂದು ವಿವರಿಸಿದರು.

ಕಳೆದ ಚುನಾವಣೆಯಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿಷಯಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದೆವು. ಆದರೆ ಈ ಬಾರಿ ಭವಿಷ್ಯದ ಅಭಿವೃದ್ಧಿಯ ಕಾರ್ಯಸೂಚಿಗಳನ್ನೇ ಪ್ರಮುಖವಾಗಿ ಪ್ರಸ್ತಾಪಿಸಿದ್ದೇವೆ. ರಾಹುಲ್ ಗಾಂಧಿ ಅವರಿಗೂ ಇದೇ ವಿಷಯಗಳ ಬಗ್ಗೆ ಮಾತನಾಡುವಂತೆ ಹೇಳಿದ್ದೆವು. ಬಿಜೆಪಿ ಮತ್ತು ಜೆಡಿಎಸ್ ಈ ಅಭಿವೃದ್ಧಿಯ ವಿಷಯಗಳನ್ನೇ ಮರೆತವು ಎಂದು ಟೀಕಿಸಿದರು.

ಪ್ರಚಾರ ಸಭೆಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟರು, ಇದು ಶೇ 10 ಕಮಿಷನ್ ಸರ್ಕಾರ ಎಂದು ಟೀಕಿಸಿದರು. ಆದರೆ ಈ ಆರೋಪಗಳಿಗೆ ಯಾವುದೇ ಪುರಾವೆಗಳನ್ನೂ ಅವರು ನೀಡಲಿಲ್ಲ. ಜನರಿಗೆ ಇವರು ಹೇಳುತ್ತಿರುವುದು ಸುಳ್ಳು ಎನ್ನುವುದು ಅರಿವಾಯಿತು ಎಂದು ನುಡಿದರು.

‘ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಸಂಬಂಧ ಮುಂದಿನ ರಾಜ್ಯ ಸರ್ಕಾರ ಯಾವ ನಿರ್ಧಾರ ಮಾಡುತ್ತದೆಯೋ ಅದನ್ನು ನಾನು ಒಪ್ಪಿಕೊಳ್ಳುವೆ’ ಎಂದು ಖಚಿತವಾಗಿ ನುಡಿದರು.

ಸಿಎಂ ಸ್ಥಾನಕ್ಕೆ ಅರ್ಧ ಡಜನ್ ಆಕಾಂಕ್ಷಿಗಳು

‘ಮುಖ್ಯಮಂತ್ರಿ ಸ್ಥಾನಕ್ಕೆ ಪಕ್ಷದಲ್ಲಿ ಅರ್ಧ ಡಜನ್‌ಗೂ ಹೆಚ್ಚು ಮಂದಿ ಸಮರ್ಥರು ಮತ್ತು ಆಕಾಂಕ್ಷಿಗಳು ಇದ್ದಾರೆ. ಯಾರು ಮುಖ್ಯಮಂತ್ರಿ ಆಗಬೇಕು ಎನ್ನುವುದನ್ನು ಪಕ್ಷದ ಶಾಸಕಾಂಗ ಸಭೆ ನಿರ್ಧರಿಸಲಿದೆ’ ಎಂದು ಪರಮೇಶ್ವರ ಹೇಳಿದರು.

‘ಈ ಹಿಂದಿನ ದಿನಗಳಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಇದು ಸಮುದಾಯದ ಜನರ ಅಪೇಕ್ಷೆ. ಹೀಗೆ ಹೇಳಬೇಡಿ ಎಂದು ಅವರಿಗೆ ನಾನು ಹೇಳಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸ್ಥಾನ ನೀಡುವಾಗ ಸಮುದಾಯದ ಅಭಿಪ್ರಾಯಗಳನ್ನೂ ವರಿಷ್ಠರು ಪರಿಗಣಿಸುವರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT