ಮಂಗಳವಾರ, ನವೆಂಬರ್ 12, 2019
25 °C
ಲೈಫ್‌ಸ್ಟೈಲ್‌

ಸುಂದರ ಬದುಕಿಗೆ ಹೀಗೊಂದಿಷ್ಟು ಟಿಪ್ಸ್‌

Published:
Updated:
Prajavani

ಸುಂದರ ಬದುಕು ರೂಪಿಸಿಕೊಳ್ಳುವುದು ಹೇಗೆ? ಅದು ತಕ್ಷಣ ಸಿಗುವ ಮಾರುಕಟ್ಟೆ ಸರಕಂತೂ ಅಲ್ಲ. ಅದಕ್ಕೆ ಯೋಚನೆ, ಯೋಜನೆ ಬೇಕು. ತಾಳ್ಮೆ, ಬದ್ಧತೆಯೂ ಬೇಕು. ಹಾಗಾದರೆ ಏನು ಮಾಡಬೇಕು?

ಬರೀ ಪ್ರಶ್ನೆಗಳನ್ನು ಕೇಳುತ್ತಿದ್ದರೆ ಸುಂದರ ಬದುಕು ರೂಪಗೊಳ್ಳುವುದು ಸಾಧ್ಯವಿಲ್ಲ. ನೆಮ್ಮದಿಗೆಂದೇ ಕೆಲವರು ಪ್ರವಾಸ ಹೊರಡುತ್ತಾರೆ. ಅಲ್ಲಿ ಸಿಗುವ ಆಹ್ಲಾದಕರ ವಾತಾವರಣದಿಂದ ಹೊಸ ಯೋಜನೆ ರೂಪಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ಸಾಧಕರ ಪುಸ್ತಕಗಳ ಮೊರೆ ಹೋಗಿ ಅದರಿಂದ ಸ್ಪೂರ್ತಿ ಪಡೆದು ಬದುಕಿನ ಬಂಡಿಯನ್ನು ಸರಿದಾರಿಗೆ ತಂದುಕೊಳ್ಳುತ್ತಾರೆ.

‘ಬಂಗಾರದ ಮನುಷ್ಯ’, ‘ಚಿಗುರಿದ ಕನಸು’ ಹೀಗೆ ಅನೇಕ ಚಲನಚಿತ್ರಗಳನ್ನು ನೋಡಿದ ಬಹುತೇಕರು ಕೃಷಿ ಮಾಡಿದ್ದನ್ನು, ಷೇಕ್ಸ್‌ಪಿಯರ್‌ನಿಂದ ಪ್ರೇರಿತರಾಗಿ ಸಾಹಿತಿ, ನಾಟಕಕಾರ ಆಗಿರುವ ಉದಾಹರಣೆಗಳಿಗೆ ಲೆಕ್ಕವೇ ಇಲ್ಲ. ಬದುಕು ಒಂದೊಂದು ಸಂದರ್ಭದಲ್ಲಿ ಪಡೆದುಕೊಳ್ಳುವ ತಿರುವು, ಪಡೆಯುವ ಸಲಹೆ ಹಾಗೂ ನಿರ್ಧಾರದ ಮೇಲೆ ಬದಲಾಗುತ್ತದೆ ಎನ್ನುವುದು ಸತ್ಯ.

ಚಂಚಲ ಮನಸ್ಸನ್ನು ಹಿಡಿದಿಟ್ಟು ಮುನ್ನಡೆಯತ್ತ ಸಾಗುವ ಬಗೆಯನ್ನು ಹೇಳಿಕೊಡುವ ಲೈಫ್‌ಸ್ಟೈಲ್‌ ಕೋಚ್‌ ರೋಹಿಣಿ ಮುಂದ್ರಾ, ಅದಕ್ಕೆ ಸಂಬಂಧಿಸಿದ ಪುಸ್ತಕವನ್ನೂ ಹೊರತಂದಿದ್ದಾರೆ. ಜತೆಗೆ ಹೊಸ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ. ಈ ಮೂಲಕ ಜನರ ಬದುಕು ಸುಂದರಗೊಳಿಸಲು ಅಣಿಯಾಗಿದ್ದಾರೆ.

ರೋಹಿಣಿ ಮುಂದ್ರಾ ಅವರ ಮೂಲ ಮಧ್ಯಪ್ರದೇಶ. ಉದ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿರುವ ಮುಂದ್ರಾ ಪೋಷಕರು ಈಗ ಬೆಂಗಳೂರಿನವರೇ ಆಗಿದ್ದಾರೆ. ಮುಂದ್ರಾ ಹುಟ್ಟಿ, ಬೆಳೆದಿದ್ದು ಇಲ್ಲಿಯೇ. ಕ್ರೈಸ್ಟ್‌ ಕಾಲೇಜಿನಲ್ಲಿ ಬಿಬಿಎ ಮುಗಿಸಿರುವ ಅವರಿಗೆ ಇನ್ಫೊಸಿಸ್‌ ಸಂಸ್ಥೆ ಸೇರಿದಂತೆ ನಾಲ್ಕೈದು ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. ಆದರೆ, ಕೆಲಸಕ್ಕಿಂತ ಅವರಿಗೆ ಇಷ್ಟವಾಗಿದ್ದು ಜನರ ಜೀವನ ಬದಲಿಸುವ ಕೆಲಸ.

ಅದು ಕಷ್ಟದ ಹಾಗೂ ಸುಲಭದ ಕೆಲಸ ಅಲ್ಲವೇ ಅಲ್ಲ ಎಂದೇ ಮಾತಿಗಳಿದರು ಮುಂದ್ರಾ. ಒಬ್ಬ ವ್ಯಕ್ತಿಯ ವಿದ್ಯಾರ್ಥಿ ಜೀವನ ಹೆಚ್ಚೆಂದರೆ 25ರಿಂದ 30ಕ್ಕೆ ಮುಗಿಯುತ್ತದೆ. ಮುಂದೇನು? ಆತ ಯಶಸ್ವಿ ಮನುಷ್ಯ ಆಗಬೇಕಲ್ಲವೇ? ಆತ ತನ್ನ 50 ವರ್ಷಗಳಲ್ಲಿ ಸಾಕಷ್ಟು ಹಣ ಗಳಿಸಿ ಅಥವಾ ಬರುವ ಸಂಬಳದಲ್ಲಿಯೇ ನೆಮ್ಮದಿಯಿಂದ ಬಾಳಬೇಕಲ್ಲವೇ? ಅದಕ್ಕೆಂದೇ ನಾವು ಯೋಜನೆ ಹಾಕಿಕೊಡಲಿದ್ದೇವೆ ಎನ್ನುತ್ತಾರೆ ರೋಹಿಣಿ.

ಇವರು ಕೇವಲ ಸಲಹೆ ಮಾತ್ರ ನೀಡುವುದಿಲ್ಲ, ತರಬೇತಿಯನ್ನೂ ನೀಡುತ್ತಾರೆ. ಅದೂ ವೈಜ್ಞಾನಿಕ ನೆಲೆಯಲ್ಲಿ ಎನ್ನುವುದು ಅವರ ಭರವಸೆ.

ನೀವು ಎಲ್ಲಿದ್ದೀರೋ ಅಲ್ಲಿಗೇ ಬಂದು ನಿಮ್ಮ ಬದುಕಿನ ಸಂಪೂರ್ಣ ಚಿತ್ರಣ ಪಡೆದುಕೊಳ್ಳುತ್ತಾರೆ. ಬದಲಾವಣೆಗೆ ನೀವು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದರ ಕುರಿತು ಸಲಹೆ ನೀಡಿ, ಅದಕ್ಕೆ ತಕ್ಕಂತೆ ತರಬೇತಿ ನೀಡುತ್ತಾರೆ. ಇದರಲ್ಲಿ ಯೋಗ, ಅಧ್ಯಾತ್ಮವೂ ಒಳಗೊಂಡಿರುತ್ತದೆ. ಆ ಮೂಲಕ ಸಂತುಷ್ಟ ಜೀವನಕ್ಕೆ ಬುನಾದಿಯ ಪ್ರಯತ್ನ ಮಾಡುತ್ತಾರೆ.

ನೀವು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮ ಬಿಡುವಿನ ವೇಳೆಯಲ್ಲಿ ಬಂದು ಸಲಹೆ ನೀಡುತ್ತಾರೆ. ಅದಕ್ಕೊಂದು ತಂಡವನ್ನೇ ಅವರು ರಚಿಸಿಕೊಂಡಿದ್ದಾರೆ.

ಜೀವನ ಮಟ್ಟ ಸುಧಾರಣೆ ಮಾಡಿಕೊಳ್ಳುವುದು ಹೇಗೆ ಎಂಬುದರ ಕುರಿತು ಅವರು ‘ದಿ 1% ಕ್ಲಬ್’ ಎಂಬ ಪುಸ್ತಕವನ್ನೂ ರಚಿಸಿದ್ದಾರೆ. ಅದರಲ್ಲಿ ಏಳು ಅಧ್ಯಾಯಗಳಿವೆ. ಅದರ ಬಿಡುಗಡೆ ಇದೇ ಶನಿವಾರ ನಡೆಯಿತು.

ಮುಂದ್ರಾ ಅವರ ಪುಸ್ತಕವನ್ನು ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಡಾ.ಅಕ್ಕೈ ಪದ್ಮಶಾಲಿ ಅನಾವರಣಗೊಳಿಸಿದರು. ಕ್ರಿಕೆಟ್ ಆಟಗಾರ ಕರುಣಾ ವಿಜಯಕುಮಾರ್ ಜೈನ್, ಶಿಕ್ಷಣ ತಜ್ಞ ಅಗಾ ಸುಲ್ತಾನ್‌ ಆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮುಂದ್ರಾ ಅವರು ಈಗಾಗಲೇ ಶ್ರೀಲಂಕಾ, ಥಾಯ್ಲೆಂಡ್‌ , ಸಿಂಗಪುರ ಹಾಗೂ ಬೆಂಗಳೂರಿನಲ್ಲಿ 300ಕ್ಕೂ ಹೆಚ್ಚು ವಿಚಾರ ಸಂಕಿರಣಗಳ ಮೂಲಕ ಸಾಕಷ್ಟು ಮಾತನಾಡಿದ್ದಾರೆ. 25ರಿಂದ 60 ವಯೋಮಾನದವರ ಬೇಕು, ಬೇಡಗಳ ಕುರಿತು ಸಾಕಷ್ಟು ಸಲಹೆ ನೀಡಿದ್ದಾರೆ. ಫಲಿತಾಂಶ ಅವರನ್ನು ಮತ್ತಷ್ಟು ಪ್ರೇರೇಪಿಸಿದೆ.

ಮುಂದ್ರಾ ಅವರು ಬರೀ ಮೆಟ್ರೊಪಾಲಿಟಿನ್ ಸಿಟಿಗಳ ಜನರ ಕುರಿತು ಮಾತ್ರ ಯೋಚನೆ ಹಾಗೂ ಯೋಜನೆ ರೂಪಿಸುವುದಿಲ್ಲ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಜನರಿಗೂ ಸಲಹೆ, ಸೂಚನೆ ನೀಡುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇನ್ನೇನು ಮಾಡುತ್ತಾರೆ ಮುಂದ್ರಾ?
ಅವರಿಗೂ ಸಾಮಾಜಿಕ ಕಳಕಳಿ ಇದೆ. ಅದಕ್ಕಾಗಿಯೇ ಆರ್‌ಎಂ(ರೋಹಿಣಿ ಮುಂದ್ರಾ) ಪ್ರತಿಷ್ಠಾನ ಆರಂಭಿಸಿದ್ದಾರೆ. ಆರ್‌ಎಂ ಪ್ರತಿಷ್ಠಾನದ ಮೂಲಕ ದೀನ ದಲಿತರ ನೆರವಿಗೂ ಅಣಿಯಾಗಿದ್ದಾರೆ. ತಮ್ಮ ಗಳಿಕೆಯ ಶೇ 40ರಷ್ಟು ಆದಾಯವನ್ನು ಅದಕ್ಕಾಗಿಯೇ ಮಿಸಲಿಟ್ಟಿದ್ದಾರೆ.

‘ಮನುಷ್ಯ ಎಡವುತ್ತಾನೆ. ಅದು ಮಾನವ ಸಹಜಗುಣ. ಆದರೆ, ಸಲಹೆ ಹಾಗೂ ತರಬೇತಿ ಆತನನ್ನು ಸರಿದಾರಿಗೆ ತರಬಹುದು. ಅದೇ ನಮ್ಮ ಧ್ಯೇಯ’ ಎನ್ನುತ್ತಾರೆ ಮುಂದ್ರಾ. 

ಪ್ರತಿಕ್ರಿಯಿಸಿ (+)