ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬಾಗಿಲಿಗೆ ಬರಲಿದೆ ಮದ್ಯ!

Last Updated 4 ಸೆಪ್ಟೆಂಬರ್ 2019, 19:37 IST
ಅಕ್ಷರ ಗಾತ್ರ

ಬೆಂಗಳೂರು: ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಲು ಉದ್ದೇಶಿಸಲಾಗಿದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಇಲ್ಲಿ ಬುಧವಾರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಮನೆಗಳ ಬಳಿ ಮದ್ಯ ಮಾರಾಟಕ್ಕೆ ಯಾವ ವಿಧಾನ ಅನುಸರಿಸಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಮುಂದಿನ ದಿನಗಳಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

‘ಮನೆಗಳಿಗೆ ಹಾಲು ಸರಬರಾಜು ಮಾಡುವ ಮಾದರಿಯಲ್ಲೇ ಮದ್ಯವನ್ನೂ ಪೂರೈಸಲಾಗುವುದು. ಅಗತ್ಯ ಇದ್ದವರು ಕೊಂಡುಕೊಳ್ಳುತ್ತಾರೆ. ಮದ್ಯ ಬೇಕಿದ್ದವರು ಅದಕ್ಕಾಗಿ ಮೊದಲೇ ಗುರುತಿನ ಕಾರ್ಡ್ ಹೊಂದಿರಬೇಕಾಗುತ್ತದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇಂತಹ ಕಾರ್ಡ್ ನೀಡಲು ಉದ್ದೇಶಿಸಲಾಗಿದ್ದು, ಕಾರ್ಡ್ ಇದ್ದವರಿಗೆ ಮಾತ್ರ ಮದ್ಯ ಮಾರಾಟ ಮಾಡಲಾಗುವುದು’ ಎಂದು ಹೇಳಿದರು.

ಸಂಚಾರಿ ಮಳಿಗೆ: ತಾಂಡಾಗಳಲ್ಲಿ ಜನ ಕಳ್ಳಬಟ್ಟಿ ಕುಡಿಯುತ್ತಿದ್ದು, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಅವರ ಆರೋಗ್ಯ ಕಾಪಾಡುವ ಸಲುವಾಗಿ ತಾಂಡಾಗಳಲ್ಲಿ ಸಂಚಾರಿ ಮದ್ಯ ಮಾರಾಟ ಮಳಿಗೆ ತೆರೆಯಲಾಗುವುದು ಎಂದರು.

ಎಂಎಸ್‌ಐಎಲ್ ಮಳಿಗೆ:ಮದ್ಯ ಮಾರಾಟ ಮಳಿಗೆ ತೆರೆಯಲು ಹೊಸದಾಗಿ ಅನುಮತಿ ನೀಡುತ್ತಿಲ್ಲ. ಆದರೆ ಎಂಎಸ್‌ಐಎಲ್ ಮಳಿಗೆಗಳನ್ನು ಪ್ರತಿ ಹಳ್ಳಿಗಳಲ್ಲೂ ತೆರೆಯಲಾಗುವುದು. ಪ್ರತಿ ವರ್ಷವೂ ಮದ್ಯ ಮಾರಾಟ ಪ್ರಮಾಣ ಶೇ 10ರಷ್ಟು ಏರಿಕೆ ಕಾಣುತ್ತಿದ್ದು, ಆದಾಯವೂ ಹೆಚ್ಚಳವಾಗುತ್ತಿದೆ ಎಂದು ಸಚಿವರು ವಿವರಿಸಿದರು.

ವಿವಾದದ ಸುತ್ತ: ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದಿನಸಿ ಅಂಗಡಿಗಳಲ್ಲಿ ಬಿಯರ್ ಮಾರಾಟದ ಪ್ರಸ್ತಾಪ ಮಾಡಲಾಗಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿ
ಯಾಗಿದ್ದಾಗಸಾರಾಯಿ ಮಾರಾಟವನ್ನು ಮತ್ತೆ ಆರಂಭಿಸುವುದಾಗಿ ಹೇಳಿದಾಗಲೂ ಸಾರ್ವಜನಿಕ ವಲಯದಲ್ಲಿ ವಿವಾದ ಸೃಷ್ಟಿಯಾಗಿತ್ತು. ನಂತರ ಈ ಪ್ರಸ್ತಾಪಗಳು ಜಾರಿಗೆ ಬರಲಿಲ್ಲ.

ಮನೆ ಮನೆಗೆ ಮದ್ಯ ಮಾರಾಟ ಮಾಡುವ ವ್ಯವಸ್ಥೆ ಜಾರಿಗೆ ತಂದವರು ಸಮಾಜ ದ್ರೋಹಿಗಳಾಗುತ್ತಾರೆ. ಸರಿಯಾದ ಹೋರಾಟ ಮಾಡಬೇಕಾಗುತ್ತದೆ.
- ಎಚ್.ಎಸ್.ದೊರೆಸ್ವಾಮಿ

‘ಆಧಾರ್’ ಕಡ್ಡಾಯವಲ್ಲ

ಮದ್ಯ ಖರೀದಿಸುವವರಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ.ಯಾವ ರಾಜ್ಯದಲ್ಲೂ ಮದ್ಯ ಖರೀದಿಗೆ ಆಧಾರ್ ಕಾರ್ಡ್ ಕೇಳುತ್ತಿಲ್ಲ. ನಮ್ಮಲ್ಲಿ ಈ ನಿಯಮ ಜಾರಿಗೆ ತರುವ ಉದ್ದೇಶವಿಲ್ಲ ಎಂದು ಸಚಿವ ಎಚ್.ನಾಗೇಶ್ ಸ್ಪಷ್ಟಪಡಿಸಿದರು.

ಮದ್ಯದ ಖಾಲಿ ಬಾಟಲಿಗಳನ್ನು ರಸ್ತೆ ಬದಿ, ಪಾರ್ಕ್, ಬೀಚ್, ನದಿ ದಂಡೆಯಲ್ಲಿ ಬಿಸಾಡದಂತೆ ತಡೆಯುವುದು ಕಷ್ಟಕರ. ಆದರೆ ತಿಳಿವಳಿಕೆ ನೀಡಬಹುದು ಎಂದು ಹೇಳಿದರು.

₹20,950 ಕೋಟಿ ಈ ವರ್ಷದ ಆದಾಯ ಗುರಿ

₹9,099 ಕೋಟಿ ಆಗಸ್ಟ್ ಅಂತ್ಯಕ್ಕೆ ಆದಾಯ ಸಂಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT