ರಾಜ್ಯದಲ್ಲಿ ಅಘೋಷಿತ ಲೋಡ್‌ ಶೆಡ್ಡಿಂಗ್‌

7
ಗ್ರಾಮೀಣ ಪ್ರದೇಶಗಳಲ್ಲಿ ಕಡಿತ ಅವಧಿ ಹೆಚ್ಚಳ

ರಾಜ್ಯದಲ್ಲಿ ಅಘೋಷಿತ ಲೋಡ್‌ ಶೆಡ್ಡಿಂಗ್‌

Published:
Updated:
Deccan Herald

ಬೆಂಗಳೂರು: ರಾಜ್ಯದ ಬಹುತೇಕ ಕಡೆಗಳಲ್ಲಿ ಪ್ರತಿದಿನ ‘ಅಘೋಷಿತ ಲೋಡ್‌ ಶೆಡ್ಡಿಂಗ್’ ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಳೆದ 15 ದಿನಗಳಿಂದ ಬೆಳಿಗ್ಗೆ ಮತ್ತು ಸಂಜೆ ವಿದ್ಯುತ್‌ ಪೂರೈಕೆಯಲ್ಲಿ ಕಡಿತ ಆಗುತ್ತಿದೆ. ಆದರೆ, ‘ಇದು ಲೋಡ್‌ ಶೆಡ್ಡಿಂಗ್‌ ಅಲ್ಲ’ ಎಂದು ಕೆಪಿಟಿಸಿಎಲ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ನಗರದ ಬಹುತೇಕ ಎಲ್ಲ ಬಡಾವಣೆಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ತಲಾ ಒಂದು ಗಂಟೆ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಇದೇ ಪರಿಸ್ಥಿತಿ ಹೈದರಾಬಾದ್‌– ಕರ್ನಾಟಕ, ಮಧ್ಯ ಕರ್ನಾಟಕದಲ್ಲೂ ಇದೆ. ಕಲಬುರ್ಗಿ, ಬಳ್ಳಾರಿ ಜಿಲ್ಲೆಗಳಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ ಕಡಿತ ಹೆಚ್ಚಾಗಿದೆ.

‘ಚಳಿಗಾಲದಲ್ಲೇ ಪರಿಸ್ಥಿತಿ ಹೀಗಿದ್ದರೆ, ಬೇಸಿಗೆಯಲ್ಲಿ ಕಥೆ ಏನು’ ಎಂಬ ಚಿಂತೆ ಸಾರ್ವಜನಿಕರನ್ನು ಕಾಡಲಾರಂಭಿಸಿದೆ. ವಿದ್ಯುತ್‌ ಉತ್ಪಾದನೆಯಲ್ಲಿ ರಾಜ್ಯ ಸ್ವಾವಲಂಬನೆ ಸಾಧಿಸಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದ್ದರೂ ಜನ ಮಾತ್ರ ಕತ್ತಲಲ್ಲಿ ಕಾಲ ಕಳೆಯುವ ಸ್ಥಿತಿ ಸೃಷ್ಟಿಯಾಗಿದೆ ಎಂಬುದು
ಜನಸಾಮಾನ್ಯರ ಅಳಲು. 

ಲೋಡ್‌ ಶೆಡ್ಡಿಂಗ್ ಇಲ್ಲ: ರಾಜ್ಯದಲ್ಲಿ ಅಗತ್ಯವಿರುವಷ್ಟು ವಿದ್ಯುತ್‌ ಉತ್ಪಾದನೆ ಆಗುತ್ತಿರುವುದರಿಂದ ಲೋಡ್‌ ಶೆಡ್ಡಿಂಗ್‌ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕೆಪಿಟಿಸಿಎಲ್‌ (ಎಲ್‌ಡಿಸಿ) ಮುಖ್ಯ ಎಂಜಿನಿಯರ್‌ ರಾಮಾಂಜನೇಯಲು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿದ್ಯುತ್‌ ಮಾರ್ಗದಲ್ಲಿ ಸಮಸ್ಯೆ, ಟ್ರಾನ್ಸ್‌ಫಾರ್ಮರ್‌ಗಳ ಬದಲಾವಣೆ ಮುಂತಾದ ಕಾರಣಗಳಿಂದ ವಿದ್ಯುತ್‌ ಕಡಿತ ಮಾಡುತ್ತಿರಬಹುದು. ನಮ್ಮಲ್ಲಿ ಬೇಡಿಕೆಗೆ ತಕ್ಕಷ್ಟು ವಿದ್ಯುತ್‌ ಲಭ್ಯವಿದೆ. ಜಲ ವಿದ್ಯುತ್‌, ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಆಗುತ್ತಿದೆ. ಪವನ ವಿದ್ಯುತ್‌ ಮೂಲದಿಂದ 200 ರಿಂದ 300 ಮೆಗಾವಾಟ್‌ನಷ್ಟು ವಿದ್ಯುತ್‌, ಸೌರಶಕ್ತಿ ಮೂಲದಿಂದ 3000 ಮೆಗಾ ವಾಟ್‌ನಷ್ಟು ವಿದ್ಯುತ್‌ ಉತ್ಪಾದನೆ ಆಗುತ್ತಿದೆ’ ಎಂದು ಅವರು ಹೇಳಿದರು.

ಈ ಬೇಸಿಗೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ಸಮಸ್ಯೆ ಆಗುವುದಿಲ್ಲ. ಜಲಾಶಯಗಳಲ್ಲಿ ನೀರಿರುವುದರಿಂದ ವಿದ್ಯುತ್‌ ಉತ್ಪಾದನೆಗೆ ತೊಂದರೆ ಆಗಿಲ್ಲ. ಶಾಖೋತ್ಪನ್ನ ಕೇಂದ್ರಗಳಿಗೆ ನವೆಂಬರ್‌ನಲ್ಲಿ ಕಲ್ಲಿದ್ದಲಿನ ತೊಂದರೆ ಇತ್ತು. ಆದರೆ, ಕಲ್ಲಿದ್ದಲು ಸಮಸ್ಯೆ ತಕ್ಕಮಟ್ಟಿಗೆ ನಿವಾರಣೆ ಆಗಿದೆ ಎಂದು ಅವರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !