ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ: ನಷ್ಟ ತಂದೊಡ್ಡಿದ ಲಾಕ್‌ಡೌನ್‌

ಕುಂಬಳಕಾಯಿ ಬೆಳೆದು ಕಂಗಾಲದ ನಂದೇಶ್ವರ ರೈತ
Last Updated 6 ಮೇ 2020, 3:34 IST
ಅಕ್ಷರ ಗಾತ್ರ

ಅಥಣಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನಂದೇಶ್ವರ ಗ್ರಾಮದ ರೈತ ಪೀರಪ್ಪ ಚಂದಪ್ಪ ಬಿಸಲನಾಯಿಕ ಅವರು 8 ಎಕರೆಯಲ್ಲಿ ಕುಂಬಳಕಾಯಿ ಬೆಳೆದಿದ್ದಾರೆ. ಆದರೆ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಉಂಟಾದ ಬೇಡಿಕೆ ಕುಸಿತ ಹಾಗೂ ಸಾಗಾಣಿಕೆ ತೊಂದರೆಯಿಂದಾಗಿ ನಷ್ಟಕ್ಕೆ ಒಳಗಾಗಿದ್ದಾರೆ.

ಕಾಯಿ ಹಾಗೂ ಹಣ್ಣುಗಳು ಮಾರಾಟವಾಗದೆ ಇರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಈ ರೈತ ಕಂಗಾಲಾಗಿದ್ದಾರೆ.

ತಾಲ್ಲೂಕಿನ ದಕ್ಷಿಣ ಭಾಗದ ಗ್ರಾಮಗಳ ಕೃಷ್ಣಾ ನದಿ ತೀರದ ರೈತರು ಹೆಚ್ಚಾಗಿ ಕಬ್ಬು ಬೆಳೆಯುತ್ತಾರೆ. ಮೇಲಿಂದ ಮೇಲೆ ಕಬ್ಬನ್ನೆ ಬೆಳೆದುದ್ದರಿಂದ ಭೂಮಿ ಸವಳು–ಜವಳಾಗಿ ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದೆ. ಆದರೆ ಪೀರಪ್ಪ ಈ ಭಾಗದಲ್ಲಿ ಕಬ್ಬಿಗೆ ಪರ್ಯಾಯವಾಗಿ ಇತರ ಬೆಳೆ ಬೆಳೆಯಬೇಕೆಂದು ಕುಂಬಳಕಾಯಿ ಮೊರೆ ಹೋಗಿದ್ದರು. ಮೂರು ತಿಂಗಳಲ್ಲಿ ಬರುವ ಕುಂಬಳ ಬೆಳೆದು ಒಳ್ಳೆಯ ನಿರ್ವಹಣೆ ಮಾಡಿ ಲಾಭದ ನಿರೀಕ್ಷೆಯಲ್ಲಿದ್ದರು. ಎರಡು ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾರಂತೆ. ಆದರೆ, ಕೊರೊನಾ ಹರಡದಂತೆ ನಿಯಂತ್ರಿಸುವ ಉದ್ದೇಶದಿಂದ ಜಾರಿಗೊಳಿಸಲಾದ ಲಾಕ್‌ಡೌನ್‌ ಅವರ ಲೆಕ್ಕಾಚಾರವನ್ನೆಲ್ಲಾ ತಲೆಕೆಳಗು ಮಾಡಿದೆ.

ಕೊಳ್ಳುವವರಿಲ್ಲದೆ ಅಪಾರ ಪ್ರಮಾಣದ ಬೆಳೆ ಹೊಲದಲ್ಲೇ ಹಾಳಾಗುತ್ತಿರುವುದನ್ನು ಕಂಡು ಮರುಕ ಪಡುತ್ತಿದ್ದಾರೆ. ದಿಕ್ಕು ತೋಚದೆ ಕಣ್ಣೀರಿಡುತ್ತಿದ್ದಾರೆ.

‘ಟನ್ ಕುಂಬಳಕಾಯಿಗೆ ₹ 12ಸಾವಿರದಿಂದ ₹ 15ಸಾವಿರ ಬೆಲೆ ಸಿಕ್ಕಿದ್ದರೂ ಕನಿಷ್ಠ ₹ 6 ಲಕ್ಷ ವರಮಾನ ಕಾಣಬಹುದಿತ್ತು. ಆದರೆ, ಈಗ ಕಡಿಮೆ ಬೆಲೆಗೆ ಮಾರಾಟ ಮಾಡೋಣವೆಂದರೂ ಕೊಳ್ಳುವವರು ಬರುತ್ತಿಲ್ಲ. ಈ ಬೆಳೆ ಬೆಳೆಯುವುದಕ್ಕಾಗಿ ಕುಟುಂಬ ಸದಸ್ಯರೆಲ್ಲರೂ ಶ್ರಮ ಪಟ್ಟಿದ್ದೆವು. ಆದರೆ, ಆಗಿರುವ ಖರ್ಚು ಕೂಡ ಸಿಗುವುದೂ ಅನುಮಾನ ಎನ್ನುವಂತಾಗಿದೆ’ ಎಂದು ರೈತ ಅಳಲು ತೋಡಿಕೊಂಡರು.

‘ಇದೇ ಪರಿಸ್ಥಿತಿ ಮುಂದುವರಿದರೆ ಕುಂಬಳ ಕಾಯಿಗಳು ಕೊಳೆತು ಹೋಗುತ್ತವೆ. ಏನು ಮಾಡುವುದೋ ತಿಳಿಯುತ್ತಿಲ್ಲ. ಸಂಬಂಧಿಸಿದ ಇಲಾಖೆಯವರು ಅಥವಾ ಯಾರಾದರೂ ನೇರವಾಗಿ ಖರೀದಿಸಿದರೆ ಅನುಕೂಲ ಆಗುತ್ತದೆ’ ಎಂದು ಕೋರುತ್ತಾರೆ ಅವರು.

‘ಈ ಭಾಗದಲ್ಲಿ ತೋಟಗಾರಿಕಾ ಬೆಳೆಯಿಂದ ಲಾಭ ಕಂಡು ಇತರರಿಗೆ ಪ್ರೇರಣೆಯಾಗಲು ಬಯಸಿದ್ದೆ. ಆದರೆ, ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ. ರೈತರ ನೆರವಿಗೆ ಇದ್ದೇವೆ ಎಂದು ಹೇಳುವ ಸರ್ಕಾರ ನನ್ನ ಕೈಹಿಡಿಯಬೇಕು’ ಎಂದು ಪೀರಪ್ಪ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT