ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ, ಹಾಸನ ಜೆಡಿಎಸ್‌ಗೆ; ಹಾಲಿ 10 ಕ್ಷೇತ್ರ ಕಾಂಗ್ರೆಸ್‌ಗೆ

Last Updated 18 ಫೆಬ್ರುವರಿ 2019, 20:26 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಮತ್ತು ಹಾಸನ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟು, ಹಾಲಿ ಪ್ರತಿನಿಧಿಸುವ 10 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ರಾಜ್ಯ ಕಾಂಗ್ರೆಸ್‌ ನಾಯಕರು ಗಂಭೀರ ಚಿಂತನೆ ನಡೆಸಿದ್ದಾರೆ.

ಆದರೆ, ಕಾಂಗ್ರೆಸ್‌ ಸಂಸದರಿರುವ ಕೆಲವು ಕ್ಷೇತ್ರಗಳ (ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ) ಮೇಲೆ ಜೆಡಿಎಸ್‌ ಕಣ್ಣು ಬಿದ್ದಿದೆ. ಸೀಟು ಹಂಚಿಕೆ ವೇಳೆ ಈ ಕ್ಷೇತ್ರಗಳ ಪೈಕಿ ಒಂದೆರಡನ್ನು ಬಿಟ್ಟು ಕೊಡುವಂತೆ ಜೆಡಿಎಸ್‌ ಪಟ್ಟು ಹಿಡಿಯುವ ಸಾಧ್ಯತೆ ಇದೆ.

ಹಾಲಿ ಪ್ರತಿನಿಧಿಸುವ ಕ್ಷೇತ್ರಗಳನ್ನು ಬಿಟ್ಟುಕೊಡುವ ವಿಷಯದಲ್ಲಿ ಉಭಯ ಪಕ್ಷಗಳು ರಾಜಿಗೆ ಮುಂದಾಗುವ ಸಾಧ್ಯತೆ ಕಡಿಮೆ. ಹೀಗಾಗಿ, ಸೀಟು ಹೊಂದಾಣಿಕೆಗಾಗಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರು ಹಗ್ಗ ಜಗ್ಗಾಟ ನಡೆಸುವುದು ಖಚಿತ ಎನ್ನಲಾಗುತ್ತಿದೆ.

ಪಕ್ಷದ ಆಂತರಿಕ ವಲಯದಿಂದ ಎಷ್ಟೇ ಒತ್ತಡ ಬಂದರೂ ಮಂಡ್ಯ ಮತ್ತು ಹಾಸನ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡಲು ಕಾಂಗ್ರೆಸ್‌ ರಾಜ್ಯ ನಾಯಕರು ಮನಸ್ಸು ಮಾಡಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಹಾಲಿ ಜೆಡಿಎಸ್‌ ಸಂಸದರಿದ್ದಾರೆ. ಅಲ್ಲದೆ, ಎರಡೂ ಜಿಲ್ಲೆಗಳಲ್ಲಿ ಜೆಡಿಎಸ್‌ ಪ್ರಾಬಲ್ಯ ಹೊಂದಿದೆ. ಹೀಗಾಗಿ, ಸ್ಥಳೀಯ ಮಟ್ಟದಿಂದ ವಿರೋಧ ವ್ಯಕ್ತವಾದರೂ ಈ ಕ್ಷೇತ್ರಗಳನ್ನು ಯಾವುದೇ ಚರ್ಚೆ ನಡೆಸದೆ ಬಿಟ್ಟು ಕೊಡಲು ‘ಕೈ’ ನಾಯಕರು ತೀರ್ಮಾನಿಸಿದ್ದಾರೆ.

ಈ ಮಧ್ಯೆ, ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಯಕೆಯನ್ನು ಅಂಬರೀಷ್‌ ಪತ್ನಿ ಸುಮಲತಾ ವ್ಯಕ್ತಪಡಿಸಿ
ದ್ದಾರೆ. ತಮ್ಮ ಇಂಗಿತವನ್ನು ಕಾಂಗ್ರೆಸ್‌ ನಾಯಕರ ಬಳಿಯೂ ವ್ಯಕ್ತಪ‍ಡಿಸಿದ್ದಾರೆ. ಸ್ಥಳೀಯ ಕೆಲವು ಕಾಂಗ್ರೆಸ್‌ ನಾಯಕರೂ ಸುಮಲತಾ ಅವರಿಗೆ ಟಿಕೆಟ್‌ ನೀಡುವಂತೆ ಒತ್ತಾಯಿಸಿದ್ದಾರೆ. ಹಾಸನದಲ್ಲಿ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಮಾಜಿ ಸಚಿವ ಕಾಂಗ್ರೆಸ್‌ ಎ. ಮಂಜು ಸೇರಿದಂತೆ ಕೆಲವು ಸ್ಥಳೀಯ ನಾಯಕರು ಒತ್ತಡ ಹಾಕುತ್ತಿದ್ದಾರೆ. ಆದರೆ, ಈ ಬಗ್ಗೆ ರಾಜ್ಯ ನಾಯಕರು ಈಗಾಗಲೇ ಸ್ಪಷ್ಟ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಗೊತ್ತಾಗಿದೆ.

ಸದ್ಯ ಪಕ್ಷದ ಸಂಸದರಿರುವ 10 ಕ್ಷೇತ್ರಗಳನ್ನು ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ಸೀಟು ಹೊಂದಾಣಿಕೆ ಕುರಿತು ಜೆಡಿಎಸ್‌ ನಾಯಕರ ಜೊತೆ ಚರ್ಚೆಗೆ ಕಾಂಗ್ರೆಸ್‌ ನಾಯಕರು ಮುಂದಾಗಿದ್ದಾರೆ. 2014ರ ಚುನಾವಣೆಯಲ್ಲಿ ಮೋದಿ ಅಲೆಯ ಮಧ್ಯೆಯೂ ಪಕ್ಷದ ಅಭ್ಯರ್ಥಿಗಳು ಗೆದ್ದಿರುವ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ವಿಷಯದಲ್ಲಿ ರಾಜ್ಯ ನಾಯಕರ ನಡುವೆ ಸಹಮತ ಇಲ್ಲ. ಹಾಲಿ ಸಂಸದರ ಜೊತೆಗೆ ಸ್ಥಳೀಯ ಕಾರ್ಯಕರ್ತರೂ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

‘ಸೀಟು ಹೊಂದಾಣಿಕೆ ಸಂಬಂಧಿಸಿದಂತೆ ಜೆಡಿಎಸ್‌ ಜೊತೆ ಮಾತುಕತೆ ನಡೆಸಲು ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯ ನಾಯಕರಿಗೆ ಸೂಚಿಸಿದೆ. ಗೊಂದಲ ಇರುವ ಕ್ಷೇತ್ರಗಳ ವಿಷಯದಲ್ಲಿ ಮಧ್ಯಪ್ರವೇಶಿಸುವುದಾಗಿ ವರಿಷ್ಠರು ಹೇಳಿದ್ದಾರೆ. ಅದರಂತೆ, ಶೀಘ್ರದಲ್ಲೇ ಉಭಯ ಪಕ್ಷಗಳ ನಾಯಕರು ಚರ್ಚೆ ನಡೆಸಲಿದ್ದಾರೆ. ಸತತವಾಗಿ ಕಣಕ್ಕಿಳಿದು ಸೋಲು ಕಂಡ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಿಸಲು ಪಕ್ಷ ತೀರ್ಮಾನಿಸಿದೆ. ಇಂಥ ಕ್ಷೇತ್ರಗಳಲ್ಲಿ ಸಮರ್ಥ ಹೊಸ ಮುಖಗಳಿಗೆ ಹುಡುಕಾಟ ನಡೆದಿದೆ’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಅಪಪ್ರಚಾರಕ್ಕೆ ಉತ್ತರ; ಪ್ರಚಾರ ತಂತ್ರ
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಅಪಪ್ರಚಾರಗಳಿಗೆ ಸೂಕ್ತ ಉತ್ತರ ನೀಡುವ ಜೊತೆಗೆ ಪಕ್ಷದ ಸಾಧನೆಗಳ ಮೇಲೆ ಬೆಳಕು ಚೆಲ್ಲುವ ತಂತ್ರಗಾರಿಕೆಯ ಮೊರೆ ಹೋಗಲು ಕಾಂಗ್ರೆಸ್‌ ನಿರ್ಧರಿಸಿದೆ.

ಸಿ.ಎಂ. ಇಬ್ರಾಹಿಂ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಪಬ್ಲಿಸಿಟಿ ಸಮಿತಿಯ ಸಭೆ ಸೋಮವಾರ ನಡೆಯಿತು. ಬಳಿಕ ಮಾತನಾಡಿದ ಇಬ್ರಾಹಿಂ, ‘ಕಾಂಗ್ರೆಸ್ ಸಾಧನೆ ಹಾಗೂ ಬಿಜೆಪಿಯ ವೈಫಲ್ಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜನರನ್ನು ನೇರವಾಗಿ ತಲುಪಲು ಯಾವ ರೀತಿಯ ಪ್ರಚಾರ ತಂತ್ರ ಅಳವಡಿಸಿಕೊಳ್ಳಬೇಕು ಎಂಬ ಕುರಿತು ವಿಚಾರ ವಿನಿಮಯ ಮಾಡಿದ್ದೇವೆ’ ಎಂದರು.

‘ನಮ್ಮ ಮೇಲಿನ ಅಪಪ್ರಚಾರಕ್ಕೆ ಯಾವ ರೀತಿ ಉತ್ತರ ಕೊಡಬೇಕು ಎಂಬ ಬಗ್ಗೆಯೂ ಚರ್ಚಿಸಿದ್ದೇವೆ. ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆ ಹಾಗೂ ಪ್ರಚಾರ ಕುರಿತು ಚರ್ಚಿಸಿದ್ದೇವೆ. ಪ್ರಭಾವಿ ಹಾಗೂ ಪರಿಣಾಮಕಾರಿಯಾಗಿ ಭಾಷಣ ಮಾಡುವ ವಾಗ್ಮಿಗಳ ಹಾಗೂ ಚಿಂತಕರ ಹುಡುಕಾಟ ನಡೆಸಲಿದ್ದೇವೆ’ ಎಂದೂ ವಿವರಿಸಿದರು.

ಸೀಟು ಹಂಚಿಕೆ, ಅಭ್ಯರ್ಥಿ ಘೋಷಣೆಗೆ ಸಮನ್ವಯ ಸಮಿತಿ ಒತ್ತಾಯ
‘ಜೆಡಿಎಸ್ ಜೊತೆ ಮೈತ್ರಿ ಸಂಬಂಧಿಸಿದಂತೆ ಆದಷ್ಟು ಶೀಘ್ರ ಕ್ಷೇತ್ರಗಳನ್ನು ಹಂಚಿಕೆ ಮಾಡಿ, ಉಭಯ ಪಕ್ಷಗಳೂ ಅಭ್ಯರ್ಥಿಗಳನ್ನು ಘೋಷಿಸಬೇಕು’ ಎಂಬ ಒತ್ತಾಯ ಕೆಪಿಸಿಸಿ ಚುನಾವಣಾ ಸಮನ್ವಯ ಸಮಿತಿ ಸಭೆಯಲ್ಲಿ ಮೂಡಿದೆ.

ರಾಮಲಿಂಗಾರೆಡ್ಡಿ ಅಧ್ಯಕ್ಷತೆಯ ಸಮನ್ವಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ.

ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ‘ಪಕ್ಷ ಸಂಘಟನೆ, ಲೋಕಸಭೆ ಚುನಾವಣೆಗೆ ಸಿದ್ಧತೆ ಮತ್ತು ಪ್ರಚಾರ ತಂತ್ರಗಳ ಕುರಿತು ಸಭೆಯಲ್ಲಿ ಚರ್ಚಿಸಿದ್ದೇವೆ’ ಎಂದರು.

‘ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಜೊತೆ ಚರ್ಚಿಸಿ, ಸೀಟು ಹಂಚಿಕೆ ಸಂಬಂಧ ಶೀಘ್ರದಲ್ಲೇ ತೀರ್ಮಾನಕ್ಕೆ ಬರುತ್ತೇವೆ’ ಎಂದು ದಿನೇಶ್‌ ಹೇಳಿದರು.

‘ಪಕ್ಷದ ಸಹ ಉಸ್ತುವಾರಿಗಳು ಎಲ್ಲ ಕ್ಷೇತ್ರಗಳಿಗೆ ತೆರಳಿ ಸ್ಥಳೀಯ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಿ ಪಕ್ಷದ ವರಿಷ್ಠರಿಗೆ ವರದಿ ನೀಡಿದ್ದಾರೆ. ಪಕ್ಷದ ಚುನಾವಣಾ ಸಮಿತಿಯಲ್ಲಿ ಈ ಕುರಿತು ಚರ್ಚಿಸಿದ ಬಳಿಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT