ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದಲ್ಲಿ ಮೈತ್ರಿ ಮುನಿಸು; ಸಿದ್ದರಾಮಯ್ಯ ಸಂಧಾನಕ್ಕೆ ಸಿಗದ ಫಲ

ಜೆಡಿಎಸ್‌ ಪರ ಪ್ರಚಾರ ಮಾಡಲು ನಿರಾಸಕ್ತಿ
Last Updated 25 ಅಕ್ಟೋಬರ್ 2018, 20:03 IST
ಅಕ್ಷರ ಗಾತ್ರ

ಮಂಡ್ಯ: ಲೋಕಸಭಾ ಉಪಚುನಾವಣಾ ಪ್ರಚಾರ ಕಾವೇರುತ್ತಿದ್ದು, ಮಂಡ್ಯ ಕ್ಷೇತ್ರದ ಜೆಡಿಎಸ್‌–ಕಾಂಗ್ರೆಸ್‌ ಒಮ್ಮತದ ಅಭ್ಯರ್ಥಿ ಎಲ್‌.ಆರ್‌.ಶಿವರಾಮೇಗೌಡ ಪರ ಮತಯಾಚಿಸಲು ಸ್ಥಳೀಯ ಕಾಂಗ್ರೆಸ್‌ ಮುಖಂಡರು ಇನ್ನೂ ಸಿದ್ಧರಿಲ್ಲ.

ಅಸಮಾಧಾನ ತಗ್ಗಿಸಲು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬುಧವಾರ ನಡೆಸಿದ್ದ ಸಂಧಾನವೂ ಫಲ ನೀಡಿಲ್ಲ.

ಕಾಂಗ್ರೆಸ್‌– ಜೆಡಿಎಸ್‌ ನಡುವಿನ ಜಿದ್ದಾಜಿದ್ದಿಗೆ ಜಿಲ್ಲೆ ಮೊದಲಿನಿಂದಲೂ ಪ್ರಸಿದ್ಧಿ ಪಡೆದಿದೆ. ಎರಡೂ ಪಕ್ಷಗಳ ಮುಖಂಡರು ಪ್ರತಿಷ್ಠೆ ಪಣಕ್ಕಿಟ್ಟವರಂತೆ ಹೋರಾಟ ಮಾಡಿದವರು. ಐದು ತಿಂಗಳ ಹಿಂದೆಯಷ್ಟೇ ವಿಧಾನಸಭಾ ಚುನಾವಣೆಯ ಸೋಲು–ಗೆಲುವುಗಳ ಬಗ್ಗೆ ಪರಸ್ಪರ ನಿಂದಿಸಿದ್ದರು. ವೈಯಕ್ತಿಕವಾಗಿ ಅವಾಚ್ಯ ಶಬ್ದ ಬಳಸಿ ಬೈದಾಡಿಕೊಂಡಿದ್ದಾರೆ. ಈಚೆಗೆ ಮುಗಿದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಎದೆ ಸೆಟೆಸಿ ಹೋರಾಡಿದ್ದರು.

ಸರ್ಕಾರ ರಚನೆ ವೇಳೆ ಆದ ಮೈತ್ರಿ ಸ್ಥಳೀಯ ಮುಖಂಡರ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ. ಆದರೆ, ಉಪಚುನಾವಣೆಯ ಮೈತ್ರಿ ಎರಡೂ ಪಕ್ಷಗಳ ಮುಖಂಡರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಜೆಡಿಎಸ್‌ ಮುಖಂಡರು ಕ್ಷೇತ್ರದ ಎಲ್ಲಾ ತಾಲ್ಲೂಕುಗಳಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ. ಹೆಸರಿಗಷ್ಟೇ ಜೆಡಿಎಸ್‌–ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಎಂಬಂತಾಗಿದೆ. ಸಭೆಯಲ್ಲಿ ಒಬ್ಬ ಕಾಂಗ್ರೆಸ್‌ ಕಾರ್ಯಕರ್ತನೂ ಕಾಣ ಸಿಗುತ್ತಿಲ್ಲ. ಮೈತ್ರಿ ಸಭೆಗಳ ಫ್ಲೆಕ್ಸ್‌ಗಳಲ್ಲಿ ಕಾಂಗ್ರೆಸ್‌ನಿಂದ ಕೇವಲ ಅಂಬರೀಷ್‌ ಹಾಗೂ ಎಂ.ಎಸ್‌.ಆತ್ಮಾನಂದ ಅವರ ಭಾವಚಿತ್ರ ಹಾಕಿಸಿ ಬೇರೆ ಮುಖಂಡರನ್ನು ದೂರ ಇಡುತ್ತಿದ್ದಾರೆ. ಇದು ಎರಡೂ ಪಕ್ಷಗಳ ಶೀತಲ ಸಮರಕ್ಕೆ ಕಾರಣವಾಗಿದೆ.

‘ಮೈತ್ರಿಧರ್ಮ ಪಾಲಿಸುವಂತೆ ಸಿದ್ದರಾಮಯ್ಯ ಸೂಚಿಸಿದ್ದಾರೆ. ಆದರೆ, ಜೆಡಿಎಸ್‌ ಮುಖಂಡರು, ಬೆಂಬಲ ಕೊಡಿ ಎಂದು ನಮ್ಮನ್ನು ಕೇಳಿಲ್ಲ. ಅಭ್ಯರ್ಥಿಯೂ ಕನಿಷ್ಠ ಒಂದು ಕರೆ ಮಾಡಿ ಬೆಂಬಲ ಕೋರಿಲ್ಲ. ನಮಗೆ ಗೌರವ ಇಲ್ಲವೇ? ಮೈತ್ರಿಧರ್ಮ ಪಾಲಿಸಲುನಾವು ಸಿದ್ಧರಿದ್ದೇವೆ, ಅವರೂ ಅದನ್ನು ಪಾಲಿಸಬೇಕಲ್ಲವೇ? ಬಳ್ಳಾರಿಯಲ್ಲಿ ಡಿ.ಕೆ.ಶಿವಕುಮಾರ್‌ ಅವರು ಎಲ್ಲಾ ಜೆಡಿಎಸ್‌ ಮುಖಂಡರನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಅವರೂ ನಮ್ಮ ಮುಖಂಡರ ಬೆಂಬಲ ಕೇಳಿದ್ದಾರೆ.

ರಾಮನಗರ, ಜಮಖಂಡಿಯಲ್ಲೂ ಮೈತ್ರಿ ಚೆನ್ನಾಗಿದೆ. ಆದರೆ, ನಮ್ಮ ಜಿಲ್ಲೆಯಲ್ಲಿ ಎಲ್ಲಾ ಜೆಡಿಎಸ್‌ ಶಾಸಕರು, ಸಚಿವರು ಗೆಲುವಿನ ಮದದಲ್ಲಿ ತೇಲುತ್ತಿದ್ದಾರೆ’ ಎಂದು ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಹೊಂದಾಣಿಕೆ ಕಷ್ಟ: ಪುಟ್ಟರಾಜು

‘ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಹೊಂದಾಣಿಕೆ ಕಷ್ಟವಾಗುತ್ತಿರುವುದು ನಿಜ. ಮೊದಲಿನಿಂದಲೂ ಅವರ ಜೊತೆ ಹೋರಾಟ ಮಾಡಿಕೊಂಡೇ ಬಂದಿದ್ದೇವೆ. ಈಗ ಒಟ್ಟಾಗಿ ನಡೆಯುವುದೆಂದರೆ ಮುಜುಗರವಾಗುತ್ತಿದೆ. ಆದರೂ ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಹೊಂದಾಣಿಕೆ ಮಾಡಿಕೊಳ್ಳಲು ಯತ್ನಿಸುತ್ತಿದ್ದೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಗುರುವಾರ ಕೆ.ಆರ್‌.ಪೇಟೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ತಿಳಿಸಿದರು.

ಕಾಂಗ್ರೆಸ್‌ ಮುಖಂಡರ ಬೇಡಿಕೆ

ಸಿದ್ದರಾಮಯ್ಯ ನಡೆಸಿದ ಸಂಧಾನದಲ್ಲಿ ಕಾಂಗ್ರೆಸ್‌ ಮುಖಂಡರು ಹಲವು ಬೇಡಿಕೆ ಇಟ್ಟಿದ್ದಾರೆ. ಮೈತ್ರಿಗೆ ಅನುಗುಣವಾಗಿ ಸ್ಥಳೀಯ ಸಂಸ್ಥೆಗಳ ನಾಮ ನಿರ್ದೇಶಿತ ಸದಸ್ಯ ಸ್ಥಾನಗಳನ್ನು ಕಾಂಗ್ರೆಸ್‌ಗೆ ಕೂಡಲೇ ಬಿಟ್ಟುಕೊಡಬೇಕು. ಕುಮಾರಸ್ವಾಮಿ ಸರ್ಕಾರ ಬಂದ ನಂತರ ಸ್ಥಗಿತಗೊಂಡಿರುವ ಕಾಂಗ್ರೆಸ್‌ ಕಾರ್ಯಕರ್ತರ ಗುತ್ತಿಗೆ ಕಾಮಗಾರಿಗಳಿಗೆ ಚಾಲನೆ ಕೊಡಿಸಬೇಕು. ಇಲ್ಲದಿದ್ದರೆ ನಾವು ಚುನಾವಣೆ ವೇಳೆ ತಟಸ್ಥವಾಗಿ ಉಳಿಯುತ್ತೇವೆ ಎಂದು ತಿಳಿಸಿದ್ದಾರೆ. ಇದಕ್ಕೆ ಸಿದ್ದರಾಮಯ್ಯ, ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT