ಗುರುವಾರ , ನವೆಂಬರ್ 14, 2019
18 °C

ಆರ್‌ಸಿಇಪಿ: ಹೈನೋದ್ಯಮ ಹಾಳಾಗಲು ಬಿಡುವುದಿಲ್ಲ– ಸಚಿವ ಮಾಧುಸ್ವಾಮಿ

Published:
Updated:
Prajavani

ತುಮಕೂರು: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದದಿಂದ ರಾಜ್ಯದ ಹೈನೋದ್ಯಮ ಹಾಳಾಗಲು ಬಿಡುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಿತ್ಯ 70ರಿಂದ 80 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ಗ್ರಾಮೀಣರ ಬದುಕಿಗೆ ಹೈನುಗಾರಿಕೆ ಆಧಾರವಾಗಿದೆ. ಒಪ್ಪಂದದಿಂದ ಅವರ ಜೀವನಕ್ಕೆ ಹೊಡೆತ ಬೀಳುತ್ತದೆ. ಹಾಗಾಗಿ ಈ ಅಂಶವನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

‘ಜಯಂತಿ ಮಾಡಲು ಟಿಪ್ಪು ಸುಲ್ತಾನ್‌ ಸಂತ ಏನ್ರಿ? ಆತ ಒಬ್ಬ ಆಡಳಿತಗಾರ. ಸರ್ಕಾರವು ಜಾತಿ ಕಾರಣಕ್ಕೊ, ತತ್ವಗಳ ಕಾರಣಕ್ಕೊ ಸಾಧು, ಸಂತ, ಶರಣರ ಜಯಂತಿಗಳನ್ನು ಆಚರಿಸುತ್ತಿದೆ. ಆದರೆ, ಆಡಳಿತಗಾರರ ಜಯಂತಿ ಇಲ್ಲಿಯವರೆಗೂ ಮಾಡಿಲ್ಲ. ಮುಸ್ಲಿಮರಲ್ಲಿ ಜಯಂತಿಗಳ ಆಚರಣೆ ಇಲ್ಲ. ಆ ಸಮುದಾಯದವರು ಸಹ ಜಯಂತಿ ಮಾಡುವಂತಿಲ್ಲ’ ಎಂದರು.

‘ಪ್ರವಾಹದಿಂದ ಸಂತ್ರಸ್ತರಾದವರಿಗೆ ಸೂಕ್ತ ವ್ಯವಸ್ಥೆ ಮಾಡಿದ್ದೇವೆ. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ಒಬ್ಬನೇ ಒಬ್ಬ ಅರ್ಹ ಫಲಾನುಭವಿಯನ್ನೂ ನಾವು ಬರಿಗೈಲಿ ವಾಪಸ್ ಕಳುಹಿಸಿಲ್ಲ. ಕನಿಷ್ಠ ₹10,000 ಕೊಟ್ಟು ಕಳುಹಿಸಿದ್ದೇವೆ’ ಎಂದರು.

‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಂತ್ರಸ್ತರಿಗೆ ಒಂದು ರೂಪಾಯಿ ತಲುಪಿಲ್ಲ ಎಂದು ಹೇಳುತ್ತಾರೆ. ಸಂತ್ರಸ್ತರೊಬ್ಬರಿಂದ ನನ್ನ ಮುಂದೆ ಈ ಮಾತು ಹೇಳಿಸಲಿ ನೋಡೋಣ’ ಎಂದರು.

 

ರಾಜ್ಯದ ಎಲ್ಲ ನಗರಗಳಲ್ಲಿ ಉತ್ಪತ್ತಿಯಾಗುತ್ತಿರುವ ಕೊಳಚೆ ನೀರಿನ ಲೆಕ್ಕ ಹಾಕುತ್ತಿದ್ದೇವೆ. ಅದನ್ನು ಸಂಸ್ಕರಿಸಿ, ಕೆರೆ ತುಂಬಿಸಿ, ಕೃಷಿಗೆ ಹರಿಸಿ, ರೈತರ ಮೊಗದಲ್ಲಿ ನಗು ಅರಳಿಸುತ್ತೇವೆ.
ಜೆ.ಸಿ.ಮಾಧುಸ್ವಾಮಿ, ಸಚಿವ

ಪ್ರತಿಕ್ರಿಯಿಸಿ (+)