ಶುಕ್ರವಾರ, ನವೆಂಬರ್ 15, 2019
27 °C
ಪ್ರಚಾರಕ್ಕೆ ತೆರಳಿದ ಮುಖ್ಯಮಂತ್ರಿ ಯಡಿಯೂರಪ್ಪ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: ಹೆಲಿಕಾಪ್ಟರ್‌ ವಿಳಂಬ ಕಾರಣ ಸವದಿಗೆ ತರಾಟೆ

Published:
Updated:
Prajavani

ಬೆಳಗಾವಿ: ನೆರೆಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ತೆರಳಲು ಹೆಲಿಕಾಪ್ಟರ್‌ ವ್ಯವಸ್ಥೆ ಮಾಡುವುದು ವಿಳಂಬವಾಗಿದ್ದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಇಲ್ಲಿನ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ತಂಗಿದ್ದ ಅವರು ಬುಧವಾರ ಬೆಳಿಗ್ಗೆ 8.30ಕ್ಕೆ ತೆರಳಬೇಕಿತ್ತು. ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಬಂದಿರಲಿಲ್ಲ. ಹೀಗಾಗಿ ತಾಸು ತಡವಾಗಿ ಪ್ರವಾಸಿ ಮಂದಿರದಿಂದ ಹೊರಬಂದರು. ಆಗಲೂ ಹೆಲಿಕಾಪ್ಟರ್‌ ವ್ಯವಸ್ಥೆ ಆಗಿಲ್ಲದಿರುವ ಮಾಹಿತಿ ಬರುತ್ತಿದ್ದಂತೆಯೇ, ಸವದಿ ಅವರಿಗೆ ಕರೆ ಮಾಡಿಸಿ, ರೇಗಿದರು.

‘ನನಗೆ ಹುಷಾರಿಲ್ಲ. ಹೆಲಿಕಾಪ್ಟರ್ ಕೂಡ ಸಮಸ್ಯೆಯಾಗಿದೆ. ಬಹಳಷ್ಟು ತಡವಾಗಿದೆ. ಎಲ್ಲ ಪ್ರವಾಸ ರದ್ದು ಮಾಡು, ನಾನು ಬೆಂಗಳೂರಿಗೆ ವಾಪಸ್ ಹೋಗುತ್ತೇನೆ’ ಎಂದರು. ಆಗ ಕ್ಷಮೆ ಯಾಚಿಸಿದ ಸವದಿ ಪ್ರಚಾರಕ್ಕೆ ಬರುವಂತೆ ಪಟ್ಟು ಹಿಡಿದಾಗ, ‘ನೀನು ಹೇಳಿದಂತೆ’ ಎಂದು ಸುಮ್ಮನಾದರು.

ಹೆಲಿಕಾಪ್ಟರ್ ವ್ಯವಸ್ಥೆಯಾಗಿದೆ ಎಂದು ಸವದಿ ಹಾಗೂ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ ಬಳಿಕ ಪ್ರವಾಸಿ ಮಂದಿರದ ಒಳ ಹೋದರು. ಶಾಸಕ ಉಮೇಶ ಕತ್ತಿ ಮೊದಲಾದ ಮುಖಂಡರೊಂದಿಗೆ ಮಾತುಕತೆಯಲ್ಲಿ ತೊಡಗಿದ್ದರು. ಬಳಿಕ 12.30ರ ಸುಮಾರಿಗೆ ಸಾಂಬ್ರಾ ವಿಮಾನ ನಿಲ್ದಾಣದಿಂದ ಸಾಂಗ್ಲಿ ಜಿಲ್ಲೆಯ ಜತ್ತ್‌ಗೆ ಹೆಲಿಕಾಪ್ಟರ್‌ನಲ್ಲಿ ತೆರಳಿದರು. ಮೂರೂಕಾಲು ತಾಸು ಅವರು ಇಲ್ಲಿ ಕಾಯಬೇಕಾಯಿತು.

‘ಸಂತ್ರಸ್ತರ ಮರೆತು ಪ್ರಚಾರದತ್ತ’

ಬೆಂಗಳೂರು: ‘ಮಹಾರಾಷ್ಟ್ರದಲ್ಲಿ ಬಿಜೆಪಿ ಗೆಲ್ಲಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರು ಹೋಗಿದ್ದು ರಾಜ್ಯದ ನೆರೆ ಸಂತ್ರಸ್ತರ ಗೋಳು ಕೇಳುವವರೇ ಇಲ್ಲವಾಗಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬುಧವಾರ ಆರೋಪಿಸಿದರು.

ರಾಜ್ಯದಲ್ಲಿ ನೆರೆ ಕಾಣಿಸಿಕೊಂಡಾಗ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಂಡು, ಡೊನಾಲ್ಡ್ ಟ್ರಂಪ್ ಪರ ಪ್ರಚಾರದಲ್ಲಿ ತೊಡಗಿದ್ದರು. ಈಗ ಯಡಿಯೂರಪ್ಪ ನೇತೃತ್ವದ ತಂಡ ಮಹಾರಾಷ್ಟ್ರಕ್ಕೆ ಹೋಗಿದೆ. ಅಧಿವೇಶನದಲ್ಲೂ ಚರ್ಚೆ ಮಾಡಲು ಹೆಚ್ಚು ಸಮಯ ನೀಡಲಿಲ್ಲ. ಪರಿಹಾರವನ್ನೂ ಕೊಡುತ್ತಿಲ್ಲ ಎಂದು ಟೀಕಿಸಿದರು.

‘ಯಾವ ಹುದ್ದೆ ಕೊಡುತ್ತಾರೋ ಗೊತ್ತಿಲ್ಲ’

ಬೆಳಗಾವಿ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ ಇದೆ. ಅವರು ನನಗೆ ಯಾವ ಹುದ್ದೆ ಕೊಡುತ್ತಾರೆ ಎನ್ನುವುದು ಗೊತ್ತಿಲ್ಲ’ ಎಂದು ಶಾಸಕ ಉಮೇಶ ಕತ್ತಿ ಹೇಳಿದರು.

‘ಕತ್ತಿ ಅವರಿಗೆ ಹುದ್ದೆ ಸಿಗಲು ಡಿಸೆಂಬರ್ ಕೊನೆಯವರೆಗೆ ಕಾಯಿರಿ’ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯದಲ್ಲಿ ಈಗಾಗಲೇ ಮೂವರು ಉಪ ಮುಖ್ಯಮಂತ್ರಿಗಳಿದ್ದಾರೆ. ಹೀಗಿರುವಾಗ, ನನಗೆ ಯಾವ ದೊಡ್ಡ ಹುದ್ದೆ ನೀಡುವರೋ? ಅದು ದೇಶದೊಳಗೇ ಇದ್ದರೆ ಒಳ್ಳೆಯದು. ಅಮೆರಿಕ ಸೇರಿದಂತೆ ವಿದೇಶದಲ್ಲಿ ಇರಬಾರದು’ ಎಂದು ವ್ಯಂಗ್ಯವಾಡಿದರು.

‘ನನಗೂ ಸಚಿವನಾಗುವ ಯೋಗ್ಯತೆ ಇದೆ. ಇದಕ್ಕಾಗಿ ಮುಖ್ಯಮಂತ್ರಿ ಸೇರಿದಂತೆ ಯಾರೊಂದಿಗೂ ಮನಸ್ತಾಪವಿಲ್ಲ’ ಎಂದರು.

‘ಅವಕಾಶ ಸಿಕ್ಕರೆ ಕತ್ತಿ ಮುಖ್ಯಮಂತ್ರಿ ಆಗಲಿದ್ದಾರೆ’ ಎಂಬ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 'ಆ ಅಧಿಕಾರ ಸಿಗಲು ಹಣೆಯಲ್ಲಿ ಬರೆದಿರಬೇಕು. ಅವಕಾಶ ಸಿಕ್ಕರೆ ಸಿದ್ಧನಿದ್ದೇನೆ.

ಅಂತಹ ಪ್ರಸಂಗ ಬಂದರೆ ನಿಮ್ಮನ್ನು (ಪತ್ರಕರ್ತರನ್ನು) ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕರೆದೊಯ್ಯುವೆ’ ಎಂದು ಹಾಸ್ಯಚಟಾಕಿ ಹಾರಿಸಿದರು.

ಪ್ರತಿಕ್ರಿಯಿಸಿ (+)