ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಕಂಪನಿಗೆ ₹4 ಕೋಟಿ ದಂಡ ಪಾವತಿಸಲಿದೆ ಬಿಬಿಎಂಪಿ!

Last Updated 19 ಜೂನ್ 2018, 14:01 IST
ಅಕ್ಷರ ಗಾತ್ರ

ಬೆಂಗಳೂರು: ಘನತ್ಯಾಜ್ಯ ಸಂಸ್ಕರಣೆ ಒಪ್ಪಂದ ಉಲ್ಲಂಘಿಸಿದ ಕಾರಣಕ್ಕೆ ಬಿಬಿಎಂಪಿ ‘ರ‍್ಯಾಮ್ಕಿ ಎನರ್ಜಿ ಆ್ಯಂಡ್‌ ಎನ್ವಿರಾನ್‌ಮೆಂಟ್‌ ಲಿಮಿಟೆಡ್‌’ ಕಂಪನಿಗೆ ₹4 ಕೋಟಿ ದಂಡ ಪಾವತಿಸಬೇಕಾಗಿದೆ.

ಮಾವಳ್ಳಿಪುರದಲ್ಲಿ ಘನತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪಿಸಲು ಈ ಕಂಪನಿ ಜತೆ ಬಿಬಿಎಂಪಿ 2004ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಘಟಕ ಸ್ಥಾಪನೆಗೆ 100 ಎಕರೆ ಜಮೀನು ನೀಡುವುದಾಗಿ ಬಿಬಿಎಂಪಿ ಹೇಳಿತ್ತು. ಯಲಹಂಕ ಸುತ್ತಮುತ್ತಲಿನ ಘನತ್ಯಾಜ್ಯವನ್ನು ಪೂರೈಸುವುದಾಗಿಯೂ ಹೇಳಿತ್ತು. ಕಂಪನಿ ಈ ತ್ಯಾಜ್ಯವನ್ನು ಸಂಸ್ಕರಿಸಿ, ಜೈವಿಕ ಗೊಬ್ಬರವನ್ನಾಗಿ ಮಾರಾಟ ಮಾಡಬಹುದು ಎಂದು ಒಪ್ಪಂದದಲ್ಲಿ ಹೇಳಲಾಗಿತ್ತು.

100 ಎಕರೆ ಜಮೀನು ಕೊಡುವುದಾಗಿ ಹೇಳಿದ್ದ ಪಾಲಿಕೆ ಕೇವಲ 44 ಎಕರೆ ಕೊಟ್ಟಿತ್ತು. ಈ ಪ್ರದೇಶದಲ್ಲಿ ಹೈಟೆನ್ಷನ್‌ ತಂತಿಗಳು ಹಾದು ಹೋಗಿರುವುದು, ಸಂಸ್ಕರಣ ಘಟಕಕ್ಕೆ ಸ್ಥಳೀಯರ ವಿರೋಧ ಇತ್ಯಾದಿ ಕಾರಣದಿಂದಾಗಿ ಒಪ್ಪಿತ ಪ್ರಮಾಣದ ಜಮೀನನ್ನು ಕೊಡಲು ಆಗಿರಲಿಲ್ಲ.

ಪ್ರತಿದಿನ ಬಿಬಿಎಂಪಿ 600 ಟನ್‌ನಷ್ಟು ತ್ಯಾಜ್ಯ ಸುರಿಯುತ್ತಿತ್ತು. ಇದು ಒಪ್ಪಿತ ಪ್ರಮಾಣಕ್ಕಿಂತ ಹೆಚ್ಚು ಇತ್ತು. ಅದನ್ನು ನಿಭಾಯಿಸಲು ಕಂಪನಿಗೆ ಅಸಾಧ್ಯವಾಗಿತ್ತು. ಮಿತಿಮೀರಿ ತ್ಯಾಜ್ಯ ಸುರಿಯದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಹೈಕೋರ್ಟ್ ಆದೇಶದ ಮೇರೆಗೆ ಸೂಚಿಸಿತ್ತು.

‘ಕಂಪನಿಯೂ ನಾವು ಹೇಳಿದಂತೆ ಕಾರ್ಯ ನಿರ್ವಹಿಸುತ್ತಿರಲಿಲ್ಲ.120 ಕಾರ್ಮಿಕರು ಇರಬೇಕಾದಲ್ಲಿ ಕೇವಲ 100 ಜನ ಇದ್ದರು. ಘಟಕದಲ್ಲಿ ಯಾವುದೇ ಸುಧಾರಣೆ ಕಂಡುಬರಲಿಲ್ಲ. ನಾವು ಅವರಿಗೆ ಕಸ ಎತ್ತುವಿಕೆ ವೆಚ್ಚ (ಟಿಪ್ಪಿಂಗ್ ಫೀ) ಕೂಡ ಪಾವತಿಸುತ್ತಿದ್ದೆವು. ಇದರಿಂದ ಕಂಪನಿಗೆ ಶೇ 20ರಷ್ಟು ಆದಾಯ ಬರುತ್ತಿತ್ತು. ಹಾಗಿದ್ದೂ ಸರಿಯಾಗಿ ಕಾರ್ಯ ನಿರ್ವಹಿಸದ ಪ್ರಯುಕ್ತ ನಾವು ಒಪ್ಪಂದವನ್ನು ರದ್ದುಗೊಳಿಸಬೇಕಾಯಿತು. ವಾಸ್ತವವಾಗಿ 20 ವರ್ಷಗಳಿಗೆ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ 2016ರಲ್ಲಿ ಅದನ್ನು ರದ್ದುಗೊಳಿಸಲಾಯಿತು ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದರು.

‘ಬಿಬಿಎಂಪಿ ಇದುವರೆಗೆ ₹ 11.54 ಕೋಟಿ ಟಿಪ್ಪಿಂಗ್‌ ಶುಲ್ಕ ಪಾವತಿಸಿದೆ. ಅದರಲ್ಲಿ ಹೆಚ್ಚುವರಿ ಮೊತ್ತ ₹ 8.91 ಕೋಟಿಯನ್ನು ಹಿಂದಿರುಗಿಸಬೇಕು’ ಎಂದು ಕೋರಿದ್ದೇವೆ ಎಂದು ಅಧಿಕಾರಿ ವಿವರಿಸಿದರು.

‘ಆದರೆ, ಬಿಬಿಎಂಪಿ ತಾನು ಹೇಳಿದಂತೆ 100 ಎಕರೆ ಜಮೀನು ಕೊಟ್ಟಿಲ್ಲ. ಮಾತ್ರವಲ್ಲ ಮಿತಿಮೀರಿ ತ್ಯಾಜ್ಯ ಸುರಿದು ನಾವು ಕಾರ್ಯ ನಿರ್ವಹಿಸದಂತೆ ಮಾಡಿದೆ. ಅವಧಿಗೂ ಮುನ್ನ ಒಪ್ಪಂದ ರದ್ದು ಮಾಡಿದೆ. ಹೀಗಾಗಿ ನಮಗೆ ದಂಡ ಪಾವತಿಸಬೇಕು’ ಎಂದು ಕಂಪನಿ ವಾದಿಸಿದೆ.

ಈಗ ವಿಧಿಸಲಾದ ದಂಡದ ಮೊತ್ತವನ್ನು ಅರ್ಧಕ್ಕಿಳಿಸಲು ಕಂಪನಿಯನ್ನು ಕೋರುವುದಾಗಿ ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT