ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈಬಿಡಿ: ಮಹಿಮ ಪಟೇಲ್‌

ಜೆಡಿಯು ಅಧ್ಯಕ್ಷ ಮಹಿಮ ಪಟೇಲ್‌ ಒತ್ತಾಯ
Last Updated 18 ಮಾರ್ಚ್ 2020, 20:49 IST
ಅಕ್ಷರ ಗಾತ್ರ

ಬೆಂಗಳೂರು: ‘ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾಪವನ್ನು ಸರ್ಕಾರ ಕೈಬಿಡಬೇಕು’ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್ ಒತ್ತಾಯಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಸೂದೆಯನ್ನು ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲಾಗಿದೆ. ಈಗಾಗಲೇ ವಿವಿಧ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಕೃಷಿ ಭೂಮಿಯನ್ನು ನಾಶ ಮಾಡಲಾಗಿದೆ. ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅಲ್ಪಕಾಲದಲ್ಲಿ ಹಣ ಕೈಸೇರಿದರೂ, ಅವರು ಕೃಷಿಯಿಂದ ಶಾಶ್ವತವಾಗಿ ದೂರ ಉಳಿಯಲಿದ್ದಾರೆ. ಕೊನೆಗೆ ರೈತ ಕುಟುಂಬಗಳು ಬೀದಿಗೆ ಬೀಳಲಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕಾಯ್ದೆಗೆ ತಿದ್ದುಪಡಿ ತರುವ ಮುನ್ನ ರೈತರು, ಪರಿಸರವಾದಿಗಳು ಹಾಗೂ ಕೃಷಿ ತಜ್ಞರೊಂದಿಗೆ ಸರ್ಕಾರ ಚರ್ಚಿಸಬೇಕು. ತಿದ್ದುಪಡಿಯಿಂದ ರೈತರಿಗೆ ಏನು ಉಪಯೋಗ ಎನ್ನುವುದನ್ನು ತಿಳಿಸಬೇಕು’ ಎಂದರು.

‘ಪಂಚಾಯತ್ ರಾಜ್ ಕಾಯ್ದೆಗೂ ತಿದ್ದುಪಡಿ ತರುವುದಕ್ಕೆ ಸರ್ಕಾರ ಮುಂದಾಗಿದೆ. ಈ ಬಗ್ಗೆಯೂ ಚರ್ಚೆಯಾಗಬೇಕು’ ಎಂದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ,‘ರೈತರ ಭೂಮಿ ಖರೀದಿ ಪ್ರಕ್ರಿಯೆಯನ್ನು ಸರಳಗೊಳಿಸಿ ಉದ್ಯಮಿಗಳು ಹಾಗೂ ಬಂಡವಾಳಗಾರರಿಗೆ ಅನುಕೂಲ ಮಾಡುವ ಉದ್ದೇಶದಿಂದಸರ್ಕಾರ ಈ ಕಾಯ್ದೆ ತಿದ್ದುಪಡಿ ತರಲು ಮುಂದಾಗಿದೆ. ಇದಕ್ಕಾಗಿ ಸೆಕ್ಷನ್‌ 79 ಎ ಮತ್ತು ಬಿಯನ್ನು ಕಾಯ್ದೆಯಿಂದ ತೆಗೆದು ಹಾಕಲು ನಿರ್ಧರಿಸಿರುವುದು ರೈತ ಸಮುದಾಯಕ್ಕೆ ಬಿಜೆಪಿ ಸರ್ಕಾರ ಮಾಡುತ್ತಿರುವ ದ್ರೋಹ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT