ಉಕ್ಕಿನ ಸರಪಳಿ ಜಾಗದಲ್ಲಿ ರೇಷ್ಮೆದಾರದ ಬಿಗಿತ!

ಶನಿವಾರ, ಮಾರ್ಚ್ 23, 2019
21 °C
ಶತಮಾನದ ಮೊದಲ ಎರಡು ದಶಕಗಳ ಸ್ತ್ರೀಲೋಕದಲ್ಲಿ ಆಗಿರುವ ಬದಲಾವಣೆಗಳೇನು?

ಉಕ್ಕಿನ ಸರಪಳಿ ಜಾಗದಲ್ಲಿ ರೇಷ್ಮೆದಾರದ ಬಿಗಿತ!

Published:
Updated:
Prajavani

ಕಳೆದ ಎರಡು ದಶಕಗಳ ಜಗತ್ತು ಹಲವು ಬಗೆಯ ತೀವ್ರರೂಪದ ಜಾಗತಿಕ ಬೆಳವಣಿಗೆಗಳ ಹೆಬ್ಬಾಗಿಲುಗಳ ಮೂಲಕ ಹಾದುಬಂದಿದೆ. ಈ ಬೆಳವಣಿಗೆಗಳನ್ನು ಗಮನಿಸುವ ಮೂಲಕವೇ ಮಹಿಳಾ ಜಗತ್ತಿನಲ್ಲಿ ಆಗಿರುವ ಬದಲಾವಣೆಗಳನ್ನು ಗುರ್ತಿಸಬೇಕಾಗಿದೆ.

1988ರ ನಂತರದ ಭಾರತದ ಮಟ್ಟಿಗೆ ಹೇಳುವುದಾದರೆ, ಒಂದೆಡೆ ಮುಕ್ತ ಮಾರುಕಟ್ಟೆಯ ನೀತಿಗಳಿಗೆ ತೆರೆದುಕೊಂಡ ಆರ್ಥಿಕತೆ ಮತ್ತು ರಾಜಕೀಯ ಚಿತ್ರಣ, ಮತ್ತೊಂದೆಡೆ ದೇಶ ವಿಭಜನೆಯಾದ ಮೇಲಿನ ಸುದೀರ್ಘ ಅಂತರದ ನಂತರ ಮತ್ತೊಮ್ಮೆ ಕೋಮುಪ್ರಚೋದನೆ ನೆಚ್ಚಿಕೊಂಡ ವಿಭಜಕ ಮನಸ್ಥಿತಿಯ ಚುನಾವಣಾ ರಾಜಕಾರಣ – ಈ ಎರಡು ಮುಖ್ಯ ಬೆಳವಣಿಗೆಗಳ ನಡುವೆ ವೇಗದಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಸಾಮುದಾಯಿಕ ಮೌಲ್ಯಗಳು ಬದಲಾಗುತ್ತಾ ಹೋಗಿವೆ. ಈ ಬದಲಾವಣೆ ತಂದೊಡ್ಡಿದ ಹೊಸ ಸನ್ನಿವೇಶಗಳಲ್ಲಿ ಸಿಲುಕಿದ ಜನಜೀವನ, ಗಂಭೀರವಾದ ಸ್ಥಿತ್ಯಂತರಗಳಿಗೆ ಒಳಗಾಗಿದೆ.

90ರ ದಶಕದ ನಂತರದ ಮುಖ್ಯವಾದ ಕೆಲವು ಸ್ಥಿತ್ಯಂತರಗಳನ್ನು ಮತ್ತು ಹೊಸ ಸವಾಲುಗಳನ್ನು ಹೀಗೆ ಗುರುತಿಸಬಹುದು:

ಬಂಡವಾಳ ಪ್ರಧಾನ ವ್ಯವಸ್ಥೆ

ಸರ್ಕಾರದ ಸಾರ್ವಜನಿಕ ಹೊಣೆಗಾರಿಕೆಗಳು ಇಳಿಮುಖವಾಗುತ್ತಾ, ಪ್ರಭುತ್ವಗಳ ಪ್ರಧಾನ ಜವಾಬ್ದಾರಿ ಬಂಡವಾಳದ ಪೋಷಣೆ ಎನ್ನುವ ಮನಸ್ಥಿತಿಯನ್ನು ರೂಪುಗೊಳಿಸಲಾಗಿದೆ. ಇದರೊಂದಿಗೆ ಸರ್ಕಾರದ ಜವಾಬ್ದಾರಿಯಾಗಿದ್ದ ಶಿಕ್ಷಣ, ಆರೋಗ್ಯ, ಉದ್ಯೋಗ, ಆಹಾರ, ವಾಸಸ್ಥಳ ಮೊದಲಾದ ಮೂಲಭೂತ ಸವಲತ್ತುಗಳು, ಅವರವರ ಶಕ್ತ್ಯಾನುಸಾರ ದಕ್ಕಿಸಿಕೊಳ್ಳಬೇಕಾದ ‘ಸೇವೆ’ಗಳೆಂದೂ, ಅವುಗಳನ್ನು ಖಾಸಗಿ ಪೂರೈಕೆದಾರರು ಸರ್ಕಾರಿ ವ್ಯವಸ್ಥೆಗಿಂತ ಉತ್ತಮವಾಗಿ ಪೂರೈಸಬಲ್ಲರೆಂದು ಜನರನ್ನು ಒಪ್ಪಿಸಲಾಗಿದೆ.

ಇದರೊಂದಿಗೆ ಎಲ್ಲ ಕ್ಷೇತ್ರಗಳಲ್ಲೂ ಖಾಸಗಿ ಬಂಡವಾಳದ ಪಾತ್ರ ಪ್ರಧಾನವಾಗಿದೆ. ಪರಿಣಾಮವಾಗಿ ಜಗತ್ತಿನಾದ್ಯಂತ ‘ಲಾಭವೇ ಕೇಂದ್ರ’ ಎಂಬ ಆರ್ಥಿಕ ವ್ಯವಸ್ಥೆ ರೂಪುಗೊಂಡಿದೆ. ಅದು ತನ್ನೊಂದಿಗೆ ವ್ಯಕ್ತಿಕೇಂದ್ರಿತ ಮೌಲ್ಯವವಸ್ಥೆಯನ್ನೂ ಹೊತ್ತು ತಂದಿದೆ.

ಕೊಳ್ಳುಬಾಕ ಸಂಸ್ಕೃತಿಯ ಧಾಂಗುಡಿ

ಕೊಳ್ಳುಬಾಕ ಸಂಸ್ಕೃತಿ ಲಾಭಕೇಂದ್ರಿತ ಅರ್ಥವ್ಯವಸ್ಥೆಯ ಮುಖ್ಯ ಲಕ್ಷಣ. ಇದರ ಭಾಗವಾಗಿ ಎಷ್ಟು ಕೊಂಡರೂ ಮುಗಿಯದ ದಾಹವನ್ನು ಜನರಿಗೆ ಅಂಟಿಸಲಾಯಿತು. ಇದರಿಂದ ಸಣ್ಣ ಆದಾಯದಲ್ಲಿ ಬದುಕು ನಡೆಯಲು ಸಾಧ್ಯವಿಲ್ಲದಂತಾಯಿತು. ‘ಸರ್ವೋದಯ’ದ ಆಶಯಗಳಿಗೆ ಎದುರಾಗಿ ಹೊಸ ಬಗೆಯ ‘ಅಭಿವೃದ್ಧಿ’ ಮಾದರಿಯೊಂದನ್ನು ಸೃಷ್ಟಿಸಲಾಯಿತು. ಈ ಅಭಿವೃದ್ಧಿ ಮಾದರಿಯನ್ನಷ್ಟೇ ಕಂಡಿರುವ ‘ಮಿಲೇನಿಯಲ್ಸ್’ (2000ನೇ ಇಸವಿಯ ನಂತರ ಹುಟ್ಟಿದ ತಲೆಮಾರು) ಪ್ರಧಾನವಾಗಿರುವ ಮಧ್ಯಮವರ್ಗ, ದೇಶದ ಅಭಿಪ್ರಾಯ ರೂಪಿಸುವ ವರ್ಗವಾಯಿತು. ಹೊಸಬಗೆಯ ದೃಶ್ಯ ಮತ್ತು ಸಾಮಾಜಿಕ ಮಾಧ್ಯಮಗಳು ಇದಕ್ಕೆ ಹೊಸ ವೇದಿಕೆಯಾದವು.

ಜೀವಪರ ಹೋರಾಟಗಳ ಅಮಾನ್ಯೀಕರಣ:

ಪ್ರಕೃತಿಯನ್ನೂ ನೈಸರ್ಗಿಕ ಸಂಪನ್ಮೂಲಗಳನ್ನೂ ಲಾಭದ ಗಳಿಕೆಗಾಗಿ ಯದ್ವಾತದ್ವಾ ಬಳಸುವ, ನಾಶಪಡಿಸುವ, ಇಡೀ ಜೀವಜಾಲವನ್ನೇ ಅಸ್ಥಿರಗೊಳಿಸುವ ಬೆಳವಣಿಗೆ ತೀವ್ರವೇಗ ಪಡೆಯಿತು. ಇದೇ ಜಾಗತಿಕರಣದ ನೀತಿಗಳು, ಕೃಷಿ ಹಾಗೂ ಅದರ ಜೊತೆ ಹೊಂದಿಕೊಂಡಂತೆ ಇದ್ದ ಉಪ ಉದ್ಯೋಗಗಳೆಲ್ಲವೂ ನಾಶಗೊಂಡು, ಇಡೀ ವ್ಯವಸಾಯ ಕ್ಷೇತ್ರ ನೆಲಕಚ್ಚುವಂತೆ ಮಾಡಿದವು. ಜಾಗತೀಕರಣದ ಶಕ್ತಿಗಳು ಜನಚಳವಳಿಗಳನ್ನು ವಿಭಜಿಸುವ ತಂತ್ರಗಳನ್ನು ಯಶಸ್ವಿಯಾಗಿ ಪ್ರಯೋಗಿಸಿದ್ದು ಮಾತ್ರವಲ್ಲದೆ ಚಳವಳಿಗಳು ಅಭಿವೃದ್ಧಿಗೆ ಮಾರಕವೆಂದು ದೊಡ್ಡ ಸದ್ದು ಎಬ್ಬಿಸುತ್ತಾ, ಜೀವಪರ ಹೋರಾಟಗಳನ್ನು ಅಮಾನ್ಯಗೊಳಿಸುವ ಕೆಲಸ ನಡೆಯಿತು. ದಲಿತ ದಮನಿತರು, ಮಹಿಳೆಯರು, ಆದಿವಾಸಿಗಳು ಮೊದಲಾದ ಶೋಷಿತ ಸಮುದಾಯಗಳು ತಮ್ಮ ಪಾರಂಪರಿಕ ವೃತ್ತಿ, ವಾಸಸ್ಥಳ ಮತ್ತು ಆದಾಯದ ಮೂಲಗಳನ್ನು ಕಳೆದುಕೊಂಡು, ಮೊದಲಿಗಿಂತ ಹೆಚ್ಚು ಅಭದ್ರತೆ, ಆತಂಕ, ದಬ್ಬಾಳಿಕೆ, ದೌರ್ಜನ್ಯಗಳಿಗೆ ತುತ್ತಾಗಬೇಕಾದ ಸ್ಥಿತಿಗೆ ತಳ್ಳಲ್ಪಟ್ಟವು.

ಈ ಬದಲಾವಣೆಗಳು ಹಲವು ಸವಾಲುಗಳನ್ನು ನಮ್ಮ ಮುಂದೆ ಇಟ್ಟಿವೆ. ಸವಾಲುಗಳ ಜತೆಗೆ ಸಾಧ್ಯತೆಗಳೂ ತೆರೆದುಕೊಂಡಿರುವುದನ್ನು ನಾವು ಪರಿಗಣಿಸಬೇಕು.ಈ ಎಲ್ಲದರ ಪರಿಣಾಮ ಇತರ ಎಲ್ಲ ಸಮುದಾಯಗಳಿಗಿಂತ ಹೆಚ್ಚಾಗಿ ಮಹಿಳಾ ಸಮುದಾಯದ ಮೇಲೆ- ಅವರ ದುಡಿಮೆ, ಬದುಕು ಮತ್ತು ಅಸ್ಮಿತೆಯ ಮೇಲೆ- ಉಂಟಾಗಿರುವುದರ ಸ್ಪಷ್ಟವಾದ ಅರಿವು ಈಗ ನಮಗಾಗುತ್ತಿದೆ. ಒಂದೊಂದು ಆಯಾಮವನ್ನೂ ಪರಿಶೀಲಿಸಿದರೆ ಈ ಒಂದು ಸ್ಥೂಲ ನೋಟ ದೊರಕಬಹುದು.

ದುಡಿಮೆ, ಮಹಿಳೆ ಮತ್ತು ಜಾಗತೀಕರಣ

ದುಡಿಮೆಯ ಹಿನ್ನೆಲೆಯಲ್ಲಿ ಮಹಿಳಾ ಸಮುದಾಯವನ್ನಿಟ್ಟು ನೋಡುವುದಾದರೆ, ಸಣ್ಣ ಪ್ರಮಾಣದ ಹೊಸ ಬಗೆಯ ಅವಕಾಶಗಳು ಹೆಚ್ಚು ದೊರೆಯುತ್ತಿವೆ. ಅವುಗಳಿಗಿಂತ ಹೆಚ್ಚು ಅಗ್ಗದ ಕಾರ್ಮಿಕಳ ಸ್ಥಾನ ದೊರೆತಿರುವುದು ಕಾಣುತ್ತದೆ.

ಜಾಗತೀಕರಣವು ದುಡಿಮೆಯಲ್ಲಿ ಲಿಂಗ ಸಮಾನತೆಯನ್ನು ತರುತ್ತದೆಂದು ಹೇಳಲಾಗಿತ್ತು. ಆದರೆ, ಇಪ್ಪತ್ತು ವರ್ಷಗಳ ನಂತರ ನೋಡಿದರೂ, ಇಂದಿಗೂ ಶೇ.93ರಷ್ಟು ಮಹಿಳೆಯರು ಅತ್ಯಂತ ಕೆಳದರ್ಜೆಯ ದುಡಿಮೆಗಾರರಾಗಿ ಇರುವುದನ್ನು ನೋಡುತ್ತೇವೆ. ಒಟ್ಟಾರೆ ದುಡಿಮೆಯ ವಲಯದಲ್ಲಿ ಅಸಂಘಟಿತ ಕ್ಷೇತ್ರದಲ್ಲಿ ಶೇ.67ರಷ್ಟು ಮಹಿಳೆಯರಿದ್ದಾರೆ. ದೊಡ್ಡ ಸಂಸ್ಥೆಗಳ ಆಡಳಿತಗಾರರಾಗಿ ಮಹಿಳೆಯರು ಕುಳಿತಿರುವ ಸಂಖ್ಯೆ ಏರುತ್ತಿರುವುದು ಬೆರಳೆಣಿಕೆಯ ಪ್ರಮಾಣದಲ್ಲಿಯಷ್ಟೆ. ಉದಾಹರಣೆಗೆ, ಭಾರತದ ಮಾಧ್ಯಮ ಸಂಸ್ಥೆಗಳಲ್ಲಿ ಆಡಳಿತ ಮಂಡಳಿಯ ಸ್ಥಾನಮಾನದಲ್ಲಿರುವ ಮಹಿಳೆಯರ ಸಂಖ್ಯೆ ಕೇವಲ ಶೇ. 3 ಮಾತ್ರ.

ಮಹಿಳೆಯರ ಅಗ್ಗದ ದುಡಿಮೆಯ ಆಕರ್ಷಣೆ

ಕಳೆದ ಎರಡು ದಶಕಗಳಲ್ಲಿ ದಕ್ಷಿಣ ಏಷ್ಯಾದ ದೇಶಗಳಾದ ಚೀನಾ, ಭಾರತ, ಬಾಂಗ್ಲಾದೇಶ, ಪಾಕಿಸ್ತಾನಗಳಿಗೆ ಹೆಚ್ಚಿನ ವಿದೇಶೀ ಬಂಡವಾಳ ಹರಿದು ಬಂದಿರುವುದಕ್ಕೆ ಒಂದು ಮುಖ್ಯ ಕಾರಣ ಇಲ್ಲಿನ ಅಗ್ಗದ ದುಡಿಯುವ ವರ್ಗ. ಇದರ ದೊಡ್ಡ ಭಾಗದಲ್ಲಿ ತುಂಬಿರುವವರು ಮಹಿಳೆಯರು. ಜಾಗತೀಕರಣವು ಮಹಿಳೆಯರಿಗೆ ನೀಡಿದ ಬಹುಪಾಲು ಉದ್ಯೋಗಗಳು ಅರೆಕಾಲಿಕ ಉದ್ಯೋಗಗಳು. ಕೆಲಸದ ಭದ್ರತೆಯಿಲ್ಲ, ಯಾವುದೇ ಸವಲತ್ತುಗಳಿಲ್ಲ, ಮನೆಯಿಂದಲೇ ದುಡಿಯಬಹುದೆಂಬ ನೆಪದಲ್ಲಿ ಅತಿ ಕಡಿಮೆ ವೇತನ ನೀಡಲಾಗುತ್ತದೆ. ಕಳೆದೆರಡು ದಶಕಗಳಲ್ಲಿ ವೇಗವಾಗಿ ವಿಸ್ತರಿಸಿರುವ ಸೇವಾ ಕ್ಷೇತ್ರದ ಉದ್ಯೋಗಗಳ ಆಧಾರಸ್ತಂಭವೇ ಮಹಿಳೆಯರ ಅಗ್ಗದ ದುಡಿಮೆ ಎಂದು ‘ಎಕಾನಾಮಿಕ್ ಜಸ್ಟೀಸ್ ನ್ಯೂಸ್’ ಅಧ್ಯಯನ ಹೇಳುತ್ತದೆ.

ದುಡಿಮೆ ಕ್ಷೇತ್ರದಲ್ಲಿ ಮಹಿಳೆಗೆ ಹೆಚ್ಚಿನ ಅವಕಾಶಗಳು ದೊರೆತಿರುವುದೇನೋ ನಿಜ. ಆದರೆ ಉದ್ಯೋಗದ ಭದ್ರತೆಯಿರುವ, ಸಮಾನ ಕೆಲಸಕ್ಕೆ ಸಮಾನ ವೇತನ ದೊರಕುವ, ಉತ್ತಮ ಔದ್ಯೋಗಿಕ ವಾತಾವರಣವಿರುವ ಉದ್ಯೋಗವೇ ಬೇಕು ಎಂದು ಆರಿಸಿಕೊಳ್ಳುವ ಪರಿಸ್ಥಿತಿ ಬಹುಸಂಖ್ಯಾತ ಮಹಿಳೆಯರಿಗೆ ಇದೆಯೇ? ಖಂಡಿತ ಇಲ್ಲ!

ಸಾಮಾಜಿಕ ಸ್ಥಾನಮಾನ: ನೋವೋ ನಲಿವೋ?

ಹಳ್ಳಿಗಳ ಆರ್ಥಿಕತೆ ನುಚ್ಚುನೂರಾಗಿದೆ. ಬದುಕು ನಡೆಸಲು ದುಡಿಯುವ ಜನರು ನಗರ–ಪಟ್ಟಣಗಳನ್ನು ಆಶ್ರಯಿಸಬೇಕಾಗಿದೆ. ಪರಿಣಾಮವಾಗಿ ದೊಡ್ಡ ಪ್ರಮಾಣದ ವಲಸೆ ನಡೆಯುತ್ತಿದೆ. ಆದರೆ, ಇದಕ್ಕೆ ಅಗತ್ಯವಿರುವ ಸಾಮಾಜಿಕ ರಕ್ಷಣೆಯ ಹೊಣೆಯನ್ನು ಸರ್ಕಾರಗಳು ಹೊರುತ್ತಿಲ್ಲ. ಹಾಗಾಗಿ ನಗರಕ್ಕೆ ವಲಸೆ ಬಂದ ಮಹಿಳೆಯರು ಮೊದಲಿಗಿಂತ ಹೆಚ್ಚು ಅಸುರಕ್ಷಿತ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ. ಕೆಲಸದ ಸ್ಥಳದಲ್ಲಿ ಉಂಟಾಗುವ ಲೈಂಗಿಕ, ಮಾನಸಿಕ ಕಿರುಕುಳಗಳು ಮಹಿಳೆಯರನ್ನು ಕಾಡುತ್ತಿವೆ.

ಜಾಗತೀಕರಣದಿಂದ ಮಹಿಳೆಯರು ಕುಟುಂಬದ ಆದಾಯದ ಬಹುಮುಖ್ಯ ಭಾಗವನ್ನು ಗಳಿಸಲು ಆರಂಭಿಸಿದ್ದಾರೆ. ಆದರೆ ಇದರಿಂದ ಕೌಟುಂಬಿಕ ಮೌಲ್ಯವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯೇನೂ ಆಗಿಲ್ಲ. ಅನಿವಾರ್ಯ ಸಂದರ್ಭದಲ್ಲಿ ಮನೆಕೆಲಸದಲ್ಲಿ ಗಂಡಸರು ನೆರವಾಗಬೇಕಾದರೂ, ಅದು ಅವರ ಸಹಜ ಆಯ್ಕೆಯಾಗಿರುವುದಿಲ್ಲ. ಮಾತ್ರವಲ್ಲ, ಇವು, ದುಡಿದು ಸ್ವಾವಲಂಬಿಗಳಾಗುತ್ತಿರುವ ಮಹಿಳೆಯರ ವಿರುದ್ಧ ಒಳಗಿಂದೊಳಗೇ ಆಕ್ರೋಶವನ್ನು ಹುಟ್ಟಿಸುತ್ತಿವೆ. ಹೊರಗೆ ದುಡಿಯುವ ಮಹಿಳೆ ಮನೆಯೊಳಗಿನ ದುಡಿಮೆಯನ್ನೂ ನಿರ್ವಹಿಸುತ್ತಾ ಎರಡುಪಟ್ಟು ಹೊರೆ ಹೊರಬೇಕಾಗಿದೆ. ಸಾಮಾಜಿಕ, ಕೌಟುಂಬಿಕ ಮೌಲ್ಯಗಳ ನಡುವೆ ಉಂಟಾಗುವ ಸಂಘರ್ಷದಲ್ಲಿ ಮಹಿಳೆ ಪ್ರಧಾನ ಬಲಿಪಶುವಾಗಿರುವ ದುರಂತವೂ ನಮ್ಮ ಮುಂದಿದೆ.

ಆರ್ಥಿಕೇತರ ದಬ್ಬಾಳಿಕೆ

ಸಾಂಪ್ರದಾಯಿಕತೆ ಮತ್ತು ಬಲಪಂಥೀಯ ಮನೋಭಾವದಲ್ಲಿ ಉಂಟಾಗಿರುವ ಮೇಲುಗೈ ಇಡೀ ಜಗತ್ತಿನಾದ್ಯಂತ ಕಂಡುಬರುವ ವಿದ್ಯಮಾನ. ಬಂಡವಾಳಶಾಹಿ ವ್ಯವಸ್ಥೆ, ತನ್ನ ಲೂಟಿಯಿಂದ ತಲೆದೋರುತ್ತಿರುವ ಆರ್ಥಿಕ ಸಂಕಷ್ಟಗಳನ್ನು ಮರೆಮಾಚಲು ಹಾಗೂ ಜನರನ್ನು ಅಭದ್ರತೆಯ ಭಾವದಲ್ಲಿರಿಸಿ ಸುಲಿಗೆಯನ್ನು ಮುಂದುವರೆಸಲು ಕಂಡುಕೊಂಡಿರುವ ಮಾರ್ಗ ಇದು.

ಭಾರತದಲ್ಲೂ ಇಂತಹ ಸಾಂಪ್ರದಾಯಿಕತೆ ಮತ್ತು ಪ್ರತಿಗಾಮಿತನಗಳು ವ್ಯಾಪಕಗೊಂಡಿವೆ. ಇವು ಪ್ರಜಾತಂತ್ರವನ್ನು ಮತ್ತು ಹಕ್ಕುಗಳನ್ನು ಗೌರವಿಸುವ ಮನಃಸ್ಥಿತಿಗೆ ಯಾವಾಗಲೂ ವಿರುದ್ಧವಾಗಿರುತ್ತವೆ. ಸಂವಿಧಾನ ಮತ್ತು ನೆಲದ ಕಾನೂನಿನ ವಿರುದ್ಧವಾಗಿ ಸಾಂಸ್ಕೃತಿಕ ಯಾಜಮಾನ್ಯ ನಡೆಸುವ ಸಲುವಾಗಿ ರಾಜಕಾರಣ ಮಾಡುವ ಶಕ್ತಿಗಳು, ಮಹಿಳೆಯರನ್ನು (ಅದರಲ್ಲೂ ಶೋಷಿತ ದಮನಿತ ಹಿನ್ನೆಲೆಯ ಮಹಿಳೆಯರನ್ನು), ಎಲ್ಲ ದುರ್ಬಲ ಸಮುದಾಯಗಳನ್ನೂ ತಮ್ಮ ನಿಯಂತ್ರಣದಲ್ಲಿರಿಸಿಕೊಳ್ಳಲು ಪ್ರಯತ್ನಿಸುತ್ತವೆ. ಇದರ ಪರಿಣಾಮವಾಗಿ, ಉದಾರವಾದಿ ಚಿಂತನೆಗಳು ಮತ್ತು ಮಹಿಳಾ ಹೋರಾಟಗಳಿಂದ ದಕ್ಕಿದ ಅನೇಕ ಹಕ್ಕುಗಳು ಮತ್ತು ಸ್ವಾತಂತ್ರ್ಯ ಇಂದು ಅಪಾಯದ ಅಂಚಿನಲ್ಲಿವೆ.‌

ಮಹಿಳೆಯ ಬಿಡುಗಡೆಯ ಹಾದಿ

ಜಾಗತೀಕರಣ, ನವ ಉದಾರೀಕರಣದ ಕಾಲಘಟ್ಟವು ಎಲ್ಲ ಬಗೆಯ ಜನಸಮುದಾಯಗಳು, ಚಳವಳಿಗಳು ಮತ್ತು ಚಿಂತನಾಧಾರೆಗಳಲ್ಲಿ ಅನೇಕ ಗೊಂದಲಗಳನ್ನು, ಅಸ್ಪಷ್ಟತೆ ಹಾಗೂ ಅನೈಕ್ಯವನ್ನು ಹುಟ್ಟುಹಾಕಿದೆ. ಮಹಿಳಾ ಸಮುದಾಯವೂ ಇದಕ್ಕೆ ಹೊರತಲ್ಲ.

‘ಮಹಿಳೆ’ ಎಂಬ ಅಸ್ಮಿತೆಯು ಏಕಶಿಲಾಫಲಕದಂತಹ ರಚನೆಯಲ್ಲ. ‘ಮಹಿಳೆ’ ಎಂಬ ಗುರುತಿನ ಜೊತೆಗೆ ಜಾತಿ, ಭಾಷೆ, ಊರು, ಧರ್ಮ, ಉದ್ಯೋಗ, ಚಿಂತನೆ, ಸಂಘಟನೆ, ಶಿಕ್ಷಣ – ಇವೇ ಮೊದಲಾದ ಅದೆಷ್ಟೋ ಗುರುತುಗಳು ಏಕಕಾಲದಲ್ಲಿ ಅಸ್ತಿತ್ವದಲ್ಲಿರುತ್ತವೆ. ಹಾಗೆಯೇ, ಕೆಲವೊಮ್ಮೆ ಮಹಿಳೆಯರ ಈ ಭಿನ್ನಬಗೆಯ ಅಸ್ಮಿತೆಗಳು ಒಂದಕ್ಕೊಂದು ವಿರುದ್ಧ ಆಗಿರುವ ಸಾಧ್ಯತೆಗಳೂ ಸಾಕಷ್ಟಿವೆ. ಉದಾಹರಣೆಗೆ: ಕಾರ್ಮಿಕ ಮಹಿಳೆ, ಆಡಳಿತ ಮಂಡಳಿಯ ಮಹಿಳೆ, ಸವಲತ್ತುಗಳಿಂದ ವಂಚಿತ ಅಂಚಿಗೊತ್ತಲ್ಪಟ್ಟ ಮಹಿಳೆ, ಎಲ್ಲ ಬಗೆಯ ಸವಲತ್ತುಗಳುಳ್ಳ ನಗರ ಕೇಂದ್ರಿತ ಮಹಿಳೆ, ಶೋಷಿತ ಸಮುದಾಯದವಳು, ಬಲಾಢ್ಯ ಸಮುದಾಯದವಳು, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವಳು, ಬಹುಸಂಖ್ಯಾತ ಸಮುದಾಯಕ್ಕೆ ಸೇರಿದವಳು... ಇತ್ಯಾದಿ. ಈ ಭಿನ್ನಗುರುತುಗಳೊಂದಿಗೆ ಈ ಕಾಲಘಟ್ಟವು ಹುಟ್ಟಿಸಿರುವ ಸಂಕೀರ್ಣತೆಗಳ ಕಾರಣಕ್ಕೆ ಮಹಿಳಾ ಸಮುದಾಯ ಮತ್ತು ಮಹಿಳಾವಾದಿ ಚಿಂತನೆ–ಚಳವಳಿಗಳ ಮುಂದಿನ ಹಾದಿ ಕ್ಲಿಷ್ಟಗೊಂಡಿದೆ.

ಅಪಾರ ಸಾಧ್ಯತೆಗಳ ವಿಶಾಲ ಬಯಲು

ಈ ಎರಡು ದಶಕಗಳ ಬೆಳವಣಿಗೆಗಳು ಮಹಿಳಾ ಸಮುದಾಯದ ಮುಂದೆ ಅಪಾರ ಸಾಧ್ಯತೆಗಳ ವಿಶಾಲವಾದ ಬಯಲನ್ನು ತೆರೆದಿರುವುದು ಕೂಡಾ ಸತ್ಯ. ಮೊದಲನೆಯದಾಗಿ, ಉದ್ಯೋಗಕ್ಷೇತ್ರದಲ್ಲಿ ಮಹಿಳೆಯರಿಗೆ ದೊರೆತ ಅವಕಾಶಗಳ ಕಾರಣದಿಂದ, ಎಲ್ಲ ಶೋಷಣೆಗಳಾಚೆಗೂ ಸ್ವಾವಲಂಬನೆ ಮತ್ತು ಸ್ವಾಭಿಮಾನದ ಚಿಂತನೆ ಮೂಡಿದೆ. ತಾಂತ್ರಿಕತೆಯಲ್ಲಿ ಉಂಟಾದ ಪ್ರಗತಿಯಿಂದ ತೆರೆಗೆ ಬಂದ ಹೊಸ ಯಂತ್ರೋಪಕರಣಗಳಿಗೆ ಮಹಿಳೆಯೂ ಆದ್ಯತೆಯ ಗ್ರಾಹಕಿಯಾಗಿದ್ದರಿಂದಾಗಿ ಮಹಿಳೆಯರಿಗೆ ರೊಟೀನ್ ಕೆಲಸಗಳಿಂದ ಒಂದುಮಟ್ಟದ ಬಿಡುಗಡೆ ಸಿಕ್ಕಿದೆ.

ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳು, ಬರಹ, ರಂಗಭೂಮಿ, ಸಿನಿಮಾ, ಪ್ರಕಟಣೆ ಮೊದಲಾದ ಹೊಸಕಾಲದ ಅಭಿವ್ಯಕ್ತಿಯ ವೇದಿಕೆಗಳಲ್ಲಿ ಮಹಿಳೆಗೆ ಅವಕಾಶಗಳು ಹೆಚ್ಚಿವೆ. ಸಂಘಟಿತರಾಗಲು ಅವಕಾಶಗಳು ಮತ್ತು ಒತ್ತಡ ಎರಡೂ ಹೆಚ್ಚಿವೆ. ಹೆಚ್ಚಿನ ಸಂಖ್ಯೆಯ ದುಡಿಮೆಗಾರ್ತಿಯರಾಗಿ ಮಹಿಳೆಯರು ಸೇರ್ಪಡೆಗೊಂಡಂತೆ ಕಾರ್ಮಿಕ ಸಂಘಟನೆಗಳಲ್ಲೂ ಮಹಿಳೆಯರಿಗೆ ಹೆಚ್ಚಿನ ಮಾನ್ಯತೆ ಸಿಗುತ್ತಿವೆ. ಸಂಘಟನೆಯ ಜವಾಬ್ದಾರಿ ಸ್ಥಾನಗಳಲ್ಲಿ, ನಾಯಕತ್ವದಲ್ಲಿ ಸ್ಥಾನ ದೊರಕುತ್ತಿವೆ. ಇವೆಲ್ಲ ಹೆಣ್ಣುಮಕ್ಕಳ ಮುಂದೆ ಹೊಸಹಾದಿಗಳನ್ನು ತೆರೆದಿಟ್ಟಿವೆ.

ಈ ಸಾಧ್ಯತೆಗಳನ್ನು ಮಹಿಳಾ ಸಮುದಾಯಕ್ಕೆ ಪೂರಕವಾದ ರೀತಿಯಲ್ಲಿ ದುಡಿಸಿಕೊಳ್ಳುವ ಮಾರ್ಗಗಳನ್ನು ಎಷ್ಟು ಬೇಗ ಯೋಜಿಸಲು ಸಾಧ್ಯ ಮತ್ತು ಆ ಯೋಜನೆಗಳನ್ನು ಎಷ್ಟು ಬೇಗ ಸಾಕಾರಗೊಳಿಸಲು ಸಾಧ್ಯ ಎಂಬುದು ಈಗಿರುವ ಪ್ರಶ್ನೆ. ಉದಾಹರಣೆಗೆ, ಚಿಂತನಶೀಲ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿದ್ದಾಗ್ಯೂ, ಬಹುದೊಡ್ಡ ಸಂಖ್ಯೆಯಲ್ಲಿರುವ ಕಾರ್ಮಿಕ ಮಹಿಳೆಯರು ಮತ್ತು ಅವರ ಚಳವಳಿಯೊಂದಿಗೆ ಈ ಎಲ್ಲ ಮಹಿಳೆಯರಿಗೆ ಪೂರ್ಣಪ್ರಮಾಣದ ಜೀವಂತ ಸಂಬಂಧ ಸಾಧ್ಯವಾಗಿದೆಯಾ? ಇಂತಹ ಹಲವು ಬಗೆಯ ಕೊಂಡಿಗಳನ್ನು ಜೋಡಿಸುವುದು ಮತ್ತು ಸಾಧ್ಯತೆಗಳನ್ನು ಕಾರ್ಯರೂಪಕ್ಕಿಳಿಸಿಕೊಳ್ಳುವುದು ಇಂದಿನ ಮಹಿಳಾ ಚಿಂತನೆಯ ಆದ್ಯತೆಯಾಗಬೇಕು.

ಲೇಖಕಿ ಮಹಿಳಾ ಹೋರಾಟಗಾರ್ತಿ

ಬರಹ ಇಷ್ಟವಾಯಿತೆ?

 • 20

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !