ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವದ ಎಲ್ಲಮ್ಮ ದೇವಿ ಮುತ್ತಿನ ಪಲ್ಲಕ್ಕಿ ಉತ್ಸವ

Last Updated 19 ಫೆಬ್ರುವರಿ 2019, 19:34 IST
ಅಕ್ಷರ ಗಾತ್ರ

ಮದ್ದೂರು: ಪಟ್ಟಣದ ರೇಣುಕಾ ಎಲ್ಲಮ್ಮದೇವಿಯ 47ನೇ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ದೇವಿಯ ‘ಮುತ್ತಿನ ಪಲ್ಲಕ್ಕಿ ಉತ್ಸವ’ ಅಪಾರ ಭಕ್ತರ ಸಡಗರ, ಸಂಭ್ರಮದಿಂದ ನೆರವೇರಿತು.

ರಾತ್ರಿ 8.30ಕ್ಕೆ ಹೊಳೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಸಾವಿರಾರು ಜನರು ಅಲಂಕೃತವಾದ ಉತ್ಸವ ಮೂರ್ತಿಯ ದರ್ಶನ ಪಡೆದರು. ಮೆರವಣಿಗೆಯುದ್ದಕ್ಕೂ ಭಕ್ತರು ಪೂಜೆ ನೆರವೇರಿಸಿದರು. ಕೇರಳದ ಕಲಾವಿದರಿಂದ ಚಂಡಮದ್ದಳೆ, ಆಂಧ್ರಪ್ರದೇಶದ ಮಂಜು ಬಾಲಾಜಿ ತಂಡದಿಂದ ಮೃದಂಗ ವಾದ್ಯಗೋಷ್ಠಿ, ಸ್ಥಳೀಯ ಕಲಾವಿದರ ತಮಟೆ, ನಗಾರಿಯ ನಾದ ಮೆರವಣಿಗೆಗೆ ರಂಗು ತಂದಿತು.

ವೀರಗಾಸೆ, ಡೊಳ್ಳುಕುಣಿತ, ಗಾರುಡಿ ಗೊಂಬೆ, ಜಾನಪದ ನೃತ್ಯದೊಂದಿಗೆ ಸ್ಥಳೀಯ ದೇವತೆಗಳಾದ ಮದ್ದೂರಮ್ಮ, ದಂಡಿನ ಮಾರಮ್ಮ, ಉಪ್ಪಿನಕೆರೆ ಪಟಲದಮ್ಮ ಪೂಜಾ ಕುಣಿತ ನಡೆಯಿತು. ಜನರು ಸಾಲುಗಟ್ಟಿ ನಿಂತು ದೇವಿಯ ದರ್ಶನ ಪಡೆದು ತಮ್ಮ ಹರಕೆ ಸಲ್ಲಿಸಿದರು.

ಬೆಳಿಗ್ಗೆ 7.30ಕ್ಕೆ ಮಹಾಚಂಡಿಕಾ ಹೋಮ ಆರಂಭವಾಯಿತು. ನಂತರ ಪೂರ್ಣಾಹುತಿ, ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥ ಪ್ರಸಾದ ಹಾಗೂ ಮುತ್ತೈದೆಯರಿಂದ ತಂಬಿಟ್ಟಿನ ಆರತಿ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.

ಇಡೀ ರಾತ್ರಿ ಪಟ್ಟಣದ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ಪಟಾಕಿ ವೈಭವ ಮುಗಿಲು ಮುಟ್ಟಿತ್ತು. ರೇಣುಕಾ ಎಲ್ಲಮ್ಮ ದೇವಿ ಉತ್ಸವ ಮೂರ್ತಿ ಬುಧವಾರ ಬೆಳಿಗ್ಗೆ ದೇಗುಲಕ್ಕೆ ಹಿಂದಿರುಗಲಿದೆ. ವಿಶೇಷ ಕ್ಷೀರಾಭಿಷೇಕ, ತೀರ್ಥಪ್ರಸಾದ ವಿನಿಯೋಗದೊಂದಿಗೆ ಮೂರು ದಿನಗಳ ಎಲ್ಲಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT