ಮಂಗಳವಾರ, ಸೆಪ್ಟೆಂಬರ್ 28, 2021
21 °C
ಕಾರ್ಮಿಕರಿಗೆ ಆಹಾರ ವಿತರಣೆ

ಮಂಡ್ಯದಲ್ಲಿ ತಮಿಳರಿಗೆ ಆಹಾರ–ಕೆಲಸ, ತೃತೀಯ ಲಿಂಗಿಗಳಿಗೆ ನೆರವು

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಾವೇರಿ ನದಿ ನೀರು ಸಂಬಂಧ ಕರ್ನಾಟಕ–ತಮಿಳುನಾಡು ಗಲಾಟೆಗೆ ಮಂಡ್ಯವೇ ರಾಜಧಾನಿಯಂತಿರುತ್ತದೆ. ಅದೇ ಮಂಡ್ಯ ಜಿಲ್ಲೆ, ಈಗ ತಮಿಳಿಗರಿಗೆ ಆಹಾರ ನೀಡಿ, ಕೆಲಸವನ್ನೂ ಕೊಟ್ಟಿದೆ. ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ ತಮಿಳರಿಗೆ ಆರ್‌ಎಸ್‌ಎಸ್‌ ಕಾರ್ಯಕರ್ತರು ನೆರವಾಗಿ ಮಾನವೀಯತೆ ಮೆರೆದಿದ್ದಾರೆ. 

ತಮಿಳುನಾಡಿನ ಧರ್ಮಾವರಂನ ಈ ಕಾರ್ಮಿಕರು ಕುಟುಂಬ ಸಮೇತ ಮಂಡ್ಯದ ಮದ್ದೂರಿಗೆ ಬಂದಾಗ, ಲಾಕ್‌ಡೌನ್‌ ಘೋಷಣೆಯಾಗಿದೆ. ಆಹಾರ–ಆಶ್ರಯ ಇಲ್ಲದಿದ್ದಾಗ ಕಾರ್ಮಿಕರೊಬ್ಬರು ತಮ್ಮ ಅಸಹಾಯಕ ಸ್ಥಿತಿಯ ಕುರಿತು ವಿಡಿಯೊ ಮಾಡಿ ವಾಟ್ಸ್‌ಆ್ಯಪ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಆರ್‌ಎಸ್‌ಎಸ್‌ ಕಾರ್ಯಕರ್ತರೊಬ್ಬರು ನೋಡಿ, ಮಂಡ್ಯದ ಸ್ವಯಂಸೇವಕರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ತೆರಳಿದ ಸ್ವಯಂ ಸೇವಕರು ಮಳವಳ್ಳಿ ತಾಲ್ಲೂಕಿನ ಮಿಕ್ಕೆರೆಯಲ್ಲಿ ಆಶ್ರಯ ಕಲ್ಪಿಸಿದ್ದಾರೆ. 

‘ಆರ್‌ಎಸ್‌ಎಸ್‌ ಕಾರ್ಯಕರ್ತರು ನಮಗೆ ಊಟ ಮತ್ತು ಆಶ್ರಯ ವ್ಯವಸ್ಥೆ ಕಲ್ಪಿಸಿದ್ದಾರೆ. ಆದರೆ, ಸುಮ್ಮನೆ ಕುಳಿತು ತಿನ್ನಲು ನಮ್ಮ ಮನಸು ಒಪ್ಪುತ್ತಿಲ್ಲ. ಕಬ್ಬಿನ ಗದ್ದೆಯಲ್ಲಿ ಕೆಲಸ ಕೊಡಿ ಎಂದು ಕೇಳಿಕೊಂಡೆವು. ಈಗ ಸ್ವಾಭಿಮಾನದಿಂದ ಕೆಲಸ ಮಾಡಿ, ಊಟ ಮಾಡುತ್ತಿದ್ದೇವೆ’ ಎಂದು ಈ ಕಾರ್ಮಿಕರು ಹೇಳುತ್ತಾರೆ. 

‘ನೀರು ಮತ್ತು ಭಾಷೆಯ ತಕರಾರು ಏನೇ ಇರಲಿ. ಆದರೆ, ಈ ಸಂದರ್ಭದಲ್ಲಿ ಮಾನವೀಯತೆಯೇ ದೊಡ್ಡದು. ಮಂಡ್ಯದ ಆರ್‌ಎಸ್‌ಎಸ್‌ ಕಾರ್ಯಕರ್ತರು ಮತ್ತು ರೈತರು ಇದನ್ನು ತೋರಿಸಿಕೊಟ್ಟಿದ್ದಾರೆ. ಉಚಿತವಾಗಿ ಕೊಟ್ಟರೆ ಬೇಡ ಎಂದು, ದುಡಿದು ಉಣ್ಣುತ್ತೇವೆ ಎನ್ನುವ ಮೂಲಕ ಈ ಕಾರ್ಮಿಕರು ಸ್ವಾಭಿಮಾನ ಮೆರೆದಿದ್ದಾರೆ’ ಎಂದು ಆರ್‌ಎಸ್‌ಎಸ್‌ನ ರಾಜ್ಯ ಪ್ರಚಾರ ಪ್ರಮುಖ ಪ್ರದೀಪ ಮೈಸೂರು ‘ಪ್ರಜಾವಾಣಿ’ಗೆ ತಿಳಿಸಿದರು. 

ತೃತೀಯ ಲಿಂಗಿಗಳಿಗೆ  ನೆರವು: ಲಕ್ಷಾಂತರ ಕಾರ್ಯಕರ್ತರ ಮೂಲಕ ಕೊರೊನಾ ಸೇವಾ ಕಾರ್ಯ ಕೈಗೊಂಡಿ
ರುವ ಆರ್‌ಎಸ್‌ಎಸ್‌, ತೃತೀಯ ಲಿಂಗಿಯರಿಗೂ ನೆರವು ನೀಡುತ್ತಿದೆ.  

‘ಹಗಲಿನ ವೇಳೆ ಕ್ಲಿನಿಕ್‌ಗೆ ಹೋಗಲು ಮಂಗಳಮುಖಿಯವರಿಗೆ ಕೆಲವು ವೈದ್ಯರು ಅವಕಾಶ ನೀಡುವುದಿಲ್ಲ. ಬೇರೆ ರೋಗಿಗಳು ಬರುವುದಿಲ್ಲ ಎಂಬ ಕಾರಣಕ್ಕೆ ರಾತ್ರಿ ವೇಳೆ ಕ್ಲಿನಿಕ್‌ಗೆ ಬರಲು ಮಂಗಳಮುಖಿಯರಿಗೆ ಹೇಳುತ್ತಾರೆ. ಅದರಲ್ಲಿಯೂ, ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸಂದರ್ಭದಲ್ಲಂತೂ ಕ್ಲಿನಿಕ್‌ನ ಒಳಗೆ ಅವರನ್ನು ಬಿಡುತ್ತಲೇ ಇಲ್ಲ. ಅಂಥವರಿಗೆ ಆಹಾರ, ಆರ್ಥಿಕ ನೆರವು ಮತ್ತು ಅಗತ್ಯ ಮಾತ್ರೆಗಳನ್ನು ವಿತರಿಸುವ ಕಾರ್ಯವನ್ನು ಆರ್‌ಎಸ್‌ಎಸ್‌ ಮಾಡುತ್ತಿದೆ’ ಎಂದು ತಿಳಿಸಿದರು.

ಎಳನೀರು ವಿತರಣೆ:  ಮಂಡ್ಯ, ಮೈಸೂರು, ದಕ್ಷಿಣ ಕನ್ನಡ ಸೇರಿ ದಂತೆ ಹಲವು ಜಿಲ್ಲೆಗಳ ರೈತರು, ಆಸ್ಪತ್ರೆಯಲ್ಲಿರುವ ಗರ್ಭಿಣಿಯರು, ರೋಗಿಗಳಿಗೆ, ಪೊಲೀಸರಿಗೆ ಕಾರ್ಯಕರ್ತರು ಎಳನೀರು ವಿತರಿಸುತ್ತಿದ್ದಾರೆ. 

ಆರ್‌ಎಸ್‌ಎಸ್‌ ಜತೆಗೆ ಕ್ರೈಸ್ತರು, ಮುಸ್ಲಿಮರು

‘ಈ ಸಂದರ್ಭದಲ್ಲಿ ಜಾತಿ, ಧರ್ಮ, ಸಮುದಾಯ ನೋಡಲು ಸಾಧ್ಯವಿಲ್ಲ. ಆರ್‌ಎಸ್‌ಎಸ್‌ ಅಂಥದ್ದನ್ನೆಲ್ಲ ನೋಡಿಲ್ಲ, ನೋಡುವುದೂ ಇಲ್ಲ. ಧರ್ಮಾತೀತವಾಗಿ ನೆರವು ನೀಡುತ್ತಿದ್ದೇವೆ’ ಎಂದು ಪ್ರದೀಪ ಹೇಳಿದರು.  

‘ಎಷ್ಟೋ ಜನಕ್ಕೆ ಸಹಾಯ ಮಾಡಬೇಕು ಎಂಬ ಮನಸಿರುತ್ತದೆ. ಆದರೆ, ಹೇಗೆ ಎಂದು ತಿಳಿದಿರುವುದಿಲ್ಲ. ಅಂಥವರು ನಮ್ಮ ಜೊತೆ ಕೈಜೋಡಿಸುತ್ತಿದ್ದಾರೆ. ಮುಸ್ಲಿಮರು, ಕ್ರೈಸ್ತರು ಕೂಡ ನಮ್ಮ ಜೊತೆ ಸೇರಿದ್ದಾರೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಿದ್ದೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು