ಭಾನುವಾರ, ಮೇ 16, 2021
22 °C

‘ಪಕ್ಷೇತರ ಅಭ್ಯರ್ಥಿ ಪರ ಕಾಂಗ್ರೆಸ್ ಬಾವುಟ ಹಿಡಿದರೆ ಶಿಸ್ತು ಕ್ರಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಪರ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದು ಕೆಲಸ ಮಾಡಿದರೆ ಸಹಿಸುವುದಿಲ್ಲ. ಅಂಥವರು ಪಕ್ಷ ಬಿಟ್ಟು ಹೋಗಲಿ' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದರು.

ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಈ ರೀತಿ ಪಕ್ಷ ವಿರೋಧ ಚಟುವಟಿಕೆ ನಡೆಸಿದರೆ ಅಂಥವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು’ ಎಂದೂ ಅವರು ಎಚ್ಚರಿಕೆ ನೀಡಿದರು.

‘ಪಕ್ಷೇತರ ಅಭ್ಯರ್ಥಿ ಜೊತೆ ಕಾಂಗ್ರೆಸ್‌ ಪಕ್ಷದ ಚಿಹ್ನೆ ಯಾವುದೇ ಕಾರಣಕ್ಕೂ ಕಾಣಿಸಿಕೊಳ್ಳಬಾರದು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇವೆ. ಮುಖ್ಯಮಂತ್ರಿ ಜೊತೆಗೂ ಈ ಬಗ್ಗೆ ಚರ್ಚೆ ಮಾಡುತ್ತೇನೆ’ ಎಂದರು.

‘ಜೆಡಿಎಸ್‌ ವರಿಷ್ಠ ದೇವೇಗೌಡರು ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹಾಸನ, ಮಂಡ್ಯ, ಮೈಸೂರು ಸೇರಿದಂತೆ ಎಲ್ಲ ಕಡೆ ಜಂಟಿಯಾಗಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದರು.

ಮಂಡ್ಯ ಚುನಾವಣಾಧಿಕಾರಿ ವಿರುದ್ಧ ಬಿಜೆಪಿ ದೂರು

ಮಂಡ್ಯ ಜಿಲ್ಲಾ ಚುನಾವಣಾಧಿಕಾರಿ ಎನ್‌. ಮಂಜುಶ್ರೀ ಹಾಗೂ ಕೇಂದ್ರದ ವೀಕ್ಷಕ ರಂಜಿತ್‌ ಕುಮಾರ್‌  ಅವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ಬಿಜೆಪಿ ನಿಯೋಗವು ರಾಜ್ಯ ಚುನಾವಣಾಧಿಕಾರಿ ಅವರಿಗೆ ದೂರು ನೀಡಿದೆ.

‘ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರವನ್ನು ಎರಡೆರಡು ಬಾರಿ ತಿದ್ದುಪಡಿ ಮಾಡಿಕೊಂಡು ಬರಲು ಕಾನೂನು ಬಾಹಿರವಾಗಿ ಅವಕಾಶ ಮಾಡಿಕೊಟ್ಟಿದ್ದಾರೆ. ಸುಮಲತಾ ಅವರ ಏಜೆಂಟ್ ಮದನ್ ಅವರಿಗೆ ಲಿಖಿತ ದೂರು ಸಲ್ಲಿಸುವಂತೆ ಹೇಳಿ, ಅವರು ದೂರು ಬರೆದು ಸಲ್ಲಿಸುವಷ್ಟರಲ್ಲಿ ನಿಖಿಲ್ ನಾಮಪತ್ರ ಅಂಗೀಕರಿಸಿದ್ದಾರೆ. ಮಂಡ್ಯದಲ್ಲಿ ಪಾರದರ್ಶಕವಾದ ನ್ಯಾಯಸಮ್ಮತ ಚುನಾವಣೆ ನಿರೀಕ್ಷೆ ಇಲ್ಲ’ ಎಂದು ಬಿಜೆಪಿ ರಾಜ್ಯ ವಕ್ತಾರ ಗೊ.ಮಧುಸೂದನ್‌ ತಿಳಿಸಿದರು. 

‌ಶಿವರಾಮೇಗೌಡ ವಿರುದ್ಧ ಬಲಿಜ ಒಕ್ಕೂಟ ದೂರು

‘ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರನ್ನು ಟೀಕಿಸುವ ನೆಪದಲ್ಲಿ ನಾಯ್ಡು ಸಮುದಾಯದ ಬಗ್ಗೆ ಸಂಸದ ಎಲ್‌.ಆರ್. ಶಿವರಾಮೇಗೌಡ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ’ ಎಂದು ಆರೋಪಿಸಿ ಕರ್ನಾಟಕ ಬಲಿಜ ಸಂಘಗಳ ಒಕ್ಕೂಟ ಚುನಾವಣಾ ಆಯೋಗಕ್ಕೆ ಬುಧವಾರ ದೂರು ನೀಡಿದೆ.

‘ಬೆಂಗಳೂರು ಸುತ್ತಮುತ್ತ ನಾಯ್ಡುಗಳು ನೆಲೆಸಿದ್ದಾರೆ. ಈಗ ಮಂಡ್ಯಕ್ಕೆ ಬಂದಿದ್ದಾರೆ. ಮಂಡ್ಯವನ್ನೂ ನಾಯ್ಡುಮಯ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಶಿವರಾಮೇಗೌಡ ಅವರು ಜಾತಿ–ಜಾತಿಗಳ ನಡುವೆ ಕಂದಕ ಸೃಷ್ಟಿಸಲು ಹೊರಟಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಮಂದಿ ಬಲಿಜ (ನಾಯ್ಡು) ಸಮುದಾಯದ ಜನರಿದ್ದು, ಒಕ್ಕೂಟ ವ್ಯವಸ್ಥೆ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವರಾಮೇಗೌಡ ಅವರಿಂದ ಈ ರೀತಿಯ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಅವರನ್ನು ಒಕ್ಕೂಟ ಮನವಿ ಮಾಡಿದೆ.

ಶಿವರಾಮೇಗೌಡ ಅವರು ನಾಯ್ಡು ಸಮುದಾಯದ ಕ್ಷಮೆ ಕೇಳಬೇಕು ಎಂದೂ ಒಕ್ಕೂಟ ಒತ್ತಾಯಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು