ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.19ರಂದು ನಡೆದದ್ದು ಪೊಲೀಸ್‌ ದೌರ್ಜನ್ಯ: ಪೀಪಲ್ಸ್‌ ಟ್ರಿಬ್ಯುನಲ್‌ ವರದಿ

Last Updated 21 ಜನವರಿ 2020, 19:33 IST
ಅಕ್ಷರ ಗಾತ್ರ

ಮಂಗಳೂರು: ‘ಡಿಸೆಂಬರ್‌ 19ರಂದು ಮಂಗಳೂರಿನಲ್ಲಿ ಪೊಲೀಸರಿಂದ ಅಮಾಯಕರ ಮೇಲೆ ದೌರ್ಜನ್ಯ ನಡೆದಿದೆ. ಪೊಲೀಸರು ಕಾನೂನು, ಕೈಪಿಡಿ ಎಲ್ಲವನ್ನೂ ಮೀರಿ ಗುಂಡು ಹಾರಿಸುವ ಮೂಲಕ ಇಬ್ಬರನ್ನು ಕೊಂದಿದ್ದಾರೆ’ ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ನೇತೃತ್ವದ ಪೀಪಲ್ಸ್‌ ಟ್ರಿಬ್ಯೂನಲ್‌ ಹೇಳಿದೆ.

ಬೆಂಗಳೂರಿನ ಇಂಡಿಯನ್‌ ಸೋಷಿಯಲ್‌ ಇನ್‌ಸ್ಟಿಟ್ಯೂಟ್‌ನ ಲಿಸೆನಿಂಗ್‌ ಪೋಸ್ಟ್‌, ಅಸೋಸಿಯೇಷನ್‌ ರ್ಆರ್ ್ಪ್ರೊಟೆಕ್ಷನ್‌ ಆಫ್‌ ಸಿವಿಲ್‌ ರೈಟ್ಸ್‌ ಮತ್ತು ಸಂವಿಧಾನದ ಹಾದಿಯಲ್ಲಿ ಸಂಸ್ಥೆಗಳು ಜಂಟಿಯಾಗಿ ಮೂವರು ಸದಸ್ಯರ ಪೀಪಲ್ಸ್‌ ಟ್ರಿಬ್ಯೂನಲ್‌ ಮೂಲಕ ಡಿ.19ರ ಗಲಭೆ, ಗೋಲಿಬಾರ್‌ ಕುರಿತು ಸತ್ಯಶೋಧನೆ ನಡೆಸಿದ್ದವು. ವಿ.ಗೋಪಾಲಗೌಡ, ಹಿರಿಯ ವಕೀಲ ಬಿ.ಟಿ.ವೆಂಕಟೇಶ್‌ ಮತ್ತು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ‘ಪೀಪಲ್ಸ್‌ ಟ್ರಿಬ್ಯುನಲ್‌’ನ ಸದಸ್ಯರಾಗಿದ್ದರು.

ಜನವರಿ 6 ಮತ್ತು 7ರಂದು ಗೋಲಿಬಾರ್‌ನಲ್ಲಿ ಗಾಯಗೊಂಡವರು, ಮೃತರಾದವರ ಕುಟುಂಬದವರು ಮತ್ತು ಸಾರ್ವಜನಿಕರ ಹೇಳಿಕೆ ದಾಖಲಿಸಿದ್ದ ತಂಡ, ಘಟನಾ ಸ್ಥಳಗಳಿಗೂ ಭೇಟಿನೀಡಿ ಮಾಹಿತಿ ಕಲೆಹಾಕಿತ್ತು. ಮಂಗಳವಾರ 33 ಪುಟಗಳ ವರದಿ ಬಿಡುಗಡೆ ಮಾಡಿದ್ದು, ‘ಪೊಲೀಸರು ಹೆಜ್ಜೆ ಹೆಜ್ಜೆಗೂ ತಪ್ಪೆಸಗಿದ್ದಾರೆ. ದುರುದ್ದೇಶದಿಂದಲೇ ಜನರ ಮೇಲೆ ಅತಿಯಾದ ಬಲ ಪ್ರಯೋಗಿಸಿದ್ದಾರೆ ಮತ್ತು ಗುಂಡು ಹಾರಿಸಿದ್ದಾರೆ’ ಎಂದು ಹೇಳಿದೆ.

ಡಿ.18ರಂದು ನಗರದಲ್ಲಿ ಸೆಕ್ಷನ್‌ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಬೇಕಾದ ಅನಿವಾರ್ಯತೆಯೇ ಇರಲಿಲ್ಲ. ಆದರೂ, ನಿಷೇಧಾಜ್ಞೆ ಜಾರಿಗೊಳಿಸಿದ ಪೊಲೀಸರು, ಈ ಕುರಿತು ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ. ಪ್ರತಿಭಟನೆಗೆ ಹಿಂದೆ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿದ ಕುರಿತೂ ಜನರಿಗೆ ಮಾಹಿತಿ ಕೊಟ್ಟಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಮಾಹಿತಿ ಕೊರತೆಯಿಂದ ಪ್ರತಿಭಟನೆಗೆ ಬಂದ ಜನರ ಮೇಲೆ ಪೊಲೀಸರು ಅನಗತ್ಯವಾಗಿ ಲಾಠಿ ಪ್ರಹಾರ ನಡೆಸಿದರು. ಅಧಿಕಾರದ ವ್ಯಾಪ್ತಿಯನ್ನು ಮರೆತವರಂತೆ ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಕರ್ನಾಟಕ ಪೊಲೀಸ್‌ ಕೈಪಿಡಿ ಹಾಗೂ ಮಾನವ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಕಿಂಚಿತ್ತೂ ಪಾಲಿಸಿಲ್ಲ ಎಂಬುದು ಸಂತ್ರಸ್ತರ ಹೇಳಿಕೆಗಳಿಂದ ಮನದಟ್ಟಾಗಿದೆ’ ಎಂದು ಪೀಪಲ್ಸ್‌ ಟ್ರಿಬ್ಯುನಲ್‌ ಹೇಳಿದೆ.

ಮತೀಯ ದ್ವೇಷದ ಹೇಳಿಕೆ:ಘಟನೆಯ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಿ, ನಾಗರಿಕರನ್ನು ರಕ್ಷಿಸಬೇಕಾದ ಪೊಲೀಸರೇ ಮತೀಯ ದ್ವೇಷದಲ್ಲಿ ಮಾತನಾಡುತ್ತಿದ್ದರು ಎಂಬುದು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಿಂದ ಗೊತ್ತಾಗಿದೆ. ಕೊಲ್ಲಲೇಬೇಕು ಎಂಬ ದುರುದ್ದೇಶದಿಂದ ಗುಂಡು ಹಾರಿಸಲಾಗಿತ್ತು ಎಂಬುದೂ ವಿಡಿಯೊ ತುಣುಕುಗಳಲ್ಲಿರುವ ಪೊಲೀಸರ ಹೇಳಿಕೆಗಳಿಂದ ಕಂಡುಬಂದಿದೆ ಎಂದು ಉಲ್ಲೇಖಿಸಲಾಗಿದೆ.

‘ಪ್ರತಿಭಟನಾಕಾರರು ಬಂದರು ಪೊಲೀಸ್‌ ಠಾಣೆ ಸಮೀಪದ ಎಂ.ಎಂ.ಕಿಣಿ ಬಂದೂಕು ಅಂಗಡಿ ದೋಚಲು ಮುಂದಾಗಿದ್ದರು ಎಂದು ಪೊಲೀಸರು ಆಪಾದಿಸಿದ್ದಾರೆ. ಆದರೆ, ಘಟನೆಗೆ ‍ಪೂರಕವಾದ ವಿಡಿಯೊ ಅಥವಾ ಸಿಸಿಟಿವಿ ದೃಶ್ಯಾವಳಿ ನೀಡುವಂತೆ ಸಂತ್ರಸ್ತ ಕುಟುಂಬದವರು ಮನವಿ ಮಾಡಿದ್ದರೂ, ಈವರೆಗೆ ಸ್ಪಂದಿಸಿಲ್ಲ’ ಎಂದು ವರದಿಯಲ್ಲಿ ಹೇಳಲಾಗಿದೆ.

ಪೊಲೀಸ್ ದೌರ್ಜನ್ಯದಿಂದ ಮೃತಪಟ್ಟವರ ಕುಟುಂಬಗಳು ಸಂಕಷ್ಟದಲ್ಲಿವೆ. ಅವರಿಗೆ ಶೀಘ್ರವಾಗಿ ಪರಿಹಾರ ವಿತರಿಸಬೇಕು. ಗಾಯಾಳುಗಳಿಗೂ ಪರಿಹಾರ ನೀಡಬೇಕು. ಪತ್ರಕರ್ತರ ಮೇಲೆ ದುರುದ್ದೇಶದಿಂದ ಪೊಲೀಸರು ಬಲಪ್ರಯೋಗ ನಡೆಸಿರುವುದು ಮತ್ತು ಆಸ್ಪತ್ರೆಯ ಆವರಣದಲ್ಲಿ ಅಶ್ರುವಾಯು ಸಿಡಿಸಿ ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT